‘ಪಿಎಂ ಕೇರ್ಸ್ ಸಾರ್ವಜನಿಕರಿಗೆ ಸೇರಿದ್ದಲ್ಲ. ಅದನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ತರಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿರುವುದು ಪಶ್ಚಿಮ ಬಂಗಾಳದ ಉಪಚುನಾವಣೆಯಲ್ಲಿ ಸದ್ದು ಮಾಡುತ್ತಿದೆ. “ಪಿಎಂ ಕೇರ್ಸ್ ನಿಧಿ ಎಲ್ಲಿದೆ?” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ರ್‍ಯಾಲಿಯಲ್ಲಿ ಪ್ರಶ್ನಿಸಿದ್ದಾರೆ.
‘ಪ್ರೈಮ್ ಮಿನಿಸ್ಟರ್ ಸಿಟಿಜನ್ ಅಸಿಸ್‌ಟೆನ್ಸ್ ಅಂಡ್ ರಿಲೀವ್ ಫಂಡ್ ಅಥವಾ ಪಿಎಂ-ಕೇರ್ಸ್ ನಿಧಿ’ ಸಾರ್ವಜನಿಕರಿಗೆ ಸೇರಿದ್ದಲ್ಲ ಎಂದು ಕೋರ್ಟ್‌ನಲ್ಲಿ ಮೋದಿ ಸರ್ಕಾರ ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, “ನಾವೆಲ್ಲ ಗೊಂದಲಕ್ಕೀಡಾಗಿದ್ದೇವೆ” ಎಂದು ಭಬನಿಪುರ್ ಕ್ಷೇತ್ರದ ಉಪಚುನಾವಣೆ ರ್‍ಯಾಲಿಯಲ್ಲಿ ಹೇಳಿದ್ದಾರೆ.
ಸರ್ಕಾರಿ ಉದ್ಯೋಗಿಗಳ ಹಣ, ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ಹಣವನ್ನು ಪಿಎಂ ಕೇರ್ಸ್‌ಗೆ ನೀಡಲಾಗಿದೆ ಎಂಬುದನ್ನು ದೀದಿ ಉಲ್ಲೇಖಿಸಿದ್ದು, “ಲಕ್ಷಾಂತರ ಕೋಟಿ ಹಣವನ್ನು ದಾನ ಮಾಡಲಾಗಿದೆ. ಆ ಹಣವೆಲ್ಲ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.
“ಪಿಎಂ ಕೇಸ್ ನಿಧಿಯ ಹೆಸರಲ್ಲಿ ಸಂಗ್ರಹಿಸಿರುವ ಹಣದ ಸಂಬಂಧ ಕೇಂದ್ರ ಸರ್ಕಾರ ಪಾರದರ್ಶಕವಾಗಿರಬೇಕು” ಎಂದು ಮಮತಾ ಬ್ಯಾನರ್ಜಿ ಅವರು ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ: ಪಿಎಂ ಕೇರ್ಸ್ ಭಾರತ ಸರ್ಕಾರದ ನಿಧಿಯಲ್ಲ, RTI ಅಡಿಯಲ್ಲಿ ತರಲು ಸಾಧ್ಯವಿಲ್ಲ: ಮೋದಿ ಸರ್ಕಾರ


