ದೇಶದ ಮೂರು ಸೇನಾ ವಿಭಾಗಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ಪಿಎಂ-ಕೇರ್ಸ್(PM-CARES)ಗೆ ವರ್ಗಾಯಿಸಲಾಗಿದೆ ಎಂದು ವರದಿಯಾಗಿದೆ. ಸಾರ್ವಜನಿಕ ವಲಯದ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಮಾತ್ರವಲ್ಲದೆ ಮೂರು ಸಶಸ್ತ್ರ ಪಡೆಗಳೂ ಪಿಎಂ-ಕೇರ್ಸ್‌ಗೆ ಹಣವನ್ನು ನೀಡಿವೆ ಎಂದು ತಿಳಿದು ಬಂದಿದೆ.
ಭಾರತೀಯ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆ ಸೇರಿ ತಮ್ಮ ನೌಕರರ ದೈನಂದಿನ ವೇತನದಿಂದ 203.67 ಕೋಟಿ ರೂ.ಗಳನ್ನು ನೀಡಿದೆ. ವಾಯುಪಡೆಯು ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ PM-CARES ಗೆ ಒಟ್ಟು 29.18 ಕೋಟಿ ರೂ. ಗಳನ್ನು ನೀಡಿರುವುದಾಗಿ ವಾಯುಪಡೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಂ.ಕಾಮ್ ವರದಿ ಮಾಡಿದೆ.
ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ?
ಈ ಹಿಂದೆ ಆರ್‌ಟಿಐ ಸಿಕ್ಕಿದ ದಾಖಲೆಗಳ ಪ್ರಕಾರ, ರಿಸರ್ವ್ ಬ್ಯಾಂಕ್ ಹಾಗೂ ಏಳು ಸಾರ್ವಜನಿಕ ವಲಯದ ಬ್ಯಾಂಕುಗಳು ಸೇರಿದಂತೆ ಇತರ ಹಣಕಾಸು ಸಂಸ್ಥೆಗಳಿಂದ 204.75 ಕೋಟಿ ರೂ. ಹಣವನ್ನು PM-CARES ಗೆ ನೀಡಲಾಗಿತ್ತು. ಅನೇಕ ಕೇಂದ್ರ ಶಿಕ್ಷಣ ಸಂಸ್ಥೆಗಳು ತಮ್ಮ ನೌಕರರ ವೇತನದಿಂದ 21.81 ಕೋಟಿ ರೂ.ಗಳನ್ನು PM-CARES ಗೆ ನೀಡಲಾಗಿತ್ತು. ಈ ಹಣವನ್ನು ಮಾಸಿಕ ದೇಣಿಗೆಯ ರೂಪದಲ್ಲಿ ಪಾವತಿಸಲಾಗಿದೆ ಎನ್ನಲಾಗಿದೆ.
ಏಪ್ರಿಲ್‌ನಲ್ಲಿ 25.03 ಕೋಟಿ, ಮೇ ತಿಂಗಳಲ್ಲಿ 75.24 ಲಕ್ಷ, ಜೂನ್‌ನಲ್ಲಿ 1.08 ಕೋಟಿ, ಜುಲೈನಲ್ಲಿ 73.93 ಲಕ್ಷ, ಆಗಸ್ಟ್‌ನಲ್ಲಿ 61.18 ಲಕ್ಷ, ಸೆಪ್ಟೆಂಬರ್‌ನಲ್ಲಿ 50.27 ಲಕ್ಷ ಮತ್ತು ಅಕ್ಟೋಬರ್‌ನಲ್ಲಿ 46.70 ಲಕ್ಷ ರೂ. ಗಳನ್ನಾಗಿದೆ ವಾಯುಸೇನೆ PM-CARES ಗೆ ನೀಡಿದೆ.

ಡಿಸೆಂಬರ್ 9 ರಂದು ನೌಕಾಪಡೆ ನೀಡಿದ ಪ್ರತಿಕ್ರಿಯೆಯಲ್ಲಿ, ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ PM-CARES ಗೆ 12.41 ಕೋಟಿ ಪಾವತಿಸಿದೆ. ಭಾರತೀಯ ಸೇನೆಯ ಎಡಿಜಿ ಪಿಐ (ಸಾರ್ವಜನಿಕ ಮಾಹಿತಿ ಹೆಚ್ಚುವರಿ ನಿರ್ದೇಶನಾಲಯ) ಮಾಡಿರುವ ಟ್ವೀಟ್ ಪ್ರಕಾರ, ಸೇನಾ ಸಿಬ್ಬಂದಿ 2020 ರ ಏಪ್ರಿಲ್‌ನಲ್ಲಿ 157.71 ಕೋಟಿ. ರೂ. ಗಳನ್ನು ಸ್ವಯಂಪ್ರೇರಣೆಯಿಂದ ನೀಡಿದ್ದಾಗಿ ಮಾಹಿತಿ ನೀಡಿದೆ.
ಇದನ್ನೂ ಓದಿ: PM CARES ಗೆ ಚೀನಾ ಕಂಪನಿಗಳಿಂದ ದೇಣಿಗೆ ಏಕೆ?
ಮಾರ್ಚ್ 29 ರಂದು ರಕ್ಷಣಾ ಸಚಿವಾಲಯ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ, “ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವಾಲಯದ ನೌಕರರು ಪ್ರಧಾನಮಂತ್ರಿಗೆ ಒಂದು ದಿನದ ವೇತನವನ್ನು ನೀಡುವ ಪ್ರಸ್ತಾಪವನ್ನು ಅಂಗೀಕರಿಸಿದ್ದಾರೆ” ಎಂದು ಹೇಳಲಾಗಿತ್ತು. ಕೊರೊನಾ ವಿರುದ್ದ ಹೋರಾಡಲು PM-CARES ಗೆ ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಇತರ ರಕ್ಷಣಾ ವಿಭಾಗಗಳ ವಿವಿಧ ಕ್ಷೇತ್ರಗಳಿಂದ ಸುಮಾರು 500 ಕೋಟಿ ರೂ.ಗಳನ್ನು ಸ್ವಯಂಪ್ರೇರಿತವಾಗಿ ಸಂಗ್ರಹಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಕೊರೊನಾ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ್ದ PM-CARES ನಿಧಿ ಖಾಸಗಿಯೆ ಅಥವಾ ಸರ್ಕಾರಿ ಟ್ರಸ್ಟ್ ಆಗಿದೆಯೆ ಎಂಬ ಬಗ್ಗೆ ಇದೀಗ ವಿರೋಧಾಭಾಸಗಳು ಎದ್ದಿದೆ. ನಿಧಿಗೆ ಕಾರ್ಪೊರೇಟ್ ಸಂಸ್ಥೆಗಳು ದೇಣಿಗೆ ನೀಡಿರುವುದಕ್ಕಾಗಿ ಇದನ್ನು ಸರ್ಕಾರಿ ಟ್ರಸ್ಟ್ ಎಂದು ವ್ಯಾಖ್ಯಾನಿಸಲಾಗಿದ್ದರೂ, ಟ್ರಸ್ಟ್ ದಾಖಲೆಗಳಲ್ಲಿನ ಒಂದು ಷರತ್ತು ಇದನ್ನು ”ಖಾಸಗಿ” ಎಂದು ಕರೆಯುತ್ತದೆ.
ಇದನ್ನೂ ಓದಿ: ಪಾನ್ ಮಸಾಲ ಬ್ಯಾನ್ ಮಾಡಲು PIL: PM ಕೇರ್ಸ್‌ಗೆ 10 ಕೋಟಿ ದಾನ ನೀಡಿದ್ದೇವೆ ಎಂದ ಕಂಪನಿ!


