ನೂತನ ಕೃಷಿ ಮೂಲಸೌಕರ್ಯ ನಿಧಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಮಂತ್ರಿ ಕೃಷಿ ಸನ್ಮಾನ್ ನಿಧಿಯ ಆರನೇ ಕಂತಿನ ಪರಿಹಾರ ಹಣವನ್ನು ಬಿಡುಗಡೆ ಮಾಡಿದರು.
ಕೃಷಿ ಸನ್ಮಾನ್ ನಿಧಿ ಯೋಜನೆಯಡಿ 17,100 ಕೋಟಿ ರೂಪಾಯಿ ಹಣವನ್ನು ರೈತರ ಖಾತೆಗಳಿಗೆ ನೇರ ವರ್ಗಾವಣೆ ಮಾಡಿದರು. ಇದರಿಂದ 8.55 ಕೋಟಿ ರೈತ ಫಲಾನುಭವಿಗಳಿಗೆ ಅನುಕೂಲವಾಗಿದೆ.
ನೂತನ ಕೃಷಿ ಮೂಲಸೌಕರ್ಯ ನಿಧಿ ಯೋಜನೆಯಿಂದ ಕೃಷಿ ಉದ್ಯಮ, ಕೃಷಿ ಸ್ಟಾರ್ಟ್ಅಪ್, ಕೃಷಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಇದು ಅನುಕೂಲವಾಗಲಿದೆ.
ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ಥರಿಗಾಗಿ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ನೂತನ ಯೋಜನೆ ಪ್ಯಾಕೇಜ್ ನ ಭಾಗವಾಗಿದೆ.
ಕೃಷಿ ಚಟುವಟಿಕೆಗೆ ಒತ್ತು ನೀಡಲು ಕೃಷಿ ಮೂಲಸೌಕರ್ಯ ಯೋಜನೆಯನ್ನು ರೂಪಿಸಲಾಗಿದ್ದು, ರೈತರಿಗೆ ಮಧ್ಯಮ ಮತ್ತು ದೀರ್ಘಾವಧಿಯ ಸಾಲ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 1 ಲಕ್ಷ ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ರೈತ ಗುಂಪುಗಳು, ರೈತರ ಉತ್ಪಾದನಾ ಸಂಘಗಳಿಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಲು 11 ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೃಷಿ ಸಚಿವಾಲಯದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಗೆ ಸಹಿ ಹಾಕಿವೆ.
ಕೃಷಿ ಚಟುವಟಿಕೆಯಲ್ಲಿ ವೈಜ್ಞಾನಿಕತೆ, ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ರೈತ ಗುಂಪುಗಳಿಗೆ 1 ಲಕ್ಷ ರೂ.ಗಳಿಂದ 2 ಕೋಟಿ ರೂಪಾಯಿವರೆಗೆ ಸಾಲ ನೀಡಲು ಉದ್ದೇಶಿಸಲಾಗಿದ್ದು 2029ರವರೆಗೆ ರೈತರಿಗೆ ಸಾಲ ಒದಗಿಸಲಿದೆ.
ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗು ಸಮಯದಲ್ಲಿಯೂ ಪರಿಸರ ಕಾಯ್ದೆಗಳನ್ನು ದುರ್ಬಲಗೊಳಿಸುತ್ತಿರುವ ಕೇಂದ್ರ ಸರ್ಕಾರ


