Homeಮುಖಪುಟನಕಲಿ ಸುದ್ದಿ ಪ್ರಸಾರಕ್ಕಾಗಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ರಾಹುಲ್ ಕುಲಕರ್ಣಿ ಆರೋಪ ಮುಕ್ತ

ನಕಲಿ ಸುದ್ದಿ ಪ್ರಸಾರಕ್ಕಾಗಿ ಬಂಧನಕ್ಕೊಳಗಾಗಿದ್ದ ಪತ್ರಕರ್ತ ರಾಹುಲ್ ಕುಲಕರ್ಣಿ ಆರೋಪ ಮುಕ್ತ

ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಶೇಷವಾಗಿ ಸಣ್ಣ ಪತ್ರಿಕೆಗಳು ಮತ್ತು ಚಾನೆಲ್‌ಗಳೊಂದಿಗೆ ಕೆಲಸ ಮಾಡುವ ವರದಿಗಾರರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಗಾರರು ಆರೋಪಿಸಿದ್ದಾರೆ.

- Advertisement -
- Advertisement -

ರೈಲ್ವೆ ಇಲಾಖೆ ಪ್ರಾರಂಭಿಸಲಿರುವ ವಿಶೇಷ ಪ್ರಯಾಣಿಕ ರೈಲು ಸೇವೆಯ ಬಗ್ಗೆ “ನಕಲಿ ಸುದ್ದಿ” ಪ್ರಸಾರ ಮಾಡಿದ್ದಕ್ಕಾಗಿ 43 ವರ್ಷದ ಪತ್ರಕರ್ತ ರಾಹುಲ್ ಕುಲಕರ್ಣಿಯನ್ನು ಮುಂಬೈ ಪೊಲೀಸರು ಬಂಧಿಸಿದ ನಾಲ್ಕು ತಿಂಗಳ ನಂತರ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತರನ್ನಾಗಿ ಮಾಡಲಾಗಿದೆ.

ಪ್ರಮುಖ ಮರಾಠಿ ಸುದ್ದಿ ಚಾನೆಲ್ ಎಬಿಪಿ ಮಝಾದ ಕಾರ್ಯನಿರ್ವಾಹಕ ಸಂಪಾದಕ ಕುಲಕರ್ಣಿಯನ್ನು ಏಪ್ರಿಲ್ 14 ರಂದು ಸಾವಿರಾರು ಜನರು ಸೇರಿದ್ದ ಬಾಂದ್ರಾ ರೈಲ್ವೆ ನಿಲ್ದಾಣದ ಹೊರಗೆ ಬಂಧಿಸಲಾಗಿತ್ತು.

ಬಾಂದ್ರಾದ 12 ನೇ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ 83 ಪುಟಗಳ ಪ್ರಕರಣ ಮುಚ್ಚುವ ವರದಿಯನ್ನು ಸಲ್ಲಿಸಿರುವ ಪೊಲೀಸರು ವಿಶೇಷ ರೈಲುಗಳನ್ನು ಪ್ರಾರಂಭಿಸುವ ಸ್ಥಳ ಮತ್ತು ದಿನವನ್ನು ಕುಲಕರ್ಣಿಯ ಸುದ್ದಿಯಲ್ಲಿ ಉಲ್ಲೇಖಿಸಿಲ್ಲ ಎಂದು ವರದಿಯಲ್ಲಿ ತಿಳಿಸಿದ್ದಾರೆ. ಜನರು ರಾಹುಲ್ ಕುಲಕರ್ಣಿ ಅವರ ಸುದ್ದಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ವರದಿ ತೀರ್ಮಾನಿಸಿದೆ.

ತಪ್ಪು ಮಾಹಿತಿಗಳ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ. ವಿವರವಾದ ತನಿಖೆ ನಡೆಸಿದ ನಂತರ ಪೊಲೀಸರು ಜುಲೈ ತಿಂಗಳ ಅಂತ್ಯದಲ್ಲಿ ಮುಚ್ಚುವ ವರದಿಯನ್ನು ಸಲ್ಲಿಸಿದರು. ದೂರುದಾರ ಮತ್ತು ರೈಲ್ವೆ ನಿಲ್ದಾಣಗಳ ಹೊರಗೆ ಸೇರಿದ್ದ ಜನರು ಸೇರಿದಂತೆ 11 ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ತನಿಖೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 14 ರಂದು ಕುಲಕರ್ಣಿ ತಮ್ಮ ಸುದ್ದಿ ಚಾನೆಲ್ ಎಬಿಪಿ ಮಝಾದಲ್ಲಿ, ದಕ್ಷಿಣ-ಮಧ್ಯ ರೈಲ್ವೆ ಇಲಾಖೆ ಶೀಘ್ರದಲ್ಲೇ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ರೈಲು ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಸುದ್ಧಿ ಪ್ರಸಾರ ಮಾಡಿತ್ತು.

ಈ ಸುದ್ದಿ ಬೆಳಿಗ್ಗೆ 9 ರಿಂದ 11:30 ರ ನಡುವೆ ಪ್ರಸಾರವಾಗಿತ್ತು. ಈ ಸುದ್ದಿಯಿಂದ ಪ್ರೇರಿತರಾದ ಜನ ಮಧ್ಯಾಹ್ನ 3:45 ರ ಸುಮಾರಿಗೆ ಬಾಂದ್ರಾ ರೈಲ್ವೆ ನಿಲ್ದಾಣದ ಹೊರಗೆ ಒಂದೇ ಸ್ಥಳದಲ್ಲಿ ಹಲವಾರು ಜನರು ಸೇರಲು ಪ್ರಾರಂಭಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ಬಹುಪಾಲು ಜನರು ಹತ್ತಿರದ ಶಾಸ್ತ್ರಿನಗರ, ಖುರೇಶಿನಗರ, ಮಹಾರಾಷ್ಟ್ರ ನಗರ ಮತ್ತು ನರ್ಗಿಸ್ ದತ್ ನಗರ ಕೊಳೆಗೇರಿ ಪ್ರದೇಶಕ್ಕೆ ಸೇರಿದ್ದರು. ನೆರೆದಿದ್ದವರನ್ನು ಚದುರಿಸಲು ಪೊಲೀಸರು ತೀವ್ರ ಲಾಠಿ ಪ್ರಹಾರ ನಡೆಸಿದ್ದರು.

ಮೂಲತಃ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಸೇರಿದ ವಲಸೆ ಕಾರ್ಮಿಕರು ನಿಲ್ದಾಣದ ಹೊರಗೆ ಒಟ್ಟುಗೂಡಿದ್ದರು. ಅವರು ಬಾಂದ್ರಾ ನಿಲ್ದಾಣದ ಸುತ್ತ ಮುತ್ತ ವಾಸಿಸುತ್ತಿದ್ದರು ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ.

ಪೊಲೀಸರು ಸಂಗ್ರಹಿಸಿದ ಸಾಕ್ಷಿ ಸಾಕ್ಷ್ಯಗಳು ಕುಲಕರ್ಣಿಯ ಸುದ್ದಿಗಳನ್ನು ವೀಕ್ಷಿಸಿಲ್ಲ ಎಂದು ಹೇಳಿಕೊಂಡಿವೆ. ವಾಸ್ತವದಲ್ಲಿ ತಮ್ಮ ನಿವಾಸದ ಸುತ್ತಲೂ ಬಾಯಿಂದ ಬಾಯಿಗೆ ಹರಡಿದ ಸಂಭಾಷಣೆಗಳ ಆಧಾರದ ಮೇಲೆ ಒಟ್ಟುಗೂಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಬಾಂದ್ರಾ ವೆಸ್ಟರ್ನ್ ರೈಲ್ವೆ ನಿಲ್ದಾಣವು ಸ್ಥಳೀಯ ರೈಲುಗಳನ್ನು ಮಾತ್ರ ಓಡಿಸುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆ. ಇನ್ನೊಂದು ರೈಲು ನಿಲ್ದಾಣ ಬಾಂದ್ರಾ ಟರ್ಮಿನಸ್ ಹೊರರಾಜ್ಯದ ರೈಲುಗಳಿಗೆ ಮೀಸಲಾಗಿರುತ್ತದೆ. ಈ ಹೊರ ರಾಜ್ಯದ ರೈಲು ನಿಲ್ದಾಣದಲ್ಲಿ ಜನಸಮೂಹ ಸೇರಿಲ್ಲ ಎಂದು ಪೊಲೀಸರು ಒಪ್ಪಿಕೊಂಡಿದ್ದಾರೆ.

ಜನಸಮೂಹ ಸೇರುತ್ತಿದ್ದಂತೆಯೇ, ಮಹಾರಾಷ್ಟ್ರ ರಾಜ್ಯ ಸರ್ಕಾರವು, ಎಬಿಪಿ ಮಝಾ ಸುದ್ದಿ ಸಂಸ್ಥೆ ಮತ್ತು ಕುಲಕರ್ಣಿಯನ್ನು ವದಂತಿಯನ್ನು ಹುಟ್ಟುಹಾಕಿದೆ ಎಂದು ಟೀಕಿಸಿತ್ತು. ಸಾಂಕ್ರಾಮಿಕ ಸಮಯದಲ್ಲಿ ಜನರ ಅವ್ಯವಸ್ಥೆ ಮತ್ತು ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದ ಕಾರಣಕ್ಕಾಗಿ ಕುಲಕರ್ಣಿಯ ಮೇಲೆ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಹಲವಾರು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಉಸ್ಮಾನಾಬಾದ್ ನಿವಾಸಿ ಕುಲಕರ್ಣಿಯನ್ನು ಬಂಧಿಸಿ ಮುಂಬೈಗೆ ಕರೆತಂದು ಒಂದು ದಿನ ಬಂಧನದಲ್ಲಿಡಲಾಗಿತ್ತು.

ಅಂತಿಮ ವರದಿಯಲ್ಲಿ, ಪೊಲೀಸರು ವದಂತಿಯನ್ನು ದುರುಪಯೋಗ ಮಾಡಿದ್ದಕ್ಕಾಗಿ ವಿನಯ್ ದುಬೆ ಎಂಬ ಇನ್ನೊಬ್ಬ ವ್ಯಕ್ತಿಯ ಮೇಲೆ ಆರೋಪ ಹೊರಿಸಿದ್ದಾರೆ. ದುಬೆಯ ಪ್ರಚೋದನೆಯನ್ನು ಅನುಸರಿಸಿ ಜನಸಮೂಹವು ಒಟ್ಟುಗೂಡಿದೆ. ಇಲ್ಲಿ ಕುಲಕರ್ಣಿಯ ಪಾತ್ರವಿಲ್ಲ ಎಂದು ಹೇಳಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಕನಿಷ್ಠ 15 ಇತರ ವರದಿಗಾರರ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಕೊರೊನಾ ಎದುರಿಸಲು ರಾಜ್ಯ ಸರ್ಕಾರದ ವಿಫಲತೆ ಮತ್ತು ಸಾಮಾನ್ಯ ಜನರು ಮತ್ತು ಕೊರೊನಾ ಸೋಂಕಿತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವರದಿ ಮಾಡಿದ ಹೆಚ್ಚಿನ ವರದಿಗಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರ ವಿಶೇಷವಾಗಿ ಸಣ್ಣ ಪತ್ರಿಕೆಗಳು ಮತ್ತು ಚಾನೆಲ್‌ಗಳೊಂದಿಗೆ ಕೆಲಸ ಮಾಡುವ ವರದಿಗಾರರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿಗಾರರು ಆರೋಪಿಸಿದ್ದಾರೆ.

ಪತ್ರಿಕೋದ್ಯಮದಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿರುವ ಕುಲಕರ್ಣಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ಸಲ್ಲಿಸಿ, ರಾಜ್ಯದ ನಿರ್ಧಾರವನ್ನು ವಿರೋಧಿಸಿದ್ದರು. ಅವರು ಮಾಡಿದ್ದ ಸುದ್ಧಿ, ರೈಲ್ವೆ ಇಲಾಖೆಯಿಂದ ದೊರೆತ ವಿಶ್ವಾಸಾರ್ಹ ಅಧಿಕೃತ ಮೂಲವನ್ನು ಆಧರಿಸಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಪೊಲೀಸರು ಮತ್ತು ಗೃಹ ಇಲಾಖೆ ಸುದ್ದಿಯ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಆಸಕ್ತಿ ತೋರದೆ ನನ್ನನ್ನು ಬಂಧಿಸಿದ್ದರು. ಬಾಂದ್ರಾ  ನಿಲ್ದಾಣದಿಂದ ಯಾವುದೇ ಹೊರ ರಾಜ್ಯದ ರೈಲುಗಳನ್ನು ಓಡಿಸುವುದಿಲ್ಲ ಎಂದು ಮುಂಬೈ ನಲ್ಲಿರುವ ಯಾರಿಗಾದರೂ ತಿಳಿದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಲಸೆಗಾರರ ​​ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ನನ್ನನ್ನು ಬಲಿಪಶುವನ್ನಾಗಿ ಮಾಡಿ, ಬಂಧಿಸುವ ಮೂಲಕ ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: Fact check: ಮುಂಬೈ ರೈಲ್ವೇ ನಿಲ್ದಾಣದಲ್ಲಿ ವಲಸಿಗರು ಸೇರಲು ಮಸೀದಿ ಕಾರಣವೇ? ಎಬಿಪಿ ಸುದ್ದಿ ಮಾಡಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಲ್ಕತ್ತಾ: ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದನ ಮೃತದೇಹ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆ

0
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಭಾರತದಲ್ಲಿ ನಾಪತ್ತೆಯಾದ ಎಂಟು ದಿನಗಳ ನಂತರ ಕೋಲ್ಕತ್ತಾ ಪೊಲೀಸರು ಅವರ ತುಂಡರಿಸಿದ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಕೋಲ್ಕತ್ತಾ ಪೊಲೀಸರು ಹತ್ಯೆಯು ಪೂರ್ವ ನಿಯೋಜಿತ ಎಂದು ಹೇಳಿಕೊಂಡಿದ್ದಾರೆ. ಅನಾರ್...