ಪ್ರಧಾನಮಂತ್ರಿ ನರೇಂದ್ರ ಮೋದಿ ಕನ್ಯಾಕುಮಾರಿಯಲ್ಲಿ ಧ್ಯಾನಕ್ಕೆ ಕುಳಿತಿದ್ದು, ವಿವೇಕಾನಂದ ರಾಕ್ ಸ್ಮಾರಕಕ್ಕೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ.
ಪ್ರಧಾನಿ ನರೇಂದ್ರ 45 ಗಂಟೆಗಳ ಕಲಾ ಕನ್ಯಾಕುಮಾರಿಯಲ್ಲಿ ಧ್ಯಾನದಲ್ಲಿ ಕುಳಿತುಕೊಳ್ಳಲಿದ್ದು, ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನದ ದಿನವಾದ ಜೂನ್ 1ರವರೆಗೆ ಅವರು ಕನ್ಯಾಕುಮಾರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪ್ರಧಾನಿ ಕನ್ಯಾಕುಮಾರಿಗೆ ಭೇಟಿ ಹಿನ್ನೆಲೆ ಸ್ಥಳದಲ್ಲಿ ಭಾರೀ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೂವರು ಡಿಐಜಿಗಳು, 13 ಪೊಲೀಸ್ ವರಿಷ್ಠಾಧಿಕಾರಿಗಳು, 16 ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, 45 ಉಪ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು 3,500 ಪೊಲೀಸ್ ಅಧಿಕಾರಿಗಳನ್ನು ಕನ್ಯಾಕುಮಾರಿ ಸುತ್ತಮುತ್ತ ನಿಯೋಜಿಸಲಾಗಿದೆ. ಇದಲ್ಲದೆ ವಿವೇಕಾನಂದ ಸ್ಮಾರಕದ ಪೂರ್ವ ಭಾಗದಲ್ಲಿ ಕರಾವಳಿ ಭದ್ರತಾ ಗುಂಪಿನ ನಾಲ್ಕು ಸ್ಪೀಡ್‌ಬೋಟ್‌ಗಳೊಂದಿಗೆ ಭದ್ರತೆ ಒದಗಿಸಲಾಗಿದೆ. ಇನ್ನು ನಾಲ್ಕು ಯಾಂತ್ರೀಕೃತ ಮೀನುಗಾರಿಕಾ ದೋಣಿಗಳನ್ನು ಪೊಲೀಸ್ ಅಧಿಕಾರಿಗಳು ಭದ್ರತಾ ಉದ್ದೇಶಗಳಿಗಾಗಿ ನಿಯೋಜಿಸಿದ್ದಾರೆ.
ಕರಾವಳಿಯ ಸಮೀಪ ಕೊಠಡಿಗಳನ್ನು ಭದ್ರತಾ ಕಾರಣಗಳಿಗಾಗಿ ಪೊಲೀಸ್ ಅಧಿಕಾರಿಗಳು ಪ್ರವಾಸಿಗರಿಗೆ ನೀಡದಂತೆ ಸೂಚಿಸಿದ್ದಾರೆ. ಪ್ರಧಾನಿಯವರ ಸುರಕ್ಷತೆಯ ದೃಷ್ಟಿಯಿಂದ ಅತಿಥಿಗಳಿಗೆ ಸ್ಥಳಾವಕಾಶ ನೀಡದಂತೆ ಸೂಚನೆ ನೀಡಲಾಗಿದೆ ಎಂದು ದಿ ಹಿಂದೂ ಜೊತೆ ಮಾತನಾಡಿದ ಹೋಟೆಲ್ ಸಿಬ್ಬಂದಿಯೋರ್ವರು ಹೇಳಿದ್ದಾರೆ.
ನಿನ್ನೆ ಕೂಡ ಪ್ರವಾಸಿಗರಿಗೆ ವಿವೇಕಾನಂದ ರಾಕ್ ಸ್ಮಾರಕ ಮತ್ತು ಸಮೀಪದ ತಿರುವಳ್ಳುವರ್ ರಾಕ್‌ಗೆ ಭೇಟಿ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಖಾಸಗಿ ಬೋಟ್‌ಗಳಿಗೆ ಕೂಡ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಪ್ರಧಾನಿಯವರ ಭದ್ರತಾ ವ್ಯವಸ್ಥೆ ಹಿನ್ನೆಲೆ ಈ ರೀತಿ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಲೋಕಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರ ಅಂತ್ಯಗೊಂಡ ಬೆನ್ನಲ್ಲಿ ಮೋದಿ ನಿನ್ನೆ ಸಂಜೆ ಕನ್ಯಾಕುಮಾರಿಗೆ ಆಗಮಿಸಿದ್ದರು. ಅಲ್ಲಿ ದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ತಿರುವಲ್ಲುವರ್, ರಾಮಕೃಷ್ಣ ಪರಮಹಂಸ ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದ ಅವರ ಪ್ರತಿಮೆಗಳಿಗೆ ಗೌರವ ಸಲ್ಲಿಸಿ ಬಳಿಕ ಧ್ಯಾನ ಮಂಟಪಕ್ಕೆ ತೆರಳಿ ಧ್ಯಾನ ಆರಂಭಿಸಿದ್ದಾರೆ.
Ahead of PM Modi’s visit, tourists banned from visiting Vivekananda Memorial https://t.co/veSsUyARQi
— TheNewsMinute (@thenewsminute) May 31, 2024
ಇದನ್ನು ಓದಿ: ಪ್ರಜ್ವಲ್ ಬಂಧಿಸಿ ಕರೆದೊಯ್ದ ಮಹಿಳಾ ಅಧಿಕಾರಿಗಳು; ಸಂತ್ರಸ್ತೆಯರಿಗೆ ಧೈರ್ಯ ತುಂಬಲು ಮುಂದಾಯಿತಾ ಎಸ್‌ಐಟಿ


