ರಾಜ್ಯದಲ್ಲಿ ಉಂಟಾಗಿರುವ ಭಾರಿ ಪ್ರವಾಹದಿಂದ ಒಂದು ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ರಸ್ತೆ, ಸೇತುವೆ, ರೈಲ್ವೆ ಹಳಿಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಆಗಿರುವ ಹಾನಿಯನ್ನು ಸರಿಪರಿಸಲು ಹಲವಾರು ವರ್ಷಗಳೇ ಬೇಕಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಹದ ಭೀಕರತೆಯನ್ನು ಕಂಡೂ ಕೇಂದ್ರ ಸರ್ಕಾರ ಇನ್ನೂ ಕಣ್ಣುಮುಚ್ಚಿ ಕುಳಿತಿದೆ. ಕೂಡಲೇ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಪ್ರಧಾನಿಯವರು ಕೂಡಲೇ ರಾಜ್ಯಕ್ಕೆ ಭೇಟಿ ನೀಡಿ, ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ, ಪರಿಹಾರ ಕಾರ್ಯಗಳಿಗೆ ತಕ್ಷಣವೇ ರೂ.5 ಸಾವಿರ ಕೋಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಪರಿಹಾರ ಕಾರ್ಯಗಳಿಗೆ ಈಗ ಬಿಡುಗಡೆ ಮಾಡಿರುವ ಮೊತ್ತ ಏನೇನೂ ಸಾಲದು. ಪರಿಹಾರ ಕೊಡಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿಕೊಳ್ಳಲು ನಾವೇನೂ ಭಿಕ್ಷುಕರಲ್ಲ ಅಥವಾ ಕೇಂದ್ರ ಸರ್ಕಾರ ನಮಗೆ ದಾನವನ್ನೇನೂ ಕೊಡುತ್ತಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಏನೇನೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿಚಾರದಲ್ಲಿ ಅದರಲ್ಲಿಯೂ ಇಂಥ ಕೆಟ್ಟ ಪರಿಸ್ಥಿತಿಯಲ್ಲಿ ಮಲತಾಯಿ ಧೋರಣೆ ಸಲ್ಲದು. ಇದನ್ನು ಯಾರೂ ಮೆಚ್ಚುವುದಿಲ್ಲ. ರಾಜ್ಯದ ಜನತೆ ಮಾಡಿರುವ ಅನ್ಯಾಯವಾದರೂ ಏನು? 26 ಸಂಸದರನ್ನು ಬಿಜೆಪಿಯಿಂದ ಆಯ್ಕೆ ಮಾಡಿ ಕಳುಹಿಸಿದ್ದು ತಪ್ಪೇ? ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರು ಹಾಗೂ ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿಯವರು ರಾಜ್ಯಕ್ಕೆ ಭೇಟಿ ಕೊಟ್ಟು, ವೈಮಾನಿಕ ಸಮೀಕ್ಷೆ ನಡೆಸಿ ರೂ.1600 ಕೋಟಿ ಪರಿಹಾರ ಘೋಷಣೆ ಮಾಡಿದ್ದರು ಎಂದಿದ್ದಾರೆ.
ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಮೊದಲೇ ದಿನವೇ ಹಾವೇರಿಯಲ್ಲಿ ಗೊಬ್ಬರಕ್ಕಾಗಿ ಆಗ್ರಹಿಸಿದ ರೈತರ ಮೇಲೆ ಗೋಲಿಬಾರ್ ಮಾಡಲಾಗಿತ್ತು. ಮೊನ್ನೆ ಗದಗದಲ್ಲಿ ಕಷ್ಟ ಹೇಳಿಕೊಳ್ಳಲು ಹೋದ ಪ್ರವಾಹ ಸಂತ್ರಸ್ತರ ಮೇಲೆ ಲಾಠಿಚಾರ್ಜ್ ಮಾಡಲಾಗಿದೆ. ಇದಕ್ಕಾಗಿ ಯಡಿಯೂರಪ್ಪ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರವಾಹದಿಂದಾಗಿ ರಾಜ್ಯ ಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಯಾವುದೇ ವಿಷಯದಲ್ಲಿಯೂ ರಾಜಕೀಯ ಬೆರೆಸಿ ಮಾತನಾಡುವುದು ಸರಿಯಲ್ಲ. ಯಡಿಯೂರಪ್ಪ ಅವರು ಏಕ ಪಾತ್ರಾಭಿನಯದ ಮೂಲಕ ಪರಿಸ್ಥಿತಿ ಎದುರಿಸುವುದು ಸುಲಭವಲ್ಲ. ಅದು ಅವರಿಂದ ಸಾಧ್ಯವೂ ಆಗುತ್ತಿಲ್ಲ. ಅವರು ಕೂಡಲೇ ಸಂಪುಟ ವಿಸ್ತರಣೆ ಮಾಡಿ, 20 ಮಂದಿಗೆ ಸಚಿವ ಸ್ಥಾನವನ್ನು ಕೊಟ್ಟು, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಬೇಕು. ಇದರಿಂದ ಪರಿಹಾರ ಕಾರ್ಯಕ್ರಮಗಳು ಚುರುಕಾಗುತ್ತವೆ. ಸಚಿವರಿಲ್ಲದ ಕಾರಣ ಈಗ ಪರಿಹಾರ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದಿದ್ದಾರೆ.
ಪ್ರವಾಹಪೀಡಿತ ಪ್ರದೇಶಗಳಲ್ಲಿ ಮರು ವಸತಿ ಕೇಂದ್ರಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜಾನುವಾರುಗಳನ್ನು ರಕ್ಷಣೆ ಮಾಡಿ ಮೇವು ಒದಗಿಸುವ ಕೆಲಸವೂ ತ್ವರಿತಗತಿಯಲ್ಲಿ ಆಗಬೇಕು. ಸಂತ್ರಸ್ತತರಿಗೆ ಮರು ವಸತಿ ಸೌಕರ್ಯದ ಜೊತೆಗೆ ಆಹಾರ, ಔಷಧ ಸಾಮಾಗ್ರಿಗಳನ್ನು ವಿತರಿಸಬೇಕು. ಪರಿಹಾರ ಕಾರ್ಯಕ್ಕೆ ಸೇನೆಯನ್ನೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಿಯೋಜನೆ ಮಾಡುವುದು ಸೂಕ್ತ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಬಿಟ್ಟು ರಾಜ್ಯ ಸರ್ಕಾರದ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸಲಿ.
ಪ್ರವಾಹ ಸಂತ್ರಸ್ತರಿಗೆ ನೆರವಾಗುವಂತೆ ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಪಕ್ಷದ ವತಿಯಿಂದಲೂ ಈ ಕೆಲಸ ನಡೆದಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಾದಾಮಿ ವಿಧಾನಸಭೆ ಕ್ಷೇತ್ರದ ಮಲಪ್ರಭಾ ನದಿ ದಡದ 32 ಗ್ರಾಮಗಳು ಪ್ರವಾಹಕ್ಕೆ ಒಳಪಟ್ಟಿವೆ. ಈ ಪೈಕಿ 10 ಗ್ರಾಮಗಳು ಸಂಪೂರ್ಣವಾಗಿ ಜಲವಾವೃತವಾಗಿವೆ. ಸಂತ್ರಸ್ತರಿಗೆ ತಾಲೂಕಿನ ಶಾಲೆ, ಮಠ ಹಾಗೂ ಸಾರ್ವಜನಿಕ ಸಮುದಾಯ ಭವನಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಜಾನುವಾರುಗಳಿಗೂ ಆಶ್ರಯ ನೀಡಿದ್ದು, ಮೇವು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ 5,764 ಕುಟುಂಬಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ. 5,962 ಜಾನುವಾರುಗಳನ್ನು ರಕ್ಷಿಸಲಾಗಿದೆ. ಮರು ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದವರಿಗೆ ಊಟ, ನೀರು, ಔಷಧ ಸಾಮಾಗ್ರಿಗಳನ್ನು ವಿತರಿಸಲಾಗಿದೆ. ಇದಕ್ಕಾಗಿ 39 ಪರಿಹಾರ ಕೇಂದ್ರಗಳು ಹಾಗೂ 20 ಒಪಿಡಿಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಎನ್‍ಡಿಆರ್‌ಎಫ್, ಎಸ್‍ಡಿಆರ್‌ಏಫ್ ಹಾಗೂ ಸೇನೆಯ ವಿವಿಧ ತಂಡಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಪಟ್ಟದಕಲ್ಲು ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 271 ಮಂದಿಯನ್ನು ನಿನ್ನೆ ರಕ್ಷಿಸಲಾಗಿದೆ. ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿದ್ದು, ಆರೋಗ್ಯ ಕೇಂದ್ರಗಳೂ ಕಾರ್ಯನಿರ್ವಹಿಸುತ್ತಿವೆ. 4-5 ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿದು ಹೋಗಿದೆ. ಆ ಗ್ರಾಮಸ್ಥರಿಗೂ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ಅವರು ಸುರಕ್ಷಿತವಾಗಿದ್ದಾರೆ.
ಗುಳೇದಗುಡ್ಡದಲ್ಲಿ 10 ಗ್ರಾಮಗಳು ಜಲಾವೃತವಾಗಿವೆ. 551 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಪ್ರವಾಹ ಪರಿಸ್ಥಿತಿ ಕೊಂಚ ಕಡಿಮೆಯಾಗಿದ್ದು, ಪರಿಹಾರ ಕಾರ್ಯ ಚುರುಕಿನಿಂದ ಸಾಗಿದೆ. ಮರು ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಭೀಮಪ್ಪ ಎಂಬುವರು ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ. ಈ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಪರಿಹಾರ ಕಾರ್ಯದಲ್ಲಿ ನಿರತವಾಗಿದ್ದು, ಸಂತ್ರಸ್ತರಿಗೆ ನೆರವಾಗಲು ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ನಿರಂತರ ಮಾಹಿತಿ ಪಡೆದು, ಅಗತ್ಯ ಸಲಹೆ ಸೂಚನೆ ನೀಡುತ್ತಿದ್ದೇನೆ. ರಾಜಕಾರಣಿಗಳಿರುವುದು ಜನಗಳ ಸೇವೆ ಮಾಡಲು ಎಂಬುದನ್ನು ಮರೆಯಬಾರದು. ಇಂತಹ ಸಂಕಷ್ಟದ ಸಮಯದಲ್ಲಿ ಎಲ್ಲ ಪಕ್ಷಗಳು ರಾಜಕೀಯ ಭಿನ್ನಾಭಿಪ್ರಾಯ ಮರೆತು ಮಾನವೀಯತೆಯ ನೆಲೆಯಲ್ಲಿ ಒಂದಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.


