ಮೋದಿ ನೇತೃತ್ವದ ಬಿಜೆಪಿ ಪಕ್ಷವು ಒಕ್ಕೂಟ ಸರ್ಕಾರದಲ್ಲಿ ಅಧಿಕಾರ ಹಿಡಿದ ನಂತರ, ಈ ಹಿಂದಿನ ಸರ್ಕಾರಗಳು ರೂಪಿಸಿದ್ದ ಹಲವಾರು ಯೋಜನೆಗಳ ಹೆಸರುಗಳನ್ನು ಬದಲಿಸಿದೆ. ಇದೀಗ, ಶಾಲೆಗಳಲ್ಲಿ ನೀಡುತ್ತಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆ ಈ ಪಟ್ಟಿಗೆ ಹೊಸದಾಗಿ ಸೇರಿಕೊಂಡಿದೆ. “ಪ್ರಧಾನಮಂತ್ರಿ ಪೋಶನ್ ಯೋಜನೆ ಅಥವಾ ಪಿಎಂ-ಪೋಶನ್ ಯೋಜನೆ” ಎಂದು ಬಿಸಿಯೂಟ ಯೋಜನೆಯ ಹೆಸರನ್ನು ಬುಧವಾರ ಬದಲಾಯಿಸಿದೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಗೆ 1.30 ಸಾವಿರ ಕೋಟಿ ವೆಚ್ಚ ಮಾಡುವುದಾಗಿ ಒಕ್ಕೂಟ ಸರ್ಕಾರ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: 5 ತಿಂಗಳಿಂದ ಬಾರದ ಗೌರವಧನ: ವೇತನ ಕೇಳಿದ ಬಿಸಿಯೂಟ ನೌಕರರ ಬಂಧನ
ಯೋಜನೆಯು ದೇಶಾದ್ಯಂತ 11.2 ಲಕ್ಷ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಗೆ ದಾಖಲಾದ 11.8 ಕೋಟಿ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಈ ಯೋಜನೆಯು 2021-22 ರಿಂದ 2025-26 ರವರೆಗಿನ ಐದು ವರ್ಷಗಳ ಅವಧಿಗೆ ಒಕ್ಕೂಟ ಸರ್ಕಾರದಿಂದ 54,061.73 ಕೋಟಿ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದಿಂದ 31,733.17 ಕೋಟಿಗಳ ಆರ್ಥಿಕ ವೆಚ್ಚವನ್ನು ಹೊಂದಿದೆ.
ಆಹಾರ ಧಾನ್ಯಗಳ ಮೇಲೆ 45,000 ಕೋಟಿ ರೂ.ಗಳ ಹೆಚ್ಚುವರಿ ವೆಚ್ಚವನ್ನು ಒಕ್ಕೂಟ ಸರ್ಕಾರ ಭರಿಸುತ್ತದೆ. ಆದ್ದರಿಂದ, ಯೋಜನೆಯ ಒಟ್ಟು ಬಜೆಟ್ 1,30,794.9 ಕೋಟಿ ಆಗಿರುತ್ತದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ನಡೆಯುತ್ತಿರುವ ಎಲ್‌ಕೆಜಿ ಮತ್ತು ಯುಕೆಜಿ ಅಥವಾ ಬಾಲವಾಡಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಪ್ರಸ್ತುತವಾಗಿ ಈ ವಿದ್ಯಾರ್ಥಿಗಳನ್ನು ಯೋಜನೆಯಲ್ಲಿ ಸೇರಿಸಲಾಗಿಲ್ಲ.
ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಮಕ್ಕಳಿಗೆ ಸಿಗುತ್ತಿಲ್ಲ ಪೌಷ್ಠಿಕ ಆಹಾರ: ಅಂಗನವಾಡಿ, ಬಿಸಿಯೂಟ ನೌಕರರ ಗೋಳು ಕೇಳುವವರಿಲ್ಲ
“ಯೋಜನೆಯ ಅಡಿಯಲ್ಲಿ ನೀಡುವ ಆಹಾರವನ್ನು ಸರ್ಕಾರ ನಿರ್ಧರಿಸುವುದಿಲ್ಲ. ಇದನ್ನು ರಾಜ್ಯಗಳು ನಿರ್ಧರಿಸಬಹುದು. ರಾಜ್ಯಗಳು ತಮ್ಮ ಸ್ಥಳೀಯ ಪೌಷ್ಟಿಕಾಂಶದ ವಸ್ತುಗಳನ್ನು ಸೇರಿಸಲು ಅನುಮತಿಸಲಾಗುವುದು” ಎಂದು ಅಧಿಕಾರಿಗಳು ಹೇಳಿದ್ದಾರೆ.
“ಈ ಮೊದಲು ಈ ಅವಕಾಶ ಇರಲಿಲ್ಲ …ಬದಲಾಗಿ, ಅಧಿಕ ರಕ್ತಹೀನತೆ ಇರುವ ಜಿಲ್ಲೆಗಳಲ್ಲಿ ಮಕ್ಕಳಿಗೆ ಪೂರಕ ಪೌಷ್ಟಿಕಾಂಶದ ವಸ್ತುಗಳನ್ನು ಒದಗಿಸುವುದಕ್ಕಾಗಿ ವಿಶೇಷ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ಯೋಜನೆಯ ಅಡಿಯಲ್ಲೆ ಎಲ್ಲಾ ಜಿಲ್ಲೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಯೋಜನೆಯನ್ನು ಐದು ವರ್ಷಗಳ ನಂತರ ನವೀಕರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಅಕ್ಷಯಪಾತ್ರ (ಇಸ್ಕಾನ್)ಗೆ ಹೊರಗುತ್ತಿಗೆಗೆ ವಿರೋಧ: ಶಾಲೆಗಳಲ್ಲಿಯೇ ಬಿಸಿಯೂಟ ತಯಾರಿಸಲು ಆಗ್ರಹ



ಈ ರೀತಿ ಹೆಸರಿಡಲು PM ಏನಾದರೂ ಅವರ ಮನೆಯಿಂದ ಹಣ ತಂದು ಶಾಲಾ ಮಕ್ಕಳಿಗೆ ಅನ್ನದಾನ ಮಾಡುತ್ತಿದ್ದಾರೆಯೇ? ಜನರು ಕಟ್ಟಿದ ತೆರಿಗೆಯಿಂದಲೇ ತಾನೇ ಸರ್ಕಾರಗಳು ಇಂಥ ಯೋಜನೆಗಳನ್ನು ರೂಪಿಸುವುದು?