ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಮೇಲೆ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಇಂದು (ನ.28) ಮುಂದೂಡಿದೆ.
ಡಿಸೆಂಬರ್ 2 ಸೋಮವಾರ ಮಧ್ಯಾಹ್ನ 2.30ಕ್ಕೆ ಅರ್ಜಿಯ ಮುಂದಿನ ವಿಚಾರಣೆಯನ್ನು ಹೈಕೋರ್ಟ್ ನಿಗದಿಪಡಿಸಿದೆ.
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ರದ್ದುಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕೆ ಪ್ರೊ.ರವಿವರ್ಮ ಕುಮಾರ್, ಪ್ರಕರಣ ಸಂಬಂಧ ಈಗಾಗಲೇ ದೋಷಾರೋಪಪಟ್ಟಿ ಸಲ್ಲಿಕೆಯಾಗಿದೆ. ಪೋಕ್ಸೋ ಕಾಯ್ದೆಯ ಸೆಕ್ಷನ್ 35ರ ಪ್ರಕಾರ, ಪ್ರಕರಣ ಸಂಬಂಧ ಕಾಗ್ನಿಜೆನ್ಸ್ ಪಡೆದ ಬಳಿಕ ಮೂರು ತಿಂಗಳಲ್ಲಿ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳಬೇಕು. ವಿಳಂಬವಾದಲ್ಲಿ, ಅದಕ್ಕೆ ಸೂಕ್ತ ಕಾರಣವನ್ನು ವಿಶೇಷ ನ್ಯಾಯಾಲಯ ದಾಖಲಿಸಬೇಕು ಎಂದು ತಿಳಿಸಿದರು.
ಆದರೆ, ಕಾಗ್ನಿಜೆನ್ಸ್ ಪಡೆದು ಈಗಾಗಲೇ ಅರು ತಿಂಗಳು ಕಳೆದಿವೆ. ಆದ್ದರಿಂದ ಅರ್ಜಿದಾರ ಆರೋಪಿ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದಕ್ಕೆ ವಿನಾಯಿತಿ ನೀಡಿರುವ ಈ ಹಿಂದಿನ ಮಧ್ಯಂತರ ಆದೇಶ ತೆರವುಗೊಳಿಸಬೇಕು ಎಂದು ಕೋರಿದರು.
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಸಿ.ವಿ ನಾಗೇಶ್, ಅರ್ಜಿಗೆ ಸಂಬಂಧಿಸಿದಂತೆ ತಮ್ಮ ವಾದವನ್ನು ಸೋಮವಾರ ಪೂರ್ಣಗೊಳಿಸುವುದಾಗಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಿದರು. ಅಂದೇ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಅರ್ಜಿದಾರ ಯಡಿಯೂರಪ್ಪ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ನೀಡಿರುವ ವಿನಾಯಿತಿಯನ್ನು ವಿಸ್ತರಿಸಿದರು.
ಪ್ರೊ. ಕುಮಾರ್: ವಿಚಾರಣೆಗೆ ಹಾಜರಾಗುವುದರಿಂದ ಬಿಎಸ್ವೈಗೆ ವಿನಾಯಿತಿ ನೀಡಲಾಗಿದೆ. ಸಂಜ್ಞೇ ಪರಿಗಣಿಸಿ ಆರು ತಿಂಗಳಾಗಿದೆ.
ಪೀಠ: ಸಂತ್ರಸ್ತ ಮಗುವಿಗೆ ಎಷ್ಟು ವಯಸ್ಸು?
ಪ್ರೊ. ಕುಮಾರ್: 17 ವರ್ಷ 2 ತಿಂಗಳು.
ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ.
— ಬಾರ್ & ಬೆಂಚ್ – Kannada Bar & Bench (@Kbarandbench) November 28, 2024
ಪ್ರಕರಣ ಹಿನ್ನೆಲೆ : ಫೆಬ್ರವರಿ 2, 2024ರಂದು ಬೆಂಗಳೂರಿನ ಸಂಜಯನಗರದ ತಮ್ಮ ಮನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಯಡಿಯೂರಪ್ಪ ಮೇಲಿದೆ. ಈ ಸಂಬಂಧ ಬಾಲಕಿಯ ತಾಯಿ ಮಾರ್ಚ್ 14, 2024 ರಂದು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೊಡಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಯಡಿಯೂರಪ್ಪ ಅವರೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಯಡಿಯೂರಪ್ಪ ವಿರುದ್ಧದ ದೂರಿನ ಸಂಬಂಧ ಅಪ್ರಾಪ್ತ ಬಾಲಕಿಯ ತಾಯಿ ಮೇ 27, 2024 ರಂದು ವಕೀಲ ಬಾಲನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಉಸಿರಾಟದ ತೊಂದರೆಯಿಂದ ಅವರು ಮೇ 26, 2024ರಂದು ಬೆಂಗಳೂರಿನ ನ್ಯಾನೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಸಾವಿನ ಸುತ್ತವೂ ಹಲವು ಅನುಮಾನಗಳು ವ್ಯಕ್ತವಾಗಿದ್ದು, ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮೇ 27,2024ರಂದು ದೂರು ದಾಖಲಿಸಿದೆ.
ಇದನ್ನೂ ಓದಿ : ಮರಕುಂಬಿ ತೀರ್ಪು: ದಲಿತರತ್ತ ತಿರುಗಿದ ನ್ಯಾಯದೇವತೆ


