ಪೋಕ್ಸೋ ಪ್ರಕರಣದ ಪ್ರಮುಖ ಆರೋಪಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಸೆ.1ರಂದು ಬಂಧಿಸಲಾಗಿದೆ. ಜಾಮೀನು ಕೋರಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಇದಕ್ಕೆ ತಕರಾರು ಸಲ್ಲಿಸಿದ್ದ ವಿಶೇಷ ಸರ್ಕಾರಿ ವಕೀಲೆ ಕೆ.ಬಿ. ನಾಗವೇಣಿ, “ಬಂಧಿತ ಆರೋಪಿ ಪ್ರಭಾವಿಯಾಗಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ” ಎಂಬ ವಾದವನ್ನು ಮುಂದಿಟ್ಟರು. ನ್ಯಾಯಾಧೀಶರಾದ ಬಿ.ಕೆ. ಕೋಮಲಾ ಅವರು ವಕೀಲರ ವಾದವನ್ನು ಪರಿಗಣಿಸಿದ್ದು, ಮುರುಘಾ ಮಠಾಧೀಶರ ಅರ್ಜಿ ತಿರಸ್ಕರಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಶರಣರನ್ನು ಶಿವಮೊಗ್ಗದ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲು ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿತ್ತು. ಅದಂತೆ ಅವರನ್ನು ಬುಧವಾರ ರಾತ್ರಿ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಕರೆತರಲಾಗಿತ್ತು. ಸದ್ಯ ಆರೋಗ್ಯ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಶರಣರನ್ನು ಆಸ್ಪತ್ರೆಯಿಂದ ಚಿತ್ರದುರ್ಗದ ಕಾರಾಗೃಹಕ್ಕೆ ವಾಪಸ್ ಕರೆದೊಯ್ಯಲಾಗಿದೆ.
“ವೈದ್ಯಕೀಯ ಪ್ರಕ್ರಿಯೆಯ ವರದಿಯನ್ನು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆಸ್ಪತ್ರೆಯಿಂದ ಬಿಡುಗಡೆ ಆಗುವಾಗ ಶರಣರು ಆರೋಗ್ಯವಾಗಿದ್ದಾರೆ” ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ವಿರೂಪಾಕ್ಷಪ್ಪ ತಿಳಿಸಿದ್ದಾರೆ.
ಮರುಘಾ ಶರಣರು ಪೀಠ ತೊರೆಯುವಂತೆ ನಿರ್ದೇಶನ ಕೋರಿ ಹೈಕೋರ್ಟ್‌ಗೆ ಯತ್ನಾಳ್ ಪತ್ರ
ಲೈಂಗಿಕ ಕಿರುಕುಳ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರಿಗೆ ಪೀಠತ್ಯಾಗ ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳಿಗೆ ಹಾಗೂ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರ ಬರೆದಿದ್ದಾರೆ.
ಮಠದ ಸಾವಿರಾರು ನೌಕರರು ಸಂಬಳ, ಸಾರಿಗೆಯ ಖರ್ಚಿಗಾಗಿ ಮತ್ತು ಜೀವನ ನಿರ್ವಹಣೆಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು, ಬ್ಯಾಂಕ್‌ಗಳು ಸೇರಿದಂತೆ ಎಸ್‌ಜೆಎಂ ವಿದ್ಯಾಸಂಸ್ಥೆಯ ಅಧೀನದಲ್ಲಿ ರಾಜ್ಯದ ವಿವಿಧೆಡೆ ಇರುವ ನೂರಾರು ಘಟಕಗಳ ನಿತ್ಯದ ಆಡಳಿತಕ್ಕೆ ಪಾರ್ಶ್ವವಾಯು ಹೊಡೆದಂತಾಗುತ್ತದೆ ಎಂದು ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಶಿವಮೂರ್ತಿ ಮುರುಘಾ ಶರಣರು ಪೀಠದಲ್ಲಿ ಮುಂದುವರಿಯುವುದು ಶ್ರೀಮಠದ ಘನ ಪರಂಪರೆಯಗೆ ಕಳಂಕ ತರುವಂತಹ ಸಂಗತಿಯಾಗಿರುತ್ತದೆ. ಆದ್ದರಿಂದ ಶಿವಮೂರ್ತಿ ಶರಣರು ಈ ಕೂಡಲೇ ಸ್ವಇಚ್ಛೆಯಿಂದ ಪೀಠತ್ಯಾಗ ಮಾಡಬೇಕು. ಇಲ್ಲವಾದಲ್ಲಿ ಅವರನ್ನು ಪದಚ್ಯುತಗೊಳಿಸುವ ಕಾನೂನುಬದ್ಧ ಪ್ರಕ್ರಿಯೆಗೆ ನಾಡಿನ ಭಕ್ತ ಸಮೂಹ ಮುಂದಾಗಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಇದನ್ನೂ ಓದಿರಿ: ಮುರುಘಾ ಶರಣರ ಪ್ರಕರಣ: ನೈಜ ವರದಿ ಸಲ್ಲಿಸಲು ಎಸ್‌ಸಿ, ಎಸ್‌ಟಿ ಆಯೋಗ ಸೂಚನೆ
“ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠದ ಹಾಲಿ ಕಾರ್ಯದರ್ಶಿ ವಸ್ತ್ರದಮಠ ಅವರು ಶಿವಮೂರ್ತಿ ಮುರುಘಾ ಶರಣರ ಏಕಪಕ್ಷೀಯ ನೇಮಕವಾಗಿರುತ್ತದೆ. ಇವರ ನೇಮಕದಿಂದ ಸ್ಥಳೀಯ ಭಕ್ತ ಸಮೂಹ ಅಸಮಾಧಾನಗೊಂಡಿದ್ದಾರೆ. ಈಗಿನ ಸಂದಿಗ್ಧ ಸಮಯದಲ್ಲಿ ಮಠದ ಸಾವಿರಾರು ನೌಕರರು ಸಂಬಳ, ಸಾರಿಗೆಯ ಖರ್ಚಿಗಾಗಿ ಮತ್ತು ಜೀವನ ನಿರ್ವಹಣೆಗಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು, ಬ್ಯಾಂಕ್‌ಗಳು ಸೇರಿದಂತೆ ಎಸ್‌ಜೆಎಂ ವಿದ್ಯಾಸಂಸ್ಥೆಯ ಅಧೀನದಲ್ಲಿ ರಾಜ್ಯದ ವಿವಿಧೆಡೆ ಇರುವ ನೂರಾರು ಘಟಕಗಳ ನಿತ್ಯದ ಆಡಳಿತಕ್ಕೆ ಪಾರ್ಶ್ವವಾಯು ಹೊಡೆದಂತಾಗುತ್ತದೆ. ಮಠದ ಸಾವಿರಾರು ಕೋಟಿ ರೂ. ಮೊತ್ತದ ಚರ ಮತ್ತು ಸ್ಥಿರಾಸ್ತಿ ದುರುಪಯೋಗವಾಗುವ ಸಾಧ್ಯತೆ ಇದೆ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.


