ದೆಹಲಿಯ ಗಡಿಗಳಲ್ಲಿ ಕಳೆದ 72 ದಿನಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ರೈತರ ಹೋರಾಟ ಹತ್ತಿಕ್ಕಲು ಪ್ರಭುತ್ವ ಹಲವು ಪ್ರಯತ್ನಗಳನ್ನು ನಡೆಸುತ್ತಲೇ ಇದೆ. ಸಿಂಘು, ಟಿಕ್ರಿ ಗಾಝಿಪುರ್ ಗಡಿಗಳಲ್ಲಿ ಮುಳ್ಳು ತಂತಿ ಹಾಕುವುದು, ರಸ್ತೆಗೆ ಕಬ್ಬಿಣದ ಮುಳ್ಳುಗಳನ್ನು ನೆಡುವುದು, ಬ್ಯಾರಿಕೆಡ್‌ಗಳ ಮಧ್ಯೆ ಇರುವ ಸ್ಥಳ ತುಂಬಲು ಕಾಂಕ್ರಿಟ್ ಹಾಕಿ ಗೋಡೆಗಳ ನಿರ್ಮಾಣ ಮಾಡಲಾಗಿದೆ.
ಸಿಂಘು ಗಡಿಯಲ್ಲಿ ಇರುವ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿ ವೇದಿಕೆಗಳ ನಡುವೆ ಈಗಾಗಲೇ ಬ್ಯಾರಿಕಡ್ ಮತ್ತು ಮುಳ್ಳುತಂತಿ ಹಾಕಲಾಗಿದೆ. ನಿನ್ನೆ (ಫೆಬ್ರವರಿ) ರಸ್ತೆಗಳಲ್ಲಿ ಗುಂಡಿಗಳನ್ನೂ ತೊಡಲಾಗಿದೆ. ಈಗ ಈ ಎರಡು ವೇದಿಕೆಗಳ ಮಧ್ಯೆ ಇರುವ ಒಂದೇ ಒಂದು ಪುಟ್ಟ ಗಲ್ಲಿಯನ್ನು ಮುಚ್ಚಲು ಹೊರಟಿದ್ದಾರೆ.
ಈ ದಾರಿಯೊಂದೆ ಪ್ರತಿಭಟನಾಕಾರರನ್ನು ಒಟ್ಟಿಗೆ ಸೇರಿಸುವ ಕೆಲಸ ಮಾಡುತ್ತಿದೆ. ಎರಡು ವೇದಿಕೆಗಳ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಈಗಾಗಲೇ ಸರ್ಕಾರ ಹಲವು ಪ್ರಯತ್ನಗಳನ್ನು ನಡೆಸಿದೆ. ಈ ಗಲ್ಲಿ ಮೂಲಕ ದೆಹಲಿ ಭಾಗದ ವೇದಿಕೆಯ ಜನರು ಹರಿಯಾಣ ಭಾಗದಲ್ಲಿರುವ ಲಂಗರ್‌ಗಳಿಗೆ ಹೋಗುತ್ತಾರೆ. ಈಗ ಈ ಗಲ್ಲಿಯನ್ನು ಬಂದ್ ಮಾಡಲು ತೊಡಗಿದ್ದು, ರೈತ ಸ್ವಯಂ ಸೇವಕರು ಗಲ್ಲಿ ಬಂದ್ ಮಾಡದಂತೆ ಪಹರೆ ಕಾಯುತ್ತಿದ್ದಾರೆ.
ಇದನ್ನೂ ಓದಿ: ರೈತರ ಮಹಾಪಂಚಾಯತ್‌ಗೆ ಅನುಮತಿ ನಿರಾಕರಿಸಿದ ಯುಪಿ ಸರ್ಕಾರ
ಇದಲ್ಲದೇ ಸಿಂಘು ಗಡಿಗೆ ಪ್ರತಿಭಟನಾ ಬೆಂಬಲಿಗರು ಮತ್ತು ಪತ್ರಕಾರರು ಹೋಗದಂತೆ ತಡೆಯಲು ಕುಂಡ್ಲಿ ಬಾರ್ಡರ್ ಕೂಡ ಬಂದ್ ಮಾಡಲು ಯೋಜನೆ ರೂಪಿಸುತ್ತಿದೆ. ದೆಹಲಿಯಿಂದ ಹೋಗುವವರು ಸಿಂಘು ಗಡಿಗೆ ಸಮೀಪವಿರುವ ನರೇಲಾ ಬಳಿ ಇಳಿದುಕೊಂಡು ಇಲ್ಲಿಂದ ಮತ್ತೊಂದು ವಾಹನದ ಮೂಲಕ ಕುಂಡ್ಲಿ ಬಾರ್ಡರ್ ತಲುಪಬೇಕಾಗುತ್ತದೆ. ಅಥವಾ ಕುಂಡ್ಲಿ ಬಾರ್ಡರ್‌ಗೆ ವಾಹನ ಸಿಕ್ಕರೆ ಅಲ್ಲಿಯೇ ಇಳಿದುಕೊಂಡು ಬ್ಯಾರಿಕೇಡ್ ದಾಟಿ ಹರಿಯಾಣ ಭಾಗದ ವಾಹನ ತೆಗೆದುಕೊಳ್ಳಬೇಕು. ಹರಿಯಾಣ ಮೂಲಕ ಆಟೋಗಳಲ್ಲಿ ಹೋಗಿ ಪ್ರತಿಭಟನಾ ಸ್ಥಳಕ್ಕೆ ಹತ್ತಿರವಾಗುವ ಜಾಗದಲ್ಲಿ ಇಳಿದುಕೊಂಡು ಸಿಂಘು ಬಾರ್ಡರ್ ತಲುಪಬೇಕು.
ಈ ಕುಂಡ್ಲಿ ಬಾರ್ಡರ್ ಮೂಲಕ ಈಗ ಜನರು ಸಿಂಘು ಬಾರ್ಡರ್ ತಲುಪುತಿದ್ದು ಅಲ್ಲಿಯೂ ಪೊಲೀಸ್ ಇಲಾಖೆ ಕಟ್ಟುನಿಟ್ಟಾದ ಪಹರೆಯನ್ನು ಹಾಕಿದೆ. ಒಂದು ದಿನದ ಅಂತರದಲ್ಲಿ ಕುಂಡ್ಲಿ ಬಾರ್ಡರ್ ಬಳಿಯೇ ಒಂದು ಕಿಲೋಮೀಟರ್ ದೂರದಲ್ಲಿ ವಾಹನ ನಿಲ್ಲುವಂತೆ ಮಾಡಿದೆ. ಇದರಿಂದ ಪ್ರತಿಭಟನಾಕಾರರನ್ನು ತಲುಪಲು ಮತ್ತಷ್ಟು ತೊಂದರೆಯಾಗಲಿದೆ. ಇಂಟರ್ನೆಟ್ ಸಂಪರ್ಕ ಇಲ್ಲದ ಕಾರಣ ಆಟೋ, ಟ್ಯಾಕ್ಸಿಗಳು ಕೇಳಿದಷ್ಟು ಹಣಕೊಟ್ಟು ಇಲ್ಲಿಗೆ ಬರಬೇಕಾದ ಪರಿಸ್ಥತಿ ಪ್ರತಿಭಟನಾ ಬೆಂಬಲಿಗರಿಗೆ ಬಂದಿದೆ.
ಈ ಸ್ಥಳಗಳಿಗೆ ತಲುಪಲು ಕೂಡ ನಾವು ಸ್ಥಳೀಯರಂತೆ ಕಾಣುವುದು ಮುಖ್ಯ. ಬೇರೆ ಭಾಗಗಳಿಂದ ಬಂದವರಂತೆ ತೋರಿಸಿಕೊಂಡರೇ ಬಾರ್ಡರ್‌ಗಳಿಂದಲೇ ವಾಪಸ್ ಕಳುಹಿಸಲಾಗುತ್ತದೆ. ಕುಂಡ್ಲಿ ಬಾರ್ಡರ್ನಲ್ಲಿಯೂ ಬಸ್‌ಗಳನ್ನು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿದೆ.

ರೈತ ಹೋರಾಟ ಜಾಗತಿಕವಾಗಿ ಚರ್ಚೆಗೆ ಬಂದಿದ್ದು, ಸದ್ಯ ಎಲ್ಲರ ಗಮನ ಸೆಳೆಯುತ್ತಿರುವ ಗಾಝಿಪುರ್ ಗಡಿಯಲ್ಲಿ, ಪೊಲೀಸರು ಹಾಕಿದ್ದ ಕಬ್ಬಿಣದ ಮೊಳೆಗಳನ್ನು ತೆಗೆಯಲಾಗಿದೆ. ಆದರೆ ಸಣ್ಣ ಸಣ್ಣ ದಾರಿಗಳ ಮೂಲಕ ಪ್ರತಿಭಟನಾ ಸ್ಥಳಗಳನ್ನು ಸೇರಿಕೊಳ್ಳುವವರನ್ನು ತಡೆಯುವ ಪ್ರಯತ್ನ ಪೊಲೀಸರು ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹೋರಾಟ ಬೆಂಬಲಿಸಿದ್ದಕ್ಕೆ FIR: ಬೆದರಿಕೆಗೆ ಮಣಿಯಲ್ಲ, ನಾನಿನ್ನೂ ರೈತರ ಪರ ಎಂದ ಗ್ರೇಟಾ ಥನ್‌ಬರ್ಗ್


