ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬೇಗೂರು ಬಳಿ ಜನವರಿ 26ರ ಟ್ರಾಕ್ಟರ್ ರ್ಯಾಲಿ ಅಂಗವಾಗಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಜಾಗೃತಿ ಜಾಥಾವನ್ನು ಪೊಲೀಸರು ಬಲವಂತವಾಗಿ ತಡೆದಿದ್ದಾರೆ. ಜಾಥಾಗೆ ಅನುಮತಿ ವಿಚಾರವಾಗಿ ರೈತ ಮುಖಂಡರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆದಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಜನವರಿ 26ರ ಗಣರಾಜ್ಯೋತ್ಸವದಂದು ದೇಶದೆಲ್ಲೆಡೆ ಟ್ರಾಕ್ಟರ್ ರ್ಯಾಲಿಗೆ ಕರೆ ಕೊಡಲಾಗಿದೆ. ಅದರ ಪೂರ್ವಭಾವಿಯಾಗಿ ಹಲವಾರು ಕಡೆ ರೈತ ಜಾಗೃತಿ ಜಾಥಾಗಳು ನಡೆಯುತ್ತಿವೆ. ಇಂದು ಬೇಗೂರು ಬಳಿ ಜಾಗೃತಿ ಜಾಥಾ ನಡೆಯುತ್ತಿದ್ದಾಗ ಮಧ್ಯಪ್ರವೇಶಿಸಿದ ಪೊಲೀಸರು ಅನುಮತಿ ಪಡೆದಿಲ್ಲವೆಂದು ಆರೋಪಿಸಿ ಜಾಥಾಗೆ ಅಡ್ಡಿಪಡಿಸಿದ್ದಾರೆ. ಪೊಲೀಸರು ಮತ್ತು ರೈತ ಮುಖಂಡರ ಮಾತಿನ ಚಕಮಕಿಯನ್ನು ಕೆಳಗಿನ ವಿಡಿಯೋದಲ್ಲಿ ಕಾಣಬಹುದು.
ಈ ಕುರಿತು ನಾನುಗೌರಿ.ಕಾಂನೊಡನೆ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಟಿ.ಯಶವಂತ್‌ರವರು “ಇಂದಿನಿಂದ ರೈತ ಜಾಗೃತಿ ಜಾಥ ಆರಂಭಿಸಿದ್ದೇವೆ. ಇಂದು ಅದರ ಉದ್ಘಾಟನೆ ಸಹ ಆಗಿದೆ. ಆದರೆ ಪೊಲೀಸರು ಸ್ಥಳೀಯ ಶಾಸಕರ ಆದೇಶದಂತೆ ಜಾಥಾ ತಡೆಯಲು ಮುಂದಾಗಿದ್ದಾರೆ. ಆದರೆ ನಾವು ಮನೆ ಮನೆಗೂ ತೆರಳಿ ಕೃಷಿ ಕಾಯ್ದೆಗಳ ವಿರುದ್ಧ ಅರಿವು ಮೂಡಿಸುವ ಕೆಲಸ ಮುಂದುವರೆಸಿದ್ದೇವೆ” ಎಂದರು.
ಡಿವೈಎಫ್‌ಐ ಮುಖಂಡ ಲಿಂಗರಾಜು ಮಾತನಾಡಿ, “ನಾವು ಜನವರಿ 13 ರಂದೇ ಡಿಸಿಪಿ ಕಚೇರಿಯಲ್ಲಿ ರೈತಜಾಗೃತಿ ಜಾಥಾಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ಮೂರ್ನಾಲ್ಕು ಬಾರಿ ಪೊಲೀಸ್ ಸ್ಟೇಷನ್‌ಗೆ ತೆರಳಿ ವಿಚಾರಿಸಿದ್ದೇವೆ. ಆದರೆ ಪೊಲೀಸರು ಅನುಮತಿ ನೀಡಿಲ್ಲ ಅಥವಾ ನಿರಾಕರಿಸಿಯೂ ಇಲ್ಲ. ಹಾಗಾಗಿ ಶಾಂತಿಯುತವಾಗಿ ನಾವು ಜಾಥಾ ಆರಂಭಿಸಿದ್ದೇವೆ. ಇದರಲ್ಲಿ ಪೊಲೀಸರ ತಪ್ಪಿದೆಯೇ ಹೊರತು ನಮ್ಮದಲ್ಲ. ಆದರೂ ಬಲವಂತವಾಗಿ ಪೊಲೀಸರು ನಮ್ಮ ಜಾಥಾ ತಡೆದಿದ್ದಾರೆ, ಇದು ಖಂಡನೀಯ” ಎಂದರು.
ನಾವು ನಾಳೆಯಿಂದ ನಮ್ಮ ಜಾಥಾವನ್ನು ಮುಂದುವರೆಸಲಿದ್ದು ಆಗಲೂ ಪೊಲೀಸರು ಅನುಮತಿ ನೀಡದಿದ್ದರೆ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 11 ನೇ ಸುತ್ತಿನ ಮಾತುಕತೆಯೂ ವಿಫಲ: ಚಳವಳಿ ತೀವ್ರಗೊಳಿಸಲು ರೈತರ ನಿರ್ಧಾರ


