ಕೊರೊನಾ ವೈರಾಣು ದಾಂಗುಡಿಯಿಟ್ಟ ಮೇಲೆ ಜಗತ್ತು ಅಲ್ಲೋಲ ಕಲ್ಲೋಲವಾಗಿದೆ ಮತ್ತು ಬದುಕಿನ ಲಯವೇ ಬದಲಾಗಿದೆ. ಇದು ಹೊಸ ರೋಗಲಕ್ಷಣವಾದ್ದರಿಂದ, ಚುಚ್ಚುಮದ್ದು ಅಥವಾ ಗುಳಿಗೆಗಳನ್ನು ಇನ್ನೂ ಕಂಡು ಹಿಡಿದಿಲ್ಲವಾದ್ದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೇ ಅದನ್ನು ತಡೆಯುವ ಸುಲಭೋಪಾಯವೆಂದಾಯಿತು. ಆದ್ದರಿಂದ ‘ಮನೆಯ ಒಳಗಿರು’ ಎಂಬುದು ಬೀಜಮಂತ್ರವಾಯಿತು.
ಬಹುತೇಕ ದೇಶಗಳಲ್ಲಿ ಸರ್ಕಾರಗಳು ಲಾಕ್‌ಡೌನ್ ಘೋಷಿಸಿದವು. ನಮ್ಮ ದೇಶವೂ ಅದನ್ನೇ ಮಾಡಿತು. ಆದರೆ ಜನರು ಕೇಳಬೇಕಲ್ಲ. ಹೊಸದರಲ್ಲಿ ಸಣ್ಣಪುಟ್ಟ ನೆಪವೊಡ್ಡಿ ಕಾರು, ಬೈಕುಗಳಲ್ಲಿ ಬೀದಿಗಿಳಿಯಲಾರಂಭಿಸಿದರು. ಆಶ್ಚರ್ಯವೆಂದರೆ ಜಗತ್ತಿನ ಬೇರೆಲ್ಲೂ ಕಾಣಿಸದಂತಹ ದೃಶ್ಯಗಳು ಭಾರತದ ನಗರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ನಮ್ಮ ಪೊಲೀಸರು ಬೀದಿಯಲ್ಲಿ ಕಂಡಕಂಡವರನ್ನು ತಮ್ಮ ಲಾಠಿಗಳಿಂದ ಥಳಿಸುತ್ತಿದ್ದರು.
ಎಷ್ಟರಮಟ್ಟಿಗೆಂದರೆ, ಕಚೇರಿಗೆಂದು ಹೊರಟಿದ್ದ ಆರೋಗ್ಯ ಇಲಾಖೆಯಂಥ ತುರ್ತುಸೇವೆಯ ಅಧಿಕಾರಿಯನ್ನು ಗುರುತಿನ ಚೀಟಿ ತೋರಿಸಿದರೂ ಬಿಡದೆ ಮನಬಂದಂತೆ ಥಳಿಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದರು.
ಹೀಗೆ ಸಾರ್ವಜನಿಕವಾಗಿ ಹೊಡೆಯುವುದು ಕಾನೂನುಬದ್ಧವಲ್ಲ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅವರಿಗೂ ತಿಳಿದಿದೆ. ಆದರೂ ಹೊಡೆಯುತ್ತಿದ್ದಾರೆ. ಜನರು ಹೊರಬರದಂತೆ ಭಯ ಹುಟ್ಟಿಸುವ ಉದ್ದೇಶದಿಂದಲೇ ಪೊಲೀಸರು ಹಾಗೆ ಮಾಡಿದ್ದರೂ ಹಿಂಸೆ ಅಲ್ಲಿ ತಾಂಡವವಾಡಿದೆ. ಅನೇಕರು ದೈಹಿಕ ನ್ಯೂನತೆಗೆ ಒಳಗಾಗಿರುವ ಸಾಧ್ಯತೆಗಳಿವೆ. ಕೆಲವರು ಎಷ್ಟು ರಭಸದಿಂದ ಹೊಡೆಯುತ್ತಿದ್ದರೆಂದರೆ ತಮ್ಮೆಲ್ಲ ಬಿರುಸನ್ನೂ ಒಟ್ಟುಗೂಡಿಸಿಕೊಂಡು ಲಾಠಿಯನ್ನು ಬೀಸುತ್ತಿದ್ದರು. ಹೀಗೆ ಹೇಳದೆ ಕೇಳದೆ, ಮುಖವನ್ನೂ ನೋಡದೆ ಬಾರಿಸುತ್ತಿದ್ದರು ಎಂದರೆ ವಿಕೃತಾನಂದವನ್ನು ಪಡೆಯುತ್ತಿದ್ದರು ಎಂದೇ ಅರ್ಥೈಸಬೇಕಾಗುತ್ತದೆ.
ಹಾಗೆಂದ ಮಾತ್ರಕ್ಕೆ ಹೊಡೆಯುತ್ತಿದ್ದವರು ಕೆಟ್ಟವರೆಂದೇನೂ ಅಲ್ಲ. ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೋಪವನ್ನು ಉದ್ದೀಪಿಸಲು ಕೆಲವರಿಗೆ ಒಂದು ಸಣ್ಣ ಕಾರಣ ಸಾಕು. ವಸ್ತುಸ್ಥಿತಿಯನ್ನು ನೋಡಿ, ವಿಚಾರ ಮಾಡುವಷ್ಟು ತಾಳ್ಮೆ ಕೆಲವರಲ್ಲಿರುವುದಿಲ್ಲ. ಮನುಷ್ಯನೊಳಗಿರುವ ರಾಗ, ದ್ವೇಷಾದಿಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ತರಬೇತಿಯ ಅಗತ್ಯವಿದೆ. ಅದನ್ನು ವಿಪಸ್ಸನಾ ಧ್ಯಾನ ನೀಡುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರಿಗೆ ಅದರಲ್ಲೂ ಮುಖ್ಯವಾಗಿ ಪೊಲೀಸರಿಗೆ ಅದರ ಅಗತ್ಯ ಹೆಚ್ಚು. ಯಾಕೆಂದರೆ ಅವರು ಯಾವಾಗಲೂ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾರೆ.
ಪಾಶ್ಚಾತ್ಯ ದೇಶಗಳಲ್ಲಿ ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಶುರುವಾಗಿದೆ. ಒತ್ತಡ ನಿವಾರಣೆಗೆ ಅವರು ವಿಪಸ್ಸನಾ ಧ್ಯಾನದ ಮೊರೆ ಹೋಗುತ್ತಿದ್ದಾರೆ. ಕೆನಡಾ ದೇಶದ ಪೊಲೀಸರಿಗೆ ಹತ್ತು ದಿನಗಳ ಅವಧಿಯ ವಿಪಸ್ಸನಾ ಕಲಿಸಲಾಗುತ್ತಿದೆ. ಅಮೇರಿಕಾದಲ್ಲಿ ಜೈಲಿನಲ್ಲಿರುವ ಖೈದಿಗಳಿಗೂ ವಿಪಸ್ಸನಾ ಧ್ಯಾನ ಕಲಿಸುತ್ತಿದ್ದಾರೆ.

ಇತ್ತೀಚೆಗೆ ಒಂದು ಸಣ್ಣ ವೀಡಿಯೊ ನೋಡಿ ಅಚ್ಚರಿಗೊಂಡೆ. ಅದು ಬ್ರೆಜಿಲ್ ದೇಶದ ಒಂದು ಜೈಲಿನಲ್ಲಿ ಖೈದಿಗಳು ವಿಪಸ್ಸನಾ ಧ್ಯಾನ ಮಾಡುತ್ತಿರುವ ಕಿರುಚಿತ್ರ. ದಕ್ಷಿಣ ಅಮೆರಿಕಾದ ಹೆಚ್ಚಿನ ದೇಶಗಳು ಕ್ಷಿಪ್ರಕ್ರಾಂತಿಗಳಿಂದ ಸರ್ಕಾರ ರಚಿಸುತ್ತವೆ. ಮಾಫಿಯಾಗಳಿವೆ, ಡ್ರಗ್ಸ್ನ ಹಾವಳಿಯಿದೆ. ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಅಲ್ಲಿ ಮಾಮೂಲು ಘಟನೆಗಳು. ಈ ಎಲ್ಲ ಕಾರಣಗಳಿಂದ ಅಲ್ಲಿನ ಜೈಲುಗಳು ತುಂಬಿ ತುಳುಕುತ್ತವೆ. ಹೆಚ್ಚಿನ ಜೈಲುಗಳನ್ನು ಸೇನೆಗಳು ನೋಡಿಕೊಳ್ಳುತ್ತವೆ. ಆದರೂ ಜೈಲಿನ ಒಳಗೂ ಅದೇ ಕತೆ. ಕೊಲೆ, ಸುಲಿಗೆ, ಮಾಫಿಯಾ ಚಟುವಟಿಕೆ, ಡ್ರಗ್ಸ್ ಇತ್ಯಾದಿ. ಖೈದಿಗಳನ್ನು ತಹಬದಿಗೆ ತರಲು ಅವರಿಗೆ ವಿಪಸ್ಸನಾ ಧ್ಯಾನವನ್ನು ಕಲಿಸುತ್ತಿದ್ದಾರೆ!
ಅವರ ಅನುಭವಗಳನ್ನು ಅವರವರ ಬಾಯಲ್ಲಿಯೇ ಕೇಳಬೇಕು. ಒಬ್ಬ ಹೇಳುತ್ತಿದ್ದ; ಕೋಪ ಹೇಗೆ ಶಮನವಾಗುತ್ತದೆ? ನಮ್ಮೊಳಗಿರುವ ಕಲ್ಮಶವನ್ನು ತೆಗೆದುಹಾಕುವುದರಿಂದ. ಅದರ ಕಾರಣ ಮತ್ತು ಪರಿಣಾಮಗಳನ್ನು ಅರಿಯುವುದರಿಂದ ಅದು ಸಾಧ್ಯ. ಎಲ್ಲ ಕೆಡುಕುಗಳ ಮೂಲ ದ್ವೇ಼ಷ. ಅದನ್ನು ಸ್ವಲ್ಪಸ್ವಲ್ಪವಾಗಿ, ನಿಧನಿಧಾನವಾಗಿ ಹೊರಹಾಕಬೇಕು. ಲೋಭದಿಂದ ಬಿಡುಗಡೆ ಪಡೆಯಬೇಕು. ಆಗ ಅವಿದ್ಯೆ ತಂತಾನೆ ದೂರವಾಗುತ್ತದೆ. ಇವುಗಳನ್ನು ಇತರ ಧರ್ಮಗಳು ಹೇಳುವುದಿಲ್ಲವೆಂದಲ್ಲ.
ಆದರೆ ಬುದ್ಧ ಅವುಗಳ ಅನುಷ್ಠಾನಕ್ಕೆಂದು ಒಂದು ಪ್ರಯೋಗವನ್ನು ಕಂಡುಹಿಡಿದಿದ್ದಾನೆ. ಅದೇ ವಿಪಸ್ಸನಾ ಧ್ಯಾನ. ಬರ್ಮಾ ಮೂಲದ ಎಸ್. ಎನ್. ಗೊಯೆಂಕಾರವರು ಈ ಧ್ಯಾನಮಾರ್ಗವನ್ನು ಧರ್ಮದ ಆಚೆಗೆ ನಿಂತು ಜಗತ್ತಿನಾದ್ಯಂತ ಪ್ರಚುರಪಡಿಸಿದ್ದಾರೆ. ಬೌದ್ಧಧರ್ಮದ ಹಂಗಿಲ್ಲದೆ ಜನರು ಇದನ್ನು ಕಲಿಯುತ್ತಿದ್ದಾರೆ. ಇಲ್ಲಿ ಮತಾಂತರದ ಪ್ರಶ್ನೆಯಿಲ್ಲ. ದೇವರ ಗೊಡವೆಯಿಲ್ಲ. ಆದ್ದರಿಂದ ದೈವನಿಂದನೆಯ ಆರೋಪವಿಲ್ಲ. ಕೊನೆಗೆ ಬುದ್ಧನನ್ನು ಸ್ಮರಿಸದಿದ್ದರೂ ಆಕ್ಷೇಪವಿಲ್ಲ. ವಿಪಸ್ಸನಾ ಮನಸ್ಸನ್ನು ತಿಳಿಗೊಳಿಸುತ್ತದೆ ಮತ್ತು ಇರುವುದನ್ನು ಇರುವ ಹಾಗೆ ನೋಡುವುದನ್ನು ಕಲಿಸುತ್ತದೆ.
ಬಹುತೇಕ ಎಲ್ಲ ರಾಷ್ಟ್ರಗಳಲ್ಲಿಯೂ ಈಗ ವಿಪಸ್ಸನಾ ಧ್ಯಾನ ಕೇಂದ್ರಗಳಿವೆ. ಒತ್ತಡದಲ್ಲಿ ಕೆಲಸ ಮಾಡುವ ಎಲ್ಲ ಸಾರ್ವಜನಿಕ ಸೇವೆಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಿಶೇಷವಾಗಿ ಪೊಲೀಸರಿಗೆ ಸರ್ಕಾರಗಳೇ ಭಾರತ ಮೂಲವಾದ ಈ ಧ್ಯಾನ ಮಾರ್ಗವನ್ನು ಕಲಿಸಲು ಮುಂದಾಗಬೇಕು.
-ಡಾ. ಮೂಡ್ನಾಕೂಡು ಚಿನ್ನಸ್ವಾಮಿ
ಓದಿ:
ಪ್ರಜಾಪ್ರಭುತ್ವ v/s ಜಾತಿಪ್ರಭುತ್ವ Democracy v/s Castocracy : ಡಾ. ಮೂಡ್ನಾಕೂಡು ಚಿನ್ನಸ್ವಾಮಿ


