Homeಅಂಕಣಗಳುಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’

ಸರ್ವಾಧಿಕಾರದ ಧೋರಣೆಗೆ ವಿರುದ್ಧವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ’ಸರ್‌ಪಟ್ಟ ಪರಂಪರೈ’

- Advertisement -
- Advertisement -

ಬದುಕು ಗೆಲ್ಲುವುದಕ್ಕಾಗಿ ನಡೆಸುವ ಹೋರಾಟ. ಅದು ಪ್ರೇಯಸಿಯ ಮನಸ್ಸನ್ನು ಗೆಲ್ಲುವುದಕ್ಕೆ ಇರಬಹುದು, ದ್ವೇಷವನ್ನು ಪ್ರೀತಿಯಿಂದ ಗೆಲ್ಲುವುದಕ್ಕೆ ಇರಬಹುದು, ಕಳೆದುಕೊಂಡ ಅಥವಾ ಕಸಿದುಕೊಂಡ ಹಕ್ಕು, ಘನತೆ ಮತ್ತು ಗೌರವವನ್ನು ಮತ್ತೆ ಗೆದ್ದು ಗಳಿಸಿಕೊಳ್ಳುವುದಕ್ಕಿರಬಹುದು. ಹೀಗೆ ಗೆಲ್ಲುವುದಕ್ಕಾಗಿ ನಡೆಯುವ ಹೋರಾಟವನ್ನು ಸಂಕೇತಿಸುವುದಕ್ಕೆ ’ಬಾಕ್ಸಿಂಗ್’ ಅತ್ಯುತ್ತಮ ಕ್ರೀಡಾಸಾಧನ ಅಲ್ಲವೇ!

ಜಗತ್ತು ಕಂಡ ಅತ್ಯದ್ಭುತ ಬಾಕ್ಸರ್ ಮುಹಮದ್ ಅಲಿ ಅವರು ’ದ ಗ್ರೇಟೆಸ್ಟ್ – ಮೈ ಓನ್ ಸ್ಟೋರಿ’ ಎಂದು ಕರೆದುಕೊಳ್ಳುವ ಆತ್ಮಕತೆಯ ಆರಂಭಿಕ ಅಧ್ಯಾಯದಲ್ಲಿಯೇ 1973ರಲ್ಲಿ ಕೆನ್ ನಾರ್ಟನ್ ವಿರುದ್ಧ ನಡೆದ ಬಾಕ್ಸಿಂಗ್ ಪಂದ್ಯದಲ್ಲಿ ತಾವು ತಮ್ಮ ಬಾಕ್ಸಿಂಗ್ ಜೀವಮಾನದಲ್ಲಿ ಎರಡನೇ ಬಾರಿಗೆ ಸೋತ ಬಗ್ಗೆ ಬರೆದುಕೊಳ್ಳುತ್ತಾರೆ. ಅಲಿ ಸೋಲುವುದನ್ನೇ ನೋಡಲು ಕಾದಿದ್ದ ಹಲವು ಪ್ರೇಕ್ಷಕರು ಆ ಪಂದ್ಯದ ನಂತರ ತಮ್ಮ ಬೆಂಬಲಿಗ ಆಟಗಾರನ ಗೆಲುವನ್ನು ಸಂಭ್ರಮಿಸುವುದನ್ನು ಮಾತ್ರ ಮಾಡದೆ, ಅಲಿ ವಿರುದ್ಧ ಜನಾಂಗೀಯ ದ್ವೇಷದ ವಿಷ ಕಾರುತ್ತಾರೆ. ’ಬಿಳಿ ಜನಾಂಗೀಯ ಶ್ರೇಷ್ಠತೆಯ’ ಪ್ರತಿಪಾದಕರು ಅಲಿಯನ್ನು ಅವಮಾನಿಸುವ ಮಾತುಗಳನ್ನು ಆಡಿ ಜರಿಯುತ್ತಾರೆ. ನಾರ್ಟನ್ ಕೂಡ ಕಪ್ಪು ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರೂ, ಅಲಿ ಅವರು ಪ್ರತಿನಿಧಿಸುತ್ತಿದ್ದ ರಾಜಕೀಯ ಅಮೆರಿಕದ ಬಹುಸಂಖ್ಯಾತ ಮೂಲಭೂತವಾದಿಗಳನ್ನು ಅವತ್ತು ಕಂಗೆಡಿಸಿರುತ್ತದೆ.

ಈ ಪ್ರಸಂಗದಿಂದ ಆ ಆತ್ಮಕತೆಯ ಓದಿನ ಪ್ರಾರಂಭದಲ್ಲೇ ಒಂದು ಅಂಶ ಸ್ಪಷ್ಟವಾಗುತ್ತದೆ. ಅಲಿ ಅವರ ಬಾಕ್ಸಿಂಗ್ ಕೆರಿಯರ್ ಕೇವಲ ವೈಯಕ್ತಿಕ ಹೋರಾಟಗಳಾಗಿರದೆ, ತಾವು ಪ್ರತಿನಿಧಿಸುವ ಸಮುದಾಯದ ಹೋರಾಟ ಮತ್ತು ಮಾನವೀಯತೆಯ ಗೆಲುವಿಗೆ ನಡೆಸುತ್ತಿದ್ದ ಹೋರಾಟದ ಜೊತೆಗೆ ತಳಕುಹಾಕಿಕೊಂಡಿತ್ತು. ’ವಿಯೆಟ್ನಾಮ್ ಕಮ್ಯುನಿಸ್ಟರ ಜೊತೆಗೆ ನನ್ನ ಯಾವುದೇ ಫೈಟ್ ಇಲ್ಲ’ ಎಂದು ಗಟ್ಟಿಯಾಗಿ ಘೋಷಿಸಿ, ತನ್ನ ದೇಶ ಅಮೆರಿಕ ವಿಯೆಟ್ನಾಂ ವಿರುದ್ಧ ನಡೆಸುತ್ತಿದ್ದ ಯುದ್ಧದಲ್ಲಿ ಭಾಗಿಯಾಗಲು ನಿರಾಕರಿಸಿ ಅವರು ನಡೆಸಿದ ಹೋರಾಟ, ಕಪ್ಪು ಜನಾಂಗವನ್ನು ಶತಶತಮಾನಗಳಿಂದ ಗುಲಾಮರನ್ನಾಗಿಸಿ ಶೋಷಿಸಿದ್ದ ಪ್ರಭುತ್ವದ ವಿರುದ್ಧ ನಡೆಸಿದ್ದ ಹೋರಾಟ ಅಲಿಯವರಿಗೆ ತಮ್ಮ ಬಾಕ್ಸಿಂಗ್‌ನಷ್ಟೇ ಮುಖ್ಯವಾಗಿತ್ತು ಅಥವಾ ಅವೆರಡೂ ಅವರಿಗೆ ಬೇರ್ಪಡಿಸಲಾರದಷ್ಟು ಜತೆಗೂಡಿದ್ದವು. ಬಾಕ್ಸಿಂಗ್ ಅಲಿ ಅವರಿಗೆ ಮಾನವೀಯತೆಯ ಮತ್ತು ನೈತಿಕ ಶಕ್ತಿಯನ್ನು ಒದಗಿಸಿತ್ತು ಎನ್ನುವುದೂ ಅಷ್ಟೇ ನಿಜ.

70ರ ದಶಕದ ಮದ್ರಾಸ್ ಬಾಕ್ಸಿಂಗ್ ಪರಂಪರೆಯ ಬಗ್ಗೆ ’ಸರ್‌ಪಟ್ಟ ಪರಂಪರೈ’ ಸಿನಿಮಾ ನಿರ್ದೇಶಿಸಿರುವ ಪ ರಂಜಿತ್ ಅವರು ಮುನ್ನಲೆಯಲ್ಲಿ ಬಾಕ್ಸರ್ ಒಬ್ಬನ, ಒಂದು ಬಾಕ್ಸಿಂಗ್ ಪರಂಪರೆಯ ಕಥೆಯನ್ನು ಹೇಳುತ್ತಾ, ಹಿನ್ನೆಲೆಯಲ್ಲಿ, ಅಥವಾ ಕಥೆಯನ್ನು ನರೇಟ್ ಮಾಡುವ ಪ್ರಕ್ರಿಯೆಯಲ್ಲಿ ರಾಜಕೀಯ, ಸಾಮಾಜಿಕ
ಮತ್ತು ತಳ ಸಮುದಾಯದ ಸಾಂಸ್ಕೃತಿಕ ಕಥೆಗೆ ಅದನ್ನು ತಳಕು ಹಾಕಿ ಒಂದು ದಟ್ಟ ಅನುಭವವನ್ನು ಸೃಷ್ಟಿಸುತ್ತಾರೆ. ಕೇವಲ ಅನುಭವಕ್ಕೆ ಮಾತ್ರ ಸೀಮಿತವಾಗದೆ, ಇತಿಹಾಸದ ಒಂದು ನೈಜ ಕಥೆಯನ್ನು ನಿರೂಪಿಸುತ್ತಾ ಪ್ರಸಕ್ತ ವಿದ್ಯಮಾನಗಳಿಗೆ ಸ್ಪಂದಿಸುವ ಪ್ರತಿರೋಧದ ಸಿನಿಮಾ ಆಗಿಯೂ ’ಸರ್‌ಪಟ್ಟ ಪರಂಪರೈ’ ಮುಖ್ಯವಾಗುತ್ತದೆ.

ಸಿನಿಮಾ ಆರಂಭವಾಗುವುದೇ ಒಂದು ಸಮುದಾಯದ ಎಚ್ಚೆತ್ತ ಪ್ರಜ್ಞೆಯ ಪ್ರತೀಕದೊಂದಿಗೆ. ದೇಶದಾದ್ಯಂತ ’ತುರ್ತುಪರಿಸ್ಥಿತಿ’ ಘೋಷಿಸಿದ್ದರೂ, ತಮಿಳುನಾಡಿನ ಮದ್ರಾಸ್‌ನಲ್ಲಿ ಅದನ್ನು ವಿರೋಧಿಸಿ ಬಾಕ್ಸಿಂಗ್ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಅದನ್ನು ವೀಕ್ಷಿಸಲು ತನ್ನ ಕೆಲಸದ ಅವಧಿ ಮುಗಿದಕೂಡಲೇ ಕಬಿಲನ್ (ಆರ್ಯ) ಕೆಲಸ ನಿಲ್ಲಿಸಿ ತನ್ನ ಮೇಲಧಿಕಾರಿಯ ಮಾತನ್ನು ಧಿಕ್ಕರಿಸಿ ಹೊರಡುವಾಗ ಆವರಣದ ಗೋಡೆಯ ಮೇಲೆ ಅಂಬೇಡ್ಕರ್ ಫೋಟೋ ಕಾಣಿಸುತ್ತೆ. ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಎಚ್ಚೆತ್ತಿರುವ ಮತ್ತು ಇಡೀ ಸಮುದಾಯವಾಗಿ ತಮಿಳುನಾಡಿನ ಜನ ರಾಜಕೀಯವಾಗಿ ಎಚ್ಚರಗೊಳ್ಳುತ್ತಿರುವ ಮುನ್ಸೂಚನೆ ಅದು.

ಬ್ರಿಟಿಷರ ಆಳ್ವಿಕೆಯ ಕಾಲದಿಂದಲೂ ಬೆಳೆದುಬಂದಿರುವ ಮದ್ರಾಸ್ ಬಾಕ್ಸಿಂಗ್ ಪರಂಪರೆಯಲ್ಲಿ ಹಲವು ಕವಲುಗಳು ಒಡೆದಿವೆ. ಅದರಲ್ಲಿ ಮುಖ್ಯವಾದ ಸರ್‌ಪಟ್ಟ ಮತ್ತು ಇಡಿಯಪ್ಪ ಪರಂಪರೆಗಳು ಬದ್ಧ ವೈರಿಗಳು. ರಂಗನ್ (ಪಸುಪತಿ) ಸದ್ಯ ಸರ್‌ಪಟ್ಟ ಪರಂಪರೆಯ ತರಬೇತುದಾರನಾದರೆ, ರಂಗನ್‌ನಿಂದ ಪಂದ್ಯವೊಂದರಲ್ಲಿ ಪರಾಭವಗೊಂಡ ದೊರೈ (ಜಿಎಂ ಸುಂದರ್) ಇಡಿಯಪ್ಪ ಪರಂಪರೆಯ ತರಬೇತುದಾರ. ಸರ್‌ಪಟ್ಟ ಪರಂಪರೆಯ ಮುಖ್ಯ ಬಾಕ್ಸರ್‌ನನ್ನು ಹಲವು ವರ್ಷಗಳಿಂದ ಇಡಿಯಪ್ಪ ಬಾಕ್ಸರ್ ಸೋಲಿಸುತ್ತಲೇ ಬಂದಿದ್ದಾನೆ. ಸಿನಿಮಾದ ಪ್ರಾರಂಭದಲ್ಲಿ ಸರ್‌ಪಟ್ಟದ ರಾಮನ್ (ಸಂತೋಶ್ ಪ್ರತಾಪ್) ಮತ್ತು ವೆಟ್ರಿ (ಕಲೈಯರಸನ್) ಗೆದ್ದರೂ, ಮುಖ್ಯ ಫೈಟರ್ ಮೀರನ್ ಇಡಿಯಪ್ಪ ಪರಂಪರೆಯ ವೇಂಬುಲಿಯಿಂದ (ಜಾನ್ ಕೋಕ್ಕೆನ್) ಪರಾಭವಗೊಳ್ಳುತ್ತಾನೆ. ಮೀರನ್‌ಗೆ ಹೆಚ್ಚು ಗಾಯಗೊಳ್ಳಬಾರದೆಂದು ಕೋಚ್ ರಂಗನ್ ತನ್ನ ವಸ್ತ್ರವನ್ನು ರಿಂಗ್ ಒಳಗೆ ಎಸೆದು ಸೋಲೊಪ್ಪಿಕೊಳ್ಳುತ್ತಾನೆ. ಈ ಘಟನೆಯಿಂದ ದೊರೈ ರಂಗನ್‌ನನ್ನು ಅವಮಾನಿಸುತ್ತಾನೆ. ಇದಕ್ಕೆ ಪ್ರತಿಯಾಗಿ ವೇಂಬುಲಿ ವಿರುದ್ಧ ಮತ್ತೊಂದು ಫೈಟ್‌ಗೆ ಕೇಳಿಕೊಳ್ಳುವ ರಂಗನ್, ಆ ಪಂದ್ಯದಲ್ಲೂ ಪರಾಭವಗೊಂಡರೆ ತನ್ನ ನಿವೃತ್ತಿ ಘೋಷಿಸಿಕೊಳ್ಳುವುದಾಗಿ ಹೇಳುತ್ತಾನೆ.

ಎರಡು ಪರಂಪರೆಗಳ ನಡುವಿನ ವೈರತ್ವವನ್ನು ಚಿತ್ರಿಸುವ ಬಾಕ್ಸಿಂಗ್ ಪಂದ್ಯಗಳ ಸೋಲು-ಗೆಲುವಿನ ನಿರೂಪಣೆಯಾಗಿ ಒಂದೇ ಸ್ತರದಲ್ಲಿ ’ಸರ್‌ಪಟ್ಟ ಪರಂಪರೈ’ ಚಿತ್ರಿತವಾಗಿದ್ದರೆ ಹತ್ತರಲ್ಲಿ ಹನ್ನೊಂದನೆಯ ಕ್ರೀಡಾಚಿತ್ರವಾಗಿಬಿಡುತ್ತಿತ್ತು. ಆದರೆ ಸಿನಿಮಾ ಹಲವು ಸ್ತರಗಳಲ್ಲಿ ತೆರೆದುಕೊಳ್ಳುತ್ತಾ, ರಾಜಕೀಯ ಕೇಂದ್ರೀಕರಣದ ವಿರುದ್ಧ, ಸರ್ವಾಧಿಕಾರದ ವಿರುದ್ಧ, ವಿಕೇಂದ್ರೀಕರಣದ – ಪ್ರಾದೇಶಿಕ ಘನತೆಯ – ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಉಳಿಸಿಕೊಳ್ಳುವ-ಗೆಲ್ಲುವ ಫೈಟ್ ಆಗಿ ಸಿನಿಮಾ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುವುದೇ ಇದರ ಹೆಚ್ಚುಗಾರಿಕೆ. ತಮಿಳರ ಘನತೆಯ ಹೋರಾಟದಿಂದ ಅಧಿಕಾರಕ್ಕೆ ಬಂದ ಡಿಎಂಕೆ ರಾಜಕೀಯಯನ್ನು ಬೆಂಬಲಿಸುವ ಕೋಚ್ ರಂಗನ್ ಪಾತ್ರದ ಚಿತ್ರಣ ಇಡೀ ಸಿನಿಮಾದ ಆಶಯವನ್ನು ಹೊತ್ತೊಯ್ಯುತ್ತದೆ.

ರಂಗನ್, ದೇಶದಲ್ಲಿ ಹೇರಲಾಗಿರುವ ತುರ್ತುಪರಿಸ್ಥಿತಿಯ ವಿರುದ್ಧ ಹೇಗೆ ಹೋರಾಡುತ್ತಿದ್ದಾರೋ, ಅದೇ ರೀತಿ ಸರ್‌ಪಟ್ಟ ಪರಂಪರೆಯ ಬಾಕ್ಸರ್‌ಗಳ ನಡುವೆ ನೈತಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಎಚ್ಚರಿಕೆಯಾಗಿಯೂ, ಆತ್ಮಸಾಕ್ಷಿಯಾಗಿಯೂ ಇದ್ದಾರೆ. ಪರಂಪರೆಯ ಉಳಿದವರನ್ನು ಕನ್ಸಲ್ಟ್ ಮಾಡದೆಯೇ ವೇಂಬುಲಿ ವಿರುದ್ಧ ಪಂದ್ಯಕ್ಕೆ ಸವಾಲೊಡ್ಡಿದ್ದರ ವಿರುದ್ಧ ಪರಂಪರೆಯ ಹಿರಿಯರಿಂದ ವಿರೋಧ ವ್ಯಕ್ತವಾದಾಗ, ಎಲ್ಲರನ್ನೂ ಒಳಗೊಂಡು ಚರ್ಚಿಸಿ ತಾವು ತೆಗೆದುಕೊಂಡ ನಿರ್ಧಾರವನ್ನು ಕನ್ವಿನ್ಸ್ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ಸರ್‌ಪಟ್ಟ ವೈವಿಧ್ಯತೆಯುಳ್ಳ ಮತ್ತು ಬಹುತ್ವದ ಬಾಕ್ಸಿಂಗ್ ಪರಂಪರೆ. ಮುಖ್ಯ ಬಾಕ್ಸರ್ ಆಗಿ ಮುಸ್ಲಿಂ ಸಮುದಾಯದ ಮೀರನ್ ಇದ್ದಾರೆ. ’ಮೇಲ್ಜಾತಿ’ಯ ರಾಮನ್ ಕೂಡ ಅದರ ಭಾಗ. ಕೆವಿನ್, ರಂಗನ್, ಮುನಿರತಮ್, ಬೀಡಿ ರಾಯಪ್ಪ, ಮುನಿಸ್ವಾಮಿ ಇವರೆಲ್ಲ ಹಿಂದಿನ ತಲೆಮಾರಿನ ಫೈಟರ್‍ಸ್. ವೇಂಬುಲಿ ವಿರುದ್ಧ ಹೊಸ ಫೈಟರ್‌ಅನ್ನು ಆಯ್ಕೆ ಮಾಡಬೇಕಾಗಿ ಬಂದಾಗ, ಕೋಚ್ ರಂಗನ್ ಅವರ ಮಗ ವೆಟ್ರಿಯ ಬಗ್ಗೆ ಪರಂಪರೆಯ ಹೆಚ್ಚಿನ ಜನರಿಗೆ ಒಲವು ಇದ್ದರೂ, ರಂಗನ್ ಅದನ್ನು ತಿರಸ್ಕರಿಸುತ್ತಾರೆ. ಬಾಕ್ಸಿಂಗ್ ರಿಂಗ್‌ನಲ್ಲಿ ಅಗ್ರೆಸಿವ್ ಆಗಿರುವ ಮತ್ತು ಎದುರಾಳಿಗೆ ಅಗೌರವ ತೋರುವ ಮಗನ ಶೈಲಿಯ ಬಗ್ಗೆ ರಂಗನ್ ಅವರಿಗೆ ಹೆಚ್ಚಿನ ಒಲವಿಲ್ಲ ಮತ್ತು ಅಷ್ಟು ಮಾತ್ರ ವೇಂಬುಲಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಅವರ ಸ್ಪಷ್ಟ ನಿಲುವು. ಹೀಗೆ ಪ್ರತಿ ಹಂತದಲ್ಲಿಯೂ ರಂಗನ್ ಅವರ ಪಾತ್ರದ ಚಿತ್ರಣ ಮತ್ತು ಅವರು ಪ್ರತಿನಿಧಿಸುವ ರಾಜಕೀಯ ಸರ್ವಾಧಿಕಾರಕ್ಕೆ ವಿರುದ್ಧವಾದದ್ದು. ಈ ರೀತಿಯ ಚಿತ್ರಣ-ನಿರೂಪಣೆ ಇಂದಿನ ದಿನದ ರಾಜಕೀಯ ವಿದ್ಯಮಾನಗಳಿಗೆ ನಿರ್ದೇಶಕನ ಸೃಜನಶೀಲ ಪ್ರತಿಕ್ರಿಯೆ ಅಲ್ಲವೇ?

ಸರ್‌ಪಟ್ಟ ಪರಂಪರೆಯವನಾದರೂ ಶೋಷಕ ಮೇಲ್ಜಾತಿ ಸಮುದಾಯಕ್ಕೆ ಸೇರಿದ ಮತ್ತು ಅದೇ ರಾಜಕೀಯವನ್ನು ಮುಂದುವರೆಸಿರುವ ತನ್ನ ಬಂಧು ತನಿಗನ ಮಾತನ್ನು ಕೇಳಿಕೊಂಡು ರಾಮನ್ ಕೋಚ್ ರಂಗನ್ ವಿರುದ್ಧ ತಿರುಗಿಬೀಳುತ್ತಾನೆ. ಅಹಂಕಾರದಲ್ಲಿ ವೆಟ್ರಿ ವಿರುದ್ಧ ಫೈಟ್‌ಗೆ ಮುಂದಾಗುತ್ತಾನೆ. ಪರಂಪರೆಯಲ್ಲಿ ಒಡಕನ್ನು ವಿರೋಧಿಸುವ ರಂಗನ್ ಇದಕ್ಕೆ ಆಸ್ಪದ ನೀಡುವುದಿಲ್ಲ. ಉಳಿದವರೆಲ್ಲಾ ವೆಟ್ರಿ ಮತ್ತು ರಾಮನ್ ನಡುವಿನ ಬಾಕ್ಸಿಂಗ್ ಪಂದ್ಯಕ್ಕೆ ಕೂಗು ಹಾಕುತ್ತಾರೆ. ಇದನ್ನು ಸ್ಪಷ್ಟವಾಗಿ ವಿರೋಧಿಸಿ ರಂಗನ್ ಅಲ್ಲಿಂದ ಹೊರನಡೆಯುತ್ತಾರೆ. ಮಗ ವೆಟ್ರಿ ರಂಗನ್ ಅವರನ್ನು ಹಿಂಬಾಲಿಸಬೇಕಾಗುತ್ತದೆ. ಈ ಸಮಯದಲ್ಲಿ ಕೋಚ್‌ಗೆ ಅವಮಾನ ಮಾಡಿದ್ದನ್ನು ಸಹಿಸಿಕೊಳ್ಳದೆ, ಇಲ್ಲಿಯವರೆಗೂ ಬಾಕ್ಸಿಂಗ್‌ನಿಂದ ದೂರ ಉಳಿದಿದ್ದ, ತರಬೇತಿ ಪಡೆಯದ ಕಬಿಲನ್ ರಾಮನ್‌ಗೆ ಸವಾಲು ಹಾಕಿ ರಾಮನ್‌ನನ್ನು ಸೋಲಿಸುತ್ತಾನೆ. ಈ ಫೈಟ್ ನಿಲ್ಲಿಸಲು ಹಿಂದಿರುಗಿದ್ದ ರಂಗನ್ ಅವರಿಗೆ ಅಚ್ಚರಿ ಕಾದಿರುತ್ತದೆ. ಏಕಲವ್ಯನ ರೀತಿಯಲ್ಲಿ ಕಲಿತಿರುವ ಹೊಸ ಬಾಕ್ಸರ್‌ನ ಉದಯವಾಗಿರುತ್ತದೆ. ಅಲ್ಲಿಯೂ ರಂಗನ್ ತೋರಿಸುವ ಸಮಯಪ್ರಜ್ಞೆ, ಸಮಚಿತ್ತತೆ ಎದ್ದುಕಾಣುತ್ತದೆ. ಗಾಯಗೊಂಡಿರುವ ರಾಮನ್‌ನನ್ನು ಉಪಚರಿಸುವಂತೆ ಮಗ ವೆಟ್ರಿಗೆ ಸೂಚಿಸುತ್ತಾರೆ.

ರಂಜಿತ್ ಅವರು ಕಬಿಲನ್ ಪಾತ್ರವನ್ನು ಸೃಷ್ಟಿಸಿರುವ ರೀತಿಯೂ ಅನನ್ಯವಾದದ್ದು. ತಂದೆ ಅತ್ಯುತ್ತಮ ಬಾಕ್ಸರ್ ಆಗಿದ್ದರೂ ನಡುವೆ ಹಾದಿ ತಪ್ಪಿ ಗೂಂಡಾಗಿರಿಗೆ ಪ್ರಾಣ ಕಳೆದುಕೊಂಡಿ ರುವವನು. ತಾಯಿ ಬಕ್ಕಿಯಮ್ಮ (ಅನುಪಮ ಕುಮಾರ್) ಮಗ ಬಾಕ್ಸರ್ ಆಗದಂತೆ ತಡೆಯಲು ಅಗ್ರೆಸಿವ್ ಆಗಿ ನಡೆದುಕೊಳ್ಳುತ್ತಿರುತ್ತಾಳೆ. ಮಗನಿಗೆ ಬಾಕ್ಸಿಂಗ್ ಹುಚ್ಚು ತಗಲದಂತೆ ತಡೆಯಲು ತಾನು ಮನೆಗೆಲಸ ಮಾಡುವ ಕೆವಿನ್ (ಜಾನ್ ವಿಜಯ್) ಮತ್ತು ಮಿಸ್ಸಿಯಮ್ಮರಿಗೆ ’ನಾನು ನಿಮ್ಮ ಕೆಲಸದಾಕೆ ಅಷ್ಟೇ, ಗುಲಾಮಲಳ್ಳ’ ಎಂದು ತರಾಟೆಗೆ ತೆಗೆದುಕೊಳ್ಳುವ ಸಂದರ್ಭ ಬಹಳ ಆಪ್ತವಾಗಿ ಮೂಡಿಬಂದಿದೆ. ಹೀಗಿದ್ದೂ ’ಡ್ಯಾಡಿ’ಯಾಗಿ ಕೆವಿನ್ ಕಬಿಲನ್‌ನ ಗೆಳೆಯನಾಗಿಯೂ, ಹಿತೈಷಿಯಾಗಿಯೂ, ತಾಯಿ ಮತ್ತು ಕಬಿಲನ್ ನಡುವಿನ ಜಗಳದ ನಡುವೆ ಸೇತುವೆಯಾಗಿಯೂ ಕಟ್ಟಿರುವ ಪಾತ್ರ ಸದಾ ನೆನಪಲ್ಲಿ ಉಳಿಯುವಂತದ್ದು. ಇಂಗ್ಲಿಷ್ ಮಿಶ್ರಿತ ತಮಿಳು ಮಾತನಾಡುವ ಕೆವಿನ್ ಸರ್‌ಪಟ್ಟ ಪರಂಪರೆಯ ಮತ್ತೊಬ್ಬ ಪ್ರಜ್ಞಾವಂತ ವ್ಯಕ್ತಿ. ’ಓಲ್ಡ್ ಬಗ್ಗರ್’ ಎಂದು ಕೋಚ್ ರಂಗನ್‌ನನ್ನು ಛೇಡಿಸಬಲ್ಲವರು.

ಕಬಿಲನ್ ಮತ್ತು ವೇಂಬುಲಿ ನಡುವೆ ಬಾಕ್ಸಿಂಗ್ ಪಂದ್ಯ ನಿಶ್ಚಯವಾಗುವುದಕ್ಕೂ, ಅದು ನಡೆದು ಕಬಿಲನ್ ಅತ್ಯುತ್ತಮ ಪ್ರದರ್ಶನ ನೀಡಿ ಗೆಲ್ಲುವ ಹಂತಕ್ಕೆ ತಲುಪುವ ಸಮಯಕ್ಕೂ, ಇಂದಿರಾ ಗಾಂಧಿಯವರ ಒಕ್ಕೂಟ ಸರ್ಕಾರ ಮತ್ತು ತಮಿಳುನಾಡಿನ ರಾಜ್ಯ ಸರ್ಕಾರಗಳ ನಡುವೆ ಹೋರಾಟ ತಾರಕಕ್ಕೇರಿರುತ್ತದೆ. ತುರ್ತುಪರಿಸ್ಥಿತಿಯ ಕಾರಣಕ್ಕೆ ತಮಿಳುನಾಡಿನ ಸರ್ಕಾರವನ್ನು ಒತ್ತಾಯಪೂರ್ವಕವಾಗಿ ವಿಸರ್ಜಿಸಲಾಗಿ, ಹಲವು ಡಿಎಂಕೆ ನಾಯಕರ ಮೇಲೆ ಎಂಐಎಸ್‌ಎ (MISA- ಈಗಿನ ಯುಎಪಿಎ ಕಾನೂನಿನ ಪೂರ್ವಜ) ಹೇರಿ ಬಂಧನ ಜಾರಿಯಾಗಿರುತ್ತದೆ. ಕಬಿಲನ್ ಗೆಲ್ಲುವ ಸಮಯಕ್ಕೆ ಸರ್‌ಪಟ್ಟ ಪರಂಪರೆಯವನೇ ಆದ ತನಿಗನ ಕುತಂತ್ರದಿಂದ ಕಬಿಲನ್ ಮೇಲೆ ರಿಂಗ್‌ನಲ್ಲಿಯೇ ಅಟ್ಯಾಕ್ ಆಗಿ ಆತನನ್ನು ನಗ್ನಗೊಳಿಸಲಾಗುತ್ತದೆ. ಇದೇ ಸಮಯಕ್ಕೆ ಪೊಲೀಸರು ರಂಗನ್ ಅವರನ್ನು ಬಂಧಿಸುತ್ತಾರೆ.

ಹೀಗೆ ಸರ್ವಾಧಿಕಾರದ ದಮನಕ್ಕೆ ವಿರುದ್ಧವಾಗಿ ನಡೆಯುತ್ತಿರುವ ಪ್ರಾದೇಶಿಕ ಅಸ್ಮಿತೆ, ಮಾನವ ಹಕ್ಕುಗಳ ಉಳಿವು ಮತ್ತು ಘನತೆಯ ಗೆಲುವಿನ ಹೋರಾಟದ ಜೊತೆಜೊತೆಗೇ ಪರಂಪರೆಗಳ ಮತ್ತು ವ್ಯಕ್ತಿಗಳ ಫೈಟ್‌ಗಳನ್ನು ಜಕ್ಸ್ಟಪೋಸ್ ಮಾಡಿ ಸಿನಿಮಾ ಒಂದೇ ಸ್ತರದ ಕಥೆಯಾಗಿ ಉಳಿಯದೇ, ಬಾಕ್ಸಿಂಗ್ ರೂಪಕದ ಮೂಲಕ ವ್ಯಕ್ತಿಯ, ಸಮುದಾಯದ, ರಾಜ್ಯದ ಮತ್ತು ಇಡೀ ದೇಶದ ಪ್ರತಿರೋಧದ ಕತೆಯಾಗುತ್ತದೆ. ರಂಗನ್ ಬಂಧನವಾದ ನಂತರ ಅವರ ಮಾರ್ಗದರ್ಶನ ಇಲ್ಲದೆ ಕಬಿಲನ್ ತನ್ನ ಗುರಿ ಕಳೆದುಕೊಂಡು ವೆಟ್ರಿಯ ಜೊತೆಗೆ ಸಾರಾಯಿ ದಂಧೆಗೆ ಇಳಿಯುತ್ತಾನೆ. ನಿಧಾನಕ್ಕೆ ಕಬಿಲನ್ ದೇಹ ಮತ್ತು ವ್ಯಕ್ತಿತ್ವಗಳೆರಡೂ ನಶಿಸುತ್ತಾ ಸಾಗುತ್ತದೆ. ತಾಯಿಯ ಆತಂಕ ನಿಜವಾಗುವತ್ತ ನಡೆಯುತ್ತದೆ. ಹೆಂಡತಿ, ತಾಯಿ ಮತ್ತು ಕೆವಿನ್‌ನಿಂದಲೂ ಕಬಿಲನ್ ದೂರವಾಗುತ್ತಾ ಹೋಗುತ್ತಾನೆ. ಇದೇ ಸಮಯದಲ್ಲಿ ರಾಜ್ಯದ ರಾಜಕಾರಣದಲ್ಲು ಶಿಥಿಲತೆ ಕಾಣುತ್ತದೆ. ಉಳ್ಳವರ ಮತ್ತು ಶೋಷಕರ ಮೇಲುಗೈಯಾಗುವ ರಾಜಕಾರಣ ಎಂಜಿಆರ್ ಪಕ್ಷದ ರೂಪದಲ್ಲಿ ಮುನ್ನಲೆಗೆ ಬರಲು ಪ್ರಾರಂಭವಾಗುತ್ತದೆ. ರಂಗನ್ ಮಗ ವೆಟ್ರಿ ಆ ರಾಜಕಾರಣಕ್ಕೆ ಹೊರಳುತ್ತಾನೆ.

ಒಂದುಕಡೆ ಸರ್ವಾಧಿಕಾರದ ಮುಷ್ಠಿ. ಮತ್ತೊಂದು ಕಡೆ ಅದಕ್ಕೆ ಪ್ರತಿರೋಧ ತೋರುತ್ತಿರುವವರ ಮೇಲೆ ಕರಾಳ ಕಾನೂನುಗಳಿಂದ ದಮನ. ದಾರಿ ತಪ್ಪಿದ ಮುಂದಿನ ಪೀಳಿಗೆ ಹೀಗೆ ಅವಸಾನದ ಕಡೆಗೆ ಜಾರುತ್ತಿರುವ 70ರ ದಶಕದ ಕಥೆ ಇಂದಿನ ದಿನವನ್ನೂ ಪ್ರತಿನಿಧಿಸುತ್ತದೆ. ಇದರಿಂದ ರಿಡೆಂಪ್ಷನ್ ಸಾಧ್ಯವೇ? ಈ ಪರಿಸ್ಥಿತಿಯಿಂದ ವಿಮೋಚನೆಗೆ ದಾರಿ ಇದೆಯೇ? ಸಾಧ್ಯ ಇದೆ ಅನ್ನುತ್ತಾರೆ ಪ ರಂಜಿತ್. ಸಂದರ್ಭವೊಂದು ಕಬಿಲನ್ ತನ್ನ ಅಡ್ಡದಾರಿ ಬಿಡುವಂತೆ ತಿಳಿವಳಿಕೆ ನೀಡುತ್ತದೆ. ಮತ್ತೆ ಸರಿದಾರಿಗೆ ಹೊರಳಲು ತನ್ನನ್ನು ತಾನು ಗೆಲ್ಲಬೇಕು. ಮತ್ತೆ ಬಾಕ್ಸಿಂಗ್ ಮಾಡಬೇಕು. ಇದಕ್ಕಾಗಿ ತರಬೇತಿ ಮಾಡಿಕೊಳ್ಳಬೇಕು. ರಂಗನ್ ಜೈಲಿನಿಂದ ಬಿಡುಗಡೆಯಾಗಿ ಹಿಂದಿರುಗಿದರೂ ’ಕತ್ತಿ ಹಿಡಿದ ದಿನದಿಂದ ಬಾಕ್ಸರ್ ಆಗಲು ಯೋಗ್ಯತೆ ಕಳೆದುಕೊಂಡ’ ಎಂದು ಕಬಿಲನ್‌ನಿಗೆ ಮತ್ತೆ ತರಬೇತಿ ನೀಡಲು ನಿರಾಕರಿಸುತ್ತಾರೆ.

ಈ ಸಮಯದಲ್ಲಿ ಪರಂಪರೆಯ ಘನತೆಯನ್ನು, ಕಬಿಲನ್‌ನ ಗೌರವವನ್ನು ಮರುಪಡೆಯಲು ಬೆಂಬಲವಾಗಿ ನಿಂತು ದೂರವಾಗಿದ್ದ ತಾಯಿ ಮರಳಿ ಮಗನ ಕೈಜೋಡಿಸುತ್ತಾರೆ. ಕಬಿಲನ್ ಹೆಂಡತಿ ಮಾರಿಯಮ್ಮ (ದುಶಾರಾ ವಿಜಯನ್) ಕೂಡ ಬೆಂಬಲ ನೀಡುತ್ತಾಳೆ. ಬಾಕ್ಸಿಂಗ್ ಕೆರಿಯರ್ ಮುಗಿದು ಮೀನುಗಾರಿಕೆ ಮಾಡುತ್ತಿರುವ ಹಿರಿಜೀವ ಬೀಡಿ ರಾಯಪ್ಪ ತರಬೇತಿ ನೀಡಲು ಮುಂದಾಗುತ್ತಾರೆ. ಅದು, ಸರ್ವಾಧಿಕಾರ ಕಸಿದುಕೊಂಡಿರುವ ರಾಜ್ಯದ-ಪ್ರಾದೇಶಿಕತೆಯ ಘನತೆಯನ್ನು, ಹಕ್ಕುಗಳನ್ನು ಮರುಪಡೆಯುವ ರೂಪಕವೂ ಹೌದು. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸುವ ಅಗತ್ಯದ ಸಂಕೇತವೂ ಕೂಡ. ಕೆಡುಕನ್ನು ಗೆಲ್ಲಲು, ಅಧಃಪತನವನ್ನು
ನಿವಾರಿಸಿಕೊಳ್ಳಲು ಹೋರಾಟಕ್ಕೆ ಸಜ್ಜಾಗುವ ಬಗೆಯೂ ಹೌದು. ಕೊನೆಗೆ ಇದಕ್ಕೆ ರಂಗನ್ ಕೂಡ ಕೈಜೋಡಿಸುತ್ತಾರೆ. ಎಪ್ಪತ್ತರ ತುರ್ತುಪರಿಸ್ಥಿತಿಯ ಸರ್ವಾಧಿಕಾರ ರಾಜಕೀಯದ ಹಿನ್ನೆಲೆಯಲ್ಲಿ ಮತ್ತು ಇಂದು ದೇಶದಾದ್ಯಂತ ಇರುವ ಅಂತಹುದೇ ರಾಜಕೀಯ ವಾತಾವರಣದಲ್ಲಿ ಈ ಗೆಲ್ಲುವ ಕಥೆಯನ್ನು ಪ ರಂಜಿತ್ ಅಗತ್ಯವಾಗಿಯೇ ಸೃಷ್ಟಿಸಿದ್ದಾರೆ. ಯಾರೇ ಒಬ್ಬ ಸೃಜನಶೀಲ ವ್ಯಕ್ತಿ ತನ್ನ ಸುತ್ತಲಿನ ಸನ್ನಿವೇಶಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದಕ್ಕೆ ಪ ರಂಜಿತ್ ಮಾದರಿಯಾಗಿ ನಿಲ್ಲುತ್ತಾರೆ.

ಸಿನಿಮಾದ ಸಮಗ್ರತೆಯ ಜತೆಗೆ ಬಿಡಿಬಿಡಿಯಾಗಿ ಕಾಡುವ ಚಿತ್ರಗಳು-ಪಾತ್ರಗಳು

ಪ ರಂಜಿತ್ ಅಸಾಧಾರಣ ಪಾತ್ರಗಳನ್ನು ಚಿತ್ರಿಸುವಲ್ಲಿ ನಿಸ್ಸೀಮರು. ಇಡಿಯಪ್ಪ ಪರಂಪರೆಯ ಬಾಕ್ಸರ್ ಡ್ಯಾನ್ಸಿಂಗ್ ರೋಸಿ (ಶಬೀರ್) ಹೋರಾಡುವ ಒಂದು ಬಾಕ್ಸಿಂಗ್‌ನಿಂದಲೇ ಮನಸ್ಸಿನಲ್ಲುಳಿಯುವ ಪಾತ್ರ. ನೃತ್ಯದ ರೀತಿಯ ಚಾಕಚಕ್ಯತೆಯ ಫುಟ್‌ವರ್ಕ್‌ನಿಂದ ಬಾಕ್ಸಿಂಗ್ ಮಾಡುವ ರೋಸಿ, ವೇಂಬುಲಿ ಸೋಲನ್ನು ತಪ್ಪಿಸಿಕೊಳ್ಳಲು ಅಡ್ಡದಾರಿ ಹಿಡಿದಾಗ ಅದರ ಬಗ್ಗೆ ಅಸಮ್ಮತಿ ತೋರಿಸಿ, ಆ ಪರಂಪರೆಯಲ್ಲಿಯೂ ಬದಲಾವಣೆಗೆ ಇರುವ ಕಿಂಡಿಯಂತೆ ಕಾಣಿಸಿಕೊಳ್ಳುತ್ತಾನೆ. ಆಂಗ್ಲೋಇಂಡಿಯನ್ ಶೈಲಿಯಲ್ಲಿ ವಿಶಿಷ್ಟವಾದ ಸಂಭಾಷಣೆಯ ಮೂಲಕ ಗಮನ ಸೆಳೆಯುವುದು ಕೆವಿನ್ ಅಕಾ ಡ್ಯಾಡಿ. ಕಬಿಲನ್ ತಾಯಿಯ ಪಾತ್ರ, ಹೆಂಡತಿ ಪಾತ್ರಗಳು ಕೂಡ ತಮ್ಮ ಕಡಿಮೆ ಅವಧಿಯ ಸ್ಕ್ರೀನ್ ಸಮಯದಲ್ಲಿಯೇ ಕಾಡುವ ಪಾತ್ರಗಳು. ಸಣ್ಣ ಅವಧಿಯ ಪಾತ್ರಗಳಾದರೂ ಮಹಿಳಾ ಪಾತ್ರಗಳನ್ನು ಶಕ್ತಿಯುತವಾಗಿ ಮತ್ತು ನಿರ್ಣಾಯಕವಾಗಿ ಚಿತ್ರಿಸುವ ರಂಜಿತ್ ಅವರ ಶೈಲಿ ಕಾಡುತ್ತದೆ. ಕಬಿಲನ್ ವೇಂಬುಲಿಯ ವಿರುದ್ಧದ ಫೈಟ್ ಬಗ್ಗೆ ಮಾತನಾಡುತ್ತಾ ಸೋಲುವ ಆತಂಕ ವ್ಯಕ್ತಪಡಿಸಿ, ಪರಂಪರೆಯ ಮರ್ಯಾದೆ ಹೋಗಬಹುದು ಎಂದಾಗ ಕಬಿಲನ್ ಹೆಂಡತಿ ’ಪರಂಪರೆ, ಮರ್ಯಾದೆ ಮಾತೆಲ್ಲಾ ಏಕೆ, ಒಂದಕ್ಕೊಂದು ಸಂಬಂಧ ಕಲ್ಪಿಸುವುದು ಬಿಟ್ಟು ಫೈಟ್ ಮಾಡು’ ಎಂಬಂತಹ ಬುದ್ಧಿಮಾತು ಹೇಳುತ್ತಾಳೆ. ಹೋರಾಟ ಮತ್ತು ಗೆಲ್ಲುವುದು ಕೇವಲ ಮರ್ಯಾದೆಯ ಪ್ರಶ್ನೆಯಾಗಬಾರದು ಎಂಬ ತಿಳಿವಳಿಕೆಯಂತೆಯೂ ಅದು ಭಾಸವಾಗುತ್ತದೆ.

ಕಬಿಲನ್‌ಗೆ ಬೀಡಿ ರಾಯಪ್ಪ ನೀಡುವ ತರಬೇತಿ ದೃಶ್ಯಗಳು ಮೈನವಿರೇಳಿಸುತ್ತದೆ. ಯಾರಿಗಾದರೂ ಹೋರಾಟದ ಕಿಚ್ಚು ತುಂಬುವ ಶಕ್ತಿ ಇದೆ ಆ ದೃಶ್ಯಗಳಿಗೆ. ಈ ತರಬೇತಿಯ ದೃಶ್ಯಗಳಲ್ಲಿ ಮೂಡುವ ಹಾಡಿನ ಸಾಲುಗಳು “ಓಡು.. ನಿನ್ನ ಸಹಾಯಕ್ಕೆ ಯಾರೂ ಬರದೇ ಇದ್ದರೂ.. ಓಡು.. ನಿನ್ನ ಸ್ವಂತದವರೇ ನಿನ್ನ ಕೈಬಿಟ್ಟರೂ.. ಓಡು… ನಿನ್ನನ್ನು ಕಡೆಗಣಿಸಿದವರ ದಾಟಿ.. ಓಡು.. ದ್ವೇಷಿಸುವರು ತಪ್ಪೆಂದು ಸಾಬೀತುಪಡಿಸಲು.. ಓಡು.. ನಿನಗೆ ಬದಲಾವಣೆ ತರಬೇಕೆಂಬ ಮನಸ್ಸಿದ್ದರೆ.. ಓಡು..” ಇಡೀ ಸಿನಿಮಾದ ಆಶಯವನ್ನು ಹಿಡಿದಿಟ್ಟಿವೆ.

ಕಬಿಲನ್ ಮದುವೆಯಾಗುವಾಗ ಅಂಬೇಡ್ಕರ್, ಬುದ್ಧ, ಪೆರಿಯಾರ್ ಆದಿಯಾಗಿ ತೋರಿಸುವ ಸಂಕೇತಗಳು, ಮದುವೆ/ನಿಶ್ಚಿತಾರ್ಥವನ್ನು ಪೌರೋಹಿತ್ಯವಿಲ್ಲದೆ ಮಾಡುವ ದೃಶ್ಯಾವಳಿ, ತಳ ಸಮುದಾಯದ ಆಹಾರ ಸಂಸ್ಕೃತಿಯನ್ನು ಅತಿ ಸ್ವಾಭಾವಿಕವಾಗಿ ಚಿತ್ರಿಸುವ ರೀತಿ (ಕಬಿಲನ್ ತನ್ನ ಹೆಂಡತಿಗೆ ಬೀಫ್ ಕರ್ರಿ ತಂದುಕೊಡುವುದು- ಹೋಟೆಲ್ ಒಂದರಲ್ಲಿ ಮೊಲದ ಕರ್ರಿಗೆ ಕೇಳುವುದು) ಹೀಗೆ ಸಮುದಾಯದ ಘನತೆ ಮತ್ತು ಎಚ್ಚೆತ್ತ ಪ್ರಜ್ಞೆಯನ್ನು ಅನನ್ಯತೆಯಿಂದ ಕಟ್ಟಿಕೊಡುತ್ತಾರೆ ನಿರ್ದೇಶಕರು.

ಸಿನಿಮಾದಲ್ಲಿ ಬಳಸಿಕೊಂಡಿರುವ ಮುಹಮದ್ ಅಲಿ ಅವರ ಮಾತುಗಳು ’ಚಿಟ್ಟೆಯಂತೆ ತೇಲು, ಜೇನುಹುಳದಂತೆ ಕುಟುಕು’ ಎಂಬ ಮಾತುಗಳು ಸಿನಿಮಾದ ತಾಂತ್ರಿಕ ಆಯಾಮಕ್ಕೂ ಅನ್ವಯವಾಗುತ್ತದೆ. ಒಂದು ಕ್ರೀಡಾಸ್ಫೂರ್ತಿಯ ಸಿನಿಮಾಗೆ ಹೇಳಿ ಮಾಡಿಸಿದಂತಹ ಪೇಸ್ ’ಸರ್‌ಪಟ್ಟ ಪರಂಪರೈ’ ಸಿನಿಮಾಗೆ ಸಿದ್ಧಿಸಿದೆ. ಪ್ರೇಕ್ಷಕನನ್ನು ಜೇನುಹುಳದಂತೆ ಕುಟುಕಿ ಹೋರಾಟದ ಸ್ಪೂರ್ತಿಗೆ ಬಡಿದೆಬ್ಬಿಸಲು ಸಫಲವಾಗಿದೆ.

  • ಗುರುಪ್ರಸಾದ್ ಡಿ ಎನ್

ಇದನ್ನೂ ಓದಿ: ಸಂವಿಧಾನದ ಆಶಯಗಳೊಂದಿಗೆ ತೆರೆಗೆ ಬರಲು ಸಿದ್ಧವಾಗಿದೆ ’ಭಾರತದ ಪ್ರಜೆಗಳಾದ ನಾವು’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...