ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ಇಂದಿನ ದುರಂತ, ದೇಶದ ಪ್ರತಿಯೊಂದು ಸಮಸ್ಯೆಗೂ ನೆಹರೂರವರನ್ನು, ಗಾಂಧೀಜಿಯವರನ್ನು ಮತ್ತು ಗಾಂಧಿ ಕುಟುಂಬವನ್ನು ಬೆಸೆದು ಅವರನ್ನು ಹೊಣೆಯಾಗಿಸುವುದು ಫ್ಯಾನ್ಸಿಯಾಗಿಬಿಟ್ಟಿದೆ. ಸ್ವಾತಂತ್ರ್ಯದ ನಂತರ ಸುಮಾರು 60 ವರ್ಷಗಳ ಕಾಲ ಬೇರೆಬೇರೆ ಬಗೆಯ ನಾಯಕತ್ವ ದೇಶವನ್ನು ಮುನ್ನಡೆಸುವ ಅವಕಾಶ ಪಡೆದಿತ್ತು. ಈ ನಾಯಕರು ಚುಕ್ಕಾಣಿ ಹಿಡಿದ ಸಮಯದಲ್ಲಿ ನಡೆದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ದೇಶ ಸಾಕ್ಷಿಯಾಗಿದ್ದರೂ, ಅದನ್ನೆಲ್ಲಾ ಪ್ರಯತ್ನಪೂರ್ವಕವಾಗಿ ಮರೆಮಾಚಿ ದೇಶ ವಿಭಜನೆಯ ವಿಚಾರಕ್ಕೆ ಹಾಗೂ ಉಳಿದೆಲ್ಲಾ ಸಮಸ್ಯೆಗಳಿಗೂ ನೆಹರೂ-ಗಾಂಧಿಯನ್ನು ಹೊಣೆಯಾಗಿಸಿ ಜನರಿಗೆ ಸುಳ್ಳು ಹಂಚಿ, ಆ ಮೂಲಕ ದ್ವೇಷವನ್ನು ಬಿತ್ತುವ ಕೆಲಸವನ್ನು ಬಿಜೆಪಿ ಪಕ್ಷ ಮತ್ತು ಅದು ಮುಂದಾಳತ್ವ ವಹಿಸಿರುವ ಸರ್ಕಾರಗಳು ಬಹಳ ತೀಕ್ಷ್ಣವಾಗಿ ಮಾಡುತ್ತಿವೆ. ನಿಜವಾಗಿಯೂ ದೇಶ ವಿಭಜನೆಗೊಳ್ಳುವುದು ಗಾಂಧಿ ಹಾಗೂ ನೆಹರೂರವರ ಕನಸಾಗಿತ್ತಾ ಅನ್ನುವ ವಿಚಾರದ ಬಗ್ಗೆ ಚರ್ಚಿಸಿ ಸತ್ಯಾಸತ್ಯತೆಯನ್ನು ತಿಳಿಯುವ ಅನಿವಾರ್ಯ ಇಂದು ಎಂದಿಗಿಂತ ಜಾಸ್ತಿಯಾಗಿದೆ.

1906ರಿಂದ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ತೀಕ್ಷ್ಣ್ಣ ನೋಟದ, ಸಪೂರ ದೇಹದ ಯುರೋಪಿನವರೇನೋ ಎನ್ನುವಂತಿದ್ದ ಮುಹಮ್ಮದ್ ಅಲಿ ಜಿನ್ನಾ ಎನ್ನುವ ನಾಯಕರೊಬ್ಬರು ಮುಂಚೂಣಿಯಲ್ಲಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ 1920ರ ಸುಮಾರಿಗೆ ಇನ್ನೊಬ್ಬರು ಬಡಕಲು ದೇಹದ ಶುದ್ಧ ದೇಸೀ ಸೊಗಡಿನ ವ್ಯಕ್ತಿ ಮೋಹನದಾಸ ಕರಮಚಂದ ಗಾಂಧಿ ಪ್ರವೇಶವಾಗುವ ತನಕ ಜಿನ್ನಾ ರಾಷ್ಟ್ರೀಯವಾದಿಯಾಗಿಯೇ ಇದ್ದರು. ಈಗ ನೋಡುತ್ತಿರುವ ಅಧಿಕಾರದಾಸೆಯ ರಾಜಕೀಯ ಅಂದಿಗೂ ಇತ್ತು. ಸ್ವಾತಂತ್ರ್ಯ ಪಡೆದ ನಂತರ ದೇಶದ ಪ್ರಧಾನಿಯಾಗುವ ಕನಸು ಹೊತ್ತಿದ್ದ ಜಿನ್ನಾ, ಯಾವಾಗ ಗಾಂಧೀಜಿ ಚಳವಳಿಗಳ ಮುಖಾಂತರ ಜನರನ್ನು ಒಗ್ಗೂಡಿಸಲು ಆರಂಭಿಸಿದರೋ ಅಲ್ಲಿಂದ ನಿಧಾನಕ್ಕೆ ಕಾಂಗ್ರೆಸ್‌ನಿಂದ ದೂರ ಸರಿದು ಮುಸ್ಲಿಂಲೀಗ್‌ಅನ್ನು ತಮ್ಮ ಅಧಿಕೃತ ಅಖಾಡವಾಗಿಸಿಕೊಂಡರು.
ಅಲ್ಲಿಂದ ಮುಂದೆ ಜಿನ್ನಾ ನಡೆಸಿದ್ದು ಕೋಮು ರಾಜಕೀಯ. ರಾಷ್ಟ್ರೀಯವಾದವನ್ನೇ ಉಸಿರಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಅಧಿಕಾರದಾಸೆಗೆ ಕೋಮುರಾಜಕೀಯವನ್ನು ಅದೆಷ್ಟು ತೀವ್ರವಾಗಿ ಅವಗಾಹಿಸಿಕೊಂಡರೆಂದರೆ ಅದನ್ನು ತಡೆಯಲು ಒಂದು ಕಡೆಯಿಂದ ಕಾಂಗ್ರೆಸ್ ಪ್ರಯತ್ನಿಸಿ ಕಂಗೆಟ್ಟರೆ, ಮೊದಮೊದಲು ಪರಿಸ್ಥಿತಿಯ ಲಾಭ ಪಡೆದ ಬ್ರಿಟಿಷರೂ ಕೊನೆಗೆ ದಾರಿ ಕಾಣದಂತಾಗಿದ್ದರು.
1940ಕ್ಕೂ ಮುಂಚೆ ಬರೀ ಕೋಮುವಾದದಂತೆ ಕಾಣುತ್ತಿದ್ದ ಮುಸ್ಲಿಂಲೀಗ್‌ನ ರಾಜಕೀಯದಾಟ 1940ರ ಲಾಹೋರ್ ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯದ ನಂತರ ಸ್ಪಷ್ಟವಾಗಿ ವಿಭಜನೆಯಾಗುವತ್ತ ಹೊರಳಿಕೊಂಡಿತು. ’ಲಾಹೋರ್ ರೆಸಲ್ಯೂಷನ್’ ಅನ್ನುವ ಹೆಸರಿನ ಕಡತದಲ್ಲಿ ಪ್ರಕಟಗೊಂಡ ವರದಿ ಪ್ರತಿಪಾದಿಸಿದ್ದು ಮಾತ್ರ ವಿಭಜನೆಯ ಸ್ಪಷ್ಟ ನಿರ್ಧಾರವನ್ನು!
ಅಂದು ಲಾಹೋರಿನ ಬಾದಶಾಹಿ ಮಸೀದಿಯ ಮಿಂಟೊ ಪಾರ್ಕ್‌ನ ಆವರಣದಲ್ಲಿ ನಿಂತು ಮುಸ್ಲಿಂ ಲೀಗ್‌ನ ಅಧ್ಯಕ್ಷೀಯ ಭಾಷಣವನ್ನು ಮಾಡುವಾಗ ಜಿನ್ನಾ ಉಲ್ಲೇಖಿಸಿದ್ದು 1924ರ ಸುಮಾರಿನಲ್ಲಿ ಹಿಂದೂ ಮಹಾಸಭಾದ ನಾಯಕರಾಗಿದ್ದ ಲಾಲಾ ಲಜಪತ್ ರಾಯ್ ಅವರು ಪ್ರತಿಪಾದಿಸಿದ್ದ ಹಿಂದೂ-ಮುಸ್ಲಿಂ ಪ್ರತ್ಯೇಕ ದೇಶವೆಂಬ ಪರಿಕಲ್ಪನೆಯನ್ನು. ಈ ವಿಚಾರವನ್ನು ಒತ್ತಿಹೇಳಿದ ಜಿನ್ನಾ, ಮಾತು ಮುಗಿಸಿದ್ದು ನಮಗೆ ಪ್ರತ್ಯೇಕ ದೇಶ ಬೇಕೆನ್ನುವ ಬೇಡಿಕೆಯೊಂದಿಗೆ. ಈಗಿನ ಹಾಗೆಯೇ, ಅವತ್ತಿನ ಪತ್ರಿಕೆಗಳೂ ’ಲಾಹೋರ್ ರೆಸಲ್ಯೂಷನ್’ ಘೋಷಿಸಿದನ್ನು ಬದಲಾಯಿಸಿ ’ಪಾಕಿಸ್ತಾನ್ ರೆಸಲ್ಯೂಷನ್’ ಎನ್ನುವುದನ್ನು ವರದಿ ಮಾಡಿದವು. ಏತನ್ಮಧ್ಯೆ 1937ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ ಅಧ್ಯಕ್ಷೀಯ ಭಾಷಣದಲ್ಲಿ ಸಾವರ್ಕರ್ ಪ್ರಸ್ತಾಪಿಸಿದ ’ಹಿಂದೂ ಹಾಗೂ ಮುಸ್ಲಿಂಮರು ದೇಶದೊಳಗೆ ಎರಡು ಪ್ರತ್ಯೇಕ ದೇಶವಿದ್ದಂತೆ ಮತ್ತು ಎಂದೂ ಒಂದಾಗಿರಲು ಸಾಧ್ಯವಿಲ್ಲ’ ಎನ್ನುವುದು ಕೂಡ ಜಿನ್ನಾರ ಪ್ರತ್ಯೇಕ ದೇಶದ ಪರಿಕಲ್ಪನೆಗೆ ಅಡಿಪಾಯದಂತೆ ಕೆಲಸ ಮಾಡಿತ್ತು.

ಸಂಪೂರ್ಣ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಚಳವಳಿಗಳ ಮೂಲಕ ಕಾಂಗ್ರೆಸ್ ಬೀದಿಗಿಳಿದಿದ್ದರೆ, ಅತ್ತ ಪ್ರತ್ಯೇಕ ದೇಶವೆಂಬ ಪರಿಕಲ್ಪನೆಯನ್ನು ಪ್ರತಿ ಮನೆಗೂ ತಲುಪಿಸಿ ಸಿಕ್ಕಸಿಕ್ಕಲ್ಲಿ ಉಗ್ರ ಭಾಷಣ ಕುಟ್ಟುತ್ತಿದ್ದರು ಜಿನ್ನಾ; ಈ ನಡುವೆ ಹೇಗಾದರೂ ಮಾಡಿ ಈ ಆಂತರಿಕ ಕಿತ್ತಾಟವನ್ನು ನಿಲ್ಲಿಸುವಂತೆ ಜಿನ್ನಾ ಮನವೊಲಿಸಲು ನಡೆಸಿದ ಸಂಧಾನಗಳು ಒಂದೆರಡಲ್ಲ. ಬ್ರಿಟಿಷರೊಂದಿಗೆ ಹೊಂದಾಣಿಕೆಯ ಸೂತ್ರವನ್ನೇ ಪಾಲಿಸುತ್ತಾ, ಒಂದು ದಿನವೂ ಬೀದಿಗಿಳಿಯದೆ, ಜೈಲು ಸೇರದೆ, ರಾಜಕೀಯ ತಂತ್ರಗಳನ್ನು ಹೆಣೆಯುತ್ತಾ ಪ್ರತ್ಯೇಕ ದೇಶ ಕೇಳುತ್ತಿದ್ದ ಜಿನ್ನಾರೊಂದಿಗೆ, ಕ್ವಿಟ್ ಇಂಡಿಯಾ ಚಳವಳಿಯ ಕಾರಣಕ್ಕೆ ಜೈಲು ಸೇರಿದ್ದ ಗಾಂಧಿಯವರು ಮದ್ರಾಸಿನ ಸಿ.ರಾಜಗೋಪಾಲಚಾರಿ ಅವರನ್ನು ಮಾತುಕತೆಗೆ ಕಳುಹಿಸಿ ಪ್ರತ್ಯೇಕ ದೇಶದ ಕೂಗನ್ನು ಬದಿಗಿರಿಸುವಂತೆ ರಾಜೀ ಸೂತ್ರವನ್ನು ಮುಂದಿಟ್ಟು ಪ್ರಯತ್ನಿಸುತ್ತಾರೆ. ರಾಜಾಜಿ ಸೂತ್ರವೆಂದೇ ಇತಿಹಾಸದಲ್ಲಿ ದಾಖಲಾದ ಈ ಸೂತ್ರವೂ ಪ್ರತ್ಯೇಕ ದೇಶದ ಪರಿಕಲ್ಪನೆಯನ್ನು ಬದಿಗಿರಿಸಿ ಒಗ್ಗಟ್ಟಿನ ರಾಜಕೀಯ ಹೋರಾಟದ ಸ್ವರೂಪದ್ದಾಗಿತ್ತು. ಜೈಲಿನಿಂದ ಬಿಡುಗಡೆಯಾಗಿ ಬಂದ ಗಾಂಧೀಜಿ 1944ರಲ್ಲಿ ಸುಮಾರು 18 ದಿನಗಳ ಕಾಲ ಮಾತುಕತೆ ನಡೆಸುತ್ತಾರೆ. 18 ದಿನಗಳಲ್ಲಿ ಗಾಂಧೀಜಿ ಸ್ವಾತಂತ್ರ್ಯ ಮತ್ತು ಒಗ್ಗಟ್ಟನ್ನು ಮಾತಾಡಿದರೆ ಜಿನ್ನಾ ಪ್ರತ್ಯೇಕತೆಯನ್ನೇ ಪಟ್ಟುಹಿಡಿದರು. ನಿರಾಶೆಯೊಂದಿಗೆ ಹೊರಬಂದ ಗಾಂಧೀಜಿಯವರನ್ನು ಮಾಧ್ಯಮದವರು ಮಾತುಕತೆಯ ಫಲದ ಬಗ್ಗೆ ಪ್ರಶ್ನಿಸಿದಾಗ ಗಾಂಧೀಜಿ ಮಾರ್ಮಿಕವಾಗಿ ನುಡಿದಿದ್ದು: “ನನಗೆ ತರಲಾಗಿದ್ದು ಈ ಹೂವುಗಳನ್ನು ಮಾತ್ರ!” ಎಂದು.
ಇವೆಲ್ಲದರ ನಂತರ ಎರಡನೇ ಮಹಾಯುದ್ಧದ ಮುಕ್ತಾಯದ ಹಂತದಲ್ಲಿ ದೇಶದ ಚುಕ್ಕಾಣಿಯನ್ನು ಭಾರತೀಯರ ಕೈಗೆ ಹಸ್ತಾಂತರಿಸಿ ಕೈತೊಳೆದುಕೊಳ್ಳುವ ತರಾತುರಿಯಲ್ಲಿದ್ದ ಬ್ರಿಟಿಷರೂ ಕೂಡ ಸಂಧಾನಕ್ಕಾಗಿ ಸಾಲುಸಾಲು ಸಭೆಗಳನ್ನು ನಡೆಸುತ್ತಾರೆ. 1945ರ ಜೂನ್ ತಿಂಗಳಿನಲ್ಲಿ ನಡೆದ ಮೊದಲ ಶಿಮ್ಲಾ ಸಮ್ಮೇಳನದಿಂದ ಹಿಡಿದು ತದನಂತರ ನಡೆದ ಎಲ್ಲ ಮಾತುಕತೆಗಳೂ ಬ್ರಿಟಿಷರು ಮತ್ತು ಭಾರತೀಯರ ನಡುವಿನ ಅಧಿಕಾರ ಹಸ್ತಾಂತರದ ಮಾತುಕತೆ ಎನ್ನುವುದಕ್ಕಿಂತ ಹಿಂದೂ-ಮುಸ್ಲಿಂ ಸಮಾನತೆ ಮತ್ತು ಪ್ರತ್ಯೇಕತೆಯನ್ನು ಹತ್ತಿಕ್ಕಲು ನಡೆಸಿದ ರಾಜಿ ಸಂಧಾನವೆಂದೇ ಕರೆಯಬಹುದು. 1945ರ ಕೊನೆಯಲ್ಲಿ ಬ್ರಿಟಿಷ್ ಸಂವಿಧಾನದಡಿಯಲ್ಲಿ ನಡೆದ ಚುನಾವಣೆಯಲ್ಲೂ ಜಿನ್ನಾ ಪ್ರತ್ಯೇಕತೆಯ ಭಾಷಣಗಳನ್ನು ಮಾಡಿ ಸ್ಪರ್ಧಿಸಿದ್ದ 30 ಮೀಸಲು ಕ್ಷೇತ್ರಗಳಲ್ಲಿ ಅಷ್ಟನ್ನೂ ಗೆದ್ದುಕೊಳ್ಳುತ್ತಾರೆ; ತಮ್ಮ ಬೇಡಿಕೆಗೆ ಒಪ್ಪದಿದ್ದರೆ ಬಲಪ್ರಯೋಗಿಸಿಯಾದರೂ ಪಾಕಿಸ್ತಾನ ಪಡೆದೇ ತೀರುತ್ತೇವೆಂದು ಗಟ್ಟಿಯಾಗಿ ಹೇಳುತ್ತಾರೆ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಬ್ರಿಟಿಷ್ ಪ್ರಭುತ್ವದಡಿಯಲ್ಲಿ ಸರ್ಕಾರ ನಡೆಸಿದರೆ, ಸ್ಪಷ್ಟ ಪ್ರತಿಪಕ್ಷವಾಗಿದ್ದಿದ್ದು ಮುಸ್ಲಿಂ ಲೀಗ್. ಆಗಲೂ ಮತೀಯ ಸಮಸ್ಯೆ ಮತ್ತು ಪ್ರತ್ಯೇಕತೆಯ ಕೂಗನ್ನು ಹೋಗಲಾಡಿಸಿ, ಅಧಿಕಾರ ಹಸ್ತಾಂತರಿಸಲು ಯೋಚನೆ ನಡೆಸಿದ ಕ್ಯಾಬಿನೆಟ್ ಮಿಷನ್ ಕಮಿಟಿ ಸಂಧಾನಕ್ಕೆ ಮುಂದಾಗುತ್ತದೆ. ಅನೇಕ ರಾಜಿ ಸೂತ್ರಗಳು, ರೂಪುರೇಷೆಗಳನ್ನು ರಚಿಸಿ ಒಕ್ಕೂಟ ವ್ಯವಸ್ಥೆಯ ಮಾದರಿಯಲ್ಲಿ ದೇಶವನ್ನು ಕಟ್ಟಿ ಒಕ್ಕೂಟಗಳಿಗೆ ಪ್ರತ್ಯೇಕ ಸ್ವಾಯತ್ತತೆಯನ್ನು ನೀಡಿ ಕೇವಲ ಸಂವಹನ-ಮಾಧ್ಯಮ, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಷ್ಟೇ ಭಾರತೀಯ ಒಕ್ಕೂಟ ಸರ್ಕಾರದ ಕಾರ್ಯಸೂಚಿಯಾಗಿ ಉಳಿಸಿಕೊಳ್ಳುವ ಪ್ರಸ್ತಾವವನ್ನು ಇಡಲಾಗುತ್ತದೆ. ಹೀಗೆ, ಸಂವಿಧಾನ ರಚನೆಯ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸುವುದೇ ಮುಂತಾದ ಸೂತ್ರಗಳಿಂದ ಒಗ್ಗೂಡಿಸಲು ಪ್ರಯತ್ನ ನಡೆದರೂ ಮುಸ್ಲಿಂಲೀಗ್ ಸಂವಿಧಾನ ರಚನಾ ಸಮಿತಿಯನ್ನು ಸೇರದೆ ತನ್ನ ಹಠ ಮುಂದುವರೆಸಿತು.
1946ರ ಹೊತ್ತಿಗೆ ಮುಸ್ಲಿಂಲೀಗ್ ಸಂವಿಧಾನ ರಚನಾ ಸಮಿತಿಯಿಂದ ಹೊರಗುಳಿದು ಎಂದಿನ ವಿಭಜನೆಯ ರಾಜಕೀಯವನ್ನು ಮುಂದುವರಿಸಿದರು. ಇತ್ತ ಕಾಂಗ್ರೆಸ್ ಸಂವಿಧಾನ ರಚನಾ ಸಮಿತಿಯನ್ನು ಸೇರಿ ಬ್ರಿಟಿಷರೊಡನೆ ಸ್ವಾತಂತ್ರ್ಯದ ಚೌಕಾಸಿ ನಡೆಸುತ್ತಿತ್ತು. ಇಂತದ್ದೊಂದು ಸಂದರ್ಭದಲ್ಲೇ ಆಗಸ್ಟ್ ತಿಂಗಳಿನ 16ನೇ ತಾರೀಖಿನಂದು ಬಂಗಾಳದಲ್ಲಿ ಮುಸ್ಲಿಂ ಲೀಗ್ ಮುಂದಾಳತ್ವದಲ್ಲಿ ನಡೆದ ನೇರ ಕಾರ್ಯಾಚರಣೆಗೆ ಸುಮಾರು 6000 ಜನರು ಬಲಿಯಾದರು. ಈ ಹತ್ಯಾಕಾಂಡದ ನಂತರ ಬ್ರಿಟಿಷ್ ಪ್ರಭುತ್ವ ಅಧಿಕಾರ ಹಸ್ತಾಂತರಕ್ಕೆ ಗಡುವು ನೀಡಿ, ಮೌಂಟ್‌ಬ್ಯಾಟನ್ ಅವರನ್ನು ಭಾರತಕ್ಕೆ ವೈಸರಾಯ್ ಆಗಿ ಕಳುಹಿಸಿ, ಭಾರತದಿಂದ ನಿರ್ಗಮಿಸುವ ಯೋಚನೆ ರೂಪಿಸತೊಡಗಿತು. ಬ್ರಿಟಿಷ್ ಪ್ರಭುತ್ವದ ಪ್ರತಿನಿಧಿ ಮೌಂಟ್‌ಬ್ಯಾಟನ್‌ರೊಂದಿಗಿನ ಮಾತುಕತೆಯಲ್ಲೂ, ಬಂಗಾಳ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವನ್ನು ವಿಂಗಡಿಸಿ ಒಕ್ಕೂಟ ಮಾದರಿಯ ಅಧಿಕಾರ ಹಸ್ತಾಂತರಕ್ಕೆ ಕಾಂಗ್ರೆಸ್ ಒಪ್ಪಿದರೂ ದೇಶ ವಿಭಜನೆಯನ್ನು ಒಪ್ಪಲಿಲ್ಲ. ಆದರೆ ಪಟ್ಟು ಬಿಡದ ಜಿನ್ನಾ 1946ರಿಂದ ದೇಶ ವಿಭಜನೆಯ ತನಕ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಗಲಭೆಗಳನ್ನು ಜಾರಿಯಲ್ಲಿಟ್ಟು ಕೇಳಿದ್ದು ಪ್ರತ್ಯೇಕ ರಾಷ್ಟ್ರವನ್ನಷ್ಟೇ.
ಹೀಗೆ ಸುಡುವ ಬೆಂಕಿಯನ್ನು ಸೆರಗಿನಲ್ಲಿ ಬಚ್ಚಿಟ್ಟು ದೇಶ ಕಟ್ಟಲಾಗುವುದಿಲ್ಲವೆನ್ನುವ ನಿರ್ಧಾರಕ್ಕೆ ಬಂದ ಕಾಂಗ್ರೆಸ್ ದೇಶ ವಿಭಜನೆಯ ಸೂತ್ರದೊಂದಿಗೆ ಬ್ರಿಟಿಷರು ತಯಾರಿಸಿದ ಸ್ವಾತಂತ್ರ್ಯದ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಿತು. ಸ್ಪಷ್ಟ ಗಡಿರೇಖೆಯ ಪರಿಕಲ್ಪನೆಯನ್ನು ಇಟ್ಟುಕೊಳ್ಳದ ಜಿನ್ನಾ ಹಾಗೂ ಮುಸ್ಲಿಂಲೀಗ್ ಕೇವಲ ಅಧಿಕಾರದಾಸೆಗೆ ಚಿತ್ರವಿಚಿತ್ರವಾಗಿ ಎಳೆದ ಗಡಿರೇಖೆಯೊಂದಿಗೆ ಪಾಕಿಸ್ತಾನವನ್ನು ಒಪ್ಪಿಕೊಂಡು ಪ್ರತ್ಯೇಕವಾಗಿ ಹೋದರು. ಬೀದಿಗಿಳಿದು ಹೋರಾಟ ನಡೆಸದೆ, ಎಂದಿಗೂ ಜೈಲು ಸೇರದೆ, ಯಾವ ಹೋರಾಟಗಳಲ್ಲಿಯೂ ತೊಡಗಿಸಿಕೊಳ್ಳದೆ ಸ್ವಾತಂತ್ರ್ಯಕ್ಕೂ ಮುನ್ನ ಒಂದು ಕಡೆ ಬ್ರಿಟಿಷರೊಂದಿಗೆ, ಇನ್ನೊಂದು ಕಡೆ ಮುಸ್ಲಿಂಲೀಗ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಗಿನ ಬಂಗಾಳ, ನಾರ್ಥ್ ವೆಸ್ಟ್ ಫ್ರಂಟಿಯರ್ ಪ್ರಾವಿನ್ಸ್, ಸಿಂಧ್ ಪ್ರಾಂತ್ಯಗಳಲ್ಲಿ ಅಧಿಕಾರ ಹಂಚಿಕೊಂಡಿದ್ದದ್ದು ಹಿಂದೂ ಮಹಾಸಭಾ. ರಾಷ್ಟ್ರೀಯವಾದದ ಪಾಠ ಮಾಡುವ ಈಗಿನ ಬಿಜೆಪಿಯ ಸೈದ್ಧಾಂತಿಕ ಬಂಧು ಹಿಂದೂ ಮಹಾಸಭಾ. ಹೀಗಳೆಯುವಿಕೆಯನ್ನು ದಿಟ್ಟವಾಗಿ ಎದುರಿಸುತ್ತಿದ್ದ ಕಾಂಗ್ರೆಸ್ ಹೋರಾಟ ಕಟ್ಟಿ ಚಳವಳಿಗಳಿಗೆ ಧುಮುಕಿ ಸ್ವಾತಂತ್ರ್ಯದ ಕನಸು ಕಂಡಿತ್ತು! ಆ ಸ್ವಾತಂತ್ರ್ಯಕ್ಕಾಗಿಯೇ ವಿಭಜನೆಯ ಸೂತ್ರಕ್ಕೆ ಗತ್ಯಂತರವಿಲ್ಲದೆ ಸಹಿಹಾಕಿದ್ದು. ಇತಿಹಾಸದ ಪುಟಗಳನ್ನು ತಿರುವಿ ಕೂಲಂಕಷವಾಗಿ ಗಮನಿಸಿ ಚರ್ಚಿಸುವ ವ್ಯವಧಾನವಿಲ್ಲದ, ಜ್ಞಾನದ ಕೊರತೆಯ ಹುಸಿ ರಾಷ್ಟ್ರೀಯವಾದಿಗಳ ಮಟ್ಟಿಗೆ ಅದು ಅಕ್ಷಮ್ಯ ಅಪರಾಧ! ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಒಂದುವೇಳೆ ಹಿಂದೂ ಮಹಾಸಭಾ ಮುಂಚೂಣಿಯಲ್ಲಿದ್ದು, ಕಾಂಗ್ರೆಸ್ ಇಲ್ಲದೇ ಹೋಗಿದ್ದಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ನೀವೇ ಊಹಿಸಿಕೊಳ್ಳಿ!

ಪಲ್ಲವಿ ಇಡೂರು
ಲೇಖಕಿ ಮತ್ತು ರಾಜಕೀಯ ವಿಮರ್ಶಕರು. ’ಜೊಲಾಂಟಾ’ (ಇರೇನಾ ಸ್ಲೆಂಡರ್ ಜೀವನ ಕಥನ) ಮತ್ತು ದೇಶ ವಿಭಜನೆಯ ಬಗ್ಗೆ ’ಆಗಸ್ಟ್ ಮಾಸದ ರಾಜಕೀಯ ಕಥನ’ ಎಂಬ ಪುಸ್ತಕಗಳನ್ನು ರಚಿಸಿದ್ದಾರೆ.
ಇದನ್ನೂ ಓದಿ: ದೇಶ ವಿಭಜನೆಗೆ ಸಾವರ್ಕರ್ ಕಾರಣ: ವಿಡಿಯೊ ಬಿಡುಗಡೆ ಮಾಡಿದ ಕಾಂಗ್ರೆಸ್


