ಪ್ರಜಾಪ್ರಭುತ್ವದ ಅಡಿಪಾಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆದರ್ಶಗಳು ನಮ್ಮ ಪೂರ್ವ ಸಂಸ್ಕೃತಿಗಳಲ್ಲಿ, ನಮ್ಮ ಪೂರ್ವ ಸಮಾಜಗಳ ಕಲ್ಪನೆಯಲ್ಲಿ, ಇಲ್ಲಿನ ಬಹುಸಂಖ್ಯಾತರು ಅನುಸರಿಸುತ್ತಿದ್ದ ಧರ್ಮದಲ್ಲಿ ಇರಲಿಲ್ಲ ಎಂಬುದಕ್ಕಾಗಿ, ಅವುಗಳು ನಮ್ಮೊಳಗೆ ಇಂದಿಗೂ ಇಳಿಯುವುದಕ್ಕೆ ಸವಾಲಾಗಿದೆ ಎಂದು ಯಾರಾದರೂ ಹೇಳಬಹುದಾಗಿದೆ. ಮುಂದೆ ಒಂದು ದೇಶವಾಗಿ ಸಂವಿಧಾನವನ್ನು ಮತ್ತದರ ಪೀಠಿಕೆಯನ್ನು ಅಳವಡಿಸಿಕೊಂಡ ಮೇಲಾದರೂ ನಾವು ಅವುಗಳ ನಿಜವಾದ ಅರ್ಥವನ್ನು ಕಂಡುಕೊಂಡು ಮೈಗೂಡಿಸಿಕೊಂಡು ಮುಂದುವರೆಯಬೇಕಿತ್ತು. ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಸಿದ್ಧಾಂತದ ಮಟ್ಟದಲ್ಲಾದರೂ ಒಂದು ಮಟ್ಟಕ್ಕೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆಯಾದರೂ, ಫ್ರೆಟರ್ನಿಟಿ ಪದವನ್ನು ಭ್ರಾತೃತ್ವ ಎಂಬುದಾಗಿ ನಾವು ಅನುವಾದ ಮಾಡಿಕೊಂಡಿದ್ದರ ತೊಂದರೆಯೂ ಒಂದು ಕಾರಣಕ್ಕೋ ಏನೋ, ಅದರ ನಿಜವಾದ ಅರ್ಥವನ್ನ ಮತ್ತು ಪ್ರಾಮುಖ್ಯತೆಯನ್ನು ತಿಳಿದು ಆಚರಣೆಗೆ ತಂದುಕೊಳ್ಳುವುದರಲ್ಲಿ ದಯನೀಯವಾಗಿ ಸೋತಿದ್ದೇವೆ.

ಫ್ರೆಟರ್ನಿಟಿ (ಮುಂದೆ ಭ್ರಾತೃತ್ವ ಅಂತಲೇ ಬಳಸಲಾಗುತ್ತದೆ) ಪದವನ್ನು ಡಾ.ಬಿ.ಆರ್.ಅಂಬೇಡ್ಕರ್ ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದರು ಎಂಬ ಚರ್ಚೆಯನ್ನು ನಾವು ಆಗಾಗ ಕೇಳಿರುತ್ತೇವೆ. ಫ್ರೆಂಚ್ ಕ್ರಾಂತಿಕಾರರು ಫ್ರೆಟರ್ನಿಟಿ ಪದವನ್ನು ಬಳಸಿ ಅದನ್ನು ಕಂಡುಕೊಂಡಿದ್ದರು ಎಂಬ ಅಂಶವನ್ನು ಅಂಬೇಡ್ಕರ್ ಉಲ್ಲೇಖಿಸುತ್ತರಾದರೂ ಅದು ಅವರಿಗೆ ನಿಜವಾದ ಅರ್ಥದಲ್ಲಿ ದಕ್ಕಿದ್ದು ತಾವು ಅನುಸರಿಸುತ್ತಿದ್ದ ಬೌದ್ಧ ಧರ್ಮದಿಂದ ಎಂಬುದನ್ನೂ ಸ್ಪಷ್ಟಪಡಿಸುತ್ತಾರೆ. “ನನ್ನ ಇಡೀ ಸಾಮಾಜಿಕ ತತ್ವಶಾಸ್ತ್ರ ಮೂರು ಪದಗಳಲ್ಲಿ ಮೇಳೈಸಿದೆ: ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ. ನನ್ನ ತತ್ವವನ್ನು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿದ್ದೇನೆ ಎಂದು ಯಾರು ಹೇಳಿದರೂ, ಅದು ನಿಜವಲ್ಲ. ನನ್ನ ತತ್ವಜ್ಞಾನದ ಬೇರುಗಳು ಇರುವುದು ಧರ್ಮದಲ್ಲಿ; ರಾಜಕೀಯ ವಿಜ್ಞಾನದಲ್ಲಿ ಅಲ್ಲ. ಅವುಗಳನ್ನು ನಾನು ನನ್ನ ಗುರು ಬುದ್ಧನ ಬೋಧನೆಗಳಿಂದ ಪಡೆದುಕೊಂಡಿದ್ದೇನೆ. ಅವನ ತತ್ವದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗೆ ಜಾಗ ಇತ್ತು; ಆದರೆ ಅನಿಯಂತ್ರಿತ ಸ್ವಾತಂತ್ರ್ಯ ಸಮಾನತೆಯನ್ನು ನಾಶಪಡಿಸುತ್ತದೆ ಮತ್ತು ಸಂಪೂರ್ಣ ಸಮಾನತೆ ಸ್ವಾತಂತ್ರ್ಯಕ್ಕೆ ಜಾಗ ಮಾಡಿಕೊಡುವುದಿಲ್ಲ ಎಂದು ಕೂಡ ಬುದ್ಧ ಹೇಳಿದ್ದ. ಅವನ ತತ್ವದಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಉಲ್ಲಂಘಿಸದಂತೆ ತಡೆಯಲು ಮಾತ್ರ ಕಾನೂನು ನಿಯಮಗಳು ಇದ್ದವು; ಆದರೆ ಕಾನೂನು ಮಾತ್ರ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಉಲ್ಲಂಘಿಸದಂತೆ ತಡೆಯಬಲ್ಲವು ಎಂಬ ನಂಬಿಕೆ ಅವನಿಗೆ ಇರಲಿಲ್ಲ. ಆದುದರಿಂದ ಭ್ರಾತೃತ್ವಕ್ಕೆ ಅವನು ಅತ್ಯುನ್ನತ ಸ್ಥಾನಮಾನವನ್ನು ಕೊಟ್ಟಿದ್ದ. ಸ್ವಾತಂತ್ರ್ಯ ಅಥವಾ ಸಮಾನತೆ ಅಥವಾ ಭ್ರಾತೃತ್ವದ ನಿರಾಕರಣೆಯನ್ನು ತಡೆದು ಅವುಗಳನ್ನು ರಕ್ಷಿಸಲು ಭ್ರಾತೃತ್ವಕ್ಕೆ ಮಾತ್ರ ಸಾಧ್ಯ ಎಂದು ನಂಬಿದ್ದ. ಇದು ಸೋದರತ್ವ ಅಥವಾ ಮಾನವೀಯತೆಗೆ ಮತ್ತೊಂದು ಹೆಸರು ಮತ್ತು ಧರ್ಮಕ್ಕೂ ಮತ್ತೊಂದು ಹೆಸರು” ಎಂದು ಅಂಬೇಡ್ಕರ್ ಹೇಳಿದ್ದರು. [BAWS- ಸಂಪುಟ 17, ಪುಟ 503]

ಸ್ವಾತಂತ್ರ್ಯಾ ನಂತರದ ಭಾರತದ ರಾಜಕೀಯ ವ್ಯವಸ್ಥೆಯ ಬಗ್ಗೆ ಅಂಬೇಡ್ಕರ್ ಅವರ ಚಿಂತನೆಗಳು ಗಂಭೀರ ಸ್ವರೂಪದ್ದಾಗಿದ್ದವು. ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಕ್ಕೆ ಇರುವ ಹಲವು ತೊಡಕುಗಳನ್ನು ವಿಶ್ಲೇಷಿಸಿದ್ದರು. “ಪ್ರಜಾಪ್ರಭುತ್ವ ಕೇವಲ ರಾಜಕೀಯ ಯಂತ್ರವಲ್ಲ. ಇದು ಸಾಮಾಜಿಕ ವ್ಯವಸ್ಥೆಗೂ ಮೀರಿದ್ದು. ಇದು ನಮ್ಮ ಮನೋವೃತ್ತಿ ಮತ್ತು ಜೀವನದ ತತ್ವ” ಎಂದಿದ್ದರು. ಇಂತಹ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಪ್ರಜಾಪ್ರಭುತ್ವ ಸಮಾಜದಲ್ಲಿನ ಮನುಷ್ಯರ ಮನಸ್ಸುಗಳು ಸಾಮಾಜೀಕರಣಕ್ಕೆ ಒಳಗಾಗಬೇಕು ಎನ್ನುತ್ತಿದ್ದ ಅಂಬೇಡ್ಕರ್, ಪ್ರಜಾಪ್ರಭುತ್ವ ಮನಸುಳ್ಳ ಸಮಾಜ ಪ್ರಜಾಪ್ರಭುತ್ವ ಸರ್ಕಾರಕ್ಕೆ ಪೂರ್ವಾಪೇಕ್ಷೆ ಎಂದಿದ್ದರು. ಇಂತಹ ಪ್ರಜಾಪ್ರಭುತ್ವ ಸಮಾಜ ಸೃಷ್ಟಿಯಾಗುವುದಕ್ಕೆ ಬೇಕಾದ ಮುಖ್ಯ ಲಕ್ಷಣ ಭ್ರಾತೃತ್ವ. ಇದು ನಮಗೆ ಕಾಣಸಿಗುವುದು ಬುದ್ಧನ ತತ್ವವಾದ ಮೈತ್ರಿ ಎಂಬ ಬೋಧನೆಯಲ್ಲಿ ಎಂದಿದ್ದರು. ಸಹಜೀವಿಯನ್ನು ಪ್ರೀತಿಯಿಂದ ಕಾಣುವ, ಸಹನಾಗರಿಕರ ನೋವಿಗೆ ಮರುಗುವ, ಸಹನಾಗರಿಕರನ್ನು ನಮ್ಮವರನ್ನಾಗಿಸಿಕೊಳ್ಳುವ ಸೋದರತ್ವದ ಉದಾತ್ತ ಭಾವನೆ ಮೈತ್ರಿ. ಈ ಮೈತ್ರಿ ಅಥವಾ ಭ್ರಾತೃತ್ವವೇ ಪ್ರಜಾಪ್ರಭುತ್ವದ ಬೇರು ಎಂದು ನಂಬಿದ್ದ ಅಂಬೇಡ್ಕರ್ ಈ ಬೇರು ಆಳಕ್ಕೆ ಇಳಿಯದೆ ಹೋದರೆ ಪ್ರಜಾಪ್ರಭುತ್ವ ಅಲುಗಾಡುವುದನ್ನು ಕೂಡ ಊಹಿಸಿದ್ದರು. [BAWS- ಸಂಪುಟ 4, ಪುಟ 281-287]

ಭಾರತದಲ್ಲಿ ಈ ಹಿಂದೆ ಪ್ರಜಾಪ್ರಭುತ್ವ ಬೆಳೆಯದೆ ಇರುವುದಕ್ಕೆ ಕಾರಣ, ಹಿಂದೂ ಧರ್ಮ ಎಂದಿಗೂ ಭ್ರಾತೃತ್ವವನ್ನು ಬೋಧಿಸಲಿಲ್ಲ ಎಂದು ಹೇಳುತ್ತಿದ್ದ ಬಾಬಾಸಾಹೇಬ್ ಹಿಂದೂ ಸಾಮಾಜಿಕ ವ್ಯವಸ್ಥೆ ಪ್ರಜಾಪ್ರಭುತ್ವವನ್ನು ಹೊಂದಿರಲಿಲ್ಲ ಎಂಬ ಸಂಗತಿ ಆಕಸ್ಮಿಕವಾದುದಲ್ಲ. ಸಮಾಜವನ್ನು ವರ್ಣಗಳೆಂದು, ಜಾತಿಗಳೆಂದು ವಿಂಗಡಿಸಿರುವುದು, ಜಾತಿಗಳು ಮತ್ತು ಬಹಿಷ್ಕೃತ ಜಾತಿಗಳೆಂದು ವಿಂಗಡಿಸಿರುವುದು ಕೇವಲ ಸಿದ್ಧಾಂತವಾಗಿರಲಿಲ್ಲ; ಆದರೆ ಸಾಮಾಜಿಕ ಕಟ್ಟಳೆಯಾಗಿತ್ತು. ಇವೆಲ್ಲವೂ ಪ್ರಜಾಪ್ರಭುತ್ವದ ವಿರುದ್ಧ ಕಟ್ಟಿದ್ದ ಗೋಡೆಗಳಾಗಿದ್ದವು ಎನ್ನುತ್ತಾರೆ. ನಾವೆಲ್ಲರೂ ದೇವರ ಮಕ್ಕಳು ಎಂಬ ತತ್ವ ಪ್ರಜಾಪ್ರಭುತ್ವಕ್ಕೆ ಗಟ್ಟಿ ತಳಹದಿಯಾಗಲು ಸಾಧ್ಯವಿರಲಿಲ್ಲ ಎಂದಿದ್ದ ಅವರು ಹಿಂದೂ ಧರ್ಮದಲ್ಲಿ ಇದ್ದ ಅಹಂ ಬ್ರಹ್ಮಾಸ್ಮಿ ಮತ್ತು ತತ್ವಮಸಿ ಎಂಬ ತತ್ವಗಳು ಪ್ರಜಾಪ್ರಭುತ್ವವನ್ನು ಕಟ್ಟಬಲ್ಲ ಶಕ್ತಿ ಹೊಂದಿದ್ದವು. ಆದರೆ ಇವುಗಳನ್ನು ಮರೆಮಾಚಿದ ಬ್ರಾಹ್ಮಣವಾದ, ಜಾತಿ, ಉಪಜಾತಿಗಳನ್ನು ಸೃಷ್ಟಿಸಿ, ಮೇಲುಕೀಳುಗಳ ಶ್ರೇಣೀಕೃತ ವ್ಯವಸ್ಥೆಯನ್ನು ಸ್ಥಾಪಿಸಿ, ನಾಗರಿಕರ ನಡುವೆ ಸಾಮಾನ್ಯ ಅನುಭವಕ್ಕೆ, ಮತ್ತೊಬ್ಬರ ಸಂಕಷ್ಟಕ್ಕೆ ಮಿಡಿಯುವ ಕರುಣೆಯ ಭಾವನೆಗೆ ಜಾಗ ಇಲ್ಲದಂತೆ ಮಾಡಿ ಜನರ ಸಾಮಾಜೀಕರಣಕ್ಕೆ ಅವಕಾಶ ಇಲ್ಲದಂತಾಗಿಸಿ ಇಲ್ಲಿ ಪ್ರಜಾಪ್ರಭುತ್ವವನ್ನು ಬೆಳೆಯದಂತೆ ಮಾಡಿತ್ತು ಎಂಬುದನ್ನು ವಿಶದವಾಗಿ ಚರ್ಚಿಸುತ್ತಾರೆ.

ಇವತ್ತಿನ ವಿದ್ಯಮಾನಗಳನ್ನು ಗಮನಿಸಿದರೆ ನಮ್ಮ ಶಿಕ್ಷಣ ನಮಗೆ – ಅಂದರೆ ಈ ಸಮಾಜದ ಶ್ರೇಣಿಯಲ್ಲಿ ಮೇಲಿದ್ದುಕೊಂಡು ಸವಲತ್ತಿನ ಜಾತಿಗಳಿಗೆ ಸೇರಿದ್ದ ಜನರಿಗೆ – ಈ ಮೈತ್ರಿ ಭಾವನೆಯನ್ನು, ಭ್ರಾತೃತ್ವದ ಆದರ್ಶವನ್ನು ಮನನ ಮಾಡಿಸುವುದರಲ್ಲಿ ಅಷ್ಟು ಸಫಲವಾಗಿಲ್ಲ ಎಂದೇ ಹೇಳಬೇಕು. ಈ ಸಮಾಜದ ವಿಕೃತಿಗೆ, ನೈತಿಕ ಅಧಃಪತನಕ್ಕೆ, ಅವನತಿಗೆ ಕಾರಣವಾಗಿದ್ದ ಮೌಲ್ಯಗಳು ಮತ್ತು ಸವಲತ್ತುಗಳಿಗೆ ಅಂಟಿಕೊಂಡಿದ್ದವರಿಗೆ ಆ ರೀತಿಯ ಶಿಕ್ಷಣ ಅಗತ್ಯವಿತ್ತು. ಶ್ರೇಣಿಯಲ್ಲಿ ಕೆಳಗಿದ್ದ ಜನರನ್ನು ಕಡೆಗಣಿಸಿ, ಶೋಷಿಸಿ, ದೌರ್ಜನ್ಯವೆಸಗಿದ್ದ ಜಾತಿಯ ಹಿನ್ನೆಲೆಯ ಜನರಿಗೆ ಇಂಥಹ ನೈತಿಕ ಪ್ರಜ್ಞೆಯನ್ನು ಮರುಕಳಿಸಿಕೊಳ್ಳುವ ಅಗತ್ಯ ಇತ್ತು. ಈ ನೈತಿಕ ಪ್ರಜ್ಞೆ ಬಹುಸಂಖ್ಯಾತರಲ್ಲಿ ಮರುಕಳಿಸಿದ್ದರೆ ನಾವು ಒಪ್ಪಿಕೊಂಡಿದ್ದ ದೇಶದ ಕಲ್ಪನೆ ಸಾಕಾರವಾಗಿರುತ್ತಿತ್ತು. ಈಗ ನಮ್ಮ ಕಣ್ಮುಂದೆ ಇರುವಂತಹ ಸಂಕುಚಿತ ಧಾರ್ಮಿಕ ರಾಷ್ಟ್ರೀಯತೆ ಇವತ್ತು ತಾಂಡವವಾಡುತ್ತಿರಲಿಲ್ಲ. ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ನೆನಪಿನ ಭಾಷಣ ಮಾಲೆಯ ಮೊದಲ ಭಾಷಣಕಾರರಾಗಿದ್ದ ರಾಜಕೀಯ ತತ್ವಶಾಸ್ತ್ರಜ್ಞ ಭಿಕು ಪಾರೇಕ್ ಅವರು “ಆಧುನಿಕ ಸಮಯದಲ್ಲಿ ಅದರಲ್ಲಿಯೂ ಮುಕ್ತ ಚಿಂತನೆಯ ವಲಯದಲ್ಲಿ ಭ್ರಾತೃತ್ವದ ಆದರ್ಶ ಕಲ್ಪನೆಯನ್ನು ಉಪೇಕ್ಷಿಸಲಾಗಿದೆ. ಸಂಕುಚಿತ ರಾಷ್ಟ್ರೀಯತೆಯನ್ನು ಅಪ್ಪಿಕೊಳ್ಳದೆ ಭ್ರಾತೃತ್ವ ಕಲ್ಪನೆಯ ಪ್ರಾಮುಖ್ಯತೆಯನ್ನು ಅಂಬೇಡ್ಕರ್ ಒತ್ತಿ ಹೇಳಿದ್ದು ಯಾಕೆಂದು ಇಂದು ಅರಿವಾಗುತ್ತಿದೆ. ತಾವೇ ಸಾಮಾಜಿಕ ತಾರತಮ್ಯದ ಸಂತ್ರಸ್ತ್ರರಾಗಿದ್ದ ಅಂಬೇಡ್ಕರ್ ಅನ್ಯಾಯಗಳ ವಿರುದ್ಧ ಸ್ಪೂರ್ತಿದಾಯಕ ಹೋರಾಟ ನಡೆಸಬೇಕಾದ ಸಹ ಭಾವನೆಯ ಅಗತ್ಯ ಕಂಡರು. ಸಮಾನತೆ ಮತ್ತು ನ್ಯಾಯದ ಆದರ್ಶ ಕಲ್ಪನೆಗಳ ಬಗ್ಗೆ ಅಮೂರ್ತ ಬದ್ಧತೆಯಿಂದ ಸ್ಫೂರ್ತಿ ಪಡೆದರೂ, ಸಂತ್ರಸ್ತರನ್ನು ವಾಸ್ತವ ನೆಲೆಯಲ್ಲಿ ನೋಡಿದಾಗ, ಅವರ ಜೊತೆಗೆ ಗುರುತಿಸಿಕೊಂಡಾಗ, ಅವರ ನೋವು ಮತ್ತು ದುಃಖವನ್ನು ನಾವು ಅನುಭವಿಸಿದಾಗ ಮತ್ತು ಅವರನ್ನು ನಮ್ಮವರನ್ನಾಗಿ ಮಾಡಿಕೊಂಡಾಗ ನಮ್ಮ ಹೋರಾಟಕ್ಕೆ ಹೆಚ್ಚು ಬಲ ಮತ್ತು ಸ್ಥಿರತೆ ಸಿಗುತ್ತದೆ. ಆದುದರಿಂದ ನೈತಿಕ ಭಾವನೆಗಳ ಪಾತ್ರಕ್ಕೆ ಹೆಚ್ಚು ಒತ್ತು ಕೊಟ್ಟು, ಕೇವಲ ನೈತಿಕ ಮತ್ತು ರಾಜಕೀಯ ಜೀವನದ ಸಂಕುಚಿತ ಬೌದ್ಧಿಕ ಕಾಣ್ಕೆಯಷ್ಟೇ ಆಗಿದ್ದನ್ನು ಅವರು ತಿರಸ್ಕರಿಸಿದ್ದು ಸರಿಯಿತ್ತು.

“ಭ್ರಾತೃತ್ವದ ಕಲ್ಪನೆಗೆ ಸಂಬಂಧಿಸಿದ ರಾಷ್ಟ್ರದ ಕಲ್ಪನೆಯ ಬಗ್ಗೆ ಅಂಬೇಡ್ಕರ್ ಅವರ ವ್ಯಾಖ್ಯಾನ ಕೂಡ ಬಹಳ ಸಂಪದ್ಭರಿತ ಹಾಗೂ ಸೂಚ್ಯವಾಗಿತ್ತು. ಅವರಿಗೆ ರಾಷ್ಟ್ರ ಎಂಬುದು ಅದರ ಸದಸ್ಯರ ತಲೆ ಮೇಲೆ ಹಾರುತ್ತಿದ್ದ ಅತೀಂದ್ರಿಯವಾದ ಅಮೂರ್ತ ಕಲ್ಪನೆಯಾಗಿರಲಿಲ್ಲ. ಬದಲಿಗೆ, ಅದು ತನ್ನ ಸದಸ್ಯರ ಸಂಕೀರ್ಣ ಸಂಬಂಧಗಳು ಮತ್ತು ಅವಲಂಬನೆಗಳನ್ನು ಹೊರತುಪಡಿಸಿ ಮತ್ತಿನ್ನೇನೂ ಆಗಿರಲಿಲ್ಲ. ರಾಷ್ಟ್ರ ಸೇವೆ ಎಂದರೆ ಅದರ ಸದಸ್ಯರ ಸೇವೆಗಾಗಿ ಮತ್ತು ಅವರ ಕಲ್ಯಾಣಾಭಿವೃದ್ಧಿಗಾಗಿ ಶ್ರಮಿಸುವುದರ ಹೊರತು ಬೇರಿನ್ನೇನು ಅಲ್ಲ. ಆದುದರಿಂದಲೇ ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು, ತನ್ನೊಳಗಿನ ಶೋಷಣೆಯ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಹೋರಾಟದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದು. ರಾಷ್ಟ್ರ ಎಂಬುದು ಯಾವುದೋ ಪುರಾತನ ಯುಗದ ಸಂಗತಿಯಲ್ಲ. ಅದರ ಎಲ್ಲ ಸದಸ್ಯರ ಸಾಮೂಹಿಕ ಸೃಷ್ಟಿ ಮತ್ತು ತನ್ನ ಸ್ವ-ಅರ್ಥೈಸಿಕೆಯಲ್ಲಿ ಅವರನ್ನೆಲ್ಲಾ ಒಳಗೊಳ್ಳುವುದರಲ್ಲಷ್ಟೇ ಅದು ಹಕ್ಕು ಸಾಧಿಸಬೇಕು ಎಂದು ಗಮನಿಸಿದ್ದರು. ಟ್ಯಾಗೋರ್ ಮತ್ತು ಗಾಂಧಿಯಂತೆಯೇ ಅಂಬೇಡ್ಕರ್ ಕಲ್ಪನೆಯ ರಾಷ್ಟ್ರವಾದಕ್ಕೆ ಮಾನವೀಯತೆಯ ದೃಷ್ಟಿಕೋನ ಇತ್ತು ಮತ್ತು ಅದು ಸಾಮಾನ್ಯವಾಗಿ ರಾಷ್ಟ್ರೀಯತೆಯ ಜೊತೆಗೆ ಗುರುತಿಸಿಕೊಳ್ಳುವ ಗುಂಪುಗಾರಿಕೆ, ಸಂಕುಚಿತತೆ ಮತ್ತು ಉಗ್ರವಾದದಿಂದ ಮುಕ್ತವಾಗಿತ್ತು” ಎಂದು ಗುರುತಿಸುತ್ತಾರೆ. [Conversations with Ambedkar, (E): Valerian Rodrigues]

ಸಂವಿಧಾನ ಪೀಠಿಕೆಯನ್ನು ಸಂವಿಧಾನ ಕರಡು ಸಮಿತಿಯ ಮುಂದೆ 21ನೆ ಫೆಬ್ರವರಿ 1947ರಲ್ಲಿ ಸಲ್ಲಿಸಿದಾಗ, ಅದರ ಬಗ್ಗೆ ವಾದ ವಾಗ್ವಾದಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ. ಆದರೆ ಆ ಪೀಠಿಕೆಯಲ್ಲಿ ಪರಿಚಯಿಸಲಾಗಿದ್ದ ಭ್ರಾತೃತ್ವದ ಸಾಲು ಮಾತ್ರ ಸಂವಿಧಾನ ನಡಾವಳಿ ಸಭೆಗಳಲ್ಲಿ ಎಲ್ಲರಿಂದಲೂ ಒಮ್ಮತದ ಒಪ್ಪಿಗೆ ಮತ್ತು ಪ್ರಶಂಸೆಗೆ ಪಾತ್ರವಾಗಿತ್ತು. ಪೂರ್ವ ಪಂಜಾಬಿನಿಂದ ಸಂವಿಧಾನ ನಡಾವಳಿ ಸಭೆಯ ಸದಸ್ಯರಾಗಿದ್ದ ಠಾಕೂರ್ ದಾಸ್ ಭಗವಾನ್ ಅವರು ನವೆಂಬರ್ 6, 1948ರಂದು ಮಾಡಿದ ಭಾಷಣದಲ್ಲಿ “ಸ್ವಾಮಿ, ಸಂವಿಧಾನದ ಆತ್ಮ ಇರುವುದು ಅದರ ಪೀಠಿಕೆಯಲ್ಲಿ ಎಂದು ನಾನು ನಂಬಿದ್ದೇನೆ ಮತ್ತು ಪೀಠಿಕೆಗೆ ಭ್ರಾತೃತ್ವ ಪದವನ್ನು ಸೇರಿಸಿದ ಡಾ.ಅಂಬೇಡ್ಕರ್ ಅವರಿಗೆ ಕೃತಜ್ಞತೆಯನ್ನು ಅರ್ಪಿಸಲು ನನಗೆ ಸಂತೋಷವಾಗುತ್ತಿದೆ. ಸ್ವಾಮಿ ಈಗ ಇಡೀ ಸಂವಿಧಾನಕ್ಕೆ ಅದರ ಉದ್ಘಾಟನಾ ಶಿಲೆಯಾದ ಪೀಠಿಕೆಯನ್ನು ಸೇರಿಸಲು ಬಯಸುತ್ತೇನೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ನಮ್ಮ ಸಂವಿಧಾನದಲ್ಲಿ ಕಂಡುಬಂದರೆ ಮತ್ತು ನಮ್ಮ ಸಂವಿಧಾನದ ಮೂಲಕ ಈ ಆದರ್ಶಗಳನ್ನು ಕಂಡುಕೊಳ್ಳಬಹುದಾದರೆ ನಮ್ಮ ಸಂವಿಧಾನ ಒಳ್ಳೆಯದು ಎಂಬ ನನ್ನ ವಾದವನ್ನು ಇವತ್ತಿಗೂ ಮಂಡಿಸುತ್ತೇನೆ” ಎಂದು ಹೇಳುತ್ತಾರೆ. ಈ ಹಿಂದಿನ ಯಾವ ಕರಡುಗಳಲ್ಲಿಯೂ ಕಂಡುಬರದಿದ್ದ ಈ ಭ್ರಾತೃತ್ವದ ಕಲ್ಪನೆ, ಅಂಬೇಡ್ಕರ್ ಅವರ ಪೀಠಿಕೆಯಲ್ಲಿ ಸೇರಿದ್ದು ಸ್ವಾತಂತ್ರ್ಯಾ ನಂತರದ ಭಾರತದ ಕಲ್ಪನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿತ್ತು.

ಆಧುನಿಕ ರಾಜ್ಯಶಾಸ್ತ್ರದ ಪ್ರಮುಖರಾದ ಡಾ.ಜಾನ್ ಡ್ಯೂಯಿ, ಹೆರಾಲ್ಡ್ ಜೆ ಲಾಸ್ಕಿ ಮುಂತಾದ ಚಿಂತಕರಿಂದ ಪ್ರಭಾವಿತರಾಗಿದ್ದ ಅಂಬೇಡ್ಕರ್, ಆಧುನಿಕ ಪ್ರಜಾಪ್ರಭುತ್ವದ ಕಲ್ಪನೆಗಳಿಗೆ ಭಾರತೀಯ ಸಂಸ್ಕೃತಿಗಳಲ್ಲಿ ಇದ್ದಿರಬಹುದಾದ ಸಮಾನ ಸಂಬಂಧಗಳನ್ನು ಹುಡುಕಲು ಬಹಳವಾಗಿ ಪ್ರಯತ್ನಿಸಿದ್ದರು. ಕೆಲವು ಧಾರ್ಮಿಕ ಮೂಲಭೂತವಾದಿಗಳು ದೂರುವಂತೆ ಸಮಾನತೆ, ಭ್ರಾತೃತ್ವ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಕಲ್ಪನೆಗಳು ಪಶ್ಚಿಮ ದೇಶದ ತತ್ವಗಳ ಆಮದು ಎಂಬ ಆರೋಪಕ್ಕೆ ಅವಕಾಶ ಕೊಡದಂತೆ ಹೊಸ ದೇಶದ ಕಲ್ಪನೆಯನ್ನು ವಿನೂತನವಾಗಿ ಕಟ್ಟಿಕೊಟ್ಟು ಹೊಸ ಕನಸೊಂದನ್ನು ಕಂಡಿದ್ದರು. ಆದರೆ ಈ ಕನಸಿಗೆ ಮೂಲವಾಗಿದ್ದ ಭ್ರಾತೃತ್ವ ಆದರ್ಶ ಬಹುತೇಕ ಬಹುಸಂಖ್ಯಾತರ ಒಳಗೆ ಇಳಿಯಲು 70 ವರ್ಷಗಳು ಸಾಕಾಗಿಲ್ಲ. ಇನ್ನಾದರೂ ಈ ಭ್ರಾತೃತ್ವವನ್ನು ನಮ್ಮದಾಗಿಸಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನ ಭಾರತವನ್ನು ಸಮಾನತೆ ಮತ್ತು ಸ್ವಾತಂತ್ರ್ಯದ ನೆಲೆಗಟ್ಟಿನಲ್ಲಿ ಕಟ್ಟಲು ನಾವೆಲ್ಲರೂ ಸೆಟೆದು ನಿಲ್ಲಬೇಕಿದೆ.

– ಗುರುಪ್ರಸಾದ್ ಡಿ ಎನ್

ಕಾರ್ಯನಿರ್ವಾಹಕ ಸಂಪಾದಕ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here