ಜೈಪುರದ ಭಟ್ಟ ಬಸ್ತಿ ಪ್ರದೇಶದ ಶಿವಾಜಿ ನಗರದಲ್ಲಿ ‘ಹಿಂದೂಯೇತರರಿಗೆ’ ಮನೆಗಳನ್ನು ಮಾರಾಟ ಮಾಡಬಾರದು ಎಂಬ ಪೋಸ್ಟರ್‌ಗಳನ್ನು ಕಿಡಿಗೇಡಿಗಳು ಅಂಟಿಸಿದ್ದು, ಹಿಂದೂಗಳ ವಲಸೆಯನ್ನು ತಡೆಯುವಂತೆ ‘ಸನಾತನಿ’ ಜನರಿಗೆ ಮನವಿ ಮಾಡುತ್ತೇವೆ ಎಂದು ಬರೆಯಲಾಗಿದೆ.
ಹಿಂದೂಯೇತರರಿಗೆ ತಮ್ಮ ಮನೆಗಳನ್ನು ಮಾರಾಟ ಮಾಡದಂತೆ ತಮ್ಮ ಪ್ರದೇಶದ ಜನರಿಗೆ ಮನವಿ ಮಾಡಲು ತಮ್ಮ ಸ್ವಂತ ಮನೆಗಳ ಮೇಲೆ ಸ್ವಇಚ್ಛೆಯಿಂದ ಪೋಸ್ಟರ್‌ಗಳನ್ನು ಅಂಟಿಸಿರುವುದಾಗಿ ಕೆಲವು ಸ್ಥಳೀಯರು ಟಿವಿ ಚಾನೆಲ್‌ಗಳಿಗೆ ತಿಳಿಸಿದ್ದಾರೆ.
ಭಟ್ಟ ಬಸ್ತಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಕೈಲಾಶ್ ಈ ಕುರಿತ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. ಜನರು ತಮ್ಮ ಸ್ವಂತ ಮನೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಮತ್ತು ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.
‘ಸರ್ವ್ ಹಿಂದೂ ಸಮಾಜ’ ಹೆಸರಿನ ಪೋಸ್ಟರ್‌ನ್ನು ಹಿಂದಿಯಲ್ಲಿ ಹಾಕಲಾಗಿದ್ದು, ವಲಸೆ ನಿಲ್ಲಿಸುವಂತೆ ಸನಾತನಿಗಳಿಗೆ ಮನವಿ, ಎಲ್ಲಾ ಸನಾತನ ಸಹೋದರ ಸಹೋದರಿಯರಿಗೆ ತಮ್ಮ ಮನೆಯನ್ನು ಹಿಂದೂಯೇತರರಿಗೆ ಮಾರಾಟ ಮಾಡದಂತೆ ವಿನಂತಿ ಮಾಡುತ್ತಿದ್ದೇವೆ ಎಂದು ಬರೆಯಲಾಗಿದೆ.
ಈ ಪ್ರದೇಶದಲ್ಲಿ ಕೆಲವರು ಮನೆ ಖರೀದಿಸಿ ಇತರರಿಗೆ ತೊಂದರೆ ಕೊಡುತ್ತಿದ್ದಾರೆ. ಈ ಪರಿಸ್ಥಿತಿಯಿಂದಾಗಿ, ನಾವು ನಮ್ಮ ಮನೆಗಳ ಹೊರಗೆ ಭಿತ್ತಿಪತ್ರಗಳನ್ನು ಅಂಟಿಸಲು ನಿರ್ಧರಿಸಿದ್ದೇವೆ, ಜನರು ತಮ್ಮ ಮನೆಗಳನ್ನು ಹಿಂದೂಯೇತರರಿಗೆ ಮಾರಾಟ ಮಾಡದಂತೆ ಮನವಿ ಮಾಡುತ್ತೇವೆ. ದಲ್ಲಾಳಿಗಳು ಆಗಾಗ್ಗೆ ನಮ್ಮ ಬಳಿಗೆ ಬರುತ್ತಾರೆ, ನಮ್ಮ ಮನೆಯನ್ನು ಮಾರಾಟ ಮಾಡಲು ನಮಗೆ ಆಸಕ್ತಿ ಇದೆಯೇ ಎಂದು ಕೇಳುತ್ತಾರೆ. ಹಲವು ಮನೆಗಳನ್ನು ಹೊರಗಿನವರಿಗೆ ಮಾರಾಟ ಮಾಡಲಾಗಿದೆ ಮತ್ತು ನಮ್ಮ ಪ್ರದೇಶದಲ್ಲಿ ವಾತಾವರಣವು ಸರಿಯಾಗಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ. ಆಸ್ತಿ ಮಾರಾಟ ಮತ್ತು ಖರೀದಿ ವೈಯಕ್ತಿಕ ವಿಷಯವಾಗಿದೆ. ಈ ಬಗ್ಗೆ ಯಾವುದೇ ವಿವಾದ ಈವರೆಗೆ ಆ ಪ್ರದೇಶದಲ್ಲಿ ಕಂಡು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನು ಓದಿ: ರೈತರ ಹತ್ಯೆ ಹೊಣೆಗಾರರಿಗೆ ಕೃಷಿ ಸಚಿವಾಲಯದ ಹೊಣೆ: ರೈತ ಸಂಘಟನೆಗಳಿಂದ ಪ್ರತಿಭಟನೆ


