Homeಅಂಕಣಗಳುನಾಗಸುಧೆ ಜಗಲಿಯಿಂದನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನು, ಕನ್ನಡ ಮತ್ತು ಕವಿಗೋಷ್ಠಿ: ಪ್ರಕಾಶ ಕಡಮೆ

ನಾನು ನಂಬಿದ ಕನ್ನಡ ನಾಡು ನುಡಿಗಳೇ ಈ ಅವಕಾಶ ಒದಗಿಸಿಕೊಟ್ಟಿದೆ ಎನ್ನಲು ನನಗೆ ಅಭಿಮಾನ, ಹೆಮ್ಮೆ ಅನಿಸುತ್ತದೆ. ಅದಕ್ಕೆ ಕನ್ನಡ ಎಂದರೆ ನನ್ನೆದೆಗೆ ಹಸಿರಿನ ಹಾಸಿನಂತೆ.

- Advertisement -
- Advertisement -

ನನಗೆ ಮೊದಲಿನಿಂದಲೂ ಕನ್ನಡ ರಾಜ್ಯೋತ್ಸವ ಎಂದರೆ ತುಳಸೀ ಹಬ್ಬದ ಖುಷಿಯಂತೆ. ಕರಾವಳಿ ಭಾಗದಲ್ಲಿ ತುಳಸೀ ಹಬ್ಬವನ್ನು ಸಂಭ್ರಮದಿಂದ ಆಚರಿಸುವರು ; ದೀಪಾವಳಿಯ ಸಡಗರಕಿಂತ ಹೆಚ್ಚಾಗಿ ! ಕಾರಣ ಇಷ್ಟೇ, ಆ ದಿನ ನಮಗೆಲ್ಲಾ ಪಟಾಕಿ-ಮುದ್ದು-ಗುಂಡುಗಳ ಸಡಗರ. ಇವೆಲ್ಲವೂ ನವೆಂಬರ್ ತಿಂಗಳಲ್ಲಿಯೇ ನಡೆಯುವುದರಿಂದಲೋ ಏನೋ ನವೆಂಬರ್ ತಿಂಗಳೆಂದರೆ ನನಗಂತೂ ಖುಷಿಯೋ ಖುಷಿ.

ಎಂಬತ್ತರ ದಶಕದಲ್ಲಿ ನಾನು ಅಂಕೋಲೆಯಲ್ಲಿದ್ದೆ. ಇದು ಕರ್ನಾಟಕದ ಬಾರ್ಡೋಲಿ ಅಂತ ಹೆಸರು ಮಾಡಿದಂಥ ಸ್ಥಳ. ಅಂಕೋಲೆ ಮೊದಲಿನಿಂದಲೂ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿ. ಅಂಕೋಲೆಯ ಕರ್ನಾಟಕ ಸಂಘ, ರಾಘವೇಂದ್ರ ಪ್ರಕಾಶನ, ಕನ್ನಡಾಭಿಮಾನಿಗಳ ಸಂಘ, ಕನ್ನಡ ಸೇವಾ ಸಂಘ ಗಳಿಗಂತೂ ಕನ್ನಡ ರಾಜ್ಯೋತ್ಸವದ ಆಚರಣೆಯಂದರೆ ಮೈ ಮನಕೆಲ್ಲಾ ಸಡಗರ. ಆಗ ತಾನೇ ಸಣ್ಣ ಪುಟ್ಟ ಕವಿತೆ ಬರೆದು ಅಲ್ಲಲ್ಲಿ ಹೆಸರು ಕೇಳಿಸಿಕೊಂಡಿದ್ದೆ. ಕರ್ನಾಟಕ ಸಂಘದ ವತಿಯಿಂದ ಅಂದಿನ ಝೇಂಡಾ ಕಟ್ಟೆಯ ಮೇಲಿನ ಕವಿಗೋಷ್ಠಿಯೇ ನನ್ನ ಬದುಕಿನ ಮೊದಲನೆಯ ಕವಿಗೋಷ್ಠಿ, ಅದರಲ್ಲೂ ಕವಿಗೋಷ್ಠಿಯ ನಿರ್ವಾಹಕ ನಾನೇ ಆದ್ದರಿಂದ ಆ ವೈಭವ ವರ್ಣಿಸಲಸಾಧ್ಯ. ಮೊದಲನೆಯ ಸಲ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಪ್ರಕಟವಾಗಿದ್ದರಿಂದ ಮತ್ತು ಕವಿಗೋಷ್ಠಿಯ ನಿರ್ವಾಹಕನೂ ನಾನೇ ಆಗಿದ್ದರಿಂದ ಆಯೋಜಕರು ಕೊಟ್ಟ ಆಮಂತ್ರಣ ಖರ್ಚಾದರೂ ಮತ್ತೆ ನಾನೇ ಪ್ರಿಂಟ್ ಹಾಕಿಸಿ ಊರಿಗೆಲ್ಲಾ ಹಂಚಿ ಖುಷಿ ಪಟ್ಟಿದ್ದೆ, ಮರುದಿನದ ವೃತ್ತ ಪತ್ರಿಕೆಯಲ್ಲೆಲ್ಲಾ ಪ್ರಥಮ ಬಾರಿಗೆ ಫೋಟೋದೊಂದಿಗೆ ನನ್ನ ಹೆಸರು ಬಂದದ್ದನ್ನು ಕಂಡ ಆ ಕ್ಷಣ ಬದುಕಿನಲಿ ಅಚ್ಚಳಿಯದೇ ಉಳಿದಿದೆ. ಅದರಂತೆಯೇ ಆ ದಿನಗಳಲ್ಲೇ ವಿಷ್ಣು ನಾಯ್ಕರ ವಿಶ್ವಾಸದಲ್ಲಿ ಕೈಯ್ಯಾರ ಕಿಂಞಣ್ಣ ರೈ ರ ಅಧ್ಯಕ್ಷತೆಯಲಿ ಕವಿತೆ ಓದಿದ ಕ್ಷಣವೂ ಸಹ. ಅದಕ್ಕೆ ಕನ್ನಡ ರಾಜ್ಯೋತ್ಸವ ಮತ್ತು ಕವಿಗೋಷ್ಠಿ ಅಂದರೆ ಮೊದಲಿನಿಂದಲೂ ನನಗೆ ಉಸಿರಿನಷ್ಟೇ ಪ್ರೀತಿ.

 

ಸುಬ್ಬಣ್ಣ ರಂಗನಾಥ ಎಕ್ಕುಂಡಿ, ಗೌರೀಶ್ ಕಾಯ್ಕಿಣಿಯವರು ನನ್ನ ವಿದ್ಯಾಗುರುಗಳಾದ್ದರಿಂದ ಇವರ ಪ್ರಭಾವದಿಂದಾಗಿ ಹೈಸ್ಕೂಲು ದಿನಗಳಿಂದಲೇ ನನ್ನ ಮನದಲ್ಲಿ ಕನ್ನಡದ ಜಾಗೃತಿ ಹುಟ್ಟಿಕೊಂಡಿತು. ಈ ಇಬ್ಬರೂ ಮಹನೀಯರೂ ಕನ್ನಡ ನಾಡು ನುಡಿಗಳಿಗಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿಯ ಸಂಚಲನ ಮೂಡಿಸುತ್ತಿದ್ದರು. ಇವರು ನಮಗೆ ಕಲಿಸುವ ಗುರುಗಳಷ್ಟೇ ಆಗಿರದೇ ಮನುಷ್ಯ ಪ್ರೀತಿಯ ಮಾನವೀಯ ಸಂಬಂಧದ ಕೈಗನ್ನಡಿಯಾಗಿದ್ದರು. ಮೂಲತಃ ನನ್ನ ಕಡಮೆಯ ಸಮೀಪದ ಹನೇಹಳ್ಳಿ-ಬಂಕೀಕೋಡ್ಲದವರಾಗಿದ್ದ ಯಶವಂತ ಚಿತ್ತಾಲ, ಸುಂದರ ನಾಡಕರ್ಣಿಯವರು ರಾಜ್ಯದಿಂದ ದೂರವಿದ್ದರೂ ತಾವಿದ್ದ ಸ್ಥಳದಿಂದಲೇ ಕನ್ನಡದ ತೇರು ಎಳೆಯುತ್ತಿದ್ದು ಊರಿಗೆ ಬಂದಾಗಲೆಲ್ಲಾ ಈ ನಾಡಿನಲ್ಲಿ ಕನ್ನಡತನದ ಬೀಜ ಬಿತ್ತಿ ಹೊಸ ತಲೆಮಾರಿನಲ್ಲಿ ಬರಹದ ಗಟ್ಟಿತನಕ್ಕೆ ಕಾರಣರಾದರು. ಇವರಂತೆ ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗ ಸಹ.

ಶುದ್ಧ ಕನ್ನಡಪರ ಕಾರ್ಯಕ್ರಮದಲ್ಲಿ ರಾಜಕೀಯದ ವಾಸನೆ ಬೀರುವುದು ನಿಜವಾಗಿಯೂ ದುರಂತವೇ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಲೆಕ್ಕಾಧೀಕ್ಷಕನಾಗಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ರಾಜ್ಯೋತ್ಸವ ಕವಿಗೋಷ್ಠಿಯನ್ನು ನಿರ್ವಹಿಸುವ ಖುಷಿ ನನಗೆ ಒದಗಿ ಬಂದಿತ್ತು. ಇದು ನನಗೆ ಸಡಗರದ ಸಂಭ್ರಮವೂ ಆಗಿದ್ದಿತು. ಸಮಿತಿಯ ಅಧ್ಯಕ್ಷರ ನಿರ್ಣಯದಂತೆ ‘ಹೊಸ ಚಿಗುರು ಹಳೆ ಬೇರಿನ’ ಪಾಲಿಕೆಯ ವ್ಯಾಪ್ತಿಯ ಇಪ್ಪತ್ತು ಕವಿಗಳ ಯಾದಿಯನ್ನೂ ತಯಾರಿಸಿ ನಮ್ಮ ತಂಡದೊಂದಿಗೆ ಗೌರವ ಪೂರಕವಾಗಿ ಎಲ್ಲಾ ಕವಿಗಳ ಮನೆ ಮನೆಗೆ ತೆರಳಿ ಕವಿಗೋಷ್ಠಿಗೆ ಸಿದ್ಧತೆ ನಡೆಸಲಾಯಿತು. ಹೊಸತನದ ನಿರ್ವಹಣೆಯೊಂದಿಗೆ ಕವಿಗೋಷ್ಠಿ ನಡೆಸುವುದು ನನ್ನ ಪಾಲಿನ ಕರ್ತವ್ಯವಾಗಿತ್ತು. ಕಾರ್ಯಕ್ರಮದ ಯಶಸ್ಸಿಗಾಗಿ ವಾರಗಟ್ಟಲೆ ಖುಷಿಯಿಂದ ದುಡಿದು ಎಲ್ಲರ ಮೆಚ್ಚುಗೆಗೆ ಪಾತ್ರನಾದೆನು. ಇನ್ನೇನು ಆ ದಿನ ಆ ಕ್ಷಣ ಬಂದೇ ಬಿಟ್ಟಿತು. ಸಭಾಂಗಣ ಕನ್ನಡ ಮನಸ್ಸುಗಳಿಂದ ಮೊಳಗುತ್ತಿತ್ತು. ಕವಿಗೋಷ್ಠಿ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ರಾಜಕೀಯ ವ್ಯಕ್ತಿಯೊಬ್ಬರು ವೇದಿಕೆಗೆ ಆಗಮಿಸಿ ನನ್ನನ್ನು ಪಕ್ಕಕ್ಕೆ ತಳ್ಳಿ ನನ್ನಲ್ಲಿದ್ದ ಕವಿಗಳ ಯಾದಿ ಪಡೆದು ತಾನೇ ಕಾರ್ಯಕ್ರಮ ಪ್ರಾರಂಭಿಸಿಬಿಟ್ಟ ! ಕೊನೆಗೂ ವಾರಗಟ್ಟಲೆ ಈ ಕಾರ್ಯಕ್ರಮಕ್ಕಾಗಿ ದುಡಿದ ನನಗೆ ಒಂದು ಕವಿತೆ ಓದುವ ಅವಕಾಶವನ್ನೂ ಆತ ಕಸಿದುಕೊಂಡಿದ್ದ. ಮಾನಸಿಕವಾಗಿ ನೊಂದ ನಾನು ವೇದಿಕೆಯಿಂದ ಹಿಂದೆ… ಹಿಂದೆ…. ಹಿಂದಾಗುತ್ತಾ ಇಳಿದು ಹೋಗುತ್ತಿದ್ದರೂ ಯಾವೊಬ್ಬ ಸದಸ್ಯನೂ ನನಗೆ ಕನಿಷ್ಠ ಮಾತಾಡಿಸುವ ಸೌಜನ್ಯವನ್ನೂ ತೋರಿಸದೇ ಇರುವದು ಸಾಹಿತ್ಯದಲ್ಲಿ ರಾಜಕೀಯದ ದುರಂತವಾಗಿರುತ್ತದೆ.

ನಂಬಿದವರನ್ನು ಕನ್ನಡ-ಕನ್ನಡ ಭಾಷೆ ಎಂದೂ ಕೈಬಿಡುವುದಿಲ್ಲ. ವೈಯಕ್ತಿಕವಾಗಿ ಹೇಳಬೇಕೆಂದರೆ ಖಾಸಗಿ ಬದುಕಿನಲಿ ಪ್ರಕಾಶ ಶೆಟ್ಟಿಯಾಗಿದ್ದ ನನ್ನನ್ನು ಸಾಹಿತ್ಯ ಪರಿಸರದಲ್ಲಿ ಪ್ರಕಾಶ ಕಡಮೆಯನ್ನಾಗಿಸಿ ಕನ್ನಡ ನಾಡು ನುಡಿ ಇಲ್ಲಿಯ ತನಕ ಪೊರೆದಿದೆ ಮತ್ತು ಕಾಪಾಡಿದೆ. ಮೂವತ್ತು ವರ್ಷಗಳ ಸುಧೀರ್ಘ ಸರಕಾರೀ ಸೇವಾವಧಿಯಲ್ಲಿ ಎಂದೂ ಬೀಳಕೊಡದೇ, ಬಿದ್ದಾಗಲೆಲ್ಲಾ ಬಡಿದೆಬ್ಬಿಸಿದೆ. ಈ ಕನ್ನಡ ನನಗೆ ಎಲ್ಲವನ್ನೂ ಕೊಟ್ಟಿದೆ. ನಿಜವಾಗಿಯೂ ಮನಸ್ಸಿನ ಶಾಂತಿ ನೆಮ್ಮದಿಗೆ ಕನ್ನಡತನ ಬೇಕೇ ಬೇಕು. ಅದಕ್ಕಾಗಿಯೇ ಕನ್ನಡ ಹಬ್ಬ, ರಾಜ್ಯೋತ್ಸವ ಎಂದರೆ ನನಗೆ ಎಲ್ಲಿಲ್ಲದ ಹಿಗ್ಗು.

ಮಹಾರಾಷ್ಟ್ರದ ಅಕ್ಕಲಕೋಟೆಯ ಗಡಿನಾಡು ಕನ್ನಡ ಉತ್ಸವದ ಕವಿಗೋಷ್ಠಿ, ಗೋವಾದ ಪಣಜಿಯಲ್ಲಿ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕವಿಗೋಷ್ಠಿ, ಧಾರವಾಡದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಮತ್ತು ಅಮೇರಿಕೆಯ ನ್ಯೂಜೆರ್ಸಿಯಲ್ಲಿ ನಡೆದ ಸಾಹಿತ್ಯ ರಂಗದ ಕವಿ ಗೋಷ್ಠಿಗಳು ನಾನು ಪಾಲ್ಗೊಂಡ ಪ್ರಮುಖ ಕನ್ನಡ ಕಾರ್ಯಕ್ರಮಗಳು. ನಾನು ನಂಬಿದ ಕನ್ನಡ ನಾಡು ನುಡಿಗಳೇ ನನಗೆ ಈ ಅವಕಾಶ ಒದಗಿಸಿಕೊಟ್ಟಿದೆ ಎನ್ನಲು ನನಗೆ ಅಭಿಮಾನ ಮತ್ತು ಹೆಮ್ಮೆ ಅನಿಸುತ್ತದೆ. ಅದಕ್ಕೆ ಕನ್ನಡ ಎಂದರೆ ನನ್ನೆದೆಗೆ ಹಸಿರಿನ ಹಾಸಿನಂತೆ.

ಈಗಿನ ಐಟಿ-ಬಿಟಿ ಯುಗದಲ್ಲಿ ಕನ್ನಡ, ರಾಜಧಾನಿಯಿಂದಲೂ ದೂರಾಗುತ್ತದೆ ಎಂದೆನಿಸಿದರೂ ಅದೆಂದಿಗೂ ಸಾಧ್ಯವಿಲ್ಲ ಎಂದು ನಾವೆಲ್ಲಾ ಈಗ ಸಾಧಿಸಿ ತೋರಿಸಬೇಕಾಗಿದೆ. ಮನೆ ಮನದಲ್ಲಿ ಕನ್ನಡತನ ತುಂಬಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನೆ ಮನಗಳಲ್ಲಿ ಕನ್ನಡ ಪುಸ್ತಕಗಳು ಓಡಾಡಬೇಕಾಗಿದೆ. ಮನೆಗೊಂದು ವಾಚನಾಲಯ ಮತ್ತು ಪ್ರತೀ ವಾಚನಾಲಯದಲ್ಲಿ ಕನ್ನಡ ಪುಸ್ತಕ ಇರಲೇಬೇಕೆಂಬ ಛಲ ನಮ್ಮಲ್ಲಿರಬೇಕು. ನಾವು ಕನ್ನಡವನ್ನು ಕಟ್ಟಿ ಬೆಳೆಸಿದರೆ ಇದು ಎಂದೂ ನಮ್ಮ ಕೈ ಬಿಡಲಾರರು.

ಕಳೆದ ನಾಲ್ಕೈದು ವರ್ಷಗಳಿಂದ ನಮ್ಮ ಮನೆಯಲ್ಲೇ ‘ನಾಗಸುಧೆ ಜಗಲಿ’ಯ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕಾರಣಕ್ಕಾಗಿ ಆಗಾಗ ಕವಿಗೋಷ್ಠಿಗಳು ನಡೆಯುತ್ತಲೇ ಇರುತ್ತವೆ ; ಯುವ ಪ್ರತಿಭೆಗಳೊಂದಿಗೆ ಮಾಗಿದ ಮನಸ್ಸಿಗೂ ಸಹ. ಇದೊಂದು ಅಪೂರ್ವವಾದ ಪ್ರಯೋಗವಾಗಿದೆ. ದೂರದೂರಿನಿಂದ ಬಂದು ಕವಿತೆ ಓದುವ ಆ ಕಂಗಳಲಿ ಭವಿಷ್ಯದ ಸಾಹಿತ್ಯ ಅಡಗಿರುವುದು ನಿಜಕ್ಕೂ ಬೆರಗಿನ ಸಂಗತಿಯೆ. ಕೊರೋನಾದ ಈ ದುರಿತ ಕಾಲದಲ್ಲಿ ಈ ಪ್ರಕ್ರಿಯೆ ನಿಧಾನಗತಿಯಿಂದ ಸಾಗಿದರೂ, ಮುಂದಿನ ದಿನಗಳಲ್ಲಿ ಯುವ ಮನಸ್ಸುಗಳಿಗೆ ಕವಿತೆಗಳ ರುಚಿ ಹತ್ತಿಸುವದು ನಮ್ಮ ಕರ್ತವ್ಯ ಎಂದು ಸುನಂದಾ ಮನದಾಳದಿಂದ ಹೇಳುವುದು ಅವಳ ಕನ್ನಡ ಮತ್ತು ಕಾವ್ಯ ಪ್ರೀತಿಗೆ ಸಾಕ್ಷಿಯಾಗಿದೆ. ಅಂದಿನ ದಿನಗಳಲ್ಲಿ ಅಂಕೋಲಾದ ವಿಷ್ಣು ನಾಯ್ಕರು ಜಿಲ್ಲೆಯ ತುಂಬೆಲ್ಲಾ ಕಾವ್ಯ ಸಂಚಲನ ಮಾಡುತ್ತಿದ್ದರು. ಹೊಸ ಹೊಸ ಪ್ರತಿಭೆಗಳ ಶೋಧ ನಡೆಸಿ ಅವರಿಗೆ ವೇದಿಕೆ ಕೊಟ್ಟು ಕವಿತೆಯನ್ನು ಓದಿಸುತ್ತಿದ್ದರು. ಇದಕ್ಕಾಗಿ ನಾಗಸುಧೆಯ ಕಾರ್ಯಕ್ರಮದಲ್ಲಿ ಒಮ್ಮೊಮ್ಮೆ ಅವರ ನೆನಪಾಗುವುದು ಸಹಜವೇ.

ಎರಡು ವರ್ಷಗಳ ಹಿಂದೆ ಮೊಮ್ಮಗ ವಿಸ್ಮಯನ ಆಗಮನವನ್ನು ಸ್ವಾಗತಿಸಲು ನಾವಿಬ್ಬರೂ ಅಮೇರಿಕೆಯ ನ್ಯೂಜೆರ್ಸಿಯ ಬ್ರಿಡ್ಜ್ ವಾಟರ್ ನಲ್ಲಿ ಐದು ತಿಂಗಳ ಕಳೆದೆವು. ಇಲ್ಲಿಂದಲೇ ಹೋಗಿ ನೆಲೆನಿಂತ ಅಲ್ಲಿಯ ಕನ್ನಡಿಗರ ಕನ್ನಡ ಪ್ರೇಮ ಅಪ್ರತಿಮ. ನಾವಂದು ನ್ಯೂಜೆರ್ಸಿಯ, ಉಡುಪಿ ಕೃಷ್ಣ ಮಂದಿರದಲ್ಲಿ ನಿಂತಿದ್ದಾಗ “ಕಡಮೆ ಸರ್” ಎಂಬ ಇಂಪಾದ ಧ್ವನಿ ತೇಲಿ ಬಂದಾಗ ನನ್ನ ನಾ ನಂಬದೇ ಹೋದೆ! ತಿರುಗಿದಾಗ ದಂಪತಿಗಳಿಬ್ಬರೂ ನಮಸ್ಕರಿಸುತ್ತಾ ಮುಂದೆ ಬಂದು “ನಾವು ನಿಮ್ಮ ಫೇಸ್ಬುಕ್ ಫ್ರೆಂಡ್ಸ್” ಎಂದಾಗಲಂತೂ ರೋಮಾಂಚನ. ಆಶಿಶ್ ಭಾರಧ್ವಾಜ್ ಮತ್ತು ಸರಿತಾ ನವಲಿ ದಶಕಗಳಿಂದ ಅಲ್ಲೇ ನೆಲೆಸಿ ಮನೆ ತುಂಬಾ ಕನ್ನಡ ಪುಸ್ತಕಗಳ ಒಡನಾಡಿಯಾಗಿರುವದನ್ನು ಕಂಡು ಬೆರಗಾದೆ. ಆ ಐದು ತಿಂಗಳ ಅವಧಿಯಲ್ಲಿ ನಮ್ಮಿಬ್ಬರ ವಾಕಿಂಗ್, ವೆಂಡರ್ ವೀರ್-ಪೆಟರ್ ಸನ್-ಗ್ನೆನ್ ಆಯರ್-ಹಂಟ್ಲಿ ವೇ-ವಾಲ್ಟರ್ ಬ್ರೂಕ್ ನಿಂದ ಮತ್ತೆ ವೆಂಡರ್ ವೀರ್ ಗೆ ಸಾಂಗವಾಗಿ ಸಾಗುತಿತ್ತು ; ಕಾವ್ಯಾ & ಸಂತೋಷ್ ಹಾಕಿ ಕೊಟ್ಟ ಮಾರ್ಗಸೂಚಿಯ ಮಾರ್ಗದಲ್ಲಿ. ಆಕಸ್ಮಿಕ ಅಲ್ಲೇನಾದರೂ ಕನ್ನಡದ ಪಿಸು ನುಡಿ ಕೇಳಿದರಂತೂ ಮಳೆಯಲ್ಲಿ ಕಾಮನ ಬಿಲ್ಲು ಕಂಡಷ್ಟೇ ಖುಷಿಯಾಗುತ್ತಿತ್ತು. ಇಂತಹ ಖುಷಿಯನ್ನು ಅದೆಷ್ಟೋ ದಿನ ಅನುಭವಿಸಿ ನಾಡು ನುಡಿಗೆ ಸಪ್ತ ಸಾಗರದಾಚೆಯಿಂದಲೇ ಜಂಟಿಯಾಗಿ ನಮಿಸುತ್ತಿದ್ದೆವು ; ನಿಂತು ಬಾಯ್ತುಂಬಾ ಮಾತನಾಡುತ್ತಿದ್ದೆವು, ಎಂದೂ ಕಾಣದ ಆ ಕನ್ನಡದ ಮನಸ್ಸುಗಳೊಡನೆ.

ನ್ಯೂಯಾರ್ಕಿನ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದ ಭಾರತೀಯ ಅಧ್ಯಯನ ಕೇಂದ್ರದಲ್ಲಿ ಕನ್ನಡ ಭಾಷೆ, ಸಾಹಿತ್ಯ ಕುರಿತು “ಕನ್ನಡ ಭಾಷಾ ವೈಜ್ಞಾನಿಕ ಅಧ್ಯಯನ” ಕೇಂದ್ರವಿದೆ. ಇಲ್ಲಿ ಆಧುನಿಕ ಕನ್ನಡ, ಸಮಗ್ರ ವ್ಯಾಕರಣ, ಪದ ರಚನೆ, ಬಳಕೆ, ಕನ್ನಡಿಗರ ಇಂಗ್ಲಿಷ್ ಬಳಕೆ, ಕನ್ನಡಿಗರ ಬಹು ಭಾಷಿಕತೆ ಕುರಿತು ಪ್ರೊ. ಶ್ರೀಧರರ ಕಾರ್ಯ ನಿರ್ವಹಣೆ ನಿಜಕ್ಕೂ ಶ್ಲಾಘನೀಯ. ಅವರ ಸರಳತನ, ಗಾಂಭೀರ್ಯದ ನಗು ಮೊಗ, ಕನ್ನಡ ಪ್ರೀತಿ ಅನುಕರಣೀಯ. ಇದರಂತೆ ಬೆಂಗಳೂರಿನಲ್ಲಿ ನೆಲೆಸಿದ ಕನ್ನಡದ ಕವಯತ್ರಿ ವಿಭಾ ಪುರೋಹಿತರ ಹೊರ ದೇಶದ ಪ್ರಜೆಗಳಿಗೆ ಮತ್ತು ಹೊರ ರಾಜ್ಯದ ಕನ್ನಡೇತರರಿಗೆ ಕನ್ನಡ ಕಲಿಸುವಿಕೆಯ ಹೂ ಮನಸ್ಸೂ ಸಹ ಕನ್ನಡ ಕಟ್ಟುವಿಕೆಯ ಭಾಗವೇ ಅಲ್ಲವೇನು ?

ಇವುಗಳ ನಡುವೆ ಕಳೆದ ಎಂಟು ವರ್ಷಗಳಿಂದ ಚಳಿ-ಹಸಿರಿನ ಆ ನೆಲದಲ್ಲಿ ನೆಲೆಸಿ ತನ್ನ ಕಥೆ, ಕವಿತೆ, ನಾಟಕ, ಅಂಕಣ ಬರಹದ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವ ಮಗಳು ಕಾವ್ಯಾ ಕಡಮೆಗೂ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಶುಭಾಷಯ ಈ ಮೂಲಕ ತಿಳಿಸಿ, ‘ಕನ್ನಡಿಗರಿಗೆ ಕನ್ನಡದಿಂದಲೇ ಶಕ್ತಿ, ಕನ್ನಡ ದಿಂದಲೇ ಭುಕ್ತಿ’ ಎಂಬ ಎ. ಆರ್. ಕೃಷ್ಣ ಶಾಸ್ತ್ರಿಗಳ ನುಡಿಯನ್ನು ನೆನೆಯುವೆ.

  • ಪ್ರಕಾಶ ಕಡಮೆ

(ಜನಪರ ಕಾಳಜಿಯ ಕವಿ ಪ್ರಕಾಶ ಕಡಮೆಯವರು ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು ಸದ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಗಾಣದೆತ್ತು ಮತ್ತು ತೆಂಗಿನಮರ, ಆ ಹುಡುಗಿ, ಅಮ್ಮನಿಗೊಂದು ಕವಿತೆ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ)


ಇದನ್ನೂ ಓದಿ: ಶೆಟಗೇರಿಯಿಂದ ಇಟಲಿಯ ಪಿಯಾಸೆಂಜಾ ಮ್ಯೂಸಿಯಂನ ದಾರಿಗುಂಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಮತಾ ವಿರುದ್ಧ ಅವಹೇಳನಕಾರಿ ಹೇಳಿಕೆ; 24 ಗಂಟೆ ಪ್ರಚಾರ ಮಾಡದಂತೆ ಬಿಜೆಪಿ ಅಭ್ಯರ್ಥಿ ಅಭಿಜಿತ್...

0
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕೇಂದ್ರ ಚುನಾವಣಾ ಆಯೋಗವು ಬಿಜೆಪಿಯ ತಮ್ಲುಕ್ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಅವರ ಹೇಳಿಕೆಯನ್ನು ಖಂಡಿಸಿದ್ದು, ಮಂಗಳವಾರ ಸಂಜೆ 5 ರಿಂದ...