ಕೊರೊನಾ ಆವರಿಸುತ್ತಿದೆ. ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ವಲಸೆ ಕಾರ್ಮಿಕರು ಹಸಿವಿನಿಂದಿದ್ದಾರೆ. ಇಂತಹ ಸಮಯದಲ್ಲಿ ಗುಳೆ ಎದ್ದಿರುವ ಬಡವರ ಕಷ್ಟನಷ್ಟಗಳಿಗೆ ಸ್ಪಂದಿಸುವ ಹಾಗೂ ಆತ್ಮವಿಮರ್ಶೆಮಾಡಿಕೊಳ್ಳುವ ಸಲುವಾಗಿ ಹಿರಿಯ ರಂಗಕರ್ಮಿ, ಹೋರಾಟಗಾರ ಮತ್ತು ಚಿಂತಕರಾದ ಹೆಗ್ಗೋಡು ಪ್ರಸನ್ನರವರು ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಏಪ್ರಿಲ್ 10, 2020ರ ಶುಕ್ರವಾರದಂದ ಪವಿತ್ರ ಆರ್ಥಿಕತೆಗಾಗಿ ಹಲವಾರು ಜನರು 12 ಗಂಟೆಗಳ ರಾಷ್ಟ್ರೀಯ ಉಪವಾಸವ್ರತ ನಡೆಸಿದ್ದರು. ಅಲ್ಲಿಂದ ಪ್ರಸನ್ನರವರು ಅನಿರ್ದಿಷ್ಟ ಅವಧಿಯವರೆಗೆ ಉಪವಾಸವ್ರತವನ್ನು ಮುಂದುವರೆಸಿದ್ದು, ನಮ್ಮ ರಾಷ್ಟ್ರಪ್ರಜ್ಞೆಯನ್ನು ಮೀಟುವ ಒಂದು ಸಣ್ಣ ಪ್ರಯತ್ನ ಇದಾಗಿದೆ ಎಂದಿದ್ದಾರೆ.

ನಮ್ಮ ಸತ್ಯಾಗ್ರಹವು ಸಾರ್ವಜನಿಕ ಪ್ರತಿಭಟನೆಯಲ್ಲ. ಪ್ರಸನ್ನರವರು ಸಾವುಬರಲಿ ಎಂಬ ಹಠದಿಂದ ಉಪವಾಸ ಮಾಡುತ್ತಿಲ್ಲ. ಸಾವನ್ನು ಮುಂದೂಡುವ ಸಲುವಾಗಿ ಅವರು ಪ್ರತಿದಿನ ನೀರನ್ನು ಸೇವಿಸಲಿದ್ದಾರೆ. ಒಂದು ಹರಳು ಉಪ್ಪಿನ ಜೊತೆಗೆ ಅರ್ಧ ಚಮಚೆ ನಿಂಬೆರಸವನ್ನು ದಿನಕ್ಕೊಮ್ಮೆ ಸೇವಿಸಲಿದ್ದಾರೆ. ಉಪವಾಸದ ಮೂರನೆಯ ದಿನದಿಂದ, ರಕ್ತದ ಸಕ್ಕರೆಯ ಪ್ರಮಾಣವನ್ನು ಕನಿಷ್ಟ ಮಟ್ಟದಲ್ಲಿ ಉಳಿಸಿಕೊಳ್ಳಲೆಂದು, ದಿನಕ್ಕೆರಡು ಬಾರಿ ಜೇನು ಸೇವಿಸಲಿದ್ದಾರೆ ಎಂದು ಗ್ರಾಮಸೇವಾ ಸಂಘವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಸತ್ಯಾಗ್ರಹಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ಸಂಘವು ಕಾಲಕಾಲಕ್ಕೆ ಸಾರ್ವಜನಿಕಗೊಳಿಸಲು ಬದ್ಧವಾಗಿರುತ್ತದೆ. ವ್ರತನಡೆಯುತ್ತಿರುವ ಸ್ಥಳಕ್ಕೆ ಆಗಮಿಸುವ ಹಾಗೂ ವ್ರತನಿರತರೊಡನೆ ಮಾತಿಗಿಳಿಯುವ ಪ್ರಯತ್ನವನ್ನು ದಯಮಾಡಿ ಯಾರೂ ಮಾಡಬಾರದು ಹಾಗೂ ಜಾರಿಯಲ್ಲಿರುವ ನಿರ್ಬಂಧವನ್ನು ಯಾರೂ ಮೀರಬಾರದು. ಉಪವಾಸವ್ರತವೆಂಬುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುತ್ತದೆ, ನಾವೆಲ್ಲರೂ ಹೆಮ್ಮೆಪಡುವ ಒಂದು ಆಚರಣೆಯಾಗಿರುತ್ತದೆ. ಎಲ್ಲ ಸ್ನೇಹಿತರು, ಎಲ್ಲ ಸ್ನೇಹಪರ ಸಂಘಟನೆಗಳು ಹಾಗೂ ಎಲ್ಲ ಸ್ನೇಹಪರ ಸರಕಾರಗಳು ಉಪವಾಸವ್ರತವನ್ನು ನಿಲ್ಲಿಸುವಂತೆ ವ್ರತಾರ್ಥಿಗಳ ಮೇಲೆ ಬಲವಂತ ಹೇರಬಾರದು. ನಾವು ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಒಂದೊಮ್ಮೆ ಸರಕಾರಗಳಿಗೆ ಉಪವಾಸವ್ರತವೆಂಬುದು ಕಾನೂನು ಬಾಹಿರ ಅನ್ನಿಸಿದರೆ, ನಾವೆಲ್ಲರೂ ಬಂಧನಕ್ಕೊಳಗಾಗಲು ಸಂತೋಷದಿಂದ ಸಿದ್ಧರಿದ್ದೇವೆ ಎಂದು ಸಹ ಹೇಳಿಕೆಯಲ್ಲಿ ತಿಳಿಸಲಾಗಿದೆ.
2015ರ ಏಪ್ರಿಲ್ ತಿಂಗಳಿನಲ್ಲಿ ದೇಶದ ಹಲವಾರು ರಚನಾತ್ಮಕ ಸಂಘಟನೆಗಳು ಹಾಗೂ ಕಾರ್ಯಕರ್ತರು ಸೇರಿ ನಡೆಸಿದ ‘ಬದನವಾಳು ಸತ್ಯಾಗ್ರಹ’ದಿಂದ ಆರಂಭವಾಗಿ ಕಳೆದ ವರ್ಷ ಬೆಂಗಳೂರಿನ ಗಾಂಧಿಭವನ ಪಕ್ಕದ ವಲ್ಲಭನಿಕೇತನದ ಪವಿತ್ರ ಆರ್ಥಿಕತೆಗಾಗಿ ಉಪವಾಸದವರೆಗೂ ಪ್ರಸನ್ನರವರು ನಿರಂತರವಾಗಿ ರಚನಾತ್ಮಕ ಹೋರಾಟ ನಡೆಸಿಕೊಂಡುಬಂದಿದ್ದಾರೆ.
ಸಂಪೂರ್ಣ ಯಂತ್ರಚಾಲಿತವಾಗಿರುವ ಇಂದಿನ ಯುಗದಲ್ಲಿ ಗಾಂಧೀಜಿಯವರ ತತ್ವವನ್ನು ಜಾರಿಗೊಳಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದೇ ಪವಿತ್ರ ಆರ್ಥಿಕತೆಯ ತತ್ವ. ಯಂತ್ರಗಳ ಅಲ್ಪಪ್ರಮಾಣದ ಬಳಕೆಯನ್ನು (40% ಮೀರದಂತೆ) ಇದು ಮಾನ್ಯ ಮಾಡುತ್ತದೆ. ಆದರೆ ಯಾವುದೇ ಉತ್ಪಾದನಾ ವ್ಯವಸ್ಥೆಯಲ್ಲಿ ಕನಿಷ್ಟ 60% ಮಾನವಶ್ರಮದ ಬಳಕೆ ಇರಲೇಬೇಕು ಎಂದು ತಾಕೀತು ಮಾಡುತ್ತದೆ. ಸುಸ್ಥಿರ ಬದುಕು ಸಾಧ್ಯವಾಗಬೇಕು ಎಂಬುದು ಅವರ ಚಳವಳಿಯ ಸಾರವಾಗಿದೆ.

ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ ನಡೆಯುತ್ತಿದ್ದಾಗ ಕೇಂದ್ರ ಮಂತ್ರಿ ಡಿ.ವಿ ಸದಾನಂದಗೌಡರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿ ಸತ್ಯಾಗ್ರಹ ನಿಲ್ಲಿಸಲು ಮನವಿ ಮಾಡಿದ್ದರು. ಅದರಂತೆ ಈಗ ಕೇಂದ್ರ ಸರ್ಕಾರವು ಪವಿತ್ರ ಆರ್ಥಿಕತೆ ಕುರಿತಂತೆ ಗ್ರಾಮ ಸೇವಾ ಸಂಘದ ಜೊತೆ ಮಾತುಕತೆ ನಡೆಸುತ್ತಿದೆ. ಆದರೆ ಮಾತುಕತೆ ಫಲಪ್ರದವಾಗುತ್ತಿಲ್ಲ. ಜನತೆ ಸರಕಾರಗಳ ಮೇಲೆ ನೈತಿಕ ಒತ್ತಡ ಹೇರಿ ಅವರನ್ನು ಒಪ್ಪಿಸಬೇಕಾಗಿದೆ. ಹಾಗಾಗಿ #KaronaKuch, ಅರ್ಥಾತ್ ಏನಾದರೂ ಮಾಡು ಎಂಬ ಪ್ರಚಾರಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಗುಳೆ ಎದ್ದಿರುವ ಬಡವರ ಪರವಾಗಿ ಒಂದು ದಿನದ ರಾಷ್ಟ್ರೀಯ ಉಪವಾಸದ ನಂತರ ಅಲ್ಲಿಂದಾಚೆಗೆ, ಪವಿತ್ರ ಆರ್ಥಿಕತೆಯ ಸತ್ಯಾಗ್ರಹವು ಮಾಡು ಇಲ್ಲವೇ ಮಡಿ ಎಂಬ ಅರ್ಥದಲ್ಲಿ ತೀವ್ರಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ಗ್ರಾಮಸೇವಾ ಸಂಘವು ತಿಳಿಸಿದೆ.


