| ನಾನುಗೌರಿ ಡೆಸ್ಕ್ |
ಕೇಂದ್ರ ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಸಚಿವರಾದ ಒಡಿಸ್ಸಾದ ಪ್ರತಾಪ ಚಂದ್ರ ಸಾರಂಗಿಯವರು ತಮ್ಮ ಮೊದಲ ಸಂಸತ್ ಭಾಷಣದಲ್ಲಿ ವಂದೆ ಮಾತರಂ ಹೇಳದವರಿಗೆ ಭಾರತದಲ್ಲಿ ವಾಸಿಸುವ ಹಕ್ಕಿದೆಯೇ? ಸಂಸತ್ ದಾಳಿಯ ಆಪಾದಿತ ಅಫ್ಜಲ್ ಗುರು ಹೊಗಳುವವರಿಗೆ ಭಾರತದಲ್ಲಿ ವಾಸಿಸುವ ಹಕ್ಕಿದೆಯೇ ಎಂದು ಪ್ರಶ್ನಿಸಿದ್ದಾರೆ.
ತುಕ್ಡೆ ತುಕ್ಡೆ ಗ್ಯಾಂಗ್ ಅನ್ನು ಎಂದಿಗೂ ಭಾರತ ಸ್ವೀಕರಿಸುವುದಿಲ್ಲ ಎಂದ ಅವರು ದೇಶವು ಪ್ರಧಾನಿಯೊಂದಿಗಿದೆ ಎಂಬುದನ್ನು ಪುನರುಚ್ಚರಿಸಿದ್ದಾರೆ. ಅವರ ಈ ಭಾಷಣವನ್ನು ಮೇಜು ಕುಟ್ಟಿ ಸ್ವಾಗತಿಸಿರುವ ಬಿಜೆಪಿ ಸಂಸದರು ಅವರ ಪ್ರಶ್ನೆಗಳಿಗೆ ಇಲ್ಲ, ಸಾಧ್ಯವೇ ಇಲ್ಲ ಎಂದು ಕೂಗುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಓರಿಸ್ಸಾದ ಮೋದಿಯವರ ಮತ್ತೊಂದು ಮುಖ ತೋರಿಸದ ಮಾಧ್ಯಮಗಳು
ಕಳೆದ ವಾರ ಸಂಸತ್ ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ವಂದೆ ಮಾತರಂ ಕುರಿತು ಸಮಾಜವಾದ ಪಕ್ಷದ ಸಂಸದರಾದ ಶಫಿಕೂರ್ ರಹಮಾನ್ ಬಾರ್ಕ್ ರವರು ಇದು ಇಸ್ಲಾಂಗೆ ವಿರುದ್ಧವಾಗಿದೆ ಎಂದು ಹೇಳಿದ್ದು ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿಯೇ ಸಾರಂಗಿಯವರು ಮಾತನಾಡಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಅನ್ನು ತೀವ್ರವಾಗಿ ಟೀಕಿಸಿದ ಅವರು ಬಿಜೆಪಿ ಎಲ್ಲಾ ವರ್ಗದ ಜನರ ವಿಶ್ವಾಸವನ್ನು ಗೆದ್ದಿದೆ ಮತ್ತು ಅವರ ಪಾಲ್ಗೊಳ್ಳುವಿಕೆಯೊಂದಿಗೆ ಸರ್ಕಾರವನ್ನು ನಡೆಸಲಾಗುತ್ತಿದೆ ಬಿಜೆಪಿಯನ್ನು ಹೊಗಳಿದ್ದಾರೆ.
ಪ್ರಖರ ಹಿಂದೂತ್ವವಾದಿ ನಿಲುವಿಗೆ ಹೆಸರಾದ ಇವರ ಮೇಲೆ ಹಲವು ಆರೋಪಗಳು ಇವೆ. 2002ರ ಮಾರ್ಚ್ ನಲ್ಲಿ ಒರಿಸ್ಸಾದ ವಿಧಾನಸಭೆಯ ಮೇಲೆ ಭಜರಂಗದಳದ ಸುಮಾರು 500 ಶಸ್ತ್ರದಾರಿ ಸದಸ್ಯರು ದಾಳಿ ನಡೆಸಿದಾಗ ಅದರ ರಾಜ್ಯ ಅಧ್ಯಕ್ಷರಾಗಿದ್ದು ಇದೇ ಸಾರಂಗಿ. 1999ರ ಫೆಬ್ರವರಿಯಲ್ಲಿ ಕ್ರೈಸ್ತ ಧರ್ಮದ ಪ್ರಚಾರಕ ಗ್ರಹಾಂ ಸ್ಟೈನ್ ಅವರ ಪುಟ್ಟ ಮಕ್ಕಳು ಮತ್ತು ಒಬ್ಬ ಕ್ರೈಸ್ತ ಪಾದ್ರಿಯನ್ನು ವಾಹನಕ್ಕೆ ದೂಡಿ ಬೆಂಕಿ ಹಚ್ಚಿ ಸುಟ್ಟುಹಾಕಿದ ದಾರಾಸಿಂಗನ ಗುರು ಈ ಸಾರಂಗಿ ಎಂದು ಹೇಳಲಾಗಿದೆ.
ಸಾರಂಗಿಯವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಚುನಾವಣಾ ಅಫಿಡವಿಟ್ ನಲ್ಲಿ ತನ್ನ ಮೇಲೆ 10 ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಿಕೊಂಡಿದ್ದಾರೆ.


