ಡಿಸೆಂಬರ್ 1 ರಂದು ನಡೆಯಲಿರುವ ಹೈದರಾಬಾದ್ ಪಾಲಿಕೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿಯಾದಿಯಾಗಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಆಗಮಿಸುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡು, ಮಹರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣದಲ್ಲಿ ಉಂಟಾಗಿದ್ದ ಭಾರಿ ಪ್ರವಾಹದ ಸಂದರ್ಭದಲ್ಲಿ ಎಲ್ಲಿಯೂ ಕಾಣದ, ಅವುಗಳ ಬಗ್ಗೆ ತುಟಿಪಿಟಿಕ್ ಎನ್ನದ ಬಿಜೆಪಿ ನೇತೃತ್ವದ ಕೇಂದ್ರದ ನಾಯಕರು ಇದೀಗ ಕೇವಲ ಪಾಲಿಕೆಯೊಂದರ ಚುನಾವಣಾ ಪ್ರಚಾರಕ್ಕೆ ಸಮಯ ಹೊಂದಿಸಿದ್ದಾರೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನವೆಂಬರ್ 28 ರಂದು ಹೈದರಾಬಾದ್‌ನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದರ ಮರುದಿನವೇ ಗೃಹ ಸಚಿವ ಅಮಿತ್ ಶಾ ಸಹ ರೋಡ್ ಶೋ ನಡೆಸಲಿದ್ದಾರೆ ಎಂಬ ಮಾಹಿತಿಯಿದೆ. ನವೆಂಬರ್ 28 ರಂದು ಪ್ರಧಾನಿ ಮೋದಿ ಸಹ ಭಾರತ್ ಬಯೋಟೆಕ್ ಭೇಟಿಗಾಗಿ ಹೈದ್ರಾಬಾದ್ಗೆ ಆಗಮಿಸಲಿದ್ದು, ಅವರೂ ಸಹ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬೀಫ್ ಬಿರಿಯಾನಿ ತಿನ್ನಿ ಎಂದ ಒವೈಸಿ; ಹಂದಿಮಾಂಸದ ಬಿರಿಯಾನಿ ಆಫರ್ ನೀಡಿದ ಬಿಜೆಪಿ ನಾಯಕ!
ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗವಹಿಸಿದ್ದಾರೆ. ಬಿಜೆಪಿಯ ಮಹಿಳಾ ವಿಭಾಗದ ಅಧ್ಯಕ್ಷ ವನತಿ ಶ್ರೀನಿವಾಸನ್ ಕೂಡ ಪ್ರಚಾರದಲ್ಲಿ ತೊಡಗಿದ್ದಾರೆ. ಸಿಕಂದರಾಬಾದ್‌ನ ಲೋಕಸಭಾ ಸದಸ್ಯ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಈಗಾಗಲೇ ಬಿಜೆಪಿಗೆ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ನೆರೆ ಬಂದಾಗ ಕಾಣದಿದ್ದ ಇವರೆಲ್ಲರೂ ಈ ಮೂಲಕ ಅಧಿಕಾರ ಮಾತ್ರವೆ ತಮ್ಮ ಆದ್ಯತೆ, ಉತ್ತಮ ಆಡಳಿತವಲ್ಲ ಎಂದು ಪದೇ ಪದೇ ನಿರೂಪಿಸುತ್ತಿದ್ದಾರೆ. ನಿಜಕ್ಕೂ ಇದರ ಹಿಂದಿನ ಮರ್ಮವೇನು? ಒಂದು ಪಾಲಿಕೆಗೆ ಬಿಜೆಪಿ ಈ ರೀತಿಯ ಸಮಯ ಹೊಂದಿಸಿಕೊಳ್ಳುತ್ತಿರುವುದೇಕೆ?

ಈಗಾಗಲೆ ಚುನಾವಣೆಯ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಅದಲ್ಲದೆ ಹೈದರಾಬಾದ್‌ನಲ್ಲಿ ಹಿಡಿತವಿರುವ ಅಸಾದುದ್ದೀನ್ ಒವೈಸಿ ಅವರನ್ನು ಬಿಜೆಪಿ ಹಿಂದೂ ವಿರೋಧಿ ಎಂಬಂತೆ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಈ ಚುನಾವಣೆಯ ನಂತರ ತಮಿಳುನಾಡು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದನ್ನು ಬಳಸಿಕೊಂಡು ಬಿಜೆಪಿ ತಮ್ಮ ಮತದಾರರನ್ನು ಸೆಳೆಯುತ್ತಿದೆ ಎಂಬ ಅನುಮಾನ ಕೂಡಾ ಕಾಡುತ್ತಿದೆ.
ಇದನ್ನೂ ಓದಿ: ಒವೈಸಿಯನ್ನು ’ಜಿನ್ನಾ ಅವತಾರ’ ಎಂದು ವಿವಾದವೆಬ್ಬಿಸಿದ ಸಂಸದ ತೇಜಸ್ವಿ ಸೂರ್ಯ!
ಈ ಅನುಮಾನವನ್ನು ಗಟ್ಟಿಗೊಳಿಸುವಂತೆ ಸಂಸದ ತೇಜಸ್ವಿ ಸೂರ್ಯ, ಒವೈಸಿಯನ್ನು ’ಜಿನ್ನಾ ಅವತಾರ’ ಎಂದಿದ್ದು, ರೋಹಿಂಗ್ಯ ವಿಚಾರವನ್ನು ಮುನ್ನಲೆಗೆ ತಂದಿರುವುದು, ಒವೈಸಿಗೆ ಮತ ಹಾಕಿ ಹೈದರಾಬಾದ್‌ನಲ್ಲಿ ಗೆದ್ದರೆ ಅವರು ಭಾರತದ ಇತರ ರಾಜ್ಯಗಳ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಗೆಲ್ಲುತ್ತಾರೆಂದು ಹೇಳುತ್ತಾ ಒಂದು ವರ್ಗದಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಇವುಗಳನ್ನು ರಾಷ್ಟ್ರೀಯ ಮಾಧ್ಯಮಗಳು ಕೂಡಾ ನಿಯ್ಯತ್ತಿನಿಂದ ವರದಿ ಮಾಡುತ್ತಿದೆ. ತೆಲಂಗಾಣದ ಪಾಲಿಕೆಯೊಂದರ ಚುನಾವಣೆಯನ್ನು ರಾಷ್ಟ್ರೀಯ ಸುದ್ದಿಯನ್ನಾಗಿ ಮಾಡಿ ಮತದಾರರನ್ನು ದ್ರುವಿಕರಣ ಮಾಡುತ್ತಿದ್ದಾರೆ. ಈ ಚುನಾವಣೆಯನ್ನು ಹಿಂದೂ-ಮುಸ್ಲಿಂ ಹೋರಾಟ ಎನ್ನುವ ಮಟ್ಟಿಗೆ ಬಿಜೆಪಿ ಪ್ರಚಾರ ಮಾಡುತ್ತಿದೆ. ಹಾಗಾಗಿಯೆ ತೇಜಸ್ವಿ ಬಿಜೆಪಿಗೆ ನೀಡುವ ಮತ ಹಿಂದುತ್ವಕ್ಕೆ ನೀಡುವ ಮತ ಎಂದು ಒತ್ತಿ ಹೇಳುತ್ತಿರುವುದು.
ಹಾಗೆ ನೋಡಿದರೆ ಬಿಜೆಪಿಯು 150 ಸದಸ್ಯ ಬಲವಿರುವ ಹೈದರಾಬಾದ್ ಪಾಲಿಕೆಯ 2016 ರ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಗೆದ್ದಿತ್ತು. 2018 ರಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಪಡೆದಿತ್ತು. ಒಟ್ಟಿನಲ್ಲಿ ಬಿಜೆಪಿಯವರಿಂದ ಹಿಂದೂ ವಿರೋಧಿ ಎಂದು ಕರೆಯಲ್ಪಡುತ್ತಿರುವ ಒವೈಸಿಯನ್ನು ಜಾಸ್ತಿ ಮಾತಾಡಿಸಿ, ಹೈದರಾಬಾದ್ ಪಾಲಿಕೆಯ ನೆಪದಲ್ಲಿ ಹಿಂದೂ ಮತಗಳನ್ನು ದ್ರುವೀಕರಣ ಮಾಡುತ್ತಾ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನ ಕಡೆ ಮುಖ ಮಾಡುತ್ತಿದೆ. ಅದಕ್ಕೆಂದೆ ತಿಂಗಳ ಹಿಂದೆಯಷ್ಟೇ ನೆರೆ ಬಂದು ಮುಳುಗಿದ್ದ ಹೈದರಾಬಾದ್ ಬಗ್ಗೆ ತಲೆಕೆಡಿಸಿ ಕೊಳ್ಳದ ಬಿಜೆಪಿಯ ನಾಯಕರು ಈಗ ಆದ್ಯತೆಯ ಮೇಲೆ ಭೇಟಿ ನೀಡುತ್ತಿದ್ದಾರೆ, ಅದೂ ಯಕಶ್ಚಿತ್ ಪಾಲಿಕೆಯೊಂದರ ಚುನಾವಣೆಗೆ!
ಇದನ್ನೂ ಓದಿ: ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲೂ ಸ್ಫರ್ಧಿಸುತ್ತೇವೆ: ಅಸಾದುದ್ದಿನ್ ಒವೈಸಿ


