HomeಮುಖಪುಟIIM ಅಹಮದಾಬಾದ್‍ನ ಮೊದಲ ಹಳೆಯ ವಿದ್ಯಾರ್ಥಿ, ಮೊದಲ IIT ಪ್ರೊಫೆಸರ್ ಹಾಗೂ ಮೊದಲ ಕಾ‍ರ್ಪೊರೇಟ್ CEO ಆನಂದ್‌ ತೇಲ್ತುಂಬ್ಡೆ ಬಂಧನ ಸರಿಯೇ?

IIM ಅಹಮದಾಬಾದ್‍ನ ಮೊದಲ ಹಳೆಯ ವಿದ್ಯಾರ್ಥಿ, ಮೊದಲ IIT ಪ್ರೊಫೆಸರ್ ಹಾಗೂ ಮೊದಲ ಕಾ‍ರ್ಪೊರೇಟ್ CEO ಆನಂದ್‌ ತೇಲ್ತುಂಬ್ಡೆ ಬಂಧನ ಸರಿಯೇ?

ಇಂತಹ ಅಪರೂಪದ ಪ್ರಖ್ಯಾತ ವ್ಯಕ್ತಿಯನ್ನು ಭಾರತದಲ್ಲಿ ಸರಳುಗಳ ಹಿಂದೆ ಬೀಗ ಹಾಕಿಡಲಾಗುತ್ತಿದೆ. ಅವರ ಸೆರೆವಾಸವು ಈ ದೇಶದ ಆಡಳಿತದ ಇತಿಹಾಸದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ.

- Advertisement -

ಪ್ರೊ.ಆನಂದ್ ತೇಲ್ತುಂಬ್ಡೆಯವರು ಸುಪ್ರೀಂ ಕೋರ್ಟ್ ನಿರ್ದೇಶನದಂತೆ 2020ರ ಏಪ್ರಿಲ್ 14ರಂದು ಎನ್‍ಐಏ ಮುಂದೆ ಶರಣಾಗಿದ್ದಾರೆ. (ಅಂದು ಬಾಬಾಸಾಹೇಬ್ ಅಂಬೇಡ್ಕರರ ಜನ್ಮದಿನ ಎಂಬುದೊಂದು ದುರಂತ-ಸಂ). ಏಕೆಂದರೆ ಅವರ ಬಂಧನಪೂರ್ವ ಜಾಮೀನನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ರೀತಿ ದಬ್ಬಾಳಿಕೆಗೆ ಗುರಿಯಾಗುತ್ತಿರುವ ಐತಿಹಾಸಿಕ ಅಹಮದಾಬಾದ್‍ನ ಐಐಎಂನ ಮೊದಲ ಹಳೆಯ ವಿದ್ಯಾರ್ಥಿ, ಮೊದಲ ಐಐಟಿ ಪ್ರೊಫೆಸರ್ ಮತ್ತು ಕಾ‍ರ್ಪೊರೇಟ್ ಕಂಪನಿಯ ಮೊದಲ ಸಿಇಒ; ಎಲ್ಲಕ್ಕಿಂತ ಹೆಚ್ಚಾಗಿ ಭಾರತದ ಬಹುದೊಡ್ಡ ಚಿಂತಕರಾದ ಇವರ ಮೇಲೆ ಭಯಂಕರವಾದ ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದು ಪೋಲೀಸರಿಂದ ಶಂಕಿತ ವ್ಯಕ್ತಿಯನ್ನು ಸಂಪೂರ್ಣವಾಗಿ ರಕ್ಷಣೆಯಿಲ್ಲದಂತೆ ಮಾಡುತ್ತದೆ. ಅಷ್ಟು ಮಾತ್ರವಲ್ಲ ಇವರು ಸೆರೆವಾಸ ಅನುಭವಿಸಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುಟುಂಬದ ಮೊದಲ ಸದಸ್ಯರೂ ಆಗಲಿದ್ದಾರೆ.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ  ಬಡ ಭೂಹೀನ ಕೂಲಿಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಪ್ರೊ. ಆನಂದ್‌ ತೇಲ್ತುಂಬ್ಡೆ ಅವರು ದೇಶದ ಅತ್ಯುತ್ತಮ ವಿದ್ಯಾವಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅದ್ಭುತ ಶೈಕ್ಷಣಿಕ ಮತ್ತು ವೃತ್ತಿಜೀವನವನ್ನು ಹೊಂದಿದ್ದಾರೆ. ದೇಶದ ಅತ್ಯುನ್ನತ ಗಣ್ಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹಲವು ಕಂಪನಿಗಳಿಗೆ ನಾಯಕತ್ವ ಕೊಟ್ಟಿದ್ದಾರೆ ಮತ್ತು ಅನೇಕ ಪ್ರಶಸ್ತಿ, ಪುರಸ್ಕಾರಗಳು ಅವರನ್ನು ಹುಡುಕಿಕೊಂಡುಬಂದಿವೆ. ಅವರು ಕಾಲೇಜು ಚುನಾವಣೆಗಳಲ್ಲಿ ಸ್ಪರ್ಧಿಸಿದಾಗಲೆಲ್ಲ ಮುರಿಯಲಾಗದ ದಾಖಲೆಯ ಅಂತರದಲ್ಲಿ ಗೆದ್ದುಬಂದಿದ್ದಾರೆಂದು ವಿಎನ್‍ಐಟಿಯಲ್ಲಿರುವ ಅವರ ಕಾಲೇಜು ಸಹೋದ್ಯೋಗಿಗಳು ಹೇಳುತ್ತಾರೆ. ಅವರು ಚುನಾವಣಾ ರಾಜಕೀಯದ ಹಾದಿಯನ್ನು ಆರಿಸಿದ್ದರೆ, ಅನೇಕರು ನಿರೀಕ್ಷಿಸಿದಂತೆ, ಅವರು ಈ ದೇಶದ ಮುಂಚೂಣಿಯ ನಾಯಕರಾಗಬಹುದಿತ್ತು. ಆದರೆ ಅವರು ಆರಂಭದಿಂದಲೂ ಮುಖ್ಯವಾಹಿನಿಯ ಸಂಸದೀಯ ರಾಜಕೀಯದ ಹೊಲಸನ್ನು ಅರಿತುಕೊಂಡು ಆ ಆಯ್ಕೆಯನ್ನು ತ್ಯಜಿಸಿದರು. ಶೋಷಿತರಿಗಾಗಿ ಕೆಲಸ ಮಾಡುವ ಇನ್ನೂ ಉತ್ತಮವಾದ ಮಾರ್ಗಗಳನ್ನು ಅವರು ಆರಿಸಿಕೊಂಡರು. ಪ್ರೊ.ತೇಲ್ತುಂಬ್ಡೆಯವರು ಜೀವನಕ್ಕಾಗಿ ಹಲವು ವೃತ್ತಿಗಳಲ್ಲಿ ತೊಡಗಿಕೊಂಡಾಗ ದುರ್ಬಲ ವರ್ಗದ ಜನರಿಗೆ ಸಹಾಯ ಮಾಡುವ ಉತ್ಸಾಹವನ್ನು ಅವರು ಎಂದಿಗೂ ಬಿಟ್ಟುಕೊಡಲಿಲ್ಲ. ಅವರು ತಮ್ಮ ಜೀವನದುದ್ದಕ್ಕೂ ಮೌನವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ.

ತಾವು ಕೆಲಸ ಮಾಡುತ್ತಿದ್ದ ಭಾರತ್ ಪೆಟ್ರೋಲಿಯಂನಲ್ಲಾಗಲೀ, ಇನ್ನಿತರ ಕಡೆಗಳಲ್ಲಾಗಲೀ ಸಹೋದ್ಯೋಗಿಗಳ ನಡುವೆ ತೇಲ್ತುಂಬ್ಡೆ ಅತ್ಯಂತ ಜನಪ್ರಿಯರಾಗಿದ್ದರು- ವಿಶೇಷವಾಗಿ ಕಾರ್ಮಿಕ ವರ್ಗದಲ್ಲಿ ಇನ್ನೂ ಹೆಚ್ಚು ಜನಪ್ರಿಯರಾಗಿದ್ದರು ಎಂದು ಕಂಪೆನಿಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಹೇಳುತ್ತಾರೆ. ಹಲವು ನಿರ್ಧಾರಗಳು ಉದ್ಯೋಗಿಗಳ ವಿರುದ್ಧವಾಗಿದ್ದರೂ, ಅವರು ತೇಲ್ತುಂಬ್ಡೆಯವರಿಗಾಗಿ ಅದನ್ನು ನುಂಗಿಕೊಂಡು ಗೌರವಿಸುತ್ತಿದ್ದರಂತೆ. ಮಾನವೀಯತೆಯ ಪರವಾಗಿ ತುಡಿತವಿದ್ದ ಕಾರಣಕ್ಕೆ ತೇಲ್ತುಂಬ್ಡೆ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು.

ಆ ಸಂದರ್ಭದ ಕೆಲವು ಘಟನೆಗಳನ್ನು ಅವರು ನಮ್ಮೊಂದಿಗೆ ಕೆಲವೊಮ್ಮೆ ಹಂಚಿಕೊಂಡಿದಿತ್ತು. 1970 ರ ದಶಕದಲ್ಲಿ ಅವರು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗ ನಡೆದ ಘಟನೆ ಇದು. ಇದು ಅವರ ನಿರ್ವಹಣಾ ಕೌಶಲವನ್ನು ಮಾತ್ರವಲ್ಲದೆ ಅವರ ವ್ಯಕ್ತಿತ್ವದ ಅತ್ಯಂತ ಮಾನವೀಯ ಮುಖವನ್ನೂ ಪ್ರತಿಬಿಂಬಿಸುತ್ತದೆ. ತರಬೇತಿಯ ಅವಧಿಯಲ್ಲಿದ್ದ ಅವರಿಗೆ ಮೇಲಧಿಕಾರಿಗಳು ಪಶ್ಚಿಮ ಬಂಗಾಳದ ಬರ್ಧಮಾನ್‍ನ ಬರೌನಿ ರಿಫೈನರಿಯಲ್ಲಿ ಪ್ರಾಜೆಕ್ಟ್ ಒಂದನ್ನು ನೀಡಿದರು. ಅವು ತೀವ್ರ ಕೈಗಾರಿಕಾ ಅಶಾಂತಿಯ ದಿನಗಳು. ಕಾರ್ಮಿಕರು ಅಧಿಕಾರಿಗಳನ್ನು ಹೊಡೆಯುವುದು ತುಂಬಾ ಸಾಮಾನ್ಯವಾಗಿದ್ದು, ಅವರನ್ನು ನೇಮಿಸಿದ್ದ ಬರೌನಿ ರಿಫೈನರಿಯಲ್ಲಿ, ವ್ಯವಸ್ಥಾಪಕ ಸಿಬ್ಬಂದಿ ಕಾರ್ಮಿಕರಿಗೆ ಹೆದರಿಕೊಂಡೇ ಕಾಲ ಕಳೆಯುತ್ತಿದ್ದರು. ಅಲ್ಲಿನ ಪ್ರಾಜೆಕ್ಟ್ ನಿರ್ವಹಣೆಗೆ ಎಂತಹ ಮಾನವ ಸಿಬ್ಬಂದಿ ಬೇಕೆಂದು ತೇಲ್ತುಂಬ್ಡೆ ಅವರನ್ನು ಮೇಲಧಿಕಾರಿಗಳು ಕೇಳಿದಾಗ, ‘ಯಾವ ಕಾರ್ಮಿಕರಿಗೆ ಕನಿಷ್ಟ ಒಬ್ಬ ಅಧಿಕಾರಿಯನ್ನಾದರೂ ಹೊಡೆದಿರುವ ಹಿನ್ನೆಲೆಯಿದೆಯೋ ಹಾಗೂ ಯಾರನ್ನು ನಿರ್ವಹಿಸುವುದು ಕಂಪೆನಿಗೆ ಕಷ್ಟವಾಗಿದೆಯೋ ಅಂತಹ ಕಾರ್ಮಿಕರನ್ನು ತನಗೆ ಕೊಡುವಂತೆ’ ಅವರು ಮನವಿ ಮಾಡಿದ್ದರು.

ತೀರಾ ಹೊಸಬನಾದ ಪ್ರಶಿಕ್ಷಣಾರ್ಥಿಯಿಂದ ಇಂತಹ ಅಸಾಧಾರಣ ಕೋರಿಕೆಯನ್ನು ಕೇಳಿ ಕಂಪನಿಯ ಮುಖ್ಯಸ್ಥರು ದಿಗ್ಭ್ರಮೆಗೊಂಡರು. ಆದರೆ ಬೇರೆ ಬೇರೆ ಘಟಕಗಳಲ್ಲಿದ್ದ ಇಂತಹ 14 ಕಾರ್ಮಿಕರನ್ನು ಆರಿಸಿ ತೇಲ್ತುಂಬ್ಡೆಯವರಿಗೆ ನೀಡಿದರು. ಇವರಲ್ಲಿ ಹೆಚ್ಚಿನವರು ಯೂನಿಯನ್ ಕಾರ್ಯಕರ್ತರಾಗಿದ್ದರು ಮತ್ತು ಯಾವತ್ತೂ ಯಾವುದೇ ಕೆಲಸ ಮಾಡಿರಲಿಲ್ಲ. ಜೊತೆಗೆ ಸಿಬ್ಬಂದಿಯನ್ನು ಥಳಿಸಿದ ಇತಿಹಾಸ ಬೇರೆ. ಅಂತಹ ತಂಡವನ್ನು ಕಟ್ಟಿಕೊಂಡು ಕೆಲಸ ಆರಂಭಿಸಿದ ತೇಲ್ತುಂಬ್ಡೆಯವರು ತಮ್ಮ ನಡವಳಿಕೆಯಿಂದ ಅವರುಗಳನ್ನು ಯಾವ ರೀತಿ ಗೆದ್ದುಕೊಂಡರೆಂದರೆ, ಪ್ರಾಜೆಕ್ಟ್ ಅವಧಿಗಿಂತ ಎಷ್ಟೋ ಮೊದಲೇ ಯಶಸ್ವಿಯಾಗಿ ಪೂರ್ಣಗೊಂಡಿತು. ಹಾಗೆಯೇ ಬಹಳ ಕಡಿಮೆ ವೆಚ್ಚದಲ್ಲಿ ಕೂಡಾ! ಇವರು ಹಿಂದಿರುಗುವ ಸಮಯ ಬಂದಾಗ, ಆ ಹಿರಿಯ ಕಾರ್ಮಿಕರು ಅಕ್ಷರಶಃ ಕಣ್ಣೀರು ಹಾಕಿದರು. ಇದು ತಮ್ಮ ಜೀವನದ ಅತ್ಯುತ್ತಮ ಅವಧಿ ಎಂದು ಒಪ್ಪಿಕೊಂಡರು ಮತ್ತು  ತೇಲ್ತುಂಬ್ಡೆಯಂತಹ ಎಳೆಯವ ತಮ್ಮನ್ನು ಎತ್ತುಗಳಂತೆ ಕೆಲಸ ಮಾಡುವಂತೆ ಮಾಡಿದನಲ್ಲ ಎಂದು ಆಶ್ಚರ್ಯಪಟ್ಟರು. ಇದು ವಿ. ಶಾಂತಾರಾಮ್ ಅವರ ಕ್ಲಾಸಿಕ್ ಸಿನೆಮಾ, ‘ದೋ ಆಂಖೆ ಬಾರಾ ಹಾಥ್’ ಗಿಂತ ಕಡಿಮೆಯಾದ ಪ್ರಯೋಗವಲ್ಲ. ಇಂತಹ ಅವೆಷ್ಟೋ ಘಟನಾವಳಿಗಳು ಆನಂದ್‍ರ ಸುದೀರ್ಘ ವೃತ್ತಿಜೀವನದಲ್ಲಿ ಹೇರಳವಾಗಿ ಸಿಗುತ್ತವೆ. ಅವರೊಂದಿಗೆ ಕೆಲಸ ಮಾಡಿದ ಪ್ರತಿಯೊಬ್ಬ ವ್ಯಕ್ತಿಯೂ ಅದು ತಮ್ಮ ಜೀವನದ ಅತ್ಯುತ್ತಮ ಅವಧಿ ಎಂದು ಮೃದುವಾಗಿ ನೆನಪಿಸಿಕೊಳ್ಳುತ್ತಾರೆ.

ತಾನಿನ್ನೂ ಜೀವನದಲ್ಲಿ ಒಬ್ಬ ಕೆಟ್ಟ ವ್ಯಕ್ತಿಯನ್ನೂ ಭೇಟಿಯಾಗಿಲ್ಲ ಎಂದು ಆನಂದ್ ಯಾವಾಗಲೂ ಹೇಳುತ್ತಿದ್ದರು. ಪ್ರತಿಯೊಬ್ಬ ವ್ಯಕ್ತಿಯೊಳಗೂ ಏನಾದರೊಂದು ವೈಶಿಷ್ಟ್ಯ ಇದ್ದೇ ಇರುತ್ತದೆ ಮತ್ತು ಅದನ್ನು ಉತ್ತಮವಾಗಿ ಹೊರತೆಗೆಯುವುದು ವ್ಯವಸ್ಥಾಪಕರಿಗೆ ಬಿಟ್ಟ ವಿಚಾರವಾಗಿದೆ. ತನ್ನ ವೃತ್ತಿ ಜೀವನದ ನಾಲ್ಕು ದಶಕಗಳಲ್ಲಿ ಅವರು ನಿರ್ವಹಿಸಿದ ಹಲವಾರು ಕಾರ್ಯಯೋಜನೆಗಳಲ್ಲಿ ಪ್ರತಿಯೊಂದರಲ್ಲೂ ಹೊಸತನ್ನು ಹುಟ್ಟುಹಾಕಿದರು. ಸದಾಕಾಲ ವಿಭಿನ್ನವಾಗಿಯೇ ಚಿಂತಿಸಿ ಕಾರ್ಯಪ್ರವೃತ್ತರಾಗುತ್ತಿದ್ದರು. 1995ರಲ್ಲಿ ಅವರು ಭಾರತ್ ಪೆಟ್ರೋಲಿಯಂನ ಮಾಹಿತಿ ವ್ಯವಸ್ಥೆಗಳ ವಿಭಾಗದ ಮುಖ್ಯಸ್ಥರಾದಾಗ, ಆ ದೈತ್ಯ ನಿಗಮದ ಮರಣಶಯ್ಯೆಯಲ್ಲಿದ್ದ ಎಲೆಕ್ಟ್ರಾನಿಕ್ ದತ್ತಾಂಶ ಸಂಸ್ಕರಣೆ (ಇಡಿಪಿ) ವಿಭಾಗವನ್ನು ಕೇವಲ ಆರು ತಿಂಗಳಲ್ಲಿ ಮುಂಚೂಣಿಯ ಮಾಹಿತಿ ವ್ಯವಸ್ಥೆಗಳಲ್ಲೊಂದನ್ನಾಗಿ ಪರಿವರ್ತಿಸಿದರು. ಅಷ್ಟು ವೇಗವಾಗಿ ಅಭಿವೃದ್ಧಿ ಸಾಧಿಸಿದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಯ ದತ್ತಾಂಶ ವಿಭಾಗವನ್ನು ನೋಡಿ ಆ ದಿನಗಳ ಖಾಸಗಿ ಐಟಿ ಕಂಪನಿಗಳು ಸಹ ಅಸೂಯೆ ಪಟ್ಟವು.

ಮಾಹಿತಿ ತಂತ್ರಜ್ಞಾನದಲ್ಲಿ ದೇಶದಲ್ಲಿ ಹೊಸತಾಗಿದ್ದ ಎಲ್ಲವೂ-ವಿಸ್ತಾರವಾದ ಯಾಂತ್ರೀಕೃತ ಕಛೇರಿ, ನೆಟ್ವರ್ಕಿಂಗ್‌, ಸುಧಾರಿತ ಇ-ಮೇಲ್ ಮತ್ತು ಅಂಚೆ, ಅಂತರ್ಜಾಲ ವ್ಯವಸ್ಥೆ, ದಾಖಲೆಗಳ ನಿರ್ವಹಣಾ ವ್ಯವಸ್ಥೆ, ದತ್ತಾಂಶ ಸಂಗ್ರಹ ಮತ್ತು ಬಿಸಿನೆಸ್ ಇಂಟೆಲಿಜೆನ್ಸ್ ಸಿಸ್ಟಮ್ಸ್, ಜ್ಞಾನ ನಿರ್ವಹಣಾ ವ್ಯವಸ್ಥೆ ಮತ್ತು ಎಸ್‍ಎಪಿ ಅನುಷ್ಠಾನ-ಇವೆಲ್ಲವೂ ಅದ್ಭುತವಾದ ರೀತಿಯಲ್ಲಿಡುತ್ತಿದ್ದರು ಮತ್ತು ಬಹುತೇಕ ಪೂಜಿಸುತ್ತಿದ್ದರು. ಆದರೆ ಅವರ ಹಿರಿಯರಿಗೆ ಅವರೊಂದಿಗೆ ಕಸಿವಿಸಿಯೆನಿಸುತ್ತಿತ್ತುಲ್ಲಿ ಆ ದಿನಗಳಲ್ಲಿ ಭಾರತ್ ಪೆಟ್ರೋಲಿಯಂನಲ್ಲಿ ಬೆಳವಣಿಗೆ ಕಂಡವು. ಅವರಿಗಿಂತ ಕಿರಿಯರು ಅವರನ್ನು ಆರಾಧಿಸುತ್ತಿದ್ದರು. ಏಕೆಂದರೆ ಅವರನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಅವರು ತಮ್ಮ ವೃತ್ತಿಯಲ್ಲಿ ಆಗಬೇಕಾದಷ್ಟು ವೇಗದಲ್ಲಿ ಪ್ರಗತಿ ಕಾಣಲಾಗಲಿಲ್ಲ. ಆದರೆ ಅವರು ಅತ್ಯುನ್ನತ ಸ್ಥಾನವನ್ನು ತಲುಪುವುದನ್ನು ಯಾರೂ ತಡೆಯಲು ಸಾಧ್ಯವಾಗಲಿಲ್ಲ. ಅವರು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದರು ಮತ್ತು ಪೆಟ್ರೋನೆಟ್ ಇಂಡಿಯಾ ಲಿಮಿಟೆಟ್‍ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಆಗಿ ನಿವೃತ್ತರಾದರು.

ನಿವೃತ್ತಿಯ ನಂತರ, ಖರಗ್‍ಪುರದ ಐಐಟಿಯಿಂದ ಅದರ ವ್ಯವಹಾರ ನಿರ್ವಹಣಾ ವಿಭಾಗಕ್ಕೆ ಸೇರಲು ಅವರನ್ನು ಆಹ್ವಾನಿಸಲಾಯಿತು. ಅಲ್ಲಿ ಅವರು ಹಲವು ವರ್ಷಗಳವರೆಗೆ ಕಲಿಸಿದರು. ನಂತರ ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅವರನ್ನು ಆಹ್ವಾನಿಸಿತು. ಅದು ಬಿಗ್ ಡಾಟಾ ಅನಾಲಿಟಿಕ್ಸ್‍ನಲ್ಲಿ ಹೊಸ ಪ್ರೊಗ್ರಾಂನ್ನು ಪ್ರಾರಂಭಿಸಲು ಕೇಳಿಕೊಂಡಿತು. ಅವರು ವಿನೂತನವಾದ ಪ್ರೋಗ್ರಾಂನ್ನು ವಿನ್ಯಾಸಗೊಳಿಸಿದರು ಮತ್ತು ಇದನ್ನು ಭಾರತದ ಅಂತಹ ಮೊದಲ ಪ್ರೋಗ್ರಾಂ ಆಗಿ ಯಶಸ್ವಿಯಾಗಿ ಜಾರಿಗೆ ತಂದರು. ಇದಕ್ಕಾಗಿ ಎಐಸಿಟಿಇ ಹೊಸ ನಾಮಕರಣವನ್ನು ಕಂಡುಹಿಡಿಯಬೇಕಾಯಿತು. ಪ್ರೊಗ್ರಾಂ ತನ್ನ ಮೊದಲ ಅವಧಿಯನ್ನಿನ್ನೂ ದಾಟುವ ಮೊದಲೇ ಅದು ದೇಶದ ಅಗ್ರ ಹತ್ತು ವಿಶ್ಲೇಷಣಾ ಪ್ರೋಗ್ರಾಂಗಳಲ್ಲಿ ಸ್ಥಾನ ಪಡೆಯಿತು ಮತ್ತು ಒಂದು ಬ್ಯಾಚ್ ಸಹ ಪಾಸ್‍ಔಟ್ ಆಗುವ ಮೊದಲೇ ಅದರ ಶಕ್ತಿಯನ್ನು ದ್ವಿಗುಣಗೊಳಿಸಲಾಯಿತು.

ಬರಹಗಾರ, ನಿರೂಪಕ, ವಿಶ್ಲೇಷಕ, ಸಾರ್ವಜನಿಕ ಬುದ್ಧಿಜೀವಿ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತನಾಗಿ ತುಳಿತಕ್ಕೊಳಗಾದ ಜನತೆಯ ಜೊತೆಯಲ್ಲಿ ಸದಾ ಸ್ಥಿರವಾಗಿ ನಿಂತಿದ್ದವರು ಪ್ರೊ.ತೇಲ್ತುಂಬ್ಡೆ. ಅದೇ ಸಮಯದಲ್ಲಿ ಅಸಾಮಾನ್ಯವಾದ ವೃತ್ತಿಜೀವನವನ್ನೂ ಹೊಂದಿದ್ದರು. ತನ್ನ ವೃತ್ತಿಪರ ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನಿರ್ವಹಿಸುತ್ತಲೇ, ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ತನ್ನ ಶಕ್ತಿಯನ್ನು ವಿನಿಯೋಗಿಸಲು ಅವರು ಯಾವಾಗಲೂ ಸಮಯವನ್ನು ಕಂಡುಕೊಂಡರು. ಅವರು ಸಮಕಾಲೀನ ವಿಷಯಗಳ ಬಗ್ಗೆ ನಿರಂತರವಾಗಿ ಬರೆದು ಸಾರ್ವಜನಿಕ ಬುದ್ಧಿಜೀವಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡರು.

1990ರ ದಶಕದಿಂದ 2000ದ ಆರಂಭದವರೆಗೆ ಅಸ್ತಿತ್ವದಲ್ಲಿದ್ದ ಮಹಾರಾಷ್ಟ್ರದ ಬುದ್ಧಿಜೀವಿಗಳ ಪ್ರತಿಷ್ಠಿತ ವೇದಿಕೆಯಾದ ವಿಚರ್ವೇದ ಸಮ್ಮೇಲನ್‍ದ ಕೊನೆಯ ಸಮಾವೇಶದ ಅಧ್ಯಕ್ಷತೆ ವಹಿಸಲು ಅವರನ್ನು ಆಯ್ಕೆ ಮಾಡಲಾಯಿತು. ಕಾ‍ರ್ಪೊರೇಟ್ ಜಗತ್ತಿನಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸುವಾಗಲೇ, ಮಹಾರಾಷ್ಟ್ರದ ಕಮಿಟಿ ಫಾರ್ ದ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್ (ಸಿಪಿಡಿಆರ್)ದ ವಿವಿಧ ಸತ್ಯಶೋಧನೆಗಳಲ್ಲಿ ಭಾಗವಹಿಸುತ್ತಿದ್ದರು. ದೇಶದಾದ್ಯಂತ ಅನ್ಯಾಯದ ವಿರುದ್ಧ ಸಾಧ್ಯವಿರುವ ಎಲ್ಲ ಪ್ರತಿಭಟನೆಗಳಲ್ಲಿ ಅವರು ಭಾಗವಹಿಸುತ್ತಿದ್ದರು. ಐಐಟಿ ಖರಗ್‍ಪುರದ ಪ್ರಾಧ್ಯಾಪಕರಾಗಿರುವಾಗಲೇ ಮತ್ತೊಂದೆಡೆ, ತಮಿಳುನಾಡಿನ ಪರಮಕುಡಿಯಲ್ಲಿ ದಲಿತರ ಹತ್ಯೆಯ ವಿರುದ್ಧ ಪ್ರತಿಭಟನೆ ನಡೆಸಲು ಮತ್ತು ತೆಲಂಗಾಣದ ಮಹಬೂಬ್‍ನಗರ ಜಿಲ್ಲೆಯ ಪಾತಪಲ್ಲಿಯ ದಲಿತರ ಆಂದೋಲನವನ್ನು ಮುನ್ನಡೆಸಲು ಅವರು ಸಿದ್ಧರಿರುತ್ತಿದ್ದರು. ಈ ತಮ್ಮ ಅನುಭವಗಳನ್ನೇ ಸೈದ್ಧಾಂತೀಕರಿಸಿ ಅವರು ಲೇಖನಗಳು ಮತ್ತು ಪುಸ್ತಕಗಳ ರೂಪದಲ್ಲಿ ಜನರ ಮುಂದಿಡುತ್ತಿದ್ದರು. ಆದ್ದರಿಂದಲೇ ಅವರ ಬರಹಗಳು ಸುಲಭವಾಗಿ ಯಾವುದೇ ವರ್ಗೀಕರಣದ ಕೆಳಗೆ ಹಾಕಲು ಬರದಂಥ ವಿಶಿಷ್ಟವಾದ ಸ್ವಾದವನ್ನು ಹೊಂದಿರುತ್ತಿದ್ದವು.

ಅವರ ಬರಹಗಳು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಿದ್ದವು

ಚಿಂತನೆ ಮತ್ತು ಆಚರಣೆ ಎರಡೂ ಹಂತಗಳಲ್ಲಿ; ಮತ್ತು ಅವರು ಅವೆರಡರಲ್ಲೂ ತೀವ್ರವಾಗಿ ಸ್ವತಂತ್ರ ಸ್ವಭಾವದವರಾಗಿದ್ದರು! ಅವರು 28 ಪುಸ್ತಕಗಳನ್ನು ಬರೆದಿದ್ದಾರೆ; ವಿಮರ್ಷಾತ್ಮಕ ಬರಹಗಳು, ಹಲವಾರು ಲೇಖನಗಳು, ಸತ್ಯಶೋಧನಾ ವರದಿಗಳನ್ನು ಪ್ರಕಟಿಸಿದರು; ಹಲವಾರು ಉಪನ್ಯಾಸಗಳನ್ನು ನೀಡಿದರು. ಇವ್ಯಾವುವೂ ಅವರ ಔಪಚಾರಿಕ ಶಿಕ್ಷಣದ ವಿಷಯಗಳಲ್ಲ. ಅವುಗಳಲ್ಲಿ ಹೆಚ್ಚಿನವು ದೇಶದಾದ್ಯಂತದ ಕಾರ್ಯಕರ್ತರ ವಲಯಗಳಿಂದ ಸ್ಥಳೀಯ ಭಾಷೆಗಳಲ್ಲಿ ಅನುವಾದಗೊಂಡಿವೆ. ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಅಥವಾ ಮಾನವಶಾಸ್ತ್ರದಂತಹ ವಿಷಯಗಳ ಅಧ್ಯಯನಕಾರರಿಗೆ ಇವೆಲ್ಲವುಗಳ ನಡುವಿನ ಕೂಡುರೇಖೆಗಳಂತಹ ಇವರ ಬರಹಗಳು ಮಾದರಿಯಾಗಿರುತ್ತವೆ; ಕೆಲವೊಮ್ಮೆ ಆಯಾ ವಿಭಾಗಗಳ ಪ್ರಾಧ್ಯಾಪಕರಿಗೂ ಕೂಡಾ ಅದ್ಭುತವೆನಿಸುವಂತಿರುತ್ತವೆ!

ಒಂದೆಡೆ ಪ್ರಸ್ತುತ ಸರ್ಕಾರವು ಏಲ್ಗಾರ್ ಪರಿಷತ್ ಪ್ರಕರಣದಲ್ಲಿ ಭೀಕರ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ಯ (ಯುಎಪಿಎ) ಅಡಿಯಲ್ಲಿ ಅವರನ್ನು ಆರೋಪಿತರನ್ನಾಗಿ ಮಾಡಿದೆ. ಮತ್ತೊಂದೆಡೆ ಪ್ರಭುತ್ವದ ಈ ಕ್ರಮಕ್ಕೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿವೆಯೇನೋ ಎಂಬಂತೆ ಅವರ ಸಂಸ್ಥೆಗಳು ಅವರನ್ನು ಇನ್ನೂ ಉನ್ನತ ಸ್ಥಾನಗಳಿಗೊಯ್ದವು ಮತ್ತು ಸಾರ್ವಜನಿಕರು ಮತ್ತು ಸಂಸ್ಥೆಗಳು ಅವರಿಗೆ ಗೌರವ ಸಮರ್ಪಿಸುವುದನ್ನು ಮುಂದುವರೆಸಿದರು! ಉದಾಹರಣೆಗೆ, ಅವರ ಸಂಸ್ಥೆ, ಗೋವಾ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಈ ಎಲ್ಲ ಆರೋಪಗಳ ನಂತರವೂ ಅವರನ್ನು ತನ್ನ ಆಡಳಿತ ಮಂಡಳಿಗೆ ತೆಗೆದುಕೊಂಡಿತು. ಸಾರ್ವಜನಿಕ ಸಂಸ್ಥೆಗಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಿದ್ದವು. ಕಳೆದ ವರ್ಷ ಬೆಂಗಳೂರು ಮೂಲದ ಅಂಬೇಡ್ಕರೈಟ್ ಸಂಸ್ಥೆಯೊಂದು ತನ್ನ ಅತ್ಯುನ್ನತ ಮನ್ನಣೆ ‘ಬೋಧಿಸತ್ವ ಪ್ರಶಸ್ತಿ’ ನೀಡಿ ಗೌರವಿಸಿತು. ಕೇರಳ ಮೂಲದ ಪ್ರೊ.ಅರವಿಂದಕ್ಷನ್ ಸ್ಮಾರಕ ಟ್ರಸ್ಟ್, ತನ್ನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಯನ್ನು ನೀಡಿತು. ಬಹುಶಃ ಅವರು ಭಾರತದ ಸಮಾಜದ ಎಲ್ಲಾ ವರ್ಗಗಳಲ್ಲಿ ಅಭಿಮಾನವನ್ನು ಸಂಪಾದಿಸಿರುವ ಏಕೈಕ ವ್ಯಕ್ತಿಯಾಗಿರಬಹುದು.

ಇಂತಹ ಅಪರೂಪದ ಪ್ರಖ್ಯಾತ ವ್ಯಕ್ತಿಯನ್ನು ಭಾರತದಲ್ಲಿ ಸರಳುಗಳ ಹಿಂದೆ ಬೀಗ ಹಾಕಿಡಲಾಗುತ್ತಿದೆ. ಅವರ ಸೆರೆವಾಸವು ಈ ದೇಶದ ಆಡಳಿತದ ಇತಿಹಾಸದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ.

•     ಅನಿರ್ಬನ್ ಗೋಸ್ವಾಮಿ ಮತ್ತು ಅನುಪಮ್ ಬ್ಯಾನರ್ಜಿ

(ಇವರು ಖರಗ್‍ಪುರದ ಐಐಟಿಯ ಹಳೆಯ ವಿದ್ಯಾರ್ಥಿಗಳಾಗಿದ್ದು, ಅವರು ಐಐಟಿಯಲ್ಲಿದ್ದಾಗ ಪ್ರೊ.ತೇಲ್ತುಂಬ್ಡೆ ಅವರೊಂದಿಗಿನ ವೈಯಕ್ತಿಕ ಸಂಪರ್ಕ ಮತ್ತು ಅವರಿಗೆ ಪರಿಚಿತರಾಗಿದ್ದ ಇನ್ನೂ ಅನೇಕರು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಬರಹವನ್ನು ಸಿದ್ಧಪಡಿಸಿದ್ದಾರೆ.)

ಕನ್ನಡಕ್ಕೆ: ಮಲ್ಲಿಗೆ ಸಿರಿಮನೆ


ಇದನ್ನೂ ಓದಿ: ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾದ ಹೋರಾಟಗಾರರಾದ ಆನಂದ್ ತೇಲ್ತುಂಬ್ಡೆ ಹಾಗೂ ಗೌತಮ್ ನವಲಖ 

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಮಹಿಳೆಯರಿಗೆ ಕಾಂಗ್ರೆಸ್‌ ಆದ್ಯತೆ; ಉಳಿದ ಪಕ್ಷಗಳ ಕಥೆಯೇನು..?

0
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ, ಕಾಂಗ್ರೆಸ್ ಪಕ್ಷಗಳ ನಡುವಿನ ಸ್ಪರ್ಧೆಯಾಗಿದೆ. ಮಾಯಾವತಿಯವರ ಬಿಎಸ್‌ಪಿ ಪಕ್ಷ ಈ ಬಾರಿ ಇದ್ದು ಇಲ್ಲದಂತಾಗಿದೆ. ಬಿಜೆಪಿಯ...
Wordpress Social Share Plugin powered by Ultimatelysocial