ಪುಣೇರಿ ಪಲ್ಟನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ವಿರುದ್ಧ ಕಡೆ ನಿಮಿಷಗಳಲ್ಲಿ ಕೂದಲೆಳೆ ಅಂತರದಲ್ಲಿ ಸೋಲು ಕಂಡಿದ್ದ ಬೆಂಗಳೂರು ಬುಲ್ಸ್ ತಂಡ ದಬಾಂಗ್ ಡೆಲ್ಲಿ ತಂಡದ ವಿರುದ್ಧ ರೋಚಕ ಗೆಲುವು ಸಾಧಿಸುವ (52-49) ಮೂಲಕ ಮತ್ತೆ ಜಯದ ಹಾದಿಗೆ ಮರಳಿದೆ. ಆ ಮೂಲಕ ಪ್ರೇ ಆಫ್ ಹಂತಕ್ಕೆ ಪ್ರವೇಶ ಪಡೆಯಲು ಇನ್ನು ಎರಡೇ ಹೆಜ್ಜೆ ಬಾಕಿಯಿದೆ.
ಭಾನುವಾರ ರಾತ್ರಿ ಹೈದರಾಬಾದ್‌ನ ಗಚಿಬೋಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೆ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ದಬಾಂಗ್ ಡೆಲ್ಲಿ ತಂಡವನ್ನು ಮೂರು ಅಂಕಗಳಿಂದ ಬಗ್ಗು ಬಡಿಯಿತು. ಒಂದು ಹಂತದಲ್ಲಿ ದೆಹಲಿಗಿಂತ 13 ಅಂಕ ಹಿಂದಿದ್ದ ಬೆಂಗಳೂರು ತಂಡ ದ್ವಿತಿಯಾರ್ಧದಲ್ಲಿ ಭರತ್ ನೀಡಿದ ಭರ್ಜರಿ ಪ್ರದರ್ಶನ ಬಲದಿಂದ ಪ್ರಬಲ ಕಮ್ ಬ್ಯಾಕ್ ಮಾಡಿ ಜಯ ಒಲಿಸಿಕೊಂಡಿತು. 24 ರೈಡ್‌ಗಳಿಂದ 23 ರೈಡ್ ಗಳಿಸಿದ ಭರತ್ ಹೂಡಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅಲ್ಲದೆ ಟೂರ್ನಿಯಲ್ಲಿ ಅತ್ಯಧಿಕ ರೈಡ್ ಪಾಯಿಂಟ್ ಗಳಿಸಿದ (219) ಮೊದಲಿಗರಾದರು.
ಪಂದ್ಯದ ಗತಿ ಬದಲಿಸಿದ ವಿಕಾಸ್ ಖಂಡೋಲ
ಬೆಂಗಳೂರು ಬುಲ್ಸ್ ತಂಡದ ಮುಖ್ಯ ರೈಡರ್ ವಿಕಾಸ್ ಖಂಡೋಲ ಸಾಧರಣ ಪ್ರದರ್ಶನಕ್ಕೆ ಸೀಮಿತಗೊಂಡಿದ್ದರು. ಆದರೆ ದಬಾಂಗ್ ಡೆಲ್ಲಿ ವಿರುದ್ಧ ಅವರು ಮಾಡಿದ ಸೂಪರ್ ರೈಡ್ (ಒಂದೇ ರೈಡ್‌ನಲ್ಲಿ 3 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸುವುದು) ಪಂದ್ಯದ ಗತಿಯನ್ನೆ ಬದಲಿಸಿತು. ಪಂದ್ಯದ ಆರಂಭದಿಂದಲೂ ಪಾರಮ್ಯ ಮೆರೆದಿದ್ದ ದೆಹಲಿ ತಂಡ ಮೊದಲಾರ್ಧ ಮುಗಿಯುವ ಹೊತ್ತಿಗೆ 12 ಪಾಯಿಂಟ್ ಲೀಡ್ ಪಡೆದಿತ್ತು. ಆದರೆ ಮೊದಲಾರ್ಧದ ಕೊನೆಯ ರೈಡ್ ಮಾಡಿದ ವಿಕಾಸ್ ಒಂದೇ ರೈಡ್‌ನಲ್ಲಿ ಮೂರು ಜನರನ್ನು ಔಟ್ ಮಾಡುವ ಮೂಲಕ ಅಂತರವನ್ನು ಕೇವಲ 9 ಪಾಯಿಂಟ್‌ಗೆ ಇಳಿಸಿದರೂ ಮಾತ್ರವಲ್ಲ ಮೂರು ಜನರನ್ನು ಕೋರ್ಟ್‌ನಿಂದ ಹೊರಹಾಕಿದರು. ಇದು ಪಂದ್ಯದ ಗತಿಯನ್ನೇ ಬದಲಿಸಿತು. ವಿಕಾಸ್ ಖಂಡೋಲ 14 ರೈಡ್‌ಗಳಿಂದ 10 ಪಾಯಿಂಟ್ ಗಳಿಸಿ ಈ ಆವೃತ್ತಿಯಲ್ಲಿ ತಮ್ಮ 3ನೇ ಸೂಪರ್ ಟೆನ್ ಗಳಿಸಿದರು.
ದ್ವಿತಿಯಾರ್ಧದಲ್ಲಿ ಗೂಳಿಯಂತೆ ಆರ್ಭಟಿಸಿದ ಭರತ್
ಮೊದಲಾರ್ಧದಲ್ಲಿ ಪದೇ ಪದೇ ಔಟ್ ಆಗಿ 10 ನಿಮಿಷಕ್ಕಿಂತ ಹೆಚ್ಚು ಕಾಲ ಕೋರ್ಟ್‌ನಿಂದ ಹೊರಗುಳಿದಿದ್ದ ಭರತ್ ದ್ವಿತಿಯಾರ್ಧದಲ್ಲಿ ಮಿಂಚಿದರು. ತಮ್ಮ ರನ್ನಿಂಗ್ ಹ್ಯಾಂಡ್ ಟಚ್ ಸ್ಕಿಲ್ ಮೂಲಕ ದ್ವೀತಿಯಾರ್ಧದ ಕೇವಲ 2 ನಿಮಿಷದಲ್ಲಿ ದೆಹಲಿಯನ್ನು ಆಲೌಟ್ ಮಾಡಿದರು. ಹಾಗಾಗಿ ಅಂತರ ಕೇವಲ 5 ಅಂಕಕ್ಕೆ ಇಳಿಯಿತು.
ಆದರೆ ಮತ್ತೊಂದು ಕಡೆ ಬೆಂಗಳೂರು ಬುಲ್ಸ್ ಡಿಫೆಂಡರ್‌ಗಳು ಕೈಚೆಲ್ಲಿದ ಕಾರಣ ಮತ್ತೊಮ್ಮೆ ಬೆಂಗಳೂರು ಆಲೌಟ್ ಆಗಬೇಕಾಯಿತು. ಆಗ ದೆಹಲಿ 36 ಪಾಯಿಂಟ್ ಇದ್ದರೆ ಬೆಂಗಳೂರು ಕೇವಲ 25 ಪಾಯಿಂಟ್ ಇತ್ತು. ಅಂತರ ಮತ್ತೆ 11 ಪಾಯಿಂಟ್‌ಗಳಿಗೇರಿತ್ತು. ಆದರೆ ಕೊನೆಯ ಹತ್ತು ನಿಮಿಷ ಇರುವಂತೆ ಭರತ್ ಸಿಡಿದೆದ್ದರು. ಕೇವಲ 5-10 ಸೆಕೆಂಡ್‌ಗಳ ರೈಡ್‌ಗಳಲ್ಲಿಯೇ ಪಾಯಿಂಟ್ ಗಳಿಸಿದರು. ಕಡೆಯ 4 ನಿಮಿಷದ ಆಟ ಇರುವಂತೆ ಡೆಲ್ಲಿ ಮತ್ತೆ ಆಲೌಟ್ ಆಯ್ತು. ಆದರೂ ದೆಹಲಿ ಮೂರು ಪಾಯಿಂಟ್‌ಗಳಿಂದ ಮುಂದಿತ್ತು. ಆದರೆ ಭರತ್ ಛಲಬಿಡದೆ ಆಡಿ ಗೂಳಿಯಂತೆ ಆರ್ಭಟಿಸಿದರು. ಸತತ ಎರಡು ಮಲ್ಟಿ ಪಾಯಿಟ್ ರೈಡ್ ಮಾಡಿ ದಬಾಂಗ್ ಡೆಲ್ಲಿ ಕೋರ್ಟ್ ಖಾಲಿ ಮಾಡಿಸಿದರು. ಕೊನೆಯ ಡು ಆರ್ ಡೈ ನಲ್ಲಿಯೂ ಒಂದು ಪಾಯಿಂಟ್ ಹೆಕ್ಕಿ ಮೂರು ಪಾಯಿಂಟ್‌ಗಳ ಗೆಲುವಿನ ಸಂಭ್ರಮ ಆಚರಿಸಿದರು.

23 ರೈಡ್ ಪಾಯಿಂಟ್ ಗಳಿಸಿದ ಭರತ್ ಒಂದೇ ಪಂದ್ಯದಲ್ಲಿ ಅತಿ ಹೆಚ್ಚು ಪಾಯಿಂಟ್ ಗಳಿಸಿದ ತಮ್ಮ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಹಿಂದಿನ ದಬಾಂಗ್ ಡೆಲ್ಲಿ ವಿರುದ್ಧದ ಪಂದ್ಯದಲ್ಲಿಯೂ ಅವರು 20 ಪಾಯಿಂಟ್ ಗಳಿಸಿದ್ದರು.
ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಬೆಂಗಳೂರು
ಇದುವರೆಗೆ ಆಡಿದ 18 ಪಂದ್ಯಗಳಲ್ಲಿ 11 ಗೆಲುವು, 6 ಸೋಲು ಮತ್ತು ಒಂದು ಟೈನೊಂದಿಗೆ 63 ಅಂಕ ಗಳಿಸಿರುವ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನೊಂದಿಗೆ ಪ್ಲೇ ಆಫ್ ಕಡೆ ಮುಖ ಮಾಡಿದೆ. ಪುಣೇರಿ ಪಲ್ಟಾನ್ ತಂಡ 69 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬೆಂಗಳೂರು ತಂಡ ಎರಡನೇ ಸ್ಥಾನದಲ್ಲಿ ಅಥವಾ ಮೊದಲ ಸ್ಥಾನದಲ್ಲಿ ಉಳಿದುಕೊಂಡರೆ ಮಾತ್ರ ಅದು ನೇರವಾಗಿ ಸೆಮಿಫೈನಲ್ ತಲುಪಲು ಸಾಧ್ಯ. ಆದರೆ ಕೇವಲ 17 ಪಂದ್ಯಗಳಲ್ಲಿ 59 ಅಂಕ ಗಳಿಸಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ ಎರಡನೇ ಸ್ಥಾನಕ್ಕೆ ಸವಾಲೊಡ್ಡುತ್ತಿದೆ.

ಈ ಆವೃತ್ತಿಯಲ್ಲಿ ಅತಿ ಉತ್ತಮ ಪ್ರದರ್ಶನ ನೀಡಿರುವ ಈ ಎರಡು ತಂಡಗಳು ಮುಂದಿನ ಬುಧವಾರ ಪರಸ್ಪರ ಕಣಕ್ಕಿಳಿಯುತ್ತಿವೆ. ಅಲ್ಲಿ ಗೆದ್ದವರು ಎರಡನೇ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆಯಿದೆ.
ಬೆಂಗಳೂರು ತಂಡಕ್ಕೆ ಲೀಗ್ ಹಂತದಲ್ಲಿ ಇನ್ನು 4 ಪಂದ್ಯಗಳು ಬಾಕಿ ಇವೆ. ಈ ನಾಲ್ಕರಲ್ಲಿ ಎರಡು ಪಂದ್ಯ ಗೆದ್ದರೆ ಅದು ಸುಲಭವಾಗಿ ಪ್ಲೇ ಆಫ್ ತಲುಪಲಿದೆ. ಆದರೆ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನದೊಳಗಿರುವುದು ಉತ್ತಮ. ಅದಕ್ಕಾಗಿ ಅದು ಕನಿಷ್ಟ 3 ಅಥವಾ ನಾಲ್ಕೂ ಪಂದ್ಯಗಳನ್ನು ಗೆಲ್ಲಬೇಕಿದೆ. ಏಕೆಂದರೆ ಪ್ಲೇ ಆಫ್‌ಗೆ 6 ತಂಡಗಳು ಅರ್ಹತೆ ಪಡೆದರೆ, ಅವುಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ 2 ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ. ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯಗಳಲ್ಲಿ ಸೆಣಸಿ ಗೆದ್ದ 2 ತಂಡಗಳು ಸೆಮಿಫೈನಲ್ ತಲುಪಬೇಕಿದೆ.
ಪ್ಲೇ ಆಫ್ ಹೀಗಿರಲಿದೆ
ಒಟ್ಟು 12 ತಂಡಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ 6 ರೊಳಗಿನ ತಂಡಗಳು ಪ್ಲೇ ಆಫ್ ಪ್ರವೇಶಿಸಿದರೆ ಉಳಿದ 6 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ.
ಡಿಸೆಂಬರ್ 13ರಂದು 2 ಎಲಿಮಿನೇಟರ್ ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೂರು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸಿದರೆ ಮತ್ತೊಂದು ಪಂದ್ಯದಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸುತ್ತವೆ. ಗೆದ್ದವರು ಸೆಮಿಫೈನಲ್ ಪ್ರವೇಶಿಸುತ್ತಾರೆ. ಸೋತವರು ಮನೆಗೆ ನಡೆಯುತ್ತಾರೆ.
ಡಿಸೆಂಬರ್ 15ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆದರೆ, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.
ಇದುವರೆಗಿನ ಪ್ರೊ ಕಬಡ್ಡಿ ಚಾಂಪಿಯನ್‌ಗಳು
ಮೊದಲ ಆವೃತ್ತಿ 2014: ಜೈಪುರ್ ಪಿಂಕ್ ಪ್ಯಾಂಥರ್ಸ್
ಎರಡನೇ ಆವೃತ್ತಿ 2014: ಯು ಮುಂಬಾ
ಮೂರನೇ ಆವೃತ್ತಿ 2015: ಪಟ್ನಾ ಪೈರೇಟ್ಸ್
ನಾಲ್ಕನೇ ಆವೃತ್ತಿ 2016: ಪಟ್ನಾ ಪೈರೇಟ್ಸ್
ಐದನೇ ಆವೃತ್ತಿ 2017: ಪಟ್ನಾ ಪೈರೇಟ್ಸ್
ಆರನೇ ಆವೃತ್ತಿ 2018: ಬೆಂಗಳೂರು ಬುಲ್ಸ್
ಏಳನೇ ಆವೃತ್ತಿ 2019: ಬೆಂಗಾಲ್ ವಾರಿಯರ್ಸ್
ಎಂಟನೇ ಆವೃತ್ತಿ 2021: ದಬಾಂಗ್ ಡೆಲ್ಲಿ
ಇದನ್ನೂ ಓದಿ: 2024ರ ಟಿ20 ವಿಶ್ವಕಪ್‌ಗೆ 20 ತಂಡಗಳು!: ಹೊಸ ಫಾರ್ಮ್ಯಾಟ್ ಘೋಷಿಸಿದ ಐಸಿಸಿ


