ಬಳ್ಳಾರಿಯ ಫಣಿರಾಜ್ ಅವರ ಕರ್ಮಭೂಮಿ ಉಡುಪಿ. ಇಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದು, ಕನ್ನಡದ ಮುಖ್ಯ ಚಿಂತಕರಲ್ಲೊಬ್ಬರಾದ ಅವರು ಮೂಲತಃ ಒಬ್ಬ ಆಕ್ಟಿವಿಸ್ಟ್. ಪ್ರತಿನಿತ್ಯ ಅವರು ಚಿಂತಿಸುವುದು ಸಮಾಜ ಬದಲಾವಣೆ, ಸಿನೆಮಾ ಮತ್ತು ಕರಾವಳಿಯ ನಿತ್ಯದ ಸಮಸ್ಯೆಗಳ ಕುರಿತು. ಎಡಪಂಥೀಯರಾಗಿದ್ದೂ ಭಿನ್ನಮತ ಕಾಪಾಡಿಕೊಂಡು, ಅಂಬೇಡ್ಕರ್, ಗಾಂಧಿ, ಗ್ರಾಮ್ಶಿ ಎಲ್ಲರ ಜೊತೆ ಸಾವಯವ ಸಹವಾಸ ಇಟ್ಟುಕೊಂಡಿದ್ದಾರೆ.

* ಸ್ವತಃ ಪ್ರಖ್ಯಾತ ಭಾಷಾ ಶಾಸ್ತ್ರಜ್ಞರಾಗಿದ್ದೂ, ತನ್ನ ಶಾಸ್ತ್ರೀಯ ವೃತ್ತಿಯಾಚೆಗಿನ ಪ್ರಾಪಂಚಿಕ ಆಗುಹೋಗುಗಳಿಗೆ ತೆರೆದುಕೊಂಡು, ತಾನು ವಾಸಿಸುತ್ತಿರುವ ದೇಶದ ಪ್ರಭುತ್ವ ನೀತಿಗಳನ್ನು ಕಟುವಾಗಿ ವಿಮರ್ಶಿಸುತ್ತಿರುವವರು ನೋಮ್ ಚಾಮ್‍ಸ್ಕಿ. ಅವರು, ಎಲ್ಲ ಮನುಷ್ಯರಿಗೂ ಬೌದ್ಧಿಕ ಜ್ಞಾನವಿರುತ್ತದೆ ಎಂಬ ಸಹಜ ನೆಲೆಯಲ್ಲಿ, ‘ಬುದ್ಧಿಜೀವಿ’ಗಳು ಎಂದರೆ, ಇಂದಿನ ಅಸಮಾನ ಜ್ಞಾನ ಸಮಾಜದಲ್ಲಿ, ಅಧಿಕಾರದ ಆಗುಹೋಗುಗಳ ಬಗ್ಗೆ ಖಚಿತವಾದ ಮಾಹಿತಿ ಸಂಪನ್ಮೂಲವನ್ನು ಪಡೆಯುವ ಸವಲತ್ತು ಇರುವ ಒಂದು ಸಾಮಾಜಿಕ ವರ್ಗವೆಂದು ವಿವರಿಸುತ್ತಾರೆ. ಮತ್ತೂ, ಬುದ್ಧಿಜೀವಿ ವರ್ಗದ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಹೀಗೆ ಹೇಳುತ್ತಾರೆ: ಅಧಿಕಾರ ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಖಚಿತವಾದ ವಿವರಗಳನ್ನು, ಪ್ರತಿರೋಧಿಸಲು ಸಾಧ್ಯವಿರುವ (ಹಾಗು ವಿವರಗಳನ್ನು ಪಡೆಯಲಾರದ ಸ್ಥಿತಿಯಲ್ಲಿರುವ) ಸಾಮಾನ್ಯ ಜನರಿಗೆ ತಲುಪಿಸುವುದು.

* ದೇಶದ ಸಮಚಿತ್ತದ ಬೌದ್ಧಿಕರಲ್ಲಿ ಒಬ್ಬರಾಗಿರುವ ಅಶೋಕ್ ವಾಜಪೇಯಿಯವರು, 2017ರಲ್ಲಿ, ‘ಇಂಡಿಯ ಡಿಸೆಂಟ್ಸ್: ಥ್ರೀ ಥೌಸೆಂಡ್ ಯಿಯರ್ಸ ಆಫ್ ಡಿಫೆರೆನ್ಸ್, ಡೌಟ್ ಅಂಡ್ ಅರ್ಗ್ಯುಮೆಂಟ್ಸ್’ (ಭಾರತದಲ್ಲಿ ಭಿನ್ನಮತ: ಮೂರು ಸಾವಿರ ವರ್ಷಗಳ ವಿರೋಧ, ಅನುಮಾನ ಹಾಗು ವಾಗ್ವಾದ) ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಅದರಲ್ಲಿ ಅವರು, ಅತಿ ಪ್ರಾಚೀನ ಗ್ರಂಥವಾದ ಋಗ್ವೇದದ ಅನುಮಾನಸಹಿತವಾದ ಸೂತ್ರಗಳಿಂದ ಹಿಡಿದು, ಬುದ್ಧ, ಸುಭಾಷಿತ, ಸಾಂಖ್ಯ ದರ್ಶನ, ಚಾರ್ವಾಕ ದರ್ಶನ, ವಚನ, ಸೂಫಿ ಚಿಂತನೆ, ಭಕ್ತಿ ಸಾಹಿತ್ಯಗಳಿಂದ ಹಿಡಿದು ಫುಲೆ ದಂಪತಿಗಳು, ಗಾಂಧಿ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್, ಲೋಹಿಯ, ಜೇಪಿ, ದಲಿತ ಸಾಹಿತ್ಯ, ನಕ್ಸಲ್ ಚಳವಳಿಯಿಂದ ಪ್ರೇರಿತವಾದ ಸಾಹಿತ್ಯ ಹಾಗು ರವೀಶ್‍ಕುಮಾರರ ಚಿಂತನೆಗಳವರೆಗಿನ ಸುದೀರ್ಘವಾದ ಭಿನ್ನಮತ ಪರಂಪರೆ ಭಾರತಕ್ಕಿದೆ ಎಂದು ತಿಳಿಸಬಯಸುತ್ತಾರೆ. ಭಿನ್ನಮತವೆಂದರೆ ‘ದೇಶದ್ರೋಹ’ವೆನ್ನುವಂತೆ ಜನಜನಿತಗೊಳಿಸುವ ಕಾಲದಲ್ಲಿ ಅಶೋಕ್ ವಾಜಪೇಯಿಯವರು ಸಕಾಲಿಕವಾಗಿ ಈ ಗ್ರಂಥ ಪ್ರಕಟಿಸಿರುವರು- ಆ ಮೂಲಕ ಭಿನ್ನಮತದ ಮಹತ್ವವನ್ನು ಗಟ್ಟಿಯಾಗಿ ಹೇಳಲು ಬಯಸಿರುವರು.

* ಬ್ರಿಟಿಷ್ ವಸಾಹತುಶಾಹಿಯ ಕಾಲದಲ್ಲಿ, ಬೌದ್ಧಿಕ ಕೆಲಸಗಳನ್ನು ಮಾತ್ರ ನಿರ್ವಹಿಸುವ ಉದ್ಯೋಗಗಳಲ್ಲಿ ನಿರತವಾದ ‘ಮಧ್ಯಮ ವರ್ಗ’ವು ರೂಪ ತಾಳಿತು. ಬ್ರಿಟಿಷರು ತಮ್ಮ ಆಡಳಿತ ವ್ಯವಸ್ಥೆಯ ಸಕ್ಷಮತೆಗೆ ಪೂರಕವಾದ ಮಾನವ ಸಂಪನ್ಮೂಲ ಸೃಷ್ಟಿಗೆ ಸಹಕಾರಿಯಾಗುವಂತೆ, ಆಧುನಿಕ ಶಿಕ್ಷಣ-ಉದ್ಯೋಗ ವ್ಯವಸ್ಥೆಯನ್ನು ನಿರ್ಮಿಸಿದರು; ಆದರೂ ಈ ಮಧ್ಯಮ ವರ್ಗದ ನಡುವಿಂದಲೇ, ವಸಾಹತುಶಾಹಿ ಆಡಳಿತವನ್ನು ಪ್ರತಿರೋಧಿಸುವ ಬೌದ್ಧಿಕತೆ ಹುಟ್ಟಿಕೊಂಡಿತು. ಬೌದ್ಧಿಕ ಸಂಪನ್ಮೂಲ ಉಳ್ಳ ವಕೀಲರು, ಶಿಕ್ಷಕರು, ವಿಜ್ಞಾನಿಗಳು, ವೈದ್ಯರು ಹಾಗು ಭೂಮಾಲಿಕರು-ವ್ಯಾಪಾರಸ್ಥ ವರ್ಗಗಳ ಮಂದಿ ಹೀಗೆ ವಿದ್ಯೆ ಪಡೆದುಕೊಂಡರು. ಈ ಮಧ್ಯಮ ವರ್ಗಗಳಿಂದ ಹುಟ್ಟಿಬಂದ ಚಿಂತಕರು ವಸಾಹತುಶಾಹಿ ವಿರೋಧಿ ಹೋರಾಟದ ಚಿಂತನೆಗಳ ಬೆನ್ನೆಲುಬಾಗಿತ್ತು. ಈ ಬಗೆಯ ಚಟುವಟಿಕೆಗಳ ನಿಯಂತ್ರಣಕ್ಕೆ ಜಾರಿ ಮಾಡಲಾದ ‘ಶಿಕ್ಷಾರ್ಹ ಅಪರಾಧ’ಗಳ ಕಠಿಣ ಕಾನೂನುಗಳು ಹಾಗು ಅದೇ ನಮೂನೆಯ ಹೊಸ ಶಿಕ್ಷೆ ಸಂಹಿತೆಗಳೂ, ಸ್ವಾತಂತ್ರೋತ್ತರ ಯುಗದಲ್ಲಿ ಈ ನಮೂನೆಯ ಬೌದ್ಧಿಕ ಅಭಿವ್ಯಕ್ತಿಗೆ ಕಡಿವಾಣಕ್ಕೆ ಜಾರಿಯಾಗಿವೆ!
* ಎರಡನೇ ಮಹಾಯುದ್ಧೋತ್ತರ ಕಾಲದಲ್ಲಿ, ಅಂದಿನ ಸಂಪತ್ತು ಉತ್ಪಾದನೆಯ ಆಧುನಿಕ ಉತ್ಪಾದನಾ ವ್ಯವಸ್ಥೆ ಧ್ವಂಸವಾಗಿ ಹೋಗಿತ್ತು. ಸಮಾಜದ ಸಕಲ ಸಂಪನ್ಮೂಲಗಳನ್ನು ಬಳಸಿಕೊಂಡು ದೇಶಗಳು ತಮ್ಮ ಸ್ವಾಯತ್ತತೆ ಕಾಪಾಡಿಕೊಳ್ಳಬೇಕಾಗಿದ್ದ ಆ ಹೊತ್ತಲ್ಲಿ ಆಚರಣೆಗೆ ಬಂದ ‘ಕಲ್ಯಾಣ ರಾಜ್ಯ ಪ್ರಜಾಪ್ರಭುತ್ವ’ಕ್ಕೆ ಬೆನ್ನೆಲುಬಾಗಿದ್ದವರೂ ವಿಜ್ಞಾನ-ತಂತ್ರಜ್ಞಾನ-ಸಮಾಜಶಾಸ್ತ್ರ-ಮಾನವೀಕ ಶಾಸ್ತ್ರಗಳ ಬೌದ್ಧಿಕ ಮಧ್ಯಮ ವರ್ಗದವರು. ಈ ನಮೂನೆಯ ಪ್ರಭುತ್ವದ ಟೀಕಾಕಾರರಾಗಿದ್ದು, ಇದು ಉಳ್ಳವರಿಗೆ ಅನುಕೂಲವಾದ ಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಭಿನ್ನಮತ ಪ್ರಕಟಿಸಿದವರೂ, ಅದನ್ನು ಜನಜಾಗೃತಿ ಚಳವಳಿಯಾಗಿ ರೂಪಿಸುವಲ್ಲಿ ಬೌದ್ಧಿಕ ಪಾತ್ರ ವಹಿಸಿದವರೂ ಕಲ್ಯಾಣ ಪ್ರಭುತ್ವದ ಭಿನ್ನಮತೀಯ ಮಧ್ಯಮ ವರ್ಗದವರೇ ಆಗಿದ್ದಾರೆ.
* ಕಲ್ಯಾಣ ರಾಜ್ಯ ಪ್ರಜಾಪ್ರಭುತ್ವದ ಮಾದರಿಯ ಗುರಾಣಿಯನ್ನು ಇಟ್ಟುಕೊಂಡೇ, 1980-90ರ ಆರ್ಥಿಕ ಉದಾರೀಕರಣ ಹಾಗು ಬಂಡವಾಳಶಾಹಿಯ ಜಾಗತಿಕ ವಿಸ್ತರಣೆಯ ಯೋಜನೆ ಜಾರಿಗೆ ಬಂದಿತು. ಅದಕ್ಕೆ ತಕ್ಷಣಕ್ಕೆ ಬರಬಹುದಾದ ತೀಕ್ಷ್ಣ ಪ್ರತಿರೋಧಗಳನ್ನು ನಿರೀಕ್ಷಿಸಿಯೇ ಮಾಹಿತಿ ತಂತ್ರಜ್ಞಾನದ ಮೂಲಕ ಸಹಮತಿ ಉತ್ಪಾದನೆಯ ಉದ್ಯಮವೂ ಜಾರಿಗೆ ಬಂದಿತು. ಈ ಯುಗದಲ್ಲಿ ಹಳೆಯ ಭಿನ್ನಮತೀಯ ಬೌದ್ಧಿಕ ಮಧ್ಯಮ ವರ್ಗ ಹಾಗು ಜನಸಾಮಾನ್ಯರ ನಡುವೆ ಮಾಹಿತಿ ತಂತ್ರಜ್ಞಾನವು ಒಂದು ಜ್ಞಾನ ಸಂವಹನೆಯ ಕಂದರವನ್ನು ನಿರ್ಮಿಸಿ ಹಾಕಿತು. ಇದೀಗ, 1980ರ ಪೂರ್ವದ ಭಿನ್ನಮತೀಯ ಬೌದ್ಧಿಕ ಮಧ್ಯಮವರ್ಗವು ತನ್ನ ಬೌದ್ಧಿಕ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಉಳಿದ ಎರಡೇ ದಾರಿ: ಸಮಾಜಾಧಿಕಾರ. ಪ್ರಭುತ್ವ ವಿರೋಧಿ ಜನ ಚಳವಳಿಗಳಿಗೆ ಅಧಿಕಾರದ ಕಪಟ ತೋರುವ ಬೌದ್ಧಿಕ ಜ್ಞಾನವಾಹಿನಿಯಾಗುವುದು ಹಾಗು ಮಾಹಿತಿ ತಂತ್ರಜ್ಞಾನ ಉದ್ಯಮದೊಳಗಿಂದ ಎದ್ದು ಬಂದು ಹೆಚ್ಚೆಚ್ಚು ಜನಸಾಮಾನ್ಯರನ್ನು ತಲುಪುವ ದೇಶಭಾಷಾ ಮಾಹಿತಿ ಪ್ರಸಾರದ ನವ ಭಿನ್ನಮತೀಯ ಬೌದ್ಧಿಕ ವರ್ಗವಾಗುವುದು. ದಾಬೋಲ್ಕರ್, ಪನ್ಸಾರೆ, ಕಲಬುರ್ಗಿ ಮೊದಲ ಮಾದರಿಯಾದರೆ, ಗೌರಿ ಎರಡನೇ ಮಾದರಿಯಾಗಿದ್ದಳು. ಗೌರಿಯ ಬಗೆಯಲ್ಲೆ ಜನಸಾಮಾನ್ಯರನ್ನು ತಲುಪುವ ಸಾಮರ್ಥ್ಯವುಳ್ಳ ಇನ್ನೂ 27 ದೇಶಭಾಷೆಯ ಪತ್ರಕರ್ತರು ಹತ್ಯೆಯಾಗಿದ್ದಾರೆ- ಇದು ಆಕಸ್ಮಿಕವಲ್ಲ. ಇದೀಗ, ಮಾಹಿತಿ ತಂತ್ರಜ್ಞಾನದ ಮೂಲಕ, ಅಧಿಕಾರದ ವರಸೆಗಳನ್ನು ಅರಿಯಬಲ್ಲ ಸಂಪನ್ಮೂಲ ಉಳ್ಳ ಬೌದ್ಧಿಕ ಮಧ್ಯಮ ವರ್ಗವು ವಾಸ್ತವಿಕ ಸತ್ಯವನ್ನು ಮಾಹಿತಿ ಮಾಧ್ಯಮಗಳು ಹಾಗು ವಿರೋಧಿ ಚಳವಳಿಗಳ ಮೂಲಕ ಸಾಮಾನ್ಯರಿಗೆ ತಲುಪಿಸುವ ಯುಗ. ಅಪಾಯಗಳು ಹಳೆಯವು- ಬೌದ್ಧಿಕ ಜವಾಬ್ದಾರಿ ವಿಧಾನ ಹೊಸತು.


