Homeನ್ಯಾಯ ಪಥಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ನಮ್ಮ ಕಾಲದ ಪ್ರಾಣವಾಯು: ಪ್ರೊ. ಎಂ ಎಸ್ ಆಶಾದೇವಿ

ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ನಮ್ಮ ಕಾಲದ ಪ್ರಾಣವಾಯು: ಪ್ರೊ. ಎಂ ಎಸ್ ಆಶಾದೇವಿ

- Advertisement -
- Advertisement -

ದುರಿತ ಕಾಲವೆಂದರೇನೆನ್ನುವುದನ್ನು ಅದರೆಲ್ಲ ಅರ್ಥಬಾಹುಳ್ಯದಲ್ಲಿ, ಕಾರ್ಯಮಾದರಿಗಳಲ್ಲಿ ಕಂಡುಣ್ಣುತ್ತಿರುವ ದಾರುಣ ಸನ್ನಿವೇಶದಲ್ಲಿ ನಾವಿದ್ದೇವೆ. ಸಾವಿರ ಬಾರಿ ಯೇಟ್ಸ್‌ನ ಈ ಮಾತು ಬುದ್ಧು ಭಾವಗಳಲ್ಲಿ ಅನುರಣಿಸುತ್ತದೆ.

“ಸಜ್ಜನರು ದುರ್ಬಲರಾಗಿಬಿಟ್ಟಿದ್ದಾರೆ
ದುಷ್ಟರೋ ಅವರೆಲ್ಲ ಶಕ್ತಿಯಲ್ಲಿ ಅಟ್ಟಹಾಸ ಮಾಡುತ್ತಿದ್ದಾರೆ”

ಈ ಮಾತು ಸುಳ್ಳು ಎನಿಸುವ ಭರವಸೆ ಮೂಡಿಸುತ್ತಿದ್ದ ಬೆರಳೆಣಿಕೆಯ ವ್ಯಕ್ತಿತ್ವಗಳಲ್ಲಿ ದೊರೆಸ್ವಾಮಿಯವರು ಮೊದಲನೆಯವರು. ಮನುಷ್ಯ ಚೈತನ್ಯದಲ್ಲಿ ಅವರಿಗಿದ್ದ ನಂಬಿಕೆಯ ಮೂಲ ಯಾವುದು ಎನ್ನುವ ಪ್ರಶ್ನೆ ಅವರನ್ನು ನೋಡಿದಾಗಲೆಲ್ಲ ಕಾಡುತ್ತಿತ್ತು. ಲಂಕೇಶರ ದಾರ್ಶನಿಕ ಎನ್ನಬಹುದಾದ ಹೇಳಿಕೆಗಳಲ್ಲಿ ಒಂದೆಂದರೆ, ’ಮನುಷ್ಯ ಮೂಲತಃ ನೀಚ’ ಎನ್ನುವುದು. ಆದರೆ ತನ್ನ, ತನ್ನ ಪರಿಸರದಲ್ಲಿರುವ ಮನುಷ್ಯರ ನೀಚತನವನ್ನು ಮೀರಿಕೊಳ್ಳಲು ಯತ್ನಿಸಬೇಕಾಗಿರುವುದೇ ನಾಗರಿಕತೆಯ ಆದ್ಯ ಕೆಲಸಗಳಲ್ಲೊಂದು ಎನ್ನುವುದನ್ನೂ ಲಂಕೇಶರು ಅಷ್ಟೇ ಗಾಢವಾಗಿ ನಂಬಿದವರಾಗಿದ್ದರು. ದೊರೆಸ್ವಾಮಿಯವರು ಈ ಮಾದರಿಯವರು. ಗಾಂಧಿವಾದ ಎನ್ನುವ ಮಾತನ್ನು ಬಳಸುವುದೇ ಅಪಾರ ಹಿಂಜರಿಕೆಯ ಸಂಗತಿಯಾಗಿರುವ ಈ ಕಾಲದಲ್ಲಿ ದೊರೆಸ್ವಾಮಿಯವರು ನಮ್ಮಲ್ಲಿ ನಮಗೇ ಕಳೆದುಹೋಗುತ್ತಿರುವ ನಂಬಿಕೆಯನ್ನು ಹುಟ್ಟಿಸಬಲ್ಲಷ್ಟು ಅದಮ್ಯ ಆಶಾವಾದಿಯಾಗಿದ್ದರು ಎನ್ನುವುದೊಂದು ಸೋಜಿಗ.

ಅವರ ಹಸನ್ಮುಖವನ್ನು ನೋಡಿದಾಗಲೆಲ್ಲ ’ಅಳು ನುಂಗಿ ನಗು ಒಮ್ಮೆ ಎನ್ನುವ ಬೇಂದ್ರೆಯವರ ಮಾತು ಮನಸ್ಸಿನಲ್ಲಿ ಹಾದುಹೋಗುತ್ತಿತ್ತು. ತೀವ್ರವಾದ ಹೋರಾಟದ ಸಂದರ್ಭದಲ್ಲಿಯೂ ಪರಿಚಿತರನ್ನು ಕಂಡಾಗ ಅವರ ಮುಖದಲ್ಲಿ ಅರಳುತ್ತಿದ್ದ ಮುಗುಳ್ನಗೆಯೇ ಅವರ ವ್ಯಕ್ತಿತ್ವದ ರೂಪಕ. ಎಂಥ ವಿಷಮ ಸನ್ನಿವೇಶವನ್ನೂ ಮನೋಬಲದಿಂದ, ನೈತಿಕ ಬಲದಿಂದ ಎದುರಿಸಬಲ್ಲೆನೆನ್ನುವ ಅಖಂಡ ಆತ್ಮವಿಶ್ವಾಸದಿಂದ ಮಾತ್ರ ಅದು ಹುಟ್ಟುತ್ತದೆಯೇನೋ.

ಅನೇಕ ಕಾರ್ಯಕ್ರಮಗಳಲ್ಲಿ ಅವರೊಡನೆ ಪಾಲ್ಗೊಂಡ ಅನುಭವಗಳನ್ನು ಹಂಚಿಕೊಳ್ಳುವುದೆಂದರೆ, ನಮ್ಮ ಕಾಲದ ಸಾಕ್ಷಿಪ್ರಜ್ಞೆಯ ಎದುರು ನಾವು ಕಕ್ಕಾಬಿಕ್ಕಿಯಾದದ್ದನ್ನು ಹೇಳಿಕೊಳ್ಳುವುದೆಂದೇ ಅರ್ಥ. ನಮ್ಮಲ್ಲಿ ನಮಗೆ ನಾಚಿಕೆ, ಆತ್ಮವಿಮರ್ಶೆ ಹುಟ್ಟುವಂತೆ ಮಾಡುತ್ತಿತ್ತು ಅವರ ಉಪಸ್ಥಿತಿ ಮತ್ತು ಮಾತು. ಕಾರ್ಯಕ್ರಮವೊಂದರಲ್ಲಿ ನಾವಿಬ್ಬರೂ ಮುಖ್ಯ ಅತಿಥಿಗಳು. ಆದರೆ ಆಯೋಜಕರು ಕರೆದಿದ್ದ ಇತರ ’ಗಣ್ಯರ ಮಾತುಗಳು ಮುಗಿಯುತ್ತಲೇ ಇಲ್ಲ. ಒಬ್ಬರಾದ ಮೇಲೊಬ್ಬರು ಮಾತಿನಮಲ್ಲರು, ಮಾತಿನ ಮಳೆ ಸುರಿಸುತ್ತಲೇ ಇದ್ದರು. ಕೊನೆಗೆ ಉಳಿದ ನಮ್ಮಿಬ್ಬರಲ್ಲಿ ಮೊದಲು ದೊರೆಸ್ವಾಮಿಯವರನ್ನು ಆಹ್ವಾನಿಸಿದಾಗ ಈ ಹಿರಿಯರು, ಇರಿ ಮೊದಲು ಆಶಾತಾಯಿಯವರ ಮಾತು ಕೇಳೋಣ ಎಂದು ಒತ್ತಾಯಿಸಿ ನನಗೇ ಮೊದಲು ಮಾತನಾಡಹಚ್ಚಿದರು. ಒಳಗಿದ್ದ ಅಸಹನೆಯನ್ನೆಲ್ಲ ಮಾತಿನಲ್ಲಿ ನಾನು ಹೊರಹಾಕಿದೆ. ಗಾಂಧಿಯವರೇನಾದರೂ ಈ ಸಭೆಯಲ್ಲಿ ಇದ್ದಿದ್ದರೆ, ಅಯ್ಯಾ, ಪುರುಷೋತ್ತಮರಿರಾ,

ಶತಮಾನಗಳಿಂದ ನೀವು ಆಡಿದ್ದು, ಹೆಣ್ಣುಮಕ್ಕಳು ಕೇಳಿದ್ದೇ ಆಯಿತು, ಈಗಲಾದರೂ ಅವರಿಗೆ
ಮೊದಲೇ ಮಾತನಾಡೋಕೆ ಅವಕಾಶ ಮಾಡಿಕೊಡಿ ಅಂತ ಹೇಳುತ್ತಿದ್ದರು ಎನ್ನುವ ಖಾತ್ರಿ ನನಗಿದೆ ಎಂದೆ. ಮಾತು ಮುಗಿಸಿದ ಮೇಲೆ ದೊರೆಸ್ವಾಮಿಯವರು, ನಾನು ಹೇಳಬೇಕು ಅಂದಿದ್ದನ್ನ ನೀವೇ ಹೇಳಿದ್ದು ಒಳ್ಳೆಯದಾಯಿತು ಎಂದರಲ್ಲದೆ, ಆಯೋಜಕರಿಗೆ, ಈ ಪಾಟಿ ಜನರನ್ನು ಯಾಕ್ರಿ ಮಾತನಾಡಿಸ್ತೀರಾ, ಸಮಯ ವ್ಯರ್ಥ ಅಲ್ವಾ ಅಂತ ಮುಲಾಜಿಲ್ಲದೆ ತರಾಟೆಗೆ ತೆಗೆದುಕೊಂಡರು.

ನಮ್ಮ ಕಾಲೇಜು ವಿಶ್ವವಿದ್ಯಾಲಯವಾಗುವ ಪ್ರಕ್ರಿಯೆ ನಡೆಯುತ್ತಿತ್ತು. ಅದಕ್ಕೆ ಅನೇಕ ತೊಡಕುಗಳು. ದೊರೆಸ್ವಾಮಿಯವರು ಸಿಕ್ಕಾಗೊಮ್ಮೆ, ಇದಕ್ಕೆ ಏನಾದರೂ ಮಾಡಬೇಕು ಅಂದೆ, ’ಅದಕ್ಕೇನು, ನಡಿಯಮ್ಮ, ಯಾವತ್ತು, ಎಲ್ಲಿ, ಎಷ್ಟು ಹೊತ್ತಿಗೆ ಬರಬೇಕು ಹೇಳಿ’ ಅಂತ ನಿಂತ ಕಾಲ ಮೇಲೆ ಹೇಳಿದರು. ಅಲ್ಲಾ, ನಿಮಗೆ ತೊಂದರೆ.. ಅಂತ ನಾನು ತೊದಲಿದರೆ, ’ಇಂಥ ಕೆಲಸಗಳನ್ನ ಮಾಡದೇ ಇದ್ದರೆ ತೊಂದರೆ’ ಎಂದು ನನ್ನ ಸಂಕೋಚವನ್ನು ಅಲ್ಲಿಯೇ ತೊಡೆದರು. ಗೆಳತಿ ಗೌರಿಯ ಹತ್ಯೆಯ ಸಂದರ್ಭದಲ್ಲಿ ಎಲ್ಲರಿಗೂ ಅವರು ತುಂಬಿದ ಧೈರ್ಯದ ಬಗ್ಗೆ ಹೆಚ್ಚು ಹೇಳಬೇಕಿಲ್ಲ. ಒಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿ ಕವಿತಾ, ಶಿವಸುಂದರ್ ಎಲ್ಲರೂ ಯಾರು ಯಾರು ಬರುತ್ತಾರೋ, ಬರುವುದಿಲ್ಲವೋ ಎಂದು ಪ್ರೆಸ್‌ಕ್ಲಬ್‌ನಲ್ಲಿ ಕಾಯುತ್ತಾ ಕೂತಿದ್ದಾಗ,
ಶಿವಸುಂದರ್ ’ಬಂದ್ರಲ್ಲಾ ಎಂದರು. ದೂರದಲ್ಲಿ ದೊರೆಸ್ವಾಮಿಯವರನ್ನು ನೋಡಿದ್ದೇ ಇನ್ನು ಯಾರು ಬಂದರೇನು, ಬಿಟ್ಟರೇನು ಅನ್ನಿಸಿ ಬಿಟ್ಟಿತು ನಮಗೆಲ್ಲ! ಟೌನ್‌ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರಜಾಪ್ರಭುತ್ವವನ್ನು ಕುರಿತಂತೆ, ಈ ಹೊತ್ತಿನಲ್ಲಿ ನಾವು ಮೈಮರೆತರೆ ಅನುಭವಿಸಬೇಕಾದ ನರಕದ ಬಗ್ಗೆ ಆಡಿದ ಮಾತುಗಳು, ಅವುಗಳಲ್ಲಿದ್ದ ಕಾಣ್ಕೆ, ಸದ್ಯ ಭಾರತದ ಸಂದರ್ಭವನ್ನು ಕುರಿತಂತೆ ಸತ್ಯದ ನವದರ್ಶನ ಮಾಡಿಸಿತು.

ಅವರೊಡನೆಯ ಕೊನೆಯ ಭೇಟಿ ಆನ್‌ಲೈನ್‌ನಲ್ಲಿ ಏಪ್ರಿಲ್ 10ರಂದು ನಡೆದ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ. ನಾವೆಲ್ಲ ಅವರ ಬಗ್ಗೆ ಮಾತನಾಡುತ್ತಿದ್ದರೆ, ಸಂಕೋಚದಿಂದ ಮುದುಡಿದ ದೇಹದಲ್ಲಿ, ಆದರೆ ಆಗಲೂ ಅದೇ ಮುಗುಳ್ನಗೆ ಅವರ ಮುಖದಲ್ಲಿ ಅವರಿದ್ದರು. ನಾನೇನೋ ಬಹಳ ಸಾಧನೆ ಮಾಡಿದವನ ಹಾಗೆ ಇವರೆಲ್ಲ ಮಾತನಾಡುತ್ತಿದ್ದಾರೆ, ಆದರೆ ಇದೆಲ್ಲ ನಾನು, ನಾವು ಮಾಡಲೇಬೇಕಾದ ಕೆಲಸಗಳಲ್ಲವೆ ಎಂದರು. ಅಹಂಕಾರ, ಸ್ವಾರ್ಥ ಸೋಕದ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದರ ಸಾಕಾರ ರೂಪ ದೊರೆಸ್ವಾಮಿಯವರು.

104ರ ವಯಸ್ಸಿನಲ್ಲಿ ತೀರಿಕೊಂಡ ದೊರೆಸ್ವಾಮಿಯವರ ಬಗೆಗೆ ಇದನ್ನು ಬಯಸುವುದು ದುರಾಸೆಯೇನೋ, ಆದರೂ ಕವಿತೆಯ ಆ ಸಾಲು ನೆನಪಾಗುತ್ತದೆ ಅಯಾಚಿತವಾಗಿ..
’ಮಹಾತ್ಮಾ ನೀನಿನ್ನೀಸು ಕಾಲ ಬದುಕಬೇಕಿತ್ತು’

ಪ್ರೊ. ಎಂ.ಎಸ್ ಆಶಾದೇವಿ
ವಿಮರ್ಶಕಿ, ಲೇಖಕಿ ಮತ್ತು ಪ್ರಾಧ್ಯಾಪಕಿ. ಪ್ರಸ್ತುತ ಬೆಂಗಳೂರಿನ
ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಸ್ತ್ರೀಮತವನುತ್ತರಿಸಲಾಗದೆ’, ‘ನಡುವೆ ಸುಳಿವಾತ್ಮ ಅವರ ವಿಮರ್ಶಾ ಕೃತಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...