ಇದೇ ಭಾನುವಾರ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ‘ಸೋಶಿಯಲಿಸಂ’ ಎಂಬ ಯುವಕ ಮತ್ತು ‘ಮಮತಾ ಬ್ಯಾನರ್ಜಿ’ ಎಂಬ ಯುವತಿಯ ನಡುವೆ ಸರಳ ವಿವಾಹ ನಡೆಯಲಿದೆ. ಈ ಇಬ್ಬರ ಹೆಸರುಗಳು ವಿಶೇಷವಾದ ಕಾರಣಕ್ಕೆ ಈ ವಿವಾಹದ ಸುದ್ದಿ ಈಗ ದೇಶಾದ್ಯಂತ ವೈರಲ್ ಆಗಿವೆ. ವರನ ತಂದೆ ಅಪ್ಪಟ ಕಮ್ಯುನಿಷ್ಟ್ ಸಿದ್ದಾಂತ ಪ್ರೇಮಿಯಾದುದ್ದೇ ಈ ವಿವಾಹ ಇಂದು ದೇಶಾದ್ಯಂತ ಚರ್ಚೆಗೊಳಗಾಗಲು ಕಾರಣವಾಗಿವೆ.
ತಮಿಳುನಾಡಿನ ಸೇಲಂ ನಗರದ CPI ಕಾರ್ಯಕರ್ತರಾದ 52 ವರ್ಷದ ಮೋಹನ್ ಎಂಬುವವರು ಅಪ್ಪಟ ಕಮ್ಯುನಿಷ್ಟ್ ಹೋರಾಟಗಾರರು. ಅವರ ತಂದೆ ಮತ್ತು ತಾತ ಕೂಡ ಕಮ್ಯುನಿಷ್ಟರೆ.. ಅದೇ ಹಾದಿಯಲ್ಲಿ ಬೆಳೆದ ಮೋಹನ್ ಸೋವಿಯತ್ ರಷ್ಯಾ ವಿಭಜನೆ ಸಂದರ್ಭದಲ್ಲಿ ಕಮ್ಯುನಿಷ್ಟ್ ಸಿದ್ದಾಂತ ಮುಗಿದ ಅಧ್ಯಾಯ ಎಂಬ ಟೀಕೆಗಳನ್ನು ಕೇಳಿ ಬೇಸರಗೊಂಡಿದ್ದರು. ಆಗ ಅವರು ತಮ್ಮ ಮಕ್ಕಳಿಗೆ ತಾನು ನಂಬಿದ್ದ ಸಿದ್ದಾಂತದ ಹೆಸರಿಡಲು ದೃಢ ನಿರ್ಧಾರ ಮಾಡಿದರು. ಅಂತೆಯೇ ತಮ್ಮ ಮೂರು ಜನ ಮಕ್ಕಳಿಗೆ ಕಮ್ಯುನಿಸಂ, ಲೆನಿನಿಸಂ ಹಾಗೂ ಸೋಶಿಯಲಿಸಂ ಎಂದು ಹೆಸರಿಟ್ಟಿದ್ದಾರೆ. “ನಾವು ಒಂದು ದಿನ ಸಾಯಬಹುದು. ಆದರೆ ಈ ಹೆಸರುಗಳು ನಮ್ಮ ಸಿದ್ದಾಂತವನ್ನು ಯಾವಾಗಲೂ ಪ್ರತಿಬಿಂಬಿಸುತ್ತವೆ” ಎಂದು ಮೋಹನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ.
ಈಗ ಸೋಶಿಯಲಿಸಂ ಎಂಬ ಹೆಸರಿನ ಮೂರನೇ ಮಗನಿಗೆ ಮದುವೆ ನಿಶ್ಚಯವಾಗಿದೆ. ಆದರೆ ಅದರಲ್ಲೂ ವಿಶೇಷವಿದೆ. ಅದೇನೆಂದರೆ ಆತ ಮದುವೆಯಾಗುತ್ತಿರುವ ಮದುಮಗಳ ಹೆಸರು ಮಮತಾ ಬ್ಯಾನರ್ಜಿ!. ಈ ಮಮತಾ ಬ್ಯಾನರ್ಜಿಯ ಕುಟುಂಬ ಸದಸ್ಯರೆಲ್ಲರೂ ಅನಾದಿ ಕಾಲದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಂತೆ. ಪಶ್ಚಿಮ ಬಂಗಾಳದ ಹಾಲಿ ಸಿಎಂ ಮಮತಾ ಬ್ಯಾನರ್ಜಿಯವರು 20 ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದು ತುಂಬಾ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದನ್ನು ಗಮನಿಸಿ, ಅಭಿಮಾನದಿಂದ ಈ ತಮಿಳುನಾಡಿನ ಕಾಂಗ್ರೆಸ್ ಕುಟುಂಬ ತಮ್ಮ ಮನೆಯಲ್ಲಿ ಜನಿಸಿದ ಹೆಣ್ಣು ಮಗುವಿಗೆ ಮಮತಾ ಬ್ಯಾನರ್ಜಿ ಎಂದು ಹೆಸರಿಟ್ಟಿದ್ದರಂತೆ. ಆ ಹೆಣ್ಣು ಮಗು ಸದ್ಯದ ಮದುಮಗಳು.. ಇವರಿಬ್ಬರ ಮದುವೆಯ ಆಮಂತ್ರಣ ಪತ್ರಿಕೆ ಈಗ ಇಡೀ ದೇಶದಲ್ಲಿ ವೈರಲ್ ಆಗುತ್ತಿದೆ!
ಇವರಿಬ್ಬರ ಮದುವೆ ಭಾನುವಾರದಂದು ಸೇಲಂನಲ್ಲಿ ಜರುಗಲಿದೆ. ತಮಿಳುನಾಡಿನ ಸಿಪಿಐ ರಾಜ್ಯ ಕಾರ್ಯದರ್ಶಿ ಆರ್.ಮುಥಾರಸನ್ ಪಾಲ್ಗೊಳ್ಳಿದ್ದಾರೆ. ಈ ವಿವಾಹಕ್ಕೆ ನೂರಾರು ಜನ ಶುಭ ಹಾರೈಸಿದ್ದಾರೆ. ಇನ್ನು ಕೊನೆಯದಾಗಿ ಒಂದು ವಿಷಯವೆಂದರೆ ಮೋಹನ್ ರವರ ಎರಡನೇ ಮಗ ಲೆನಿನಿಸಂ ಕೂಡ ತನ್ನ ತಂದೆಯ ಹಾದಿಯಲ್ಲಿಯೇ ನಡೆದಿದ್ದು ತನ್ನ ಮಗನಿಗೆ ಮಾರ್ಕ್ಸಿಸಂ ಎಂದು ಹೆಸರಿಟ್ಟಿದ್ದಾರೆ!!!
ಇದನ್ನೂ ಓದಿ; 11 ವರ್ಷಕ್ಕೆ ಮನೆ ಬಿಟ್ಟ, ಪದ್ಮಶ್ರಿ ಪಡೆದ, ತಮಿಳುನಾಡು ಸರ್ಕಾರದ ಭಾಗವಾದ ತೃತೀಯ ಲಿಂಗಿ ನರ್ತಕಿ ನಟರಾಜನ್
Super ?