ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(ಆರ್‌ಸಿಯುಬಿ) ವಿಜಯಪುರ ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎಲ್.ಎನ್ ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು deccanherald.com ವರದಿ ಮಾಡಿದೆ.
ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ಪ್ರೊ. ಮೂರ್ತಿ ವಿರುದ್ದ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪ ಮಾಡಿದ್ದರು. ಪ್ರಾಥಮಿಕ ಸಾಕ್ಷ್ಯಾಧಾರಗಳಿಂದ ಅದು ನಿಜವೆಂದು ಕಂಡುಬಂದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಪ್ರೊ. ಮೂರ್ತಿ ತನಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿನಿ 2024ರ ನವೆಂಬರ್ 4 ರಂದು ಉಪಕುಲಪತಿ ಮತ್ತು ರಿಜಿಸ್ಟ್ರಾರ್ ಮುಂದೆ ಮೌಖಿಕ ದೂರು ನೀಡಿದ್ದರು. ನಂತರ, ಸಾಕ್ಷ್ಯಾಧಾರಗಳೊಂದಿಗೆ ಲಿಖಿತ ದೂರು ಸಲ್ಲಿಸಿದ್ದರು.
ವಿಶ್ವವಿದ್ಯಾಲಯದ ಆಂತರಿಕ ಕುಂದುಕೊರತೆ ನಿವಾರಣಾ ಸಮಿತಿಯು ದೂರಿನ ಕುರಿತು ವಿಚಾರಣೆ ನಡೆಸಿ ಜುಲೈ 14 ರಂದು ತನ್ನ ವರದಿಯನ್ನು ರಿಜಿಸ್ಟ್ರಾರ್‌ಗೆ ಸಲ್ಲಿಸಿತ್ತು. ವರದಿಯಲ್ಲಿ, ಪ್ರೊ. ಮೂರ್ತಿ ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರ ಕೃತ್ಯಗಳು ಪಾಶ್ ಕಾಯ್ದೆಯ ನಿಬಂಧನೆಗಳ ಪ್ರಕಾರ ಲೈಂಗಿಕ ಕಿರುಕುಳಕ್ಕೆ ಕಾರಣವಾಗಿವೆ. ಅಂತಹ ಕೃತ್ಯಗಳು ಪುನರಾವರ್ತನೆಯಾಗದಂತೆ ತಡೆಯಲು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸೂಚಿಸಿತ್ತು ಎಂದು ವರದಿ ವಿವರಿಸಿದೆ.
ಕರ್ನಾಟಕ ನಾಗರಿಕ ಸೇವೆಗಳ ಮಾರ್ಗಸೂಚಿಗಳು ಮತ್ತು ಸಮಿತಿಯ ವರದಿಯ ಆಧಾರದ ಮೇಲೆ, ಸಂಶೋಧನಾ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ಮತ್ತು ಮಾನಸಿಕ ಕಿರುಕುಳದ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ಕಂಡುಬಂದ ಕಾರಣ, ರಿಜಿಸ್ಟ್ರಾರ್ ಸಂತೋಷ್ ಕಾಮಗೌಡ ಅವರು ಪ್ರೊ. ಮೂರ್ತಿ ಅವರನ್ನು ಅಮಾನತುಗೊಳಿಸಿದ್ದಾರೆ.
ಸಕ್ಷಮ ಪ್ರಾಧಿಕಾರದ ಅನುಮತಿಯೊಂದಿಗೆ ಅಮಾನತು ಅವಧಿಯಲ್ಲಿ ಪ್ರೊ. ಮೂರ್ತಿ ಅವರು ಪ್ರಧಾನ ಕಚೇರಿಯಿಂದ ಹೊರಹೋಗದಂತೆ ಸೂಚಿಸಲಾಗಿದೆ ಎಂದು ವರದಿ ಹೇಳಿದೆ.
ಧರ್ಮಸ್ಥಳ ಸುದ್ದಿ ಪ್ರಕಟಿಸದಂತೆ ತಡೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯೂಟ್ಯೂಬ್ ಚಾನೆಲ್


