Homeಕರ್ನಾಟಕರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ರಂಗಾಯಣ ನಿರ್ದೇಶಕರ ವಜಾಕ್ಕೆ ಪ್ರಗತಿಪರ ಚಿಂತಕರ ಆಗ್ರಹ; ಬಹುರೂಪಿ ಬಹಿಷ್ಕರಿಸಲು ನಿರ್ಧಾರ

ರಂಗಾಯಣ ಮತ್ತು ಬಹುರೂಪಿ ತನ್ನ ಸಾಂಸ್ಕೃತಿಕ ಚಹರೆಗಳನ್ನು ಕಳೆದುಕೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿ ಚಿಂತಕರು ಸಭೆ ನಡೆಸಿದ್ದು, ಬಳಿಕ ಬಹಿರಂಗ ಪತ್ರವನ್ನೂ ಬರೆದಿದ್ದಾರೆ.

- Advertisement -

ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರನ್ನು ವಜಾ ಮಾಡಬೇಕು ಹಾಗೂ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಸಾಂಸ್ಕೃತಿಕ ಮಹತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಗತಿಪರ ಚಿಂತಕರು ಆಗ್ರಹಿಸಿದ್ದಾರೆ.

ಕಲಾಮಂದಿರ ಆವರಣದಲ್ಲಿರುವ ರಂಗಾಯಣ ಸಮೀಪದ ಕಿಂದರಿಜೋಗಿ ಬಳಿ ಶನಿವಾರ ಸಂಜೆ ಸಭೆ ನಡೆಸಿದ ಪ್ರಗತಿಪರ ಚಿಂತಕರು, ಸಮಾನ ಮನಸ್ಕರು, “ಬಹುತ್ವವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಮೈಸೂರು ರಂಗಾಯಣ ಈವರೆಗೆ ನಡೆಸಿಕೊಂಡು ಬಂದಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಈ ಬಾರಿ ವ್ಯಕ್ತಗತ, ಏಕಮುಖ ನಿರ್ಣಯ ಹಾಗೂ ಸೈದ್ಧಾಂತಿಕ ಹಿನ್ನೆಲೆಯಿಂದ ಕೂಡಿದೆ. ಹೀಗಾಗಿ ಈ ಬಾರಿಯ ಬಹುರೂಪಿಯನ್ನು ಬಹಿಷ್ಕರಿಸುತ್ತೇವೆ” ಎಂದು ತಿಳಿಸಿದರು.

ಯಾವುದೇ ಪಕ್ಷ ಹಾಗೂ ಸಿದ್ಧಾಂತ ಹಿನ್ನೆಲೆವುಳ್ಳವರನ್ನು ಹಾಗೂ ರಂಗಭೂಮಿಗೆ ಯಾವುದೇ ಕೊಡುಗೆಯನ್ನು ನೀಡದ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕಾ ಅವಿನಾಶ್ ಅವರನ್ನು ಬಹುರೂಪಿಗೆ ಆಹ್ವಾನಿಸಿರುವುದನ್ನು ಖಂಡಿಸಬೇಕು. ಬಹುರೂಪಿಯ ಅತಿಥಿಗಳ ಪಟ್ಟಿಯಲ್ಲಿ ಜಾವೇದ್ ಅಖ್ತರ್, ನಾಸೀರ್ ವುದ್ದೀನ್ ಶಾ ಸೇರಿದಂತೆ ಬಹುದೊಡ್ಡ ಕಲಾವಿದರು ಇದ್ದಾರೆ. ರಂಗಾಯಣ ಇತಿಹಾಸವನ್ನು ಅಲ್ಲಿನ ನಿರ್ದೇಶಕರು ಗೌರವಿಸಬೇಕು ಎಂದು ಆಗ್ರಹಿಸಿದ್ದಾರೆ.

ಆಯ್ಕೆ ನಮ್ಮದು ಎಂದು ಉದ್ದಟತನದಿಂದ ಮಾತನಾಡಬಾರದು. ರಂಗ ಸಮಾಜದ ನಿರ್ದೇಶನದಂತೆ ನಿರ್ಧಾರ ಕೈ ಗೊಳ್ಳಬೇಕು. ಇದರ ವಿರುದ್ಧವಾಗಿ ಪ್ರತಿಭಟಿಸಿದ ಕಿರಿಯ ಕಲಾವಿದರಿಗೆ ಉದ್ದಟತನದಿಂದ ಮಾತನಾಡಿದ ರಂಗಾಯಣ ನಿರ್ದೇಶಕ ರಂಗಾಯಣ ಕಾರ್ಯಪ್ಪ ಅವರ ಕಡೆ ಖಂಡನೀಯ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಬಹುರೂಪಿಯನ್ನು ಸಾರ್ವಜನಿಕವಾಗಿ ಬಹಿಷ್ಕಾರಿಸಬೇಕು ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.


ಇದನ್ನೂ ಓದಿರಿ: ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಮುಂದೂಡಿಕೆ


ಈ ಕುರಿತಂತೆ ಪತ್ರವನ್ನು ಬರೆದಿರುವ ಚಿಂತಕರು, “ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ರಂಗಾಯಣ ಕನ್ನಡಿಗರ, ಕನ್ನಡದ ಸೃಜನಶೀಲ ಕಲಾವಿದರ ಸ್ವತ್ತಾಗಿದ್ದು ಈ ಸಂಸ್ಥೆಯನ್ನು ದಾರಿತಪ್ಪಿಸುವಂತಹ ನೀತಿಗಳನ್ನು ಅನುಸರಿಸುತ್ತಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ಕೂಡಲೇ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆಯನ್ನು ನಡೆಸುತ್ತೇವೆ. ರಂಗಾಯಣ ಕನ್ನಡಿಗರ ಆಸ್ತಿ ಇದರ ಸ್ವಾಯತ್ತತೆಯ ರಕ್ಷಣೆಗಾಗಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಸಿದ್ದಾರೆ.

ಪತ್ರದಲ್ಲಿ ಏನಿದೆ?

ಕನ್ನಡ ರಂಗಭೂಮಿಯ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೈಸೂರಿನ ರಂಗಾಯಣ ಪ್ರತಿವರ್ಷ ನಡೆಸುತ್ತಾ ಬಂದಿರುವ ಬಹುರೂಪಿ ನಾಟಕೋತ್ಸವ ಅನೇಕ ಕಾರಣಗಳಿಗಾಗಿ ಬಹಳ ಮುಖ್ಯವಾದ ಉತ್ಸವ. ವಿಭಿನ್ನ ರಾಜ್ಯಗಳ, ಭಾಷೆಗಳ, ಸಂಸ್ಕøತಿಗಳ ಸಂಗಮವಾಗಿಯೂ ಇದಕ್ಕೆ ಮಹತ್ವ ಇದೆ. ಇಲ್ಲಿ ನಡೆಯುವ ವಿಚಾರ ಸಂಕಿರಣ, ಸಂವಾದ, ಚರ್ಚೆಗಳು ನಮ್ಮ ಚಿಂತನೆಯನ್ನು ಹರಿತಗೊಳಿಸುವ ಹೊಸ ಹೊಸ ಎತ್ತರಗಳಿಗೆ ಕೊಂಡೊಯ್ಯುವ ಆಶಯಕ್ಕೆ ಇಂಬಾಗಲು ನೆರವು ನೀಡುತ್ತವೆ. ಹೀಗಾಗಿ ಇಡೀ ಕರ್ನಾಟಕದ ಜನ ಈ ಹಬ್ಬವನ್ನು ಬಹಳ ಕುತೂಹಲದಿಂದ ಗಮನಿಸುತ್ತಾರೆ ಮತ್ತು ಸಕ್ರಿಯವಾಗಿ ಈ ಹಬ್ಬದಲ್ಲಿ ಭಾಗವಹಿಸುತ್ತಾರೆ.

ಆಡಳಿತ ಪಕ್ಷ ಯಾವುದೇ ಇರಲಿ, ಇಲ್ಲಿಯ ಚಿಂತನೆಗೆ, ಜನತಂತ್ರದ ಆಶಯಕ್ಕೆ, ಸ್ವಾಯತ್ತತೆಗೆ ಧಕ್ಕೆ ಬಾರದ ರೀತಿಯಲ್ಲಿ ಈ ಹಬ್ಬಗಳು ಈವರೆಗೆ ನಡೆದುಕೊಂಡುಬಂದಿವೆ. ಆದರೆ ಈ ಬಾರಿಯ ಬಹುರೂಪಿ ಉತ್ಸವ ಇಂಥ ಆಶಯವನ್ನು ದಿಕ್ಕುತಪ್ಪಿಸುವಂತೆ ಕಾಣುತ್ತಿದೆ. ಬಹುರೂಪಿಯ ಉದ್ಘಾಟನೆ ಮತ್ತು ಸಮಾರೋಪದ ಅತಿಥಿಗಳನ್ನು ಆಯ್ಕೆ ಮಾಡುವ ಸಂದರ್ಭಗಳಲ್ಲಿ ಯಾವುದೇ ನಿರ್ದಿಷ್ಟ ಮಾನದಂಡಗಳು ಇಲ್ಲವಾದರೂ, ಸಾಮಾನ್ಯವಾಗಿ ನಾಟಕ, ರಂಗಭೂಮಿ, ಕಲೆ, ಸಾಹಿತ್ಯ ಮತ್ತಿತರ ಸೃಜನಶೀಲ ಪ್ರಕಾರಗಳಲ್ಲಿ ಕೊಡುಗೆ ನೀಡಿದವರನ್ನು ಆಯ್ಕೆ ಮಾಡುವುದು ವಾಡಿಕೆ. ಎಲ್ಲ ರೀತಿಯ ಚಿಂತನಾ ವಾಹಿನಿಗಳನ್ನು ಪ್ರತಿನಿಧಿಸುವ ದೇಶದ, ರಾಜ್ಯದ ಮಹಾನ್ ಚಿಂತಕರು ಈ ವೇದಿಕೆಗಳನ್ನಲಂಕರಿಸಿ ನಾಟಕೋತ್ಸವದ ಆಶಯಗಳನ್ನು ಬೆಂಬಲಿಸಿದ್ದಾರೆ.

ಈ ಬಾರಿಯ ನಾಟಕೋತ್ಸವಕ್ಕೆ ಆಶಯ ಭಾಷಣ ಮಾಡಲು ಚಿತ್ರನಟಿ ಮತ್ತು ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಅವರನ್ನೂ, ಸಮಾರೋಪ ಭಾಷಣ ಮಾಡಲು ಸಂಘಪರಿವಾರದ ಪರಿಚಾರಕ ಮತ್ತು ಬಲಪಂಥೀಯ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಯ್ಕೆ ಮಾಡಿರುವುದು ಸೋಜಿಗ ಹುಟ್ಟಿಸುವಂತಿದೆ. ಈ ಆಯ್ಕೆ ರಂಗಾಯಣದ ಮೂಲ ಆಶಯಗಳಿಗೆ ಮತ್ತು ಕನ್ನಡ ಸಾಂಸ್ಕೃತಿಕ ಲೋಕದ ಆದರ್ಶಗಳಿಗೆ ವ್ಯತಿರಿಕ್ತವಾಗಿದೆ. ಮಾಳವಿಕಾ ಅವಿನಾಶ್ ನೇರವಾಗಿ ಆಡಳಿತಾರೂಢ ರಾಜಕೀಯ ಪಕ್ಷದೊಡನೆ ಮತ್ತು ಅದರ ಮೂಲ ಸಿದ್ಧಾಂತಗಳೊಡನೆ ಗುರುತಿಸಿಕೊಂಡವರಾಗಿದ್ದಾರೆ. ಹಾಗೆಯೇ ಚಕ್ರವರ್ತಿ ಸೂಲಿಬೆಲೆ ತಮ್ಮ ಪ್ರಖರ ಎನ್ನಲಾಗುವ ಭಾಷಣಗಳ ಮೂಲಕ ಕೋಮು ದ್ವೇಷವನ್ನು ಹರಡುವ, ಸುಳ್ಳು ಇತಿಹಾಸವನ್ನು ಪ್ರಚಾರ ಮಾಡುವ ಸಂಘಪರಿವಾರದ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಇಬ್ಬರಿಂದ ರಂಗಭೂಮಿ ಕ್ಷೇತ್ರಕ್ಕೆ ಯಾವುದೇ ವಿಧವಾದ ಕೊಡುಗೆ ಇಲ್ಲ. ತಮ್ಮ ಕೋಮುವಾದಿ ಚಿಂತನೆಗಳ ಮೂಲಕ ಸಮಾಜದಲ್ಲಿ ದ್ವೇಷದ ವಿಷಬೀಜಗಳನ್ನು ಬಿತ್ತುವುದರಲ್ಲಿ ಸಂಘಪರಿವಾರದ ಪರಿಚಾರಕರಾಗಿ ಅವಿರತ ಶ್ರಮಿಸುತ್ತಿರುವ ಶ್ರೀಯುತ ಚಕ್ರವರ್ತಿ ಸೂಲಿಬೆಲೆ ಅವರನ್ನು “ಬಹುರೂಪಿ ನಾಟಕೋತ್ಸವ ”ದಂತಹ ಒಂದು ಸೃಜನಶೀಲ ವೇದಿಕೆಯಲ್ಲಿ ಸಮಾರೋಪ ಅತಿಥಿಯಾಗಿ ಆಹ್ವಾನಿಸಿರುವುದು ಖಂಡಿತಾ ಒಪ್ಪುವ ಮಾತಲ್ಲ. ಈ ನಡೆಯನ್ನು ನಾವು ಖಂಡಿಸುತ್ತೇವೆ.


ಇದನ್ನೂ ಓದಿರಿ: ಬಹುರೂಪಿಗೆ ಸೂಲಿಬೆಲೆ, ಮಾಳವಿಕಾಗೆ ಆಹ್ವಾನ ವಿರೋಧಿಸಿ ‘ಪರ್ವ’ ಕಿರಿಯ ಕಲಾವಿದರಿಂದ ರಂಗಾಯಣಕ್ಕೆ ಪತ್ರ


ರಂಗಾಯಣ ಕನ್ನಡಿಗರ ಸಾಂಸ್ಕೃತಿಕ ಸಂಸ್ಥೆ ಮಾತ್ರವಲ್ಲ, ಅದೊಂದು ಸ್ವಾಯತ್ತ ಸಂಸ್ಥೆ. ಆಳುವ ಪಕ್ಷ ಯಾವುದೇ ಇರಲಿ, ರಂಗಾಯಣ ನಿದೇರ್ಶಕರ ಒಲವು-ನಿಲುವು ಏನೇ ಇರಲಿ, ರಂಗಾಯಣದ ಮೂಲ ಆಶಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಂಗಾಯಣದ ಚಟುವಟಿಕೆಗಳು ನಡೆಯಬೇಕು. ಇದನ್ನು ಕೋಮುವಾದಿಗಳ ವೇದಿಕೆಯಾಗಿ ಪರಿವರ್ತಿಸುವುದು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವ ನಮ್ಮ ಜನತಂತ್ರ ವ್ಯವಸ್ಥೆಯ ಮುನ್ನಡೆಗೆ ತಡೆಯೊಡ್ಡುತ್ತದೆ. ಇತ್ತೀಚಿನ ದಿನಗಳಲ್ಲಿ ರಂಗಾಯಣ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪ ಅವರು ರಂಗಾಯಣದ ಮೂಲ ಆದರ್ಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ. ರಂಗಾಯಣ ರಾಜಕೀಯದಿಂದ ಮುಕ್ತವಾದ ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿದ್ದು, ಯಾವುದೇ ರೀತಿಯ ರಾಜಕೀಯ ಹಸ್ತಕ್ಷೇಪ ರಂಗಾಯಣದ ಆಡಳಿತ ನಿರ್ವಹಣೆಯಲ್ಲಿ ಸಲ್ಲದು. ಅಡ್ಡಂಡ ಕಾರ್ಯಪ್ಪ ಅವರು ನೇರವಾಗಿಯೇ ತಾವು ರಾಜಕೀಯ ಪಕ್ಷದ ಪ್ರತಿನಿಧಿಯಂತೆ ವರ್ತಿಸುತ್ತಿದ್ದು, ರಂಗಾಯಣದ ನಿರ್ದೇಶಕರಾಗಿ ತಮ್ಮ ಜವಾಬ್ದಾರಿಯನ್ನು ಮರೆತಂತೆ ನಡೆದುಕೊಳ್ಳುತ್ತಿರುವುದನ್ನು ನಾವು ಖಂಡಿಸುತ್ತೇವೆ. ರಂಗಾಯಣದ ಕಿರಿಯ ಕಲಾವಿದರನ್ನು ಬೆದರಿಸುವ ಮೂಲಕ ಅಡ್ಡಂಡ ಕಾರ್ಯಪ್ಪ ಅವರು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವುದನ್ನು ನಾವು ಖಂಡಿಸುತ್ತೇವೆ.

ತನ್ನ ಮೂರು ದಶಕಗಳ ಇತಿಹಾಸದಲ್ಲಿ ರಂಗಾಯಣವನ್ನು ಕಟ್ಟಲು ರಾಜ್ಯದ ಹಲವಾರು ರಂಗಕರ್ಮಿಗಳು, ಸಾಹಿತಿಗಳು, ಚಿಂತಕರು ಶ್ರಮಿಸಿದ್ದು, ಯಾವುದೇ ರೀತಿಯ ರಾಜಕೀಯ ಸೋಂಕು ಇಲ್ಲದೆಯೇ ನಡೆದುಬಂದಿದೆ. ಬಹುರೂಪಿ ನಾಟಕೋತ್ಸವದ ಉದ್ಘಾಟನೆ ಮತ್ತು ಸಮಾರೋಪದ ಅತಿಥಿಗಳಾಗಿ ಈವರೆಗೂ ಯಾವುದೇ ರಾಜಕೀಯ ವ್ಯಕ್ತಿಯನ್ನು ಆಹ್ವಾನಿಸಿದ ಉದಾಹರಣೆಗಳಿರುವುದಿಲ್ಲ. ಆದರೆ ಅಡ್ಡಂಡ ಕಾರ್ಯಪ್ಪ ತಮ್ಮ ವೈಯಕ್ತಿಕ ರಾಜಕೀಯ ನಿಲುವು ಮತ್ತು ಒಲವುಗಳನ್ನ ರಂಗಾಯಣಕ್ಕೂ ಎಳೆದುತಂದಿರುವುದು ಅಕ್ಷಮ್ಯ. ತಮ್ಮ ವ್ಯಕ್ತಿಗತ ರಾಜಕೀಯ-ಸೈದ್ದಾಂತಿಕ ನಿಲುಮೆಗಳನ್ನು ರಂಗಾಯಣದ ಚಟುವಟಿಕೆಗಳ ಮೇಲೆ ಹೇರುವುದನ್ನು ನಾವು ಖಂಡಿಸುತ್ತೇವೆ.

ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ರಂಗಾಯಣ ಕನ್ನಡಿಗರ,, ಕನ್ನಡದ ಸೃಜನಶೀಲ ಕಲಾವಿದರ ಸ್ವತ್ತಾಗಿದ್ದು ಈ ಸಂಸ್ಥೆಯನ್ನು ದಾರಿತಪ್ಪಿಸುವಂತಹ ನೀತಿಗಳನ್ನು ಅನುಸರಿಸುತ್ತಿರುವ ಅಡ್ಡಂಡ ಕಾರ್ಯಪ್ಪ ಅವರನ್ನು ಕೂಡಲೇ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆಯನ್ನು ನಡೆಸುತ್ತೇವೆ. ರಂಗಾಯಣ ಕನ್ನಡಿಗರ ಆಸ್ತಿ ಇದರ ಸ್ವಾಯತ್ತತೆಯ ರಕ್ಷಣೆಗಾಗಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ.

ಇದಿಷ್ಟು ಪತ್ರದ ಪೂರ್ಣಾಂಶ

ಚಿಂತಕರಾದ ಪ.ಮಲ್ಲೇಶ್, ಕಾಳೇಗೌಡ ನಾಗವಾರ, ನಾ. ದಿವಾಕರ, ಕೆ.ಪಿ.ಸುರೇಶ್‌, ಎನ್.ಎಸ್.ಗೋಪಿನಾಥ್, ಮೈಮ್ ರಮೇಶ್, ಮಾಧವ ಖರೆ, ಕೆ.ಎಸ್.ಶಿವರಾಮು, ಭೋ.ಗ.ನಂದೀಶ್, ವಿ.ಪುರುಷೋತ್ತಮ, ರಾಜೇಶ್, ಡಾ.ವಿ.ಲಕ್ಷ್ಮೀನಾರಾಯಣ್, ರತಿರಾವ್, ಪ್ರೊ.ಪಂಡಿತಾರಾಧ್ಯ, ಜಿ.ಪಿ.ಬಸವರಾಜು, ಪ್ರೊ.ವಿ.ಎನ್.ಲಕ್ಷ್ಮೀನಾರಾಯಣ, ಆನಂದ, ಎಂ.ಎಫ್.ಖಲೀಂ, ಖಾದರ್ ಅಹಮದ್, ಜಗದೀಶ್ ಸೂರ್ಯ, ಲ.ಜಗನ್ನಾಥ್, ನ.ಶಿವಮೂರ್ತಿ, ಜನಾರ್ದನ (ಜನ್ನಿ), ಮಂಜು ಮಂಗಲ, ಕಾತ್ಯಾಯಿನಿ, ಕೆ.ಗೋಪಾಲ ಕೃಷ್ಣ, ಸ.ರ.ಸುದರ್ಶನ್‌‌ ಮತ್ತಿತ್ತರು ಶನಿವಾರ ಸಂಜೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದು, ಈ ಮೇಲಿನ ಪತ್ರವನ್ನು ಬರೆದಿದ್ದಾರೆ.


ಇದನ್ನೂ ಓದಿರಿ: ಸೂಲಿಬೆಲೆ ಹೇಳುವುದು ನಿಮಗೆ ಸುಳ್ಳಾಗಿರಬಹುದು, ನಮಗಲ್ಲ: ರಂಗಾಯಣ ನಿರ್ದೇಶಕ

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಎಸ್‌‌ಪಿ ನಾಯಕ ಮುಲಾಯಂ ಸೊಸೆ ಬಿಜೆಪಿಗೆ ಸೇರ್ಪಡೆ: ಮಾಧ್ಯಮಗಳಲ್ಲಿ ಮರೆಯಾದ ಒಂದು ಅಂಶ!

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್ ಅವರ ಸೊಸೆ ಅಪರ್ಣಾ ಯಾದವ್‌ ಅವರು ಬಿಜೆಪಿ ಸೇರಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಎಸ್‌ಪಿಗೆ ಹಿನ್ನೆಡೆಯಾಗುವ ಸಾಧ್ಯತೆ ಎಂದು ಕೆಲವು...
Wordpress Social Share Plugin powered by Ultimatelysocial