ಗಾಝಾಗೆ ಮಾನವೀಯ ನೆರವು ಹೊತ್ತು ಸಾಗಿದ್ದ ‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ಬೋಟ್‌ಗಳನ್ನು ತಡೆದು, ಹೋರಾಟಗಾರರನ್ನು ಬಂಧಿಸಿದ ಬಳಿಕ, ಜಗತ್ತಿನಾದ್ಯಂತ ಇಸ್ರೇಲ್ ವಿರುದ್ದ ಆಕ್ರೋಶ ಭುಗಿಲೆದ್ದಿದೆ.
ಪ್ರಮುಖವಾಗಿ ಯುರೋಪ್‌ನಾದ್ಯಂತ ಕಳೆದ ನಾಲ್ಕು ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಲಕ್ಷಾಂತರ ಜನರು ಪ್ರತಿಭಟನೆಗಳಲ್ಲಿ ಭಾಗವಹಿಸಿ, ‘ಗಾಝಾ ಮೇಲಿನ ಆಕ್ರಮಣವನ್ನು ತಕ್ಷಣ ನಿಲ್ಲಿಸಬೇಕು ಮತ್ತು ಬಂಧಿತ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದ್ದಾರೆ.
ರೋಮ್ ನಗರದಲ್ಲಿ ಸತತ ನಾಲ್ಕನೇ ದಿನವಾದ ಶನಿವಾರ (ಅ.4) ನಡೆದ ಪ್ರತಿಭಟನೆಗಳಲ್ಲಿ 250,000 ಜನರು ಭಾಗವಹಿಸಿದ್ದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಅಲ್-ಜಝೀರಾ ವರದಿ ಮಾಡಿದೆ.
ಇಟಲಿ ರಾಜಧಾನಿಯಲ್ಲಿ ನಡೆದ ಪ್ರತಿಭಟನೆಯಲ್ಲಿ, ಮಕ್ಕಳು, ದೊಡ್ಡವರು ಎನ್ನದೆ ಕುಟುಂಬಗಳೇ ಭಾಗವಹಿಸಿ, “ನಾವೆಲ್ಲರೂ ಪ್ಯಾಲೆಸ್ತೀನಿಯರು”, “ಫ್ರೀ ಪ್ಯಾಲೆಸ್ಟೈನ್” ಮತ್ತು “ನರಮೇಧವನ್ನು ನಿಲ್ಲಿಸಿ” ಇತ್ಯಾದಿ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಅನೇಕರು ಪ್ಯಾಲೆಸ್ತೀನ್ ಧ್ವಜಗಳನ್ನು ಹಿಡಿದಿದ್ದರು ಮತ್ತು ಕಪ್ಪು-ಬಿಳಿ ಚೌಕವಿನ್ಯಾಸದ ಕೆಫಿಯೆ ಶಾಲುಗಳನ್ನು ಧರಿಸಿದ್ದರು ಎಂದು ವರದಿ ವಿವರಿಸಿದೆ.
ಸ್ಪೇನ್‌ನ ಬಾರ್ಸಿಲೋನಾದಲ್ಲಿ ಸುಮಾರು 70,000 ಜನರು ಪ್ಯಾಲೆಸ್ತೀನ್ ಪರ ಬೀದಿಗಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮ್ಯಾಡ್ರಿಡ್ ಸರ್ಕಾರವು ರಾಜಧಾನಿಯಲ್ಲಿ ಸುಮಾರು 92,000 ಜನರು ಮೆರವಣಿಗೆ ನಡೆಸಿದ್ದಾರೆ ಎಂದು ಹೇಳಿದೆ.
ಮಾರ್ಟಾ ಕ್ಯಾರಾಂಜಾ ಎಂಬ 65 ವರ್ಷದ ವ್ಯಕ್ತಿ, ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರು ಪ್ಯಾಲೆಸ್ತೀನ್ ಧ್ವಜವನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ಗಾಝಾ ಜನತೆಗೆ ಬೆಂಬಲ ವ್ಯಕ್ತಪಡಿಸಿದರು. ಇಸ್ರೇಲ್‌ನ ನೀತಿಗಳು ಹಲವು ವರ್ಷಗಳಿಂದ ತಪ್ಪಾಗಿವೆ ಎಂದು ಟೀಕಿಸಿದ ಅವರು, ಈ ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಜನರು ಬೀದಿಗಿಳಿಯಬೇಕೆಂದು ಕರೆ ನೀಡಿದರು ಎಂದು ಅಲ್-ಜಝೀರಾ ವರದಿ ವಿವರಿಸಿದೆ.
ಐರ್ಲೆಂಡ್‌ನ ರಾಜಧಾನಿ ಡಬ್ಲಿನ್‌ನ ಕೇಂದ್ರ ಭಾಗದಲ್ಲಿ ನಡೆದ ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಎರಡು ವರ್ಷಗಳಿಂದ ಇಸ್ರೇಲ್ ಗಾಝಾದಲ್ಲಿ ‘ನರಮೇಧ’ ನಡೆಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪೇನ್ ಜೊತೆಗೆ ಐರ್ಲೆಂಡ್ ಕೂಡ ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸುವ ಯುರೋಪಿನ ಪ್ರಮುಖ ದೇಶಗಳಲ್ಲಿ ಒಂದಾಗಿದೆ.
ಐರ್ಲೆಂಡ್ ಪ್ರತಿಭಟನೆಯಲ್ಲಿ ಭಾಷಣಕಾರರು ಇಸ್ರೇಲ್ ಮೇಲೆ ಆರ್ಥಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ವಿಧಿಸಬೇಕೆಂದು, ಗಾಝಾದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ತಕ್ಷಣ ಕೊನೆಗೊಳಿಸಬೇಕೆಂದು ಮತ್ತು ಯಾವುದೇ ರೀತಿಯ ಕದನ ವಿರಾಮ ಒಪ್ಪಂದದಲ್ಲಿ ಪ್ಯಾಲೆಸ್ತೀನ್‌ನವರನ್ನು ಸಕ್ರಿಯವಾಗಿ ಒಳಗೊಳ್ಳಿಸಬೇಕೆಂದು ಒತ್ತಾಯಿಸಿದ್ದಾರೆ.
ಲಂಡನ್‌ನಲ್ಲಿ ‘ಪ್ಯಾಲೆಸ್ಟೈನ್ ಆಕ್ಷನ್’ ಎಂಬ ನಿಷೇಧಿತ ಗುಂಪನ್ನು ಬೆಂಬಲಿಸಿ ಸಭೆ ಸೇರಿದ್ದ ಕನಿಷ್ಠ 442 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪ್ಯಾರಿಸ್‌ನಲ್ಲಿ ಸುಮಾರು 10,000 ಜನರು ಪ್ಯಾಲೆಸ್ತೀನ್ ಪರ ಪ್ರತಿಭಟನೆಗೆ ಒಟ್ಟುಗೂಡಿದ್ದರು. ಸುಮುದ್ ಫ್ಲೊಟಿಲ್ಲಾದ ಫ್ರೆಂಚ್ ತಂಡದ ವಕ್ತಾರೆ ಹೆಲೆನ್ ಕೊರೊನ್ ಮಾತನಾಡಿ, “ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ” ಎಂದು ಘೋಷಿಸಿದ್ದಾರೆ ಎಂದು ವರದಿಗಳು ಹೇಳಿವೆ.
“ಸುಮುದ್ ಪ್ಲೋಟಿಲ್ಲಾವನ್ನು ಇಸ್ರೇಲ್ ತಡೆದಿರಬಹುದು. ಇಷ್ಟಕ್ಕೆ ನಾವು ಸುಮ್ಮನಾಗುವುದಿಲ್ಲ, ಇನ್ನೊಂದು ಫ್ಲೋಟಿಲ್ಲಾ ಹೋಗಲಿದೆ. ಗಾಝಾ ಆಕ್ರಮಣದಿಂದ ಮುಕ್ತವಾಗಿ ಜನರಿಗೆ ನೆರವು ತಲುಪುವವರೆಗೆ ನಮ್ಮ ಪ್ರಯತ್ನ ಮುಂದುವರಿಯುತ್ತದೆ” ಎಂದು ಹೆಲೆನ್ ಕೊರೊನ್ ಹೇಳಿದ್ದಾರೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯವರ ಬಲಪಂಥೀಯ ಸರ್ಕಾರವು ಗಾಝಾದ ವಿಷಯದಲ್ಲಿ ಯಾವುದೇ ಮಹತ್ವದ ಕ್ರಮ ಕೈಗೊಳ್ಳದಿರುವುದಕ್ಕೆ ಜನರ ಟೀಕೆಯನ್ನು ಎದುರಿಸುತ್ತಿದ್ದಾರೆ.
ಈ ನಡುವೆ ಶನಿವಾರ, ಮೆಲೋನಿ ಅವರು ರೋಮ್‌ನ ಪ್ರಮುಖ ರೈಲ್ವೆ ನಿಲ್ದಾಣದ ಮುಂದಿರುವ ಪೋಪ್ ಜಾನ್ ಪಾಲ್ II ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ವಿರೂಪಗೊಳಿಸಿದ್ದಾರೆ ಎಂದು ಆರೋಪಿಸಿದ್ದು, ಇದು ನಾಚಿಕೆಗೇಡಿನ ಕೃತ್ಯ ಎಂದಿದ್ದಾರೆ. ಪ್ರತಿಭಟನಾಕಾರರ ವರ್ತನೆಯನ್ನು ಖಂಡಿಸಿದ್ದಾರೆ.
ಸೆಪ್ಟೆಂಬರ್ 14 ರಂದು, ಸ್ಪೇನ್‌ನ ರಾಜಧಾನಿಯಲ್ಲಿ ನಡೆಯುತ್ತಿದ್ದ ‘ವುಎಲ್ಟಾ ಎ ಎಸ್ಪಾನಾ’ ಎಂಬ ಪ್ರಮುಖ ಸೈಕ್ಲಿಂಗ್ ರೇಸ್‌ನ ಕೊನೆಯ ಹಂತವನ್ನು ಸುಮಾರು 100,000 ಪ್ಯಾಲೆಸ್ತೀನ್ ಬೆಂಬಲಿಗ ಪ್ರತಿಭಟನಾಕಾರರು ತಡೆದಿದ್ದರು. ರೇಸ್‌ನಲ್ಲಿ ಇಸ್ರೇಲಿ ತಂಡ ಭಾಗವಹಿಸಿತ್ತು ಎನ್ನುವುದು ಇದಕ್ಕೆ ಕಾರಣ.
ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೆಜ್ ಅವರು ಗಾಝಾದಲ್ಲಿ ಆಕ್ರಮಣ ನಡೆಸುತ್ತಿರುವ ಹಿನ್ನೆಲೆ, ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಂದ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಉಕ್ರೇನ್ ಮೇಲಿನ ಆಕ್ರಮಣದ ಕಾರಣಕ್ಕೆ ರಷ್ಯಾವನ್ನು ಕ್ರೀಡೆಗಳಿಂದ ಹೊರಗಿಟ್ಟಿರುವಂತೆಯೇ, ಇಸ್ರೇಲ್‌ಗೂ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ, ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿರುವ ಇಸ್ರೇಲಿ ವಸಾಹತುಗಳಿಂದ ಆಮದುಗಳನ್ನು ನಿಷೇಧಿಸುವುದಾಗಿ ಸ್ಪೇನ್ ಘೋಷಿಸಿತ್ತು. ಆಕ್ರಮಿತ ವೆಸ್ಟ್ ಬ್ಯಾಂಕ್‌ನಿಂದ ಇಸ್ರೇಲ್‌ನ ರಫ್ತು ಅಂತಾರಾಷ್ಟ್ರೀಯ ಕಾನೂನಿನಡಿ ಅಕ್ರಮವೆಂದು ಪರಿಗಣಿಸಲ್ಪಟ್ಟಿದೆ ಎಂದಿತ್ತು.
ಗ್ರೇಟಾ ಥನ್‌ಬರ್ಗ್ ಸೇರಿದಂತೆ ಸುಮುದ್ ಫ್ಲೋಟಿಲ್ಲಾ ತಂಡದ ಮೇಲೆ ದೌರ್ಜನ್ಯ: ಇಸ್ರೇಲ್ ವಿರುದ್ದ ಗಂಭೀರ ಆರೋಪ


