ಪುದುಚೇರಿ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಆಧಾರ್ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ವೈಯಕ್ತಿಕ ಮಾಹಿತಿ ಹಾಗೂ ವಾಟ್ಸಾಪ್ ಸಂಖ್ಯೆಗಳನ್ನು ಸಂಗ್ರಹಿಸಿ ಪ್ರಚಾರ ಸಂದೇಶಗಳನ್ನು ಕಳುಹಿಸುತ್ತಿದೆ ಎಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಪುದುಚೇರಿ ಡಿವೈಎಫ್‌ಐ ಘಟಕದ ಅಧ್ಯಕ್ಷ ಆನಂದ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅರ್ಜಿಯನ್ನು ಕೈಗೆತ್ತಿಕೊಂಡಿರುವ ಮದ್ರಾಸ್ ಹೈಕೋರ್ಟ್, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಿ ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಇದು ಗಂಭೀರ ಅಪರಾಧವಾಗಿದ್ದು, ಚುನಾವಣಾ ಆಯೋಗದ ತನಿಖೆಯನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ತುಮಕೂರು: ಸಮಾಧಿ ಗುಂಡಿಯಿಂದ ದಲಿತ ಶಿಶುವಿನ ಮೃತದೇಹ ಹೊರತೆಗೆಸಿ ಅಮಾನವೀಯತೆ!
ಡಿವೈಎಫ್‌ಐ ಸಲ್ಲಿಸಿದ ಅರ್ಜಿಯಲ್ಲಿ, “ಸ್ಥಳೀಯ ಬಿಜೆಪಿ ಮುಖಂಡರು ಆಧಾರ್‌ನಿಂದ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ನಂತರ ಪ್ರತಿ ಕ್ಷೇತ್ರದಲ್ಲಿ ಬೂತ್ ಮಟ್ಟದ ವಾಟ್ಸಾಪ್ ಗುಂಪುಗಳನ್ನು ಸ್ಥಾಪಿಸಲಾಗಿದೆ. ಅನೇಕ ವಾಟ್ಸಾಪ್ ಗುಂಪುಗಳನ್ನು ಈ ರೀತಿ ನಿರ್ಮಿಸಲಾಗಿದ್ದು, ಈ ಕಾರ್ಯವು ಬೂತ್ ಆಧಾರಿತ ಮತದಾರರನ್ನು ಕೇಂದ್ರೀಕರಿಸಿದೆ. ವಿಧಾನಸಭಾ ಕ್ಷೇತ್ರಗಳ ಸಂದೇಶಗಳು ಮತ್ತು ಪ್ರಚಾರಗಳನ್ನು ಈ ಮೂಲಕ ಹಂಚಿಕೊಳ್ಳಲಾಗುಗುತ್ತಿದೆ” ಎಂದು ಹೇಳಲಾಗಿದೆ.
ಬಿಜೆಪಿ ವಾಟ್ಸಾಪ್ ಗುಂಪುಗಳ ನಿರ್ವಾಹಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ನಂತರ ಪುದುಚೇರಿ ಘಟಕ ಒಂದರ ಅಡಿಯಲ್ಲೇ ಮತದಾರರ 953 ವಾಟ್ಸಾಪ್ ಗುಂಪುಗಳಿವೆ ಎಂಬ ಆಘಾತಕಾರಿ ಮಾಹಿತಿ ಸಿಕ್ಕಿದೆ ಎಂದು ಡಿವೈಎಫ್‌ಐ ದೂರಿನಲ್ಲಿ ತಿಳಿಸಿದೆ.
ವಾಟ್ಸಾಪ್ ಮಾತ್ರವಲ್ಲದೆ ಬಿಜೆಪಿ ನಾಯಕರು ಕೂಡ ಮತದಾರರಿಗೆ ಫೋನ್ ಮಾಡಿದ್ದಾರೆ. ಫೋನ್, ಹೆಸರು, ಮತದಾನ ಕೇಂದ್ರ ಮತ್ತು ವಿಧಾನಸಭಾ ಕ್ಷೇತ್ರದಂತಹ ಮಾಹಿತಿಯನ್ನು ಫೋನ್ ಮೂಲಕ ಕೋರಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ವಿಶೇಷ ವಿಚಾರಣಾ ತಂಡವನ್ನು ನೇಮಿಸಬೇಕು ಮತ್ತು ಬಿಜೆಪಿ ಅಭ್ಯರ್ಥಿಗಳು ಈ ರೀತಿ ಮತಗಳನ್ನು ಕೇಳದಂತೆ ತಡೆಯಬೇಕು ಎಂದು ಡಿವೈಎಫ್‌ಐ ದೂರಿನಲ್ಲಿ ಕೋರಿದೆ.
ಇದನ್ನೂ ಓದಿ: ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ದ ಶಿವಮೊಗ್ಗದಲ್ಲಿ FIR ದಾಖಲು


