Homeಕರ್ನಾಟಕ‘ಶುದ್ಧ ಕನ್ನಡ’ ವಿವಾದ: ಕನ್ನಡ-ಸಂಸ್ಕೃತಿ ಇಲಾಖೆಗೆ ಸಾಹಿತಿಗಳ ತರಾಟೆ

‘ಶುದ್ಧ ಕನ್ನಡ’ ವಿವಾದ: ಕನ್ನಡ-ಸಂಸ್ಕೃತಿ ಇಲಾಖೆಗೆ ಸಾಹಿತಿಗಳ ತರಾಟೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿರುವ ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ ಸಂಬಂಧ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ ಡಾ.ಬಂಜಗೆರೆ ಜಯಪ್ರಕಾಶ್‌, ಡಾ.ರಂಗನಾಥ್‌ ಕಂಟನಕುಂಟೆ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -
- Advertisement -

ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸೃತಿ ಇಲಾಖೆಯು `ಕನ್ನಡಕ್ಕಾಗಿ ನಾವು’ ಅಭಿಯಾನ ಆರಂಭಿಸಿದ್ದು, ಈ ಅಭಿಯಾನದ ಭಾಗವಾಗಿ ಹಮ್ಮಿಕೊಂಡಿರುವ ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆ ಈಗ ವಿವಾದಕ್ಕೆ ಕಾರಣವಾಗಿದೆ. ‘ಮಾತಾಡ್‌ ಮಾತಾಡ್‌ ಕನ್ನಡ’ ಹೆಸರಿನ ಈ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಚಾಲನೆ ನೀಡಿದ್ದು, ರಾಜ್ಯಾದ್ಯಂತ ಕನ್ನಡ ಭಾಷೆ ಬಳಕೆಗೆ ಪ್ರೋತ್ಸಾಹಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

‘ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ ಅಕ್ಟೋಬರ್‌ 24ರಿಂದ 30ರವರೆಗೆ ನಡೆಯಲಿದೆ. ಈ ವೇಳೆ ರಾಜ್ಯದಲ್ಲಿ ಇರುವ ಕನ್ನಡಿಗರು, ಕನ್ನಡೇತರ ಭಾಷಿಕರು ಪ್ರೀತಿ ಮತ್ತು ಅಭಿಮಾನದಿಂದ ಕನ್ನಡದಲ್ಲಿ ಮಾತನಾಡಬೇಕು. ಆದರೆ, ಇದು ಕಡ್ಡಾಯವಲ್ಲ ಎಂದು ಇಲಾಖೆ ಮಾಹಿತಿ ನೀಡಿದೆ.

ಒಂದು ವಾರಗಳ ಕಾಲ ಕನ್ನಡಮಯ ವಾತಾವರಣ ಸೃಷ್ಟಿಸಲು ಹಲವು ಕಾರ್ಯಕ್ರಮಗಳನ್ನು ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕನ್ನಡದಲ್ಲೇ ಮಾತನಾಡುವುದು, ಕನ್ನಡದಲ್ಲೇ ವ್ಯವಹರಿಸುವುದು,  ಕನ್ನಡೇತರರಿಗೆ ಕನ್ನಡ ಕಲಿಸುವುದು ಸೇರಿದಂತೆ ಹಲವು ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಜನರಲ್ಲಿ ಸಚಿವರು ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಅ.28ರಂದು ಒಂದು ಲಕ್ಷ ಕಂಠಗಳಲ್ಲಿ ಒಂದು ಸಾವಿರ ಕಡೆಗಳಲ್ಲಿ ಕನ್ನಡದ ಮೂರು ಹಾಡುಗಳ ಸಾಮೂಹಿಕ ಗಾಯ ನಡೆಸಲಾಗುತ್ತದೆ. ಅನ್ಯಭಾಷೆಯ ಪದಗಳನ್ನು ಒಂದೂ ಬಳಸದೇ ಕನ್ನಡದಲ್ಲಿ ನಿರರ್ಗಳವಾಗಿ ನಾಲ್ಕು ನಿಮಿಷ ಕಾಲ‌ ನಾಡು-ನುಡಿಯ ಪರಂಪರೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಕಳುಹಿಸುವ ಸ್ಫರ್ಧೆ ನಡೆಸಲಾಗುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ!

ಅನ್ಯಭಾಷೆಯ ಪದಗಳ ಬಳಕೆ ಮಾಡದೆ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತ ವಿಡಿಯೊ ಸೆಲ್ಫಿ ತೆಗೆದು ಕಳುಹಿಸಬೇಕು. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಐದು ಸಾವಿರ ರೂ., ಮೂರು ಸಾವಿರ ರೂ. ಮತ್ತು ಎರಡು ಸಾವಿರ ರೂ. ಬಹುಮಾನ ನೀಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಪರಿಗಣಿಸಿ ಅಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 50 ಸಾವಿರ ರೂ. ದ್ವಿತೀಯ ಬಹುಮಾನ 30 ಸಾವಿರ ರೂ., ತೃತೀಯ ಬಹುಮಾನ 20 ಸಾವಿರ ರೂ. ನೀಡಲಾಗುತ್ತದೆ. ಅ.28ರೊಳಗೆ ವಿಡಿಯೋ ಕಳುಹಿಸಬೇಕು ಎಂದು ಇಲಾಖೆ ತಿಳಿಸಿದೆ. ಅಲ್ಲದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಫೇಸ್‌ಬುಕ್‌ ಪೇಜ್‌ನಲ್ಲಿ ‘ಶುದ್ಧ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ’ಯ ಪೋಸ್ಟರ್‌ ಹಂಚಿಕೊಳ್ಳಲಾಗಿದೆ. ಸಚಿವ ಸುನೀಲ್‌ಕುಮಾರ್ ಭಾವಚಿತ್ರ, ಸರ್ಕಾರದ ಲೋಗೋ ಈ ಪೋಸ್ಟರ್‌ನಲ್ಲಿ ಕಾಣಬಹುದು.

ಭಾಷೆಯನ್ನು ಶುದ್ಧ, ಅಶುದ್ಧ ಎಂದು ಒಡೆದು ನೋಡುವ ಪ್ರವೃತ್ತಿ ಇದೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.

ಭಾಷೆಯಲ್ಲಿ ಶುದ್ಧ, ಅಶುದ್ಧ ಎಂಬುದು ಇಲ್ಲ. ಕನ್ನಡದೊಂದಿಗೆ ಬೆರೆತಿರುವ ಇತರ ಭಾಷೆಗಳ ಪದಗಳನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ ಎಂದು ಭಾಷೆಯ ಕುರಿತು ಅಧ್ಯಯನ ಮಾಡಿರುವವರು ಪ್ರಶ್ನಿಸಿದ್ದಾರೆ. ಅನ್ಯಭಾಷೆ ಇಲ್ಲದ, ಶುದ್ಧ ಕನ್ನಡ ಮಾತನಾಡುವ ಸ್ಪರ್ಧೆಯ ಸಂಬಂಧ ‘ನಾನುಗೌರಿ.ಕಾಂ’ನೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್‌, ಭಾಷಾತಜ್ಞ ಡಾ.ರಂಗನಾಥ್‌ ಕಂಟನಕುಂಟೆ ಅವರು ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ.

ಇದನ್ನೂ ಓದಿರಿ: ವಿಶೇಷ ವರದಿ; #sackrohithchakrateerta ವಿವಾದದ ಸುತ್ತ

ಕನ್ನಡದಲ್ಲಿ ಶೇ. 19ರಷ್ಟು ಪದಗಳು ಮಾತ್ರ ಕನ್ನಡದ್ದಾಗಿವೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಜೀವಂತ ಭಾಷೆಯೊಳಗೆ ಶುದ್ಧವಾದ ಭಾಷೆ ಎಂಬುದು ಯಾವುದೂ ಇಲ್ಲ. ಜಗತ್ತಿನ ಯಾವುದಾದರೂ ಭಾಷೆ ಮಡಿವಂತಿಕೆಯನ್ನು ಇಟ್ಟುಕೊಂಡರೆ ಆ ಭಾಷೆ ಸಾಯುತ್ತದೆ. ಅದಕ್ಕೆ ಬಹುದೊಡ್ಡ ಉದಾಹರಣೆ ಸಂಸ್ಕೃತ. ಅದು ಸತ್ತಿದೆ. ಸಂಸ್ಕೃತಕ್ಕೆ ಜೀವ ಕೊಡಲಿಕ್ಕೆ ಪ್ರಯತ್ನ ಪಟ್ಟರೂ ಅದು ಗ್ರಂಥಿಕವಾಗಿ ಉಳಿಯುತ್ತದೆ ಹೊರತು, ಮೌಖಿಕವಾಗಿ ಬಳಕೆಗೆ ಬರುವುದಿಲ್ಲ, ಬಳಕೆಗೆ ಬಂದಿದೆ ಎಂದು ಹೇಳುತ್ತಿದ್ದರೆ ಅದು ದೊಡ್ಡ ಸುಳ್ಳು ಎನ್ನುತ್ತಾರೆ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ.

ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಮುಂದುವರಿದು, “ಕನ್ನಡದಲ್ಲಿ ಇಂದು ಕನ್ನಡ ಶಬ್ದಗಳು ಉಳಿದಿರುವುದು ಶೇ. 19ರಷ್ಟು ಮಾತ್ರ. ಮಿಕ್ಕೆಲ್ಲವೂ ಅನ್ಯಭಾಷೆಯ ಶಬ್ದಗಳಾಗಿವೆ. ಹೇರಳವಾಗಿ ಸಂಸ್ಕೃತದಿಂದ ಕನ್ನಡ ಶಬ್ದಗಳನ್ನು ತೆಗೆದುಕೊಂಡಿದ್ದೇವೆ. ‘ಅನ್ನ’ ಕನ್ನಡ ಅಲ್ಲ, ‘ಸೂರ್ಯ’ ಕನ್ನಡ ಅಲ್ಲ, ‘ಚಂದ್ರ’ ಕನ್ನಡ ಅಲ್ಲ, ‘ಲೋಕ’ ಕನ್ನಡ ಅಲ್ಲ. ಇವೆಲ್ಲವೂ ಸಂಸ್ಕೃತದಿಂದ ಬಂದಿರುವ ಪದಗಳು. ‘ಸುಮಾರು’ ಎನ್ನುವ ಶಬ್ದವೂ ಕನ್ನಡ ಅಲ್ಲ. ‘ಸುಮಾರು’ ಎಂಬ ಶಬ್ದವನ್ನು ಫ್ರೆಂಚ್‌ನಿಂದ ತೆಗೆದುಕೊಳ್ಳಲಾಗಿದೆ. ಹೀಗಿರುವಾಗ ಶುದ್ಧ ಕನ್ನಡದಲ್ಲಿ ಮಾತನಾಡಬೇಕು ಎಂಬುದರ ಅರ್ಥವೇನು? ಇಂಗ್ಲಿಷ್‌ ಶಬ್ದಗಳನ್ನು ಬಿಟ್ಟರೆ ಅದು ಶುದ್ಧ ಕನ್ನಡವೇ? ಪೊಲೀಸ್ ಎಂಬ ಶಬ್ದಕ್ಕೆ ‘ಆರಕ್ಷಕ’ ಎಂದು ಬಳಸುತ್ತಾರೆ. ‘ಆರಕ್ಷಕ’ ಸಂಸ್ಕೃತ ಶಬ್ದ. ‘ಪೊಲೀಸ್‌’ ಇಂಗ್ಲಿಷ್‌ ಶಬ್ದ. ಕನ್ನಡಿಗರಿಗೆ ಗೊತ್ತಿರುವುದು ‘ಪೊಲೀಸ್‌’ ಹೊರತು, ‘ಆರಕ್ಷಕ’ ಅಲ್ಲ. ಕನ್ನಡಿಗರಿಗೆ ಗೊತ್ತಿರುವುದು ‘ಇಂಜಿನಿಯರ್‌ ’ಶಬ್ದವೇ ಹೊರತು, ‘ಅಭಿಯಂತರ’ ಅಲ್ಲ. ಆದ್ದರಿಂದ ‘ಇಂಜಿನಿಯರ್‌’, ‘ಪೊಲೀಸ್‌’, ‘ಕಾಲೇಜ್‌’ ಇಂತಹ ಶಬ್ದಗಳೆಲ್ಲವೂ ಕನ್ನಡವಾಗಿಬಿಟ್ಟಿವೆ. ಈ ಶಬ್ದಗಳಲ್ಲದ ಸಂಸ್ಕೃತ ಶಬ್ದಗಳು ಕನ್ನಡ ಆಗಿಲ್ಲ. ಹೀಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಭಾಷೆಯ ಬಗ್ಗೆ ತಿಳಿವಳಿಕೆ ಇಲ್ಲದೆ ನಡೆಸುತ್ತಿರುವ ಒಂದು ಸ್ಪರ್ಧೆ ಇದಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

****

ಭಾಷೆ ನಿರಂತರ ಬದಲಾಗುವ ವಿದ್ಯಮಾನ: ಪ್ರೊ.ಚೆನ್ನಿ

ಭಾಷೆಯನ್ನು ಅಧ್ಯಯನ ಮಾಡುವ ಎಲ್ಲ ಭಾಷಾ ತಜ್ಞರಿಗೆ ಗೊತ್ತಿರುವ ಹಾಗೆ ಭಾಷೆ ಎನ್ನುವುದು ನಿರಂತರವಾಗಿರುವ ಬದಲಾಗುತ್ತಿರುವ, ಹೆಚ್ಚು ಕಡಿಮೆ ದಿನ ದಿನವೂ ಪರಿವರ್ತನೆಯಾಗುವ ಒಂದು ವಿದ್ಯಮಾನವಾಗಿದೆ. ಹೀಗಾಗಿ ಜಗತ್ತಿನ ಯಾವುದೇ ಭಾಷೆ (ಅದು ಗ್ರೀಕ್‌, ಲ್ಯಾಟೀನ್‌ ಥರದ ಕ್ಲಾಸಿಕಲ್‌ ಭಾಷೆಗಳಾಗಿರಬಹುದು ಅಥವಾ ಲಿಪಿ ಇಲ್ಲದೆ ಆಡುಮಾತಿನಲ್ಲಿರುವ ಭಾಷೆಯೇ ಆಗಿರಬಹುದು) ಯಾವಾಗಲೂ ಬದಲಾಗುತ್ತಿರುತ್ತವೆ, ಬೆಳೆಯುತ್ತಿರುತ್ತವೆ, ಅವುಗಳಲ್ಲಿ ಬೇರೆ ಬೇರೆ ಭಾಷೆಗಳಿಂದ, ಬೇರೆ ಬೇರೆ ಸಾಮಾಜಿಕ ಲೋಕಗಳಿಂದ ಹೊಸ ಶಬ್ದಗಳು, ಹೊಸ ಅಭಿವ್ಯಕ್ತಿಯ ಕ್ರಮಗಳು ಸೇರಿಕೊಳ್ಳುತ್ತಿರುತ್ತವೆ. ಇತಿಹಾಸ ಹೇಳುವಂತೆ ಯಾವುದೇ ಭಾಷೆ ಶುದ್ಧ ಭಾಷೆ ಅಲ್ಲವೇ ಅಲ್ಲ ಎನ್ನುತ್ತಾರೆ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ.

ಪ್ರೊ.ರಾಜೇಂದ್ರ ಚೆನ್ನಿ

ಶುದ್ಧ ಅನ್ನುವಂತಹದ್ದು, ಭಾಷೆ ಬೆಳೆದು, ಬಹಳ ವರ್ಷಗಳಾದ ಮೇಲೆ, ಕೆಲವು ಶಾಸ್ತ್ರಜ್ಞರು, ಪಂಡಿತರು ಸೇರಿಕೊಂಡು ಮಾಡಿದ್ದಾಗಿದೆ. ಇದು ಭಾಷೆಯ ಮೂಲ ಲಕ್ಷಣ ಅಲ್ಲ. ಶುದ್ಧ, ಅಶುದ್ಧ ಎನ್ನುವುದು ಶಾಸ್ತ್ರ ಮತ್ತು ವ್ಯಾಕರಣಗಳಿಂದ ಬರುವಂತಹ ಕೃತ್ತಿಮ ಚೌಕಟ್ಟು. ಯಾವುದೇ ಭಾಷೆಯಾದರೂ ಶುದ್ಧ, ಅಶುದ್ಧ ಎಂಬುದು ಚರ್ಚೆಗೆ ಬಂದರೆ ಸಮಾಜದಲ್ಲಿರುವ ಅಸಮಾನತೆ ಪ್ರವೇಶಿಸುತ್ತದೆ. ಇಂಗ್ಲಿಷ್‌ ಅನ್ನೇ ಉದಾಹರಣೆಯಾಗಿ ನೋಡುವುದಾದರೆ ಬಿಬಿಸಿಯಲ್ಲಿ ಕೇಳುವುದು, ಪುಸ್ತಕದಲ್ಲಿ ಓದುವುದು ಮಾತ್ರ ಇಂಗ್ಲಿಷ್‌ ಭಾಷೆ ಅಲ್ಲ. ಕನ್ನಡ ಭಾಷೆಯಲ್ಲಿರುವಂತೆಯೇ ಪ್ರಾದೇಶಿಕ ವೈವಿಧ್ಯಗಳಿವೆ. ಅಲ್ಲಿ ಬಡಜನರು ಮಾತನಾಡುವ ಕ್ರಮವೇ ಬೇರೆ, ಶ್ರೀಮಂತ, ಶಿಕ್ಷಿತ ಜನರು ಮಾತನಾಡುವ ಕ್ರಮವೇ ಬೇರೆ. ಅಶಿಕ್ಷಿತ, ಕೆಳವರ್ಗಗಳಲ್ಲಿನವರು, ಸಾಮಾನ್ಯರು ಬಳಸುವ ಭಾಷೆಯನ್ನು ಅಶುದ್ಧ ಎನ್ನುವಂತಹದ್ದು ಫ್ಯಾಸಿಸ್ಟ್‌ ಮನೋಭಾವ. ಇದನ್ನು ಯಾವಾಗಲೂ ವಿರೋಧಿಸಬೇಕು. ಸಂಸ್ಕೃತದಿಂದ ಬಂದಿರುವ ಪದಗಳೇ ಶುದ್ಧ ಕನ್ನಡ (ಅಚ್ಚ ಕನ್ನಡ), ನಮ್ಮ ಆಡುಮಾತಿನ ಭಾಷೆಯನ್ನು ಅಶುದ್ಧ ಕನ್ನಡ ಎನ್ನುವ ಕಡೆಗೆ ಇರುವ ಇವರು ಹೋಗುತ್ತಾರೆ ಅನಿಸುತ್ತದೆ” ಎನ್ನುತ್ತಾರೆ ಪ್ರೊ.ಚೆನ್ನಿ.

ಇದನ್ನೂ ಓದಿರಿ: ಅಯ್ಯೋ.. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ!- ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

***

ಭಾಷಾ ಜಾಯಮಾನದ ಅರಿವಿರಲಿ: ಬಂಜಗೆರೆ

ಜನ ಬಳಸುವ ಒಂದು ಭಾಷೆ ಇರುತ್ತದೆ. ಆ ಭಾಷೆ ಯಾವ್ಯಾವ ಶಬ್ದಗಳನ್ನು ತನ್ನೊಳಗೆ ಒಳಗೊಳ್ಳುತ್ತದೆಯೋ ಅದೆಲ್ಲವೂ ಕೂಡ ಬಳಸುತ್ತಾ ಬಳಸುತ್ತಾ ಭಾಷೆಯ ಜಾಯಮಾನಕ್ಕೆ ಬಂದು ಬಿಡುತ್ತವೆ. ಕೆಲವು ಅಕ್ಷರಸ್ಥರು ಕನ್ನಡಕ್ಕೆ ಕೃತಕವಾಗಿ ಇಂಗ್ಲಿಷ್ ಭಾಷೆಯ ಶಬ್ದಗಳನ್ನು ಸೇರಿಸುತ್ತಿರುತ್ತಾರೆ. ಅದು ಜನಸಾಮಾನ್ಯರ ಕ್ರಮ ಅಲ್ಲ. ಜನಸಾಮಾನ್ಯರು ಮಾತನಾಡುವಾಗ ಕೆಲವು ಉರ್ದು ಪದ, ಪಾರ್ಸಿ ಪದ, ಕೆಲವು ಇಂಗ್ಲಿಷ್ ಪದ ಸೇರಬಹುದು ಎನ್ನುತ್ತಾರೆ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌.

ಸಾಮಾನ್ಯವಾಗಿ ಎರವಲು ತೆಗೆದುಕೊಂಡಾಗ ಅವರು ಕನ್ನಡದ ಜಾಯಮಾನಕ್ಕೆ ಆ ಪದವನ್ನು ಒಗ್ಗಿಸಿಬಿಡುತ್ತಾರೆ. ತತ್ಸಮವೋ, ತದ್ಭವವೋ ಆಗಿಬಿಡುತ್ತದೆ. ಬಸ್ಸು, ಕಾರು ಇದಕ್ಕೆ ಉದಾಹರಣೆಗಳು. ಆದರೆ ಕೃತಕವಾಗಿ, ವಿಪರೀತ ಇಂಗ್ಲಿಷ್‌ ಪದಗಳನ್ನು ಸೇರಿಸಿ ಮಾತನಾಡುವುದು ಕನ್ನಡ ಜಾಯಮಾನವಲ್ಲ. ಈ ವಿವೇಕವನ್ನು ನಾವು ಇಟ್ಟುಕೊಳ್ಳಬೇಕು. ಸರ್ಕಾರಕ್ಕೆ ಈ ಬಗ್ಗೆ ಸರಿಯಾದ ತಿಳಿವಳಿಕೆ ಇರಬೇಕು. ಜನಬಳಕೆ ಯಾವುದು? ಕೃತಕ ಯಾವುದು ಎಂಬ ಅರಿವಿರಬೇಕು ಎಂಬುದು ಬಂಜಗೆರೆಯವರ ಅಭಿಪ್ರಾಯ.

***

ಸರಿ-ತಪ್ಪು ಇದೆ, ಶುದ್ಧ-ಅಶುದ್ಧ ಇಲ್ಲ: ರಂಗನಾಥ್‌

ಭಾಷೆ ಒಳಗೆ ಶುದ್ಧ, ಅಶುದ್ಧ ಎಂಬುದು ತಪ್ಪು ಕಲ್ಪನೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಆದರೆ ಭಾಷೆಯಲ್ಲಿ ಸರಿ, ತಪ್ಪು ಎಂಬುದಿದೆ. ಉದಾಹರಣೆಗೆ ‘ತಿಮ್ಮ’ ಎಂಬುದನ್ನು ‘ತಮ್ಮ’ ಎಂದು ಬರೆಯಲು ಬರುವುದಿಲ್ಲ. ವ್ಯಾಕರಣದಲ್ಲಿ ಅದು ತಪ್ಪಾಗುತ್ತದೆ. ಶುದ್ಧ, ಅಶುದ್ಧ ಎಂದು ಬಂದಾಗ ಅಲ್ಪಪ್ರಾಣ, ಮಹಾಪ್ರಾಣದ ಪ್ರಶ್ನೆ ಬರುತ್ತದೆ. ‘ಶುದ್ಧ’ ಎಂದು ಕರೆಯಬೇಕಾ, ‘ಶುದ್ದ’ ಎಂದು ಕರೆಯಬೇಕಾ ಎಂಬ ಪ್ರಶ್ನೆ ಬರುತ್ತದೆ. ‘ಪ್ರಕಾಸ’ ಎಂದು ಕರೆಯಬೇಕಾ, ‘ಪ್ರಕಾಶ’ ಎಂದು ಕರೆಯಬೇಕಾ ಎಂಬ ಪ್ರಶ್ನೆ ಬರುತ್ತದೆ ಎನ್ನುತ್ತಾರೆ ಭಾಷಾತಜ್ಞ ರಂಗನಾಥ್ ಕಂಟನಕುಂಟೆ.

ರಂಗನಾಥ್ ಕಂಟನಕುಂಟೆ

ಕನ್ನಡದಲ್ಲಿ ‘ಪ್ರಕಾಸ,’ ‘ಪ್ರಕಾಶ’ ಎರಡೂ ಬಳಕೆಯಲ್ಲಿವೆ. ಮಳವಳ್ಳಿ, ಮಂಡ್ಯ ರಾಮನಗರ, ಚೆನ್ನಪಟ್ಟಣ ಈ ಭಾಗದಲ್ಲಿ ಪ್ರಕಾಸ, ರಮೇಸ ಎನ್ನುತ್ತಾರೆ. ಇದನ್ನು ತಪ್ಪು ಎಂದು ಹೇಳಲು ಬರಲ್ಲ. ಅದು ಪ್ರಾದೇಶಿಕ ಗುರುತು. ನಮ್ಮಲ್ಲಿ ತಿಳಿವಳಿಕೆ ಇಲ್ಲದವರು ‘ಪ್ರಕಾಸ’ ಎಂದರೆ ನಗುತ್ತಾರೆ. ಹೀಗಾಗಿ ಶುದ್ಧ, ಅಶುದ್ಧ ಎನ್ನಲು ಬರುವುದಿಲ್ಲ. ವ್ಯಾಕರಣ ಮೂಲ ನಿಯಮಗಳನ್ನು ಉಲ್ಲಂಘಿಸಲು ಆಗಲ್ಲ ಎಂದು ಹೇಳುತ್ತಾರೆ.

ಬಸ್ಸು, ರೈಲು, ಕಾರು, ಕಂಪ್ಯೂಟರ್ ಈ ರೀತಿ ಈ ಪದಗಳನ್ನು ಕನ್ನಡದ್ದಾಗಿಯೇ ಬಳಸುತ್ತೇವೆ. ಈ ರೀತಿ ಬಳಸುವುದರಿಂದ ಕನ್ನಡ ಕೆಟ್ಟು ಹೋಯಿತು ಎಂದು ಕೆಲವರು ಹೇಳುತ್ತಾರೆ. ಹಾಗೆ ಹೇಳಲು ಸಾಧ್ಯವಿಲ್ಲ. ಎಲ್ಲ ಕಾಲದಲ್ಲೂ, ಎಲ್ಲ ಭಾಷೆಯಲ್ಲೂ ಕೊಡುಕೊಳುಗೆ ನಡೆಯುತ್ತಲೇ ಇರುತ್ತದೆ. ಹಿಂದಿಯಲ್ಲಿರುವ ಶೇ. 75ರಷ್ಟು ಪದಗಳು ಸಂಸ್ಕೃತದ್ದಾಗಿವೆ. ಸಂಸ್ಕೃತದಲ್ಲಿರುವ ಪದಗಳು ಪಾಕೃತ, ಪಾಳಿ ಇತ್ಯಾದಿ ಭಾಷೆಗಳದ್ದು. ಇಂಗ್ಲಿಷ್‌ನಲ್ಲಿರುವ ಪದಗಳು ಹೆಚ್ಚಿನವು ಲ್ಯಾಟೀನ್‌, ಗ್ರೀಕ್‌ ಭಾಷೆಯದ್ದಾಗಿವೆ ಎಂದು ತಿಳಿಸಿದ್ದಾರೆ

***

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌.ರಂಗಪ್ಪ ಪ್ರತಿಕ್ರಿಯೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ, “ಶುದ್ಧ, ಅಶುದ್ಧ ಎಂದು ಹೇಳಿಲ್ಲ. ಕನ್ನಡ ಭಾಷೆಯ ಕುರಿತು ನವೆಂಬರ್‌ ತಿಂಗಳು ಜಾಗೃತಿ ಮೂಡಿಸುವ ಉದ್ದೇಶದಿಂದ ಕನ್ನಡ ಪದಗಳನ್ನೇ ಬಳಸಿ ಸ್ಪರ್ಧೆ ನಡೆಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಸಮಿತಿ ಇರುತ್ತದೆ. ಅದು ಆಯ್ಕೆ ಮಾಡುತ್ತದೆ. ಇಂಗ್ಲಿಷ್‌, ಹಿಂದಿ, ಉರ್ದು, ಮರಾಠಿ ಇದ್ಯಾವುದನ್ನೂ ಬಳಸದೆ ಮಾತನಾಡುವ ಸ್ಪರ್ಧೆ ಅದು” ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ

‘ಸಂಸ್ಕೃತ ಭಾಷೆಯಿಂದ ಸಾಕಷ್ಟು ಪದಗಳು ಬಂದಿವೆ. ಜನರು ಸಾಮಾನ್ಯವಾಗಿ ಬಳಸುವ ಇಂಜಿಯರಿಂಗ್ ಎಂಬುದನ್ನು ‘ಅಭಿಯಂತರ’ ಎಂದು ತರ್ಜುಮೆ ಮಾಡಿದರೆ ಸಂಸ್ಕೃತ ಆಗುತ್ತದೆಯಲ್ಲ, ಕನ್ನಡ ಬಳಕೆ ಹೇಗೆ ಸಾಧ್ಯ? ಎಂದು ಕೇಳಿದಾಗ, “ನೀವು ಹೇಳುವುದು ಸತ್ಯವಿದೆ. ಒಂದು ಸಮಿತಿ ಮಾಡಿದ್ದೇವೆ. ಕೆಲವು ಪದಗಳು ಕನ್ನಡಮಯ ಆಗಿ ಹೋಗಿವೆ. ಅವುಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಸ್ಪರ್ಧೆಯಲ್ಲಿ ಯಾರು ಹೆಚ್ಚು ಕನ್ನಡ ಬಳಸುತ್ತಾರೆ, ಕಡಿಮೆ ಯಾರು ಬಳಸುತ್ತಾರೆ ಎಂಬುದನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಇರುವವರು ಪರಿಶೀಲಿಸುತ್ತಾರೆ. ನಾನು ಮಾತನಾಡುವಾಗಲೂ ಮಧ್ಯೆ ಮಧ್ಯೆ  ಇಂಗ್ಲಿಷ್‌ ಪದ ಬಳಸುತ್ತೇನೆ. ಆದರೂ ಹೆಚ್ಚು ಕನ್ನಡ ಪದಗಳನ್ನು ಬಳಸುತ್ತೀದ್ದೇನಲ್ಲವೆ? ಅದರ ಆಧಾರದಲ್ಲಿ ಸಮಿತಿ ನಿರ್ಧಾರ ಮಾಡುತ್ತದೆ” ಎಂದು ಪ್ರತಿಕ್ರಿಯಿಸಿದರು.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿರುವ ‘ಶುದ್ಧ ಕನ್ನಡ ಪದಗಳ ಸ್ಪರ್ಧೆ’ ಒಕ್ಕಣೆ ಇರುವ ಪೋಸ್ಟರ್‌ ಕುರಿತು ಕೇಳಿದಾಗ, “ಶುದ್ಧ, ಅಶುದ್ಧ ಎನ್ನಲು ಸಾಧ್ಯವಿಲ್ಲ. ಕನ್ನಡ ಪದಗಳು ಯಾವುದೂ ಅಶುದ್ಧವಲ್ಲ. ಪೋಸ್ಟರ್‌ಅನ್ನು ಪರಿಶೀಲಿಸಲಾಗುವುದು” ಎಂದು ಸ್ಪಷ್ಟಪಡಿಸಿದರು.

ಹಿಂದಿ ಹೇರಿಕೆ ಕುರಿತು ಚರ್ಚೆಗಳು ನಡೆಯುತ್ತಿರುವಾಗ ಕನ್ನಡ ಭಾಷೆಯ ವೈವಿಧ್ಯತೆಯನ್ನು ನಿರಾಕರಿಸುವ ಇಲಾಖೆಯ ಈ ನಡೆಯನ್ನು ಕನ್ನಡದ ಪ್ರಜ್ಞಾವಂತರು ತೀವ್ರವಾಗಿ ಟೀಕಿಸಿದ್ದಾರೆ.


ಇದನ್ನೂ ಓದಿರಿ: ‘#ಕನ್ನಡದಲ್ಲಿUPSC’ ಟ್ವಿಟರ್‌ನಲ್ಲಿ ಟ್ರೆಂಡ್‌; ಅಭಿಯಾನ ಬೆಂಬಲಿಸಲು ಕನ್ನಡಿಗರ ಕರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

4 COMMENTS

  1. ವಿಡಿಯೋ ಮತ್ತು ಸೆಲ್ಪಿ ಪದಗಳನ್ನು ಶುದ್ಧ ಕನ್ನಡದಲ್ಲಿ ಅನುವಾದಿಸಿ ಆಹ್ವಾನ ಪತ್ರಿಕೆಯಲ್ಲಿ ಬರೆದಾದ ಮೇಲೆ ಇಂತಹ ಸ್ಪರ್ಧೆ ಹಮ್ಮಿಕೊಳ್ಳಲಿ.

  2. ಕನ್ನಡ ಮಾತಿನ ಬಗೆಗೆ ಹೆಚ್ಚು ಮಾತುಕತೆ,ಹಮ್ಮುಗೆಗಳು ನಡೆಯಲಿ.ಅಪ್ಪಟ ಕನ್ನಡಮಾತಿನ ನೋಡಿಯೊ(video) ಕಳಿಸಲು ಹೆಚ್ಚು ಮಂದಿ ಹೆಜ್ಜೆ ಇಡಲಿ.

  3. ಬಾಶೆಯನ್ನು ಶುದ್ಧ, ಅಶುದ್ದ ಎಂದು ವಿಂಗಡಿಸುವುದು ಅಸಮಾನತೆಯನ್ನು ಪ್ರತಿಪಾದಿಸಿದಂತೆ. ಇದು ಮನುವಾದದ ಮತ್ತೊಂದು ಮುಕ.

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...