ಬೆಂಗಳೂರು: ರಸ್ತೆ ಗುಂಡಿಗಳಿಗೆ ಹೂವು, ರಂಗೋಲಿ ಹಾಕಿ ಹಬ್ಬ ಮಾಡಿದ ಎಎಪಿ

ಬೆಂಗಳೂರು ನಗರದೆಲ್ಲಡೆ ರಸ್ತೆ ಗುಂಡಿಗಳು ವಿಪರೀತ ಹೆಚ್ಚಾಗಿ, ಜೀವ ತೆಗೆಯುವಷ್ಟು ಅಪಾಯಕಾರಿ ಮಟ್ಟ ತಲುಪಿರುವುದನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿಯು ಬುಧವಾರದಂದು ರಸ್ತೆ ಗುಂಡಿಗಳ ಹಬ್ಬ ಆಚರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದೆ.

ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹಾಗೂ ಬೆಂಗಳೂರು ನಗರದ ಅಧ್ಯಕ್ಷ ಮೋಹನ್‌ ದಾಸರಿ ನೇತೃತ್ವದಲ್ಲಿ ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳ ನಗರದ ಹಲವು ವಾರ್ಡ್‌ಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ರಸ್ತೆಗಳಲ್ಲಿರುವ ಗುಂಡಿಗಳ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಅಲಂಕರಿಸಿ, ಆರತಿ ಎತ್ತಿ ಪೂಜೆ ಮಾಡಿ, ಅದರ ಸುತ್ತಮುತ್ತ ಸರ್ಕಾರದ ವಿರುದ್ಧ  ಘೋಷಣೆ ಕೂಗಿ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ವೇಳೆ ಮಾತನಾಡಿರುವ ಎಎಪಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, “ಬೆಂಗಳೂರಿನ ರಸ್ತೆಗಳ ದುರಸ್ತಿಗೆ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,060 ಕೋಟಿ ರೂಪಾಯಿಯನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಆದರೆ ಇಲ್ಲಿನ ರಸ್ತೆಗಳು ಮಾತ್ರ ಶೋಚನೀಯ ಸ್ಥಿತಿಯಲ್ಲಿವೆ. ಗುಂಡಿಗಳಿಂದಾಗಿ ಅಪಘಾತಗಳು, ಸಾವುಗಳು ಸಾಮಾನ್ಯವಾಗಿದೆ. ಸರ್ಕಾರ ಬಿಡುಗಡೆ ಮಾಡಿದ ಹಣವು ಯಾರ ಜೇಬು ಸೇರಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ರಸ್ತೆ ಅಭಿವೃದ್ಧಿ ಯೋಜನೆಗಳ ಅನುದಾನದ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯವರು ಕಳ್ಳರಂತೆ ಗಮನ ಬೇರೆಡೆ ಸೆಳೆದು ಬೆಲೆ ಏರಿಕೆ ಮಾಡುತ್ತಿದ್ದಾರೆ: ಎಎಪಿ

 

ಎಎಪಿ ಮುಖಂಡ ಮೋಹನ್‌ ದಾಸರಿ ಮಾತನಾಡಿ, “ಕೇಂದ್ರ ಹಾಗೂ ರಾಜ್ಯ ಸರ್ಕಾರವು ವಾಹನ ಸವಾರರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಒಂದೆಡೆ, ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಹೆಚ್ಚಿಸಿ ವಾಹನ ಸವಾರರನ್ನು ಹೈರಾಣಾಗಿಸಿದೆ. ಮತ್ತೊಂದೆಡೆ, ರಸ್ತೆಗಳಿಗೆ ವಿನಿಯೋಗವಾಗಬೇಕಿದ್ದ ಹಣವನ್ನು ಜೇಬಿಗೆ ಇಳಿಸಿಕೊಂಡು ಶಾಸಕರು ಹಾಗೂ ಸಚಿವರು ಗುಂಡಿಗಳಿಗೆ ಕಾರಣವಾಗಿದ್ದಾರೆ. ಕಾಟಾಚಾರಕ್ಕೆ ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದ್ದು, ಸಣ್ಣ ಮಳೆಗೂ ಅವು ಕಿತ್ತು ಹೋಗುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯನಗರ, ಚಾಮರಾಜಪೇಟೆ, ಚಿಕ್ಕಪೇಟೆ , ಗಾಂಧಿನಗರ, ಯಲಹಂಕ, ಬೊಮ್ಮನಹಳ್ಳಿ, ಪುಲಿಕೇಶಿನಗರ, ಮಹದೇವಪುರ ಕ್ಷೇತ್ರದಲ್ಲಿ ಇನ್ನಿತರೆ ಕಡೆಗಳಲ್ಲಿ ರಸ್ತೆಗುಂಡಿ ಹಬ್ಬ ಆಚರಿಸಲಾಗಿದೆ.


ಇದನ್ನೂ ಓದಿ: ಪ್ರಮೀಳಾ ನಾಯ್ಡು ವಜಾಗೆ ಆಗ್ರಹಿಸಿ, ಮಹಿಳಾ ಆಯೋಗಕ್ಕೆ ಬೀಗ ಜಡಿದು ಎಎಪಿ ಪ್ರತಿಭಟನೆ

LEAVE A REPLY

Please enter your comment!
Please enter your name here