ಯುಪಿ: ಪೊಲೀಸ್‌ ಠಾಣೆಯಿಂದಲೇ 25 ಲಕ್ಷ ರೂ. ನಗದು ಮತ್ತು 2 ಪಿಸ್ತೂಲ್ ಕಳವು! | Naanu gauri

ಪೊಲೀಸ್‌‌ ಠಾಣೆಯಿಂದಲೇ 2 ಪಿಸ್ತೂಲ್‌ ಮತ್ತು 25 ಲಕ್ಷ ರೂ. ನಗದು ಕಳವು ಆಗಿರುವ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗದೀಶ್‌ಪುರ ಪೊಲೀಸ್‌ ಠಾಣೆಯಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಆರು ಪೊಲೀಸ್ ಸಿಬ್ಬಂದಿಯನ್ನು ಭಾನುವಾರ ಅಮಾನತುಗೊಳಿಸಲಾಗಿದೆ.

ವರದಿಗಳ ಪ್ರಕಾರ, ಶನಿವಾರ ರಾತ್ರಿ ‘ಮಾಲ್ಖಾನ'(ಜಪ್ತಿ ಮಾಡಿದ ವಸ್ತುಗಳನ್ನು ಪೊಲೀಸರು ಸಂಗ್ರಹಿಸಿರುವ ಸ್ಥಳ) ದಿಂದ ಎರಡು ಪಿಸ್ತೂಲ್ ಮತ್ತು 25 ಲಕ್ಷ ರೂಪಾಯಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಕ್ರಿಮಿನಲ್‌‌ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದಿದ್ದ 24 ಲಕ್ಷ ರೂಪಾಯಿ ಮತ್ತು ನಾಲ್ಕು ಕಿಲೋಗ್ರಾಂಗಳಷ್ಟು ಚಿನ್ನವನ್ನು ನಾಲ್ಕು ದಿನಗಳ ಹಿಂದೆ ಪೊಲೀಸರು ಮಾಲ್ಖಾನದಲ್ಲಿ ಇಟ್ಟಿದ್ದರು. ಜೊತೆಗೆ ಅದರಲ್ಲಿ ಹಿಂದಿನ ಕ್ರಿಮಿನಲ್ ಪ್ರಕರಣಗಳಿಂದ ವಶಕ್ಕೆ ಪಡೆದಿದ್ದ ನಗದು ಕೂಡಾ ಇತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಗಳಿಗೆ ಹೂವು, ರಂಗೋಲಿ ಹಾಕಿ ಪ್ರತಿಭಟನೆ ಮಾಡಿದ ಎಎಪಿ

ತನಿಖೆಯ ಸಮಯದಲ್ಲಿ ಪಿಸ್ತೂಲುಗಳು ಪತ್ತೆಯಾಗಿದ್ದರೂ, 25 ಲಕ್ಷ ರೂ.ಗಳು ಇನ್ನೂ ಪತ್ತೆಯಾಗಿಲ್ಲ. ಇದೀಗ ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಮಾಲ್ಖಾನದಲ್ಲಿ ಇರಿಸಲಾಗಿದ್ದ ಆಭರಣಗಳು ಸೇರಿದಂತೆ ಇತರ ವಸ್ತುಗಳ ದಾಖಲೆಗಳನ್ನು ಕೂಡಾ ತನಿಖೆ ಮಾಡಲಾಗುತ್ತಿದೆ.

ಈ ಮಧ್ಯೆ, ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ), ಸಬ್ ಇನ್ಸ್‌ಪೆಕ್ಟರ್ (ಎಸ್‌ಐ), ಹೆಡ್ ಮುಹರ್ರಿರ್ (ಕ್ಲರ್ಕ್) ಮತ್ತು ಮೂವರು ಕಾನ್‌ಸ್ಟೇಬಲ್‌ಗಳನ್ನು ಸೇವೆಯಲ್ಲಿ ತೋರಿದ ನಿರ್ಲಕ್ಷ್ಯದ ಕಾರಣಕ್ಕೆ ಅಮಾನತುಗೊಳಿಸಲಾಗಿದೆ.

“ಪ್ರಕರಣದ ತನಿಖೆಗಾಗಿ ಆಗ್ರಾ ಎಸ್‌ಎಸ್‌ಪಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಆದ್ಯತೆಯ ಮೇರೆಗೆ ಇದರ ತನಿಖೆ ನಡೆಸಲಾಗುವುದು” ಎಂದು ಆಗ್ರಾ ವಲಯದ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ರಾಜೀವ್ ಕೃಷ್ಣ ಹೇಳಿದ್ದರೆ.

“ನಿರ್ಲಕ್ಷ್ಯದಿಂದ ಇದ್ದ ಮೂವರು ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ತನಿಖೆಯ ನಂತರ, ಆರೋಪಪಟ್ಟಿಗಳನ್ನು ಸಲ್ಲಿಸಲಾಗುವುದು. ಅಪರಾಧಿಗಳು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಲಖಿಂಪುರ್‌ ಹತ್ಯಾಕಾಂಡದ ವರದಿ ವಿಳಂಬ: ಯುಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ

LEAVE A REPLY

Please enter your comment!
Please enter your name here