ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2036 ರವರೆಗೆ ಅಧಿಕಾರ ಹೊಂದಲು ಅನುವು ಮಾಡಿಕೊಡುವ ಸಂವಿಧಾನದ ಬದಲಾವಣೆಗಳನ್ನು ರಷ್ಯಾದ ಹೆಚ್ಚಿನ ಮತದಾರರು ಅಂಗೀಕರಿಸಿದ್ದಾರೆ ಎಂಬ ವರದಿಗಳು ಬಂದಿವೆ. ಬುಧವಾರ ಮುಕ್ತಾಯಗೊಂಡ ವಾರಾಂತ್ಯದ ಜನಾಭಿಪ್ರಾಯ ಸಂಗ್ರಹದಲ್ಲಿ ಅಕ್ರಮಗಳು ನಡೆದಿದ್ದು, ಮತದಾರರ ಮೇಲೆ ಒತ್ತಡ ಹೇರಲಾಗಿದೆ ಎಂಬ ಟೀಕೆಗಳು ಸಹ ಕೇಳಿಬಂದಿವೆ.
ರಾಷ್ಟ್ರದ ಬಹುತೇಕ ಚುನಾವಣೆ ಮುಗಿದಿದ್ದು, 20% ಪ್ರಾಂತದ ಮತಗಳನ್ನು ಎಣಿಸಲಾಗಿದೆ. 72% ಜನರು ಸಾಂವಿಧಾನಿಕ ತಿದ್ದುಪಡಿ ಪರ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದಲ್ಲಿ ಮೊದಲ ಬಾರಿಗೆ, ಮತ ಚಲಾಯಿಸುವಲ್ಲಿ ಜನಸಂದಣಿ ತಡೆಗಟ್ಟಲು ಮತದಾನಕ್ಕೆ ಒಂದು ವಾರದವರೆಗೂ ಅವಕಾಶ ನೀಡಲಾಗಿತ್ತು.
ಬೃಹತ್ ಪ್ರಚಾರ ಅಭಿಯಾನ ಮತ್ತು ಸಂಘಟಿತ ಸವಾಲನ್ನು ಎದುರಿಸಲು ಪ್ರತಿಪಕ್ಷಗಳು ವಿಫಲವಾದ ಕಾರಣ ಪುಟಿನ್ ಅವರು ಬಯಸಿದ ಫಲಿತಾಂಶವನ್ನು ಪಡೆದರು ಎನ್ನಲಾಗಿದೆ.
ಚುನಾವಣಾ ಅಧಿಕಾರಿಗಳ ಪ್ರಕಾರ, ಮಾಸ್ಕೋ ಮತ್ತು ಪಶ್ಚಿಮ ರಷ್ಯಾದ ಇತರ ಭಾಗಗಳಲ್ಲಿ ಮತದಾನ ಮುಕ್ತಾಯಗೊಳ್ಳುವ ಹೊತ್ತಿಗೆ ಮತದಾನವು 65% ರಷ್ಟಿತ್ತು. ಕೆಲವು ಪ್ರದೇಶಗಳಲ್ಲಿ, ಸುಮಾರು 90% ಅರ್ಹ ಮತದಾರರು ಮತ ಚಲಾಯಿಸಿದ್ದಾರೆ.
ರಷ್ಯಾದ ಪೂರ್ವ ದಿಕ್ಕಿನ ಚುಕ್ಚಿ ಪರ್ಯಾಯ ದ್ವೀಪದಲ್ಲಿ, ಮಾಸ್ಕೋಕ್ಕಿಂತ ಒಂಬತ್ತು ಗಂಟೆಗಳ ಮುಂಚಿತವಾಗಿ ಪ್ರಾಥಮಿಕ ಫಲಿತಾಂಶಗಳನ್ನು ಘೋಷಿಸಿ, 80% ಮತದಾರರು ತಿದ್ದುಪಡಿಗಳನ್ನು ಬೆಂಬಲಿಸಿದ್ದಾರೆ ಎಂದಿದ್ದಾರೆ. ಪೂರ್ವದ ಇತರ ಭಾಗಗಳಲ್ಲಿ, 70% ರಷ್ಟು ಮತದಾರರು ಬದಲಾವಣೆಗಳನ್ನು ಬೆಂಬಲಿಸಿದ್ದಾರೆ ಎಂದು ಅವರು ಹೇಳಿದರು.
ಕ್ರೆಮ್ಲಿನ್ ವಿಮರ್ಶಕರು ಮತ್ತು ಸ್ವತಂತ್ರ ಚುನಾವಣಾ ವೀಕ್ಷಕರು ಮತದಾನದ ಅಂಕಿಅಂಶಗಳನ್ನು ಪ್ರಶ್ನಿಸಿದ್ದಾರೆ.
2024ಕ್ಕೆ ಪುಟಿನ್‌ರವರ ಅಧಿಕಾರವಧಿ ಮುಗಿಯಲಿದೆ. ಆದರೆ ಅದರ ನಂತರವೂ ಸಹ 12 ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರೆಯುವಂತೆ ಅವರು ತಂದ ಸಂವಿಧಾನ ತಿದ್ದುಪಡಿಗಳಿಗೆ ರಷ್ಯಾ ಸಂಸತ್ತು ಭಾರೀ ಬಹುಮತದೊಂದಿಗೆ ಅಂಗೀಕರಿಸಿತ್ತು.
ಓದಿ: ಜನ ಮನೆಯಿಂದ ಹೊರಬರದಿರಲು ರಷ್ಯಾ 800 ಸಿಂಹಗಳನ್ನು ಬೀದಿಗೆ ಬಿಟ್ಟಿತೆ?


