ಈ ಜನಪ್ರಿಯ ಕೂಸುಮರಿಯ ಫೋಟೋ ಸೆರೆಯಾದದ್ದು ಹೇಗೆ!?| ಚಿ. ಉದಯಶಂಕರ್ ನೆನಪು

ನಾನು ನೋಡಿದಂತೆ ರಾಜ್ ಮತ್ತು ಉದಯಶಂಕರ್ ಅಪರೂಪದ ಸ್ನೇಹಿತರು. ಇಬ್ಬರಿಗೂ ಪರಸ್ಪರರಲ್ಲಿ ಅಪಾರ ಪ್ರೀತಿ, ಗೌರವ. ಒಂದು ಹಂತದ ಸಲಿಗೆಯೂ ಇತ್ತು. ಉದಯಶಂಕರ್ ಚಿತ್ರಕಥೆ, ಸಂಭಾಷಣೆಯಲ್ಲಿಯೇ ಅಲ್ಲವೇ ರಾಜ್ ಜನರನ್ನು ಸೆಳೆದದ್ದು?

0
ಚಿ. ಉದಯಶಂಕರ್ ನೆನಪು; ಈ ಜನಪ್ರಿಯ ಕೂಸುಮರಿ ಫೋಟೋ ಸೆರೆಯಾದದ್ದು ಹೇಗೆ!?

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಚಿತ್ರಸಾಹಿತಿಗಳಲ್ಲೊಬ್ಬರಾದ ಚಿ. ಉದಯಶಂಕರ್ ಅಗಲಿದ ದಿನವಿದು. ವರನಟ ಡಾ. ರಾಜಕುಮಾರ್ ಮತ್ತು ಚಿ. ಉದಯಶಂಕರ್ ಅತ್ಯಂತ ಆಪ್ತರು. ಇಲ್ಲಿರುವ ಇವರಿಬ್ಬರ ‘ಕೂಸುಮರಿ’ ಫೋಟೋ ಬಹು ಜನಪ್ರಿಯ. ಈ ಫೋಟೋ ಸೆರೆಹಿಡಿದ ಸಂದರ್ಭವನ್ನು ಹಿರಿಯ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಸ್ಮರಿಸಿಕೊಂಡಿದ್ದಾರೆ.


ಬರಹ: ಭವಾನಿ ಲಕ್ಷ್ಮೀನಾರಾಯಣ
ನಿರೂಪಣೆ: ಶಶಿಧರ ಚಿತ್ರದುರ್ಗ

ಸಿನಿಮಾ ಛಾಯಾಗ್ರಾಹಕ ವೃತ್ತಿಯಿಂದಾಗಿ ಜೀವನದಲ್ಲಿ ಹತ್ತಾರು ಮೇರು ಪ್ರತಿಭೆಗಳನ್ನು ಮುಖಾಮುಖಿಯಾಗಲು ನನಗೆ ಸಾಧ್ಯವಾಯ್ತು. ಅಂಥವರಲ್ಲೊಬ್ಬರು ಚಿತ್ರಸಾಹಿತಿ ಚಿ. ಉದಯಶಂಕರ್. ನಾನು ಕಂಡ ಅಪ್ಪಟ ಪ್ರತಿಭೆಗಳಲ್ಲಿ ಅವರೂ ಒಬ್ಬರು. ಸಾಮಾನ್ಯವಾಗಿ ಡಾ. ರಾಜಕುಮಾರ್ ಸಿನಿಮಾಗಳ ಶೂಟಿಂಗ್ ಇದ್ದೆಡೆ ಚಿ. ಉದಯಶಂಕರ್ ಉಪಸ್ಥಿತಿ ಇರುತ್ತಿತ್ತು. ಹಾಗಾಗಿ ಶೂಟಿಂಗ್, ಸ್ಟುಡಿಯೋಗಳಿಗೆ ಭೇಟಿ ನೀಡುತ್ತಿದ್ದ ನನ್ನನ್ನು ಅವರು ವಿಶ್ವಾಸದಿಂದ ಮಾತನಾಡುತ್ತಿದ್ದರು. ಸದಾ ತಮಾಷೆ ಮಾಡುತ್ತಾ ಎಲ್ಲರೊಂದಿಗೆ ಬಹುಬೇಗ ಬೆರೆಯುವ ವ್ಯಕ್ತಿತ್ವ ಅವರದು.

ನಾನು ನೋಡಿದಂತೆ ರಾಜ್ ಮತ್ತು ಉದಯಶಂಕರ್ ಅಪರೂಪದ ಸ್ನೇಹಿತರು. ಇಬ್ಬರಿಗೂ ಪರಸ್ಪರರಲ್ಲಿ ಅಪಾರ ಪ್ರೀತಿ, ಗೌರವ. ಒಂದು ಹಂತದ ಸಲಿಗೆಯೂ ಇತ್ತು. ಉದಯಶಂಕರ್ ಚಿತ್ರಕಥೆ, ಸಂಭಾಷಣೆಯಲ್ಲಿಯೇ ಅಲ್ಲವೇ ರಾಜ್ ಜನರನ್ನು ಸೆಳೆದದ್ದು? ರಾಜ್‍ರನ್ನು ಹತ್ತಿರದಿಂದ ಒಡನಾಡಿದ್ದರಿಂದ ಅವರ ಇಮೇಜ್‍ಗೆ ಸರಿಹೊಂದುವಂತೆ ಬರೆಯಲು ಉದಯಶಂಕರ್ ಅವರಿಗೆ ಸಾಧ್ಯವಾಗಿರಬಹುದು. ರಾಜ್ ಸಿನಿಮಾಗಳ ಚಿತ್ರೀಕರಣಗಳಿಗೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಚಿ. ಉದಯಶಂಕರ್ ಅವರನ್ನು ಭೇಟಿಯಾಗಿದ್ದೇನೆ. ಸಾಕಷ್ಟು ಬಾರಿ ಅವರು ನನ್ನ ಕ್ಯಾಮರಾಗೆ ರೂಪದರ್ಶಿಯಾಗಿದ್ದಾರೆ.ನಂದಿಬೆಟ್ಟದಲ್ಲೊಮ್ಮೆ ರಾಜ್ ಮತ್ತು ಉದಯಶಂಕರ್ ಜೋಡಿಯ ಚಿತ್ರ ತೆಗೆದದ್ದು ನನಗೆ ಬಹುವಾಗಿ ಕಾಡುತ್ತದೆ. ರಾಜ್‍ರ ಚಿತ್ರವೊಂದಕ್ಕೆ ನಂದಿಬೆಟ್ಟದ ಟಿಪ್ಪು ಡ್ರಾಪ್‍ನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಉದಯಶಂಕರ್ ಕೂಡ ಸೆಟ್‍ನಲ್ಲಿದ್ದರು. ನಾನಲ್ಲಿಗೆ ಹೋದಾಗ ಇಬ್ಬರೂ ಸನ್ನಿವೇಶವೊಂದರ ಬಗ್ಗೆ ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ಅವರ ಗಂಭೀರ ಮಾತುಕತೆ ಮುಗಿಯುತ್ತಿದ್ದಂತೆ ನಾನಲ್ಲಿಗೆ ಹೋದೆ. ಅಪರೂಪದ ಪೋಸ್ ಬೇಕೆಂದಾಗ, ಉತ್ಸಾಹಿ ರಾಜ್ ಕ್ಷಣಕಾಲ ಯೋಚಿಸಿದರು.

‘ಉದಯಶಂಕರ್‍ರನ್ನು ಕೂಸು ಮರಿ ಮಾಡಿದರೆ ಹೇಗೆ?’ ಎಂದು ಕೇಳಿದ ರಾಜ್, ಅದಕ್ಕೆ ಸಜ್ಜಾದರು. ಉದಯಶಂಕರ್ ನಗುತ್ತಲೇ ರಾಜ್ ಬೆನ್ನೇರಿದರು. ಸ್ಥೂಲಕಾಯದ ಅವರನ್ನು ಹೊರುತ್ತಲೇ ರಾಜ್ ಒಂದೆಡೆ ಕೊಂಚ ವಾಲಿದರು. ಆಕಸ್ಮಾತ್ ಇಬ್ಬರೂ ಬಿದ್ದರೇನು ಗತಿ ಎಂದು ನನಗೆ ಗಾಬರಿಯಾಯ್ತು. ಯಾಕಾದರೂ ಭಿನ್ನ ಪೋಸ್ ಕೊಡಿ ಎಂದು ಕೇಳಿದೆನೋ ಎಂದು ಪರಿತಪಿಸಿದೆ. ಹಾಗೇನೂ ಆಗಲಿಲ್ಲ. ರಾಜ್ ತಮ್ಮ ಸ್ನೇಹಿತನನ್ನು ಕೂಸು ಮರಿ ಮಾಡುವ ಅಪರೂಪದ ಪೋಸ್ ನನ್ನ ಕ್ಯಾಮರಾಗೆ ದಕ್ಕಿತು. ಮುಂದೆ ಈ ಫೋಟೋ ನೋಡಿ ಅವರಿಬ್ಬರೂ ತುಂಬಾ ಖುಷಿಪಟ್ಟಿದ್ದರು.


ಓದಿ: ನಿರಾಶ್ರಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಈ ಐದು ಚಲನಚಿತ್ರಗಳು


ನಮ್ಮ ಯೂಟ್ಯೂನ್ ಚಾನೆಲ್ ನ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here