ರಾಷ್ಟ್ರಪತಿ ದ್ರೌಪದಿ ಮುರ್ಮುರವರ ಬಣ್ಣವನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಿ ಜನಾಂಗೀಯ ನಿಂದನೆಗೈದ ಆರೋಪದ ಮೇಲೆ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ್ ಭಟ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಸಮನ್ಸ್ ನೀಡಿದೆ.
ಗೌರವಾನ್ವಿತ ರಾಷ್ಟ್ರಪತಿಯವರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗವು ಗುರುತಿಸಿದೆ. ಈ ಕುರಿತು ಅಕ್ಟೋಬರ್ 26ರಂದು ವಿಚಾರಣೆಗೆ ಹಾಜರಾಗುವಂತೆ ಪತ್ರಕರ್ತ ವಿಶ್ವೇಶ್ವರ ಭಟ್‌ರವರಿಗೆ ನೋಟಿಸ್ ನೀಡಲಾಗಿದೆ ಎಂದು NCW ಟ್ವೀಟ್ ಮಾಡಿದೆ.
@NCWIndia has taken cognizance of the demeaning post against the Hon'ble President. The Commission has sent a notice to the journalist to appear in person for a hearing on 26.10.2022 at 12.30pm. @sharmarekha https://t.co/bH7fTltsNe
— NCW (@NCWIndia) October 21, 2022
ವಿಶ್ವವಾಣಿ ಪತ್ರಿಕೆಯ ಅಕ್ಟೋಬರ್ 06ರ ನೂರೆಂಟು ವಿಶ್ವ ಎಂಬ ಅಂಕಣದಲ್ಲಿ ವಿಶ್ವೇಶ್ವರ್ ಭಟ್ ನದಿಯ ಹೆಸರಿಟ್ಟುಕೊಂಡು ನೀರಿಗಾಗಿ ನರಳುವ ಜೋರ್ಡಾನ್! ಎಂಬ ಬರಹದಲ್ಲಿ “ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ!” ಎಂದು ಬರೆಯುವ ಮೂಲಕ ರಾಷ್ಟ್ರಪತಿಯವರ ಮೈಬಣ್ಣವನ್ನು ಅವಹೇಳನ ಮಾಡಿದ್ದರು.
ವಿಶ್ವೇಶ್ವರ ಭಟ್ ತಮ್ಮ ಅಂಕಣದಲ್ಲಿ ಜೋರ್ಡಾನ್ ದೇಶದ ಬಿಸಿಲಿನ ಝಳವನ್ನು ವರ್ಣಿಸುವಾಗ “ಅಪ್ಪಟ ಬೀನ್ಕಿ ಕೆಂಡ! ಅರ್ಧಗಂಟೆ ಆ ಮರುಭೂಮಿಯಲ್ಲಿ ನಿಂತರೆ ಇಡೀ ಶರೀರವೆಲ್ಲ ಸುಟ್ಟು ಕರಕಲಾದ ಕಾಗೆ! ಥೇಟು ‘ಮುರ್ಮು’ ಅವತಾರ! ಕಣ್ಮುಚ್ಚಿದರೂ ಜೋಗದ ಜಲಪಾತದಂತೆ ಸುರಿಯುವ ನಿಗಿನಿಗಿ ಬಿಸಿಲ ಧಾರೆ” ಎಂದು ಬರೆದಿದ್ದಾರೆ. ಆ ಮೂಲಕ ನಮ್ಮ ರಾಷ್ಟ್ರಪತಿಯವರ ಬಣ್ಣವನ್ನು ಅಪಹಾಸ್ಯ ಮಾಡಿದ್ದರು.
My column today in Vishwavani pic.twitter.com/v2D6Rgpujh
— Vishweshwar Bhat (@VishweshwarBhat) October 6, 2022
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಪತ್ರಕರ್ತ ವಿಶ್ವೇಶ್ವರ್ ಭಟ್‌ರನ್ನು ಬಂಧಿಸಬೇಕೆಂದು ಆಗ್ರಹಗಳು ಕೇಳಿಬಂದಿದ್ದವು. ಹಿಂದೆಲ್ಲ ರಾಷ್ಟ್ರಪತಿಗಳನ್ನು ಅವಮಾನಿಸಿದಾಗ ಪ್ರತಿಭಟಿಸಿದ್ದ ಬಿಜೆಪಿ ಹೀಗೇಕೆ ಸುಮ್ಮನಿದೆ ಎಂದು ಪ್ರಶ್ನಿಸಲಾಗಿತ್ತು.
ಹಲವಾರು ಜನರು ರಾಷ್ಟ್ರೀಯ ಮಹಿಳಾ ಆಯೋಗವನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಕೊನೆಗೂ ಮಹಿಳಾ ಆಯೋಗ ವಿಶ್ವೇಶ್ವರ್ ಭಟ್‌ಗೆ ಸಮನ್ಸ್ ನೀಡಿದ್ದು ವಿಚಾರಣೆಗೆ ಮುಂದಾಗಿದೆ.
ಇದನ್ನೂ ಓದಿ; ಫ್ಯಾಕ್ಚ್ ಚೆಕ್: ನೀಟ್ ಟಾಪರ್‌ಗೆ ಸೀಟ್ ಸಿಗಲಿಲ್ಲವೆಂಬ ಸುಳ್ಳು ವರದಿ – ವಿಶ್ವೇಶ್ವರ ಭಟ್ ಕ್ಷಮೆ ಕೇಳಿದ್ದು ನಿಜವೇ?


