ಹಲವು ವರ್ಷಗಳಿಂದ ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ ಪೂರ್ಣ ಪ್ರಮಾಣದ ಮುಖ್ಯ ಕೋಚ್ ಆಗಬೇಕೆಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್‌ರವರನ್ನು ಕೇಳಿಕೊಳ್ಳಲಾಗುತ್ತಿತ್ತು. ಪ್ರತಿ ಬಾರಿಯೂ ನಿರಾಕರಿಸುತ್ತಿದ್ದ ಅವರು ಈಗ ಅದಕ್ಕೆ ಒಪ್ಪಿದ್ದು, ಟಿ-20 ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ಎನ್ನಲಾಗಿದೆ.
ಈ ವರ್ಷದ ಟಿ-20 ವಿಶ್ವಕಪ್ನೊಂದಿಗೆ ಪ್ರಸ್ತುತ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಒಪ್ಪಂದ ಅಂತ್ಯವಾಗಲಿದೆ. ಹಾಗಾಗಿ ಹೊಸ ಕೋಚ್ ಹುಡುಕಾಟದಲ್ಲಿರುವ ಬಿಸಿಸಿಐ ಅಧಿಕಾರಿಗಳು ದುಬೈನಲ್ಲಿ ರಾಹುಲ್ ದ್ರಾವಿಡ್ ನಡುವೆ ಮಾತುಕತೆ ನಡೆಸಿದ್ದಾರೆ. ರಾಹುಲ್ ಕೋಚ್ ಪ್ರಸ್ತಾಪಕ್ಕೆ ಒಪ್ಪಿದ್ದಾರೆ ಎನ್ನಲಾಗಿದೆ. ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ನವೆಂಬರ್ 14ಕ್ಕೆ ಮುಕ್ತಾಯವಾಗಲಿರುವ ಟಿ-20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಅದಕ್ಕಾಗಿ ಅರ್ಜಿ ಹಾಕುವುದು ಮತ್ತು ಸಂದರ್ಶನದ ಔಪಚಾರಿಕ ಪ್ರಕ್ರಿಯೆಗಳು ನಡೆಯಲಿವೆ.
2016 ರಲ್ಲಿ ಅನಿಲ್ ಕುಂಬ್ಳೆ ಕೋಚ್ ಆಗುವ ಮುನ್ನ ಮತ್ತು 2017ರಲ್ಲಿ ರವಿಶಾಸ್ತ್ರಿ ಕೋಚ್ ಆಗುವ ಮುನ್ನ ಬಿಸಿಸಿಐನ ಮೊದಲ ಆಯ್ಕೆ ರಾಹುಲ್ ದ್ರಾವಿಡ್ ಆಗಿತ್ತು. ಆದರೆ ಅದನ್ನು ರಾಹುಲ್ ದ್ರಾವಿಡ್ ನಯವಾಗಿಯೇ ತಿರಸ್ಕರಿದ್ದರು ಮತ್ತು ಅಂಡರ್ 19 ರಾಷ್ಟ್ರೀಯ (Under-19 Team) ತಂಡದ ಕೋಚ್ ಆಗಿ, NCA ಮುಖ್ಯಸ್ಥರಾಗಿ ಮುಂದುವರೆದಿದ್ದರು. ಈಗ ಅವರು ಒಪ್ಪಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ರಾಹುಲ್ ದ್ರಾವಿಡ್ ಒಪ್ಪದಿದ್ದ ಪಕ್ಷದಲ್ಲಿ ಕೋಚ್‌ಗಾಗಿ ಶ್ರೀಲಂಕಾದ ಮಹೇಲ ಜಯವರ್ಧನೆ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಕೂಡ ಬಿಸಿಸಿಐನ ಇತರ ಆಯ್ಕೆಗಳಾಗಿದ್ದವು ಎನ್ನಲಾಗಿದೆ. ಸದ್ಯಕ್ಕೆ ರಾಹುಲ್ ದ್ರಾವಿಡ್ ಒಪ್ಪಿರುವುದರಿಂದ ಈ ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ.
ಮುಂದಿನ ಎರಡು ವರ್ಷಗಳು ಭಾರತ ಕ್ರಿಕೆಟ್ ತಂಡದ ಪಾಲಿಗೆ ಮಹತ್ವದ ದಿನಗಳಾಗಲಿವೆ. 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. 2023ರಲ್ಲಿ ಏಕದಿನ ವಿಶ್ವಕಪ್ ಮತ್ತು ವಿಶ್ಟ ಟೆಸ್ಟ್ ಚಾಂಪಿಯನ್‌ಶಿಫ್ ನಡೆಯಲಿದೆ.
ಇದನ್ನೂ ಓದಿ: ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?


