Homeಮುಖಪುಟಲಖೀಂಪುರ್ ರೈತರ ಹತ್ಯೆ ಮತ್ತು ನಂತರದ ಘಟನೆಗಳ ಸುತ್ತ..

ಲಖೀಂಪುರ್ ರೈತರ ಹತ್ಯೆ ಮತ್ತು ನಂತರದ ಘಟನೆಗಳ ಸುತ್ತ..

- Advertisement -
- Advertisement -

’ಲಖೀಂಪುರ್ ಖೇರಿ ಕಾರ್ ದಾಳಿಯ ಆರೋಪಿ, ಕೇಂದ್ರೀಯ ಮಂತ್ರಿ ಅಜಯ್ ಮಿಶ್ರನನ್ನು ಎಲ್ಲಿಯವರೆಗೆ ವಜಾಗೊಳಿಸುವುದಿಲ್ಲವೋ ಅಲ್ಲಿಯವರೆಗೆ ರೈತರ ಆಂದೋಲನ ವಿಶ್ರಾಂತಿ ಪಡೆಯುವುದಿಲ್ಲ. ಹಾಗೂ ಈ ಬೇಡಿಕೆಯನ್ನಿಟ್ಟುಕೊಂಡು, ಅಕ್ಟೋಬರ್ 15ರಂದು ಇಡೀ ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಪ್ರತಿಕೃತಿಯನ್ನು ಸುಡಲಾಗುವುದು, ಅಕ್ಟೋಬರ್ 18ರಂದು ಇಡೀ ದೇಶದಲ್ಲಿ 6 ಗಂಟೆಗಳ ಕಾಲ ರೈಲು ರೋಕೋ ಆಂದೋಲನ ನಡೆಸಲಾಗುವುದು ಹಾಗೂ ಅಕ್ಟೋಬರ್ 26ರಂದು ಲಖನೌನಲ್ಲಿ ಒಂದು ಬೃಹತ್ ಕಿಸಾನ್ ಮಹಾಪಂಚಾಯತ್ ಆಯೋಜಿಸಲಾಗುವುದು’ – ಅಕ್ಟೋಬರ್ 12ರಂದು ಉತ್ತರಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯ ತಿಕೋನಿಯದಲ್ಲಿ ಆಯೋಜಿಸಲಾದ ಅಂತಿಮ ಪ್ರಾರ್ಥನೆ ಸಭೆಯಲ್ಲಿ ಈ ಮಾತುಗಳನ್ನು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರು ಹೇಳಿದರು.

ಅಲ್ಲಿ ರಾಕೇಶ್ ಟಿಕಾಯತ್ ಅವರ ಭಾಷಣದ ಮೇಲೆ ಹೆಚ್ಚಿನ ಗಮನವಿತ್ತು, ಅವರೇ ಈ ಭಯಾನಕ ಘಟನೆಯ ನಂತರ ರೈತರ ಮತ್ತು ಯುಪಿ ಸರಕಾರದ ನಡುವೆ ನಡೆದ ಮಾತುಕತೆಯ ನೇತೃತ್ವ ವಹಿಸಿಕೊಂಡಿದ್ದರು. ರೈತರ ಬೇಡಿಕೆಗಳನ್ನು ಪುನರುಚ್ಚರಿಸುತ್ತ ಟಿಕಾಯತ್ ಅವರು ಆತುರದಲ್ಲಿ ನಡೆದ ಒಪ್ಪಂದದ ಬಗ್ಗೆ ಸ್ಪಷ್ಟೀಕರಣ ನೀಡಿದರು ಹಾಗೂ ರೈತರ ಆಂದೋಲನದಲ್ಲಿ ಬಿರುಕುಗಳನ್ನು ಸೃಷ್ಟಿಸಲು ಪ್ರಯತ್ನ ಮಾಡಲಾಗುತ್ತಿದೆ ಹಾಗೂ ಈ ನಿಟ್ಟಿನಲ್ಲಿ ವದಂತಿಗಳನ್ನು ಹರಿಬಿಡಲಾಗುತ್ತಿದೆ ಎಂದು ಹೇಳಿದರು.

ರಾಕೇಶ್ ಟಿಕಾಯತ್‌ ‘ಅಲ್ಲಾಹು ಅಕ್ಬರ್ ಎಂದರೆ.. ರೈತರು ಕೋಪದಿಂದ ‘ಹರಹರ ಮಹಾದೇವ’ ಎಂದು ಕೂಗಿದ್ದು ನಿಜವೇ..?
PC: PTI

ಲಖೀಂಪುರ ಖೇರಿ ಘಟನೆಯ ಆರನೆಯ ದಿನದಂದು ರಾಕೇಶ್ ಟಿಕಾಯತ್ ಅವರು ದೆಹಲಿಯಲ್ಲಿ ನಡೆದ ಒಂದು ಪತ್ರಿಕಾಗೋಷ್ಠಿಯಲ್ಲಿ, ನಾನು ದೇಶವು ಉರಿದು ಹೋಗುವುದನ್ನು ತಡೆಗಟ್ಟಿದ್ದೇನೆ ಎಂದು ಹೇಳಿದ್ದರು. ವಾಸ್ತವದಲ್ಲಿ, ಅವರು ಅದರ ಮೂಲಕ, ತುಂಬಾ ಕಡಿಮೆ ಸಮಯದಲ್ಲಿ ಅತ್ಯಂತ ಕಡಿಮೆ ಸಾಧನೆಯ ಈ ಒಪ್ಪಂದವನ್ನು ಮಾಡಲಾಗಿದೆ ಎಂದು ಹೇಳಿದ ಟೀಕಾಕಾರರಿಗೆ ಉತ್ತರ ನೀಡಿದ್ದರು.

3ನೇ ಅಕ್ಟೋಬರ್‌ನಂದು ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಯುಪಿಯ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅವರ ವಿರುದ್ಧ ಪ್ರದರ್ಶನ ಮಾಡುತ್ತಿದ್ದ ರೈತರ ಮೇಲೆ ಸ್ಥಳೀಯ ಎಂಪಿ ಹಾಗೂ ಮೋದಿ ಕ್ಯಾಬಿನೆಟ್‌ನಲ್ಲಿ ಗೃಹ ರಾಜ್ಯ ಮಂತ್ರಿಯಾದ ಅಜಯ್ ಮಿಶ್ರ ಟೇನಿಯ ಮಗ ಆಶೀಶ್ ಮಿಶ್ರ ಟೇನಿಯು ತನ್ನ ವಾಹನವನ್ನು ಚಲಿಸಿದ್ದ ಎಂದು ಆರೋಪಿಸಲಾಗಿದೆ. ಅದರಲ್ಲಿ ನಾಲ್ಕು ರೈತರು ಅತ್ಯಂತ ಭಯಾನಕ ಸಾವನ್ನಪ್ಪಿದ್ದರು.

ಈ ಘಟನೆ ಆದ 24 ಗಂಟೆಗಳಲ್ಲಿ ರೈತರು ಮತ್ತು ಆಡಳಿತದ ನಡುವೆ ಮಾತುಕತೆ ಆಗಿ ಒಪ್ಪಂದವಾಗಿತ್ತು ಹಾಗೂ ಅದರಲ್ಲಿ ಟಿಕಾಯತ್ ಅವರು ನಿರ್ವಹಿಸಿದ ಪಾತ್ರವನ್ನು ಪ್ರಶಂಸಿಸಲಾಗಿತ್ತು. ಇದರ ಅನುಗುಣವಾಗಿ ಮಂತ್ರಿ ಮತ್ತು ಮಂತ್ರಿಯ ಮಗನ ಮೇಲೆ ಕೊಲೆಯ ಪ್ರಕರಣ, ಮಂತ್ರಿಯನ್ನು ವಜಾಗೊಳಿಸುವ ಬೇಡಿಕೆ ಮತ್ತು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಬೇಡಿಕೆಯು ಒಳಗೊಂಡಿತ್ತು. ಘಟನೆ ಆದ ಒಂದು ವಾರದೊಳಗೆ ಸರಕಾರವು ಸಂತ್ರಸ್ತ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿ ಮೊತ್ತದ ಪರಿಹಾರ ನೀಡಿದೆ ಹಾಗೂ ಮಂತ್ರಿಯ ಮಗ ಆಶೀಶ್ ಮಿಶ್ರ ಟೇನಿಯನ್ನು ಬಂಧಿಸಲಾಗಿದೆ.

ಸಚಿವ ಅಜಯ್ ಮಿಶ್ರನನ್ನು ಈ ಕೂಡಲೇ ಮಂತ್ರಿ ಮಂಡಲದಿಂದ ವಜಾಗೊಳಿಸುವುದು ರೈತ ನಾಯಕರ ಬೇಡಿಕೆಯಾಗಿದೆ. ಅದನ್ನು ಇನ್ನೂ ಮಾಡಿಲ್ಲ. ಈ ಒಪ್ಪಂದದ ಅತಿದೊಡ್ಡ ಟೀಕೆ ಏನಿತ್ತೆಂದರೆ, ಇದರ ಮಾತುಕತೆಯಲ್ಲಿ ಯೋಗಿ ಸರಕಾರವು ಟಿಕಾಯತ್ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಅಧಿಕಾರಿಗಳನ್ನು ಮಾತುಕತೆ ನಿರ್ವಹಿಸುವ ಜವಾಬ್ದಾರಿ ನೀಡಿತ್ತು ಎಂಬುದು. ರೈತರ ಕಡೆಯಿಂದಲೂ ತಪ್ಪುಗಳು ಆಗಿವೆ ಎಂಬ ಸಂದೇಶವನ್ನು ಸರಕಾರವು ಆತುರದಲ್ಲಿ ಆದ ಈ ಒಪ್ಪಂದದ ಮೂಲಕ ನೀಡಲು ಪ್ರಯತ್ನ ಮಾಡಿತು. ಏಕೆಂದರೆ, ನಾಲ್ಕು ರೈತರನ್ನು ಹೊರತುಪಡಿಸಿ ಇನ್ನೂ ಐದು ಜನ ಸಾವನ್ನಪ್ಪಿದ್ದರು. ಅದರಲ್ಲಿ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್ ಕೂಡ ಇದ್ದರು. ಶ್ರದ್ಧಾಂಜಲಿ ಸಭೆಯಲ್ಲಿ ಸಂತ್ರಸ್ತ ಕುಟುಂಬದವರನ್ನೂ ಆಹ್ವಾನಿಸಲಾಗಿತ್ತು ಹಾಗೂ ನಾಲ್ಕು ರೈತರ ಜೊತೆಗೆ ರಮಣ್ ಕಶ್ಯಪ್ ಅವರನ್ನೂ ಹುತಾತ್ಮ ಎಂದು ಪರಿಗಣಿಸಲಾಗಿದೆ.

ಕೇಶವ ಪ್ರಸಾದ ಮೌರ್ಯ

ವದಂತಿ ಹಬ್ಬಿಸುವವರು ಟಿಕಾಯತ್ ಅವರು ತಮ್ಮ ವೈಯಕ್ತಿಕ ಸ್ತರದಲ್ಲಿ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿದ್ದಾರೆ ಹಾಗೂ ಗಡಿಬಿಡಿ ಮಾಡಿ ಯೋಗಿ ಸರಕಾರಕ್ಕೆ ಒಂದು ದೊಡ್ಡ ವಿಪತ್ತಿನಿಂದ ರಕ್ಷಿಸಿದ್ದಾರೆ ಎಂಬ ಸುಳ್ಳನ್ನು ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತ ನಾಯಕರು ಹೇಳಿದ್ದಾರೆ. ರಾಕೇಶ್ ಟಿಕಾಯತ್ ಅವರ ಈ ’ಉಪಕಾರ’ದದ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಬಹಳಷ್ಟು ಪ್ರಚಾರ ನೀಡಿದವು. ಎಷ್ಟರಮಟ್ಟಿಗೆ ಎಂದರೆ, ಇಂಡಿಯನ್ ಎಕ್ಸ್‌ಪ್ರೆಸ್‌ನ ಒಂದು ಲೇಖನದಲ್ಲಿ ಟಿಕಾಯತ್ ಅವರ ಜೊತೆಗೆ ಮಾತುಕತೆ ನಡೆಸಿದ ಪೊಲೀಸ್ ಅಧಿಕಾರಿಗಳ ಹೆಸರನ್ನೂ ಪ್ರಕಟಿಸಲಾಯಿತು.

ಆದರೆ ಈ ಒಪ್ಪಂದ ಆದ ಒಂದು ದಿನದಲ್ಲಿಯೇ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಹಾಗೂ ನಾಯಕ ಡಾ. ದರ್ಶನ್ ಪಾಲ್ ಅವರು ವರ್ಕರ್ಸ್ ಯುನಿಟಿ ಡಾಟ್‌ಕಾಂ ಜೊತೆಯ ಮಾತುಕತೆಯಲ್ಲಿ ಈ ನಿರ್ಣಯವನ್ನು ಸಮರ್ಥಿಸಿಕೊಂಡರು. ಈ ಒಪ್ಪಂದವನ್ನು ಸ್ಥಳೀಯ ಎಸ್‌ಕೆಎಂ ತಂಡದ ಸಹಮತದೊಂದಿಗೆ ಮಾಡಲಾಗಿದೆ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾದ ಒಂಭತ್ತು ಸದಸ್ಯರ ಸಮಿತಿಯು ಈ ಮಾತುಕತೆಯಲ್ಲಿ ನಿರಂತರವಾಗಿ ಶಾಮೀಲಾಗಿತ್ತು ಎಂದು ಡಾ. ದರ್ಶನ್ ಪಾಲ್ ಅವರು ಹೇಳಿದರು. ಇದರ ಹೊರತಾಗಿಯೂ, ಒಂದು ಪ್ರಶ್ನೆಯನ್ನು ಅನೇಕರು ಇನ್ನೂ ಕೇಳುತ್ತಿದ್ದಾರೆ; ಆರೋಪಿಗಳ ಬಂಧನ ತಕ್ಷಣ ಆಗದೇ ಇರುವುದಕ್ಕೆ ಕಾರಣವೇನು ಹಾಗೂ ಅದಕ್ಕೆ ಈ ಒಪ್ಪಂದ ಕಾರಣವೇ ಎಂಬುದು.

ಅಂದಹಾಗೆ ಈ ಘಟನೆಯಲ್ಲಿ ಮೃತಪಟ್ಟ ರೈತರ ಕುಟುಂಬದ ಸದಸ್ಯರೇ ಈ ವಿಷಯದಲ್ಲಿ ಏನೂ ಹೇಳಿಲ್ಲ. ಪತ್ರಕರ್ತ ರಮಣ ಕಶ್ಯಪ್ ಅವರ ಸಹೋದರ ಸ್ಪಷ್ಟಪಡಿಸಿದ್ದೇನೆಂದರೆ, ತನ್ನ ಸಹೋದರನ ಸಾವು, ವಾಹನವನ್ನು ಅವರ ಮೇಲೆ ಚಲಾಯಿಸಿದ ಕಾರಣದಿಂದಲೇ ಆಗಿದೆ ಎಂದು. ಆದರೆ ಸರಕಾರ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಅವರನ್ನು ರೈತರೇ ಹೊಡೆದು ಕೊಲೆ ಮಾಡಿದ್ದಾರೆ ಎಂಬ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ.

ವಾಹನದಲ್ಲಿ ಕುಳಿತಿದ್ದ ಇತರ ನಾಲ್ಕು ಜನರ ಸಾವಿಗೆ ಕಾರಣ ಏನು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಸ್ಥಳೀಯ ರೈತ ನಾಯಕರು ಹೇಳುವುದೇನೆಂದರೆ, ಅವರುಗಳು ವಾಹನದಲ್ಲಿ ಕುಳಿತಿದ್ದ ವ್ಯಕ್ತಿಗಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು ಎಂದು.

ಅಜಯ್ ಮಿಶ್ರಾ

ರೈತ ನಾಯಕ ಧರ್ಮೇಂದ್ರ ಮಲಿಕ್ ಅವರು ಹೇಳಿದ್ದೇನೆಂದರೆ, ಸಂತ್ರಸ್ತರ ಕುಟುಂಬದವರು ಮತ್ತು ಸ್ಥಳೀಯ ರೈತರ ನಾಯಕರ ತಂಡದ ಸಹಮತದೊಂದಿಗೆ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು ಹಾಗೂ ಇದಕ್ಕೆ ಸಂಬಂಧಪಟ್ಟ ಯಾವ ವ್ಯಕ್ತಿಯೂ ಇದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ ಎಂದು.

ಆದರೆ ಘಟನಾಕ್ರಮದ ಪ್ರತ್ಯಕ್ಷ ಸಾಕ್ಷಿಯಾದ ಒಬ್ಬ ಪಿಎಸಿ ಜವಾನ್ ಸಮೀರ್ (ಹೆಸರು ಬದಲಿಸಲಾಗಿದೆ) ಹೇಳಿದ್ದೇನೆಂದರೆ, ತನ್ನ ಜೀಪನ್ನು ಜನರ ಮೇಲೆ ಓಡಿಸಿದ ನಂತರ ಜೀಪಲ್ಲಿ ಕುಳಿತ್ತಿದ್ದ ಮಂತ್ರಿಯ ಮಗ ಆಶಿಶ್ ಮಿಶ್ರ ತನ್ನ ಪಿಸ್ತೂಲಿನಿಂದ ಜನರ ಮೇಲೆ ಗುಂಡು ಹಾರಿಸಿದ ಹಾಗೂ ಈ ಪ್ರಕ್ರಿಯೆಯಲ್ಲಿ ಇಬ್ಬರಿಗೆ ಗುಂಡು ತಗುಲಿತು ಹಾಗೂ ಅದರಲ್ಲಿ ಒಬ್ಬ ವ್ಯಕ್ತಿ ಘಟನಾಸ್ಥಳದಲ್ಲಿಯೇ ಮೃತನಾದ ಎಂದು.

ಸಮೀರ್ ಮುಂದುವರೆಸಿ, ತಿಕೊನಿಯದಲ್ಲಿ ಕೇಶವ ಪ್ರಸಾದ ಮೌರ್ಯ ಆಗಮಿಸಲಿದ್ದ ಹೆಲಿಪ್ಯಾಡ್‌ಅನ್ನು ರೈತರು ವಶಪಡಿಸಿಕೊಂಡಿದ್ದರು ಹಾಗೂ ಅವರು ಬರುವ ಕಾರ್ಯಕ್ರಮ ರದ್ದಾದ ಸುದ್ದಿ ತಿಳಿದ ನಂತರ ಪ್ರತಿಭಟನಾಕಾರರು ವಾಪಸ್ ಮರಳುತ್ತಿದ್ದರು. ಅದೇ ಸಮಯದಲ್ಲಿ ಹೆಲಿಪ್ಯಾಡ್‌ನಿಂದ 200 ಮೀಟರ್ ದೂರದಲ್ಲಿಯ ತನ್ನ ಮನೆಯಿಂದ ಮಂತ್ರಿಯ ಮಗನು ಮೂರು ವಾಹನಗಳ ಬೆಂಗಾವಲಿನಲ್ಲಿ ಅತಿ ಹೆಚ್ಚಿನ ವೇಗದಲ್ಲಿ ಪ್ರತಿಭಟನಾಕಾರರಿಂದ ತುಂಬಿದ ರಸ್ತೆಯ ಕಡೆಗೆ ಚಲಿಸಿದ. ಪ್ರತ್ಯಕ್ಷ ಸಾಕ್ಷಿ ಸಮೀರ್‌ಗೆ ಅದನ್ನು ನೋಡಿ ಅನಿಸಿದ್ದೇನೆಂದರೆ, ಈ ರೀತಿ ಅತಿ ವೇಗದಲ್ಲಿ ಜನದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಉದ್ದೇಶಪೂರ್ವಕವಾಗಿ ಓಡಿಸುವುದರ ಹಿಂದೆ ಒಂದು ಸ್ಪಷ್ಟ ಗುರಿ ಇತ್ತು ಹಾಗೂ ಮನೆಯತನಕ ಬಂದ ರೈತರಿಗೆ ಹೆದರಿಸುವ ಗುರಿಯಿಂದ ಈ ಅಪರಾಧವನ್ನು ಎಸಗಲಾಗಿದೆ ಎಂದು ಸಮೀರ್ ಹೇಳಿದರು.

ಶ್ರದ್ಧಾಂಜಲಿ ಸಭೆಯಲ್ಲಿ ರಾಕೇಶ್ ಟಿಕಾಯತ್ ಅವರೂ ಹೇಳಿದ್ದೇನೆಂದರೆ, ಅಲ್ಲಿ ಚಲಿಸಲಾದ ಜೀಪಿನಲ್ಲಿ 4ಬೈ4 ಗೀಯರ್ ಅಳವಡಿಸಲಾಗಿತ್ತು. ಈ ವಾಹನಗಳಿಗೆ ನಾಲ್ಕೂ ಗಾಲಿಗಳಲ್ಲಿ ಪವರ್ ಇರುತ್ತೆ ಹಾಗೂ ಗೀಯರ್ ಹಾಕಿದ ನಂತರ ಈ ವಾಹನಗಳು ಸ್ಲಿಪ್ ಆಗದೇ ಓಡುತ್ತವೆ. ಹಾಗಾಗಿ ರೈತರ ಮೇಲೆ ಹಾಯಿಸಿದ ನಂತರವೂ ವಾಹನ ಬ್ಯಾಲೆನ್ಸ್ ತಪ್ಪದೇ ಮುಂದುವರೆಯಬೇಕು ಎಂಬ ಉದ್ದೇಶದೊಂದಿಗೆ ಈ ಕೃತ್ಯವನ್ನು ಎಸಗಿದ್ದು ಸ್ಪಷ್ಟ ಎಂದು ರಾಕೇಶ್ ಹೇಳಿದರು. ಹಾಗೂ ಇದರ ತನಿಖೆ ಆಗಬೇಕು ಎಂದರು.

ವಾಸ್ತವದಲ್ಲಿ ಲಖೀಂಪುರ್ ಖೇರಿ ಪ್ರದೇಶದಲ್ಲಿ ದಬಂಗ್ ಎಂದು ಕರೆದುಕೊಳ್ಳುವ ಅಜಯ್ ಮಿಶ್ರ, ಈ ಘಟನೆಯ ಎಂಟು ದಿನ ಮುಂಚೆ, ಸೆಪ್ಟೆಂಬರ್ 25ರಂದು, ಇಲ್ಲಿಂದ 50 ಕಿಲೊಮೀಟರ್ ದೂರದಲ್ಲಿಯ ಒಂದು ಗುರುದ್ವಾರದ ಎದುರಿಗೆ ಪ್ರಚೋದನಕಾರಿ ಭಾಷಣ ಮಾಡಿ ತಮ್ಮ ಉದ್ದೇಶ ಸ್ಪಷ್ಟಪಡಿಸಿದ್ದರು. ಆಗ ತುಂಬಿದ ಸಭೆಯಲ್ಲಿ ಏನಿಯ ರೈತರಿಗೆ ಪಾಠ ಕಲಿಸಲಾಗುವುದು ಹಾಗೂ ಪರೋಕ್ಷ ರೂಪದಲ್ಲಿ 6 ರೈತರನ್ನು ಲಖೀಂಪುರ್ ಖೇರಿಯಿಂದ ಹೊರಗೆ ಹಾಕುವುದಾಗಿ ಬೆದರಿಕೆ ನೀಡಿದ್ದರು. ಅದರ ವಿಡಿಯೋ ನಂತರ ವೈರಲ್ ಆಯಿತು. ವಾಸ್ತವದಲ್ಲಿ ಸಂಘರ್ಷ ಇಲ್ಲಿಂದಲೇ ಶುರುವಾಗಿತ್ತು. ಕೃಷಿ ಕಾನೂನುಗಳ ವಿರುದ್ಧ ಶುರುವಾದ ಸಮಯದಿಂದ ಈ ಪ್ರದೇಶದ ಸಿಖ್ ರೈತರು ಬಿಜೆಪಿ ನಾಯಕರ ವಿರೋಧ ಮಾಡುತ್ತಿದ್ದಾರೆ.

ಸೆಪ್ಟೆಂಬರ್ 25ರಂದು ಕೆಲವು ದೊಡ್ಡ ಸಿಖ್ ರೈತರು ಮಹಂಗಾಪುರ್ ಗುರುದ್ವಾರದಲ್ಲಿ ಮಂತ್ರಿ ಅಜಯ್ ಮಿಶ್ರ ಟೇನಿಯ ಸ್ವಾಗತ ಕಾರ್ಯಕ್ರಮ ಮಾಡಲು ಇಚ್ಛಿಸಿದ್ದರು, ಅದಕ್ಕೆ ಗುರುದ್ವಾರದಿಂದ ಅನುಮತಿ ದೊರಕಲಿಲ್ಲ ಹಾಗೂ ಸ್ಥಳೀಯ ಸಿಖ್ ರೈತರೂ ಅದಕ್ಕೆ ವಿರೋಧ ಮಾಡಿದರು. ಅದರ ನಂತರ ಮಂತ್ರಿಯ ಕಾರ್ಯಕ್ರಮವು ಗುರುದ್ವಾರದ ಹೊರಗಡೆ ರಸ್ತೆಯಲ್ಲಿ ಮಾಡಲಾಯಿತು ಹಾಗೂ ಅಲ್ಲಿ ಹಲವಾರು ರೈತರು ಮಂತ್ರಿಗೆ ಕಪ್ಪು ಬಟ್ಟೆ ಬೀಸಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಮಂತ್ರಿಯು ಗುರುದ್ವಾರದ ಎದರುಗಡೆಯಿಂದ ಹೊರಡುವಾಗ ಥಂಬ್ಸ್ ಡೌನ್ ತೋರಿಸುತ್ತಿರುವ ಒಂದು ವಿಡಿಯೋ ಕೂಡ ಹೊರಬಂದಿದೆ. ಅದರ ನಂತರ ಪ್ರದೇಶದಲ್ಲಿ ಆದ ಇತರ ಸಭೆಗಳಲ್ಲಿ ಮಂತ್ರಿ ಅಜಯ ಮಿಶ್ರ ಬಹಿರಂಗವಾಗಿ ಬೆದರಿಕೆ ನೀಡಿದ್ದರು.

ಆಶೀಶ್ ಮಿಶ್ರ

ಮಂತ್ರಿಯ ಹೇಳಿಕೆಯ ನಂತರ ರೈತರಲ್ಲಿ ಅಸಮಾಧಾನ ಹೆಚ್ಚಿತ್ತು ಹಾಗೂ ಅಲ್ಲಿಯ ರೈತ ಯುನಿಯನ್‌ನ ಮುಖಂಡ ತೇಜಿಂದರ್ ವಿರ್ಕ್ ಅವರು ಮಂತ್ರಿಗೆ ಸವಾಲು ಹಾಕಿದ್ದರು. ಸ್ಥಳೀಯ ಜನರು ಹೇಳುವುದೇನೆಂದರೆ, ಅಜಯ್ ಮಿಶ್ರ ಆ ಪ್ರದೇಶದಲ್ಲಿ ದಬಂಗ್ ಆಗಿ ಕಾಣಿಸಿಕೊಳ್ಳುತ್ತಾನೆ ಹಾಗೂ ತನ್ನನ್ನು ತಾನು ಟೇನಿಯ ಮಹಾರಾಜ ಎಂದು ಕರೆದುಕೊಳ್ಳುತ್ತಾನೆ. ತನ್ನ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿ ರೈತರು ಪ್ರದರ್ಶನ ಮಾಡಿದ್ದು, ಅವರ ವರ್ಚಸ್ಸಿಗೆ ಧಕ್ಕೆ ತಂದಿತ್ತು. ರೈತರನ್ನು ಹೆದರಿಸುವ ಸಲುವಾಗಿ ಈ ಕುಕೃತ್ಯವನ್ನು ಮಾಡಲಾಗಿದೆ ಎಂದು ಅಲ್ಲಿಯ ಜನರು ಹೇಳುತ್ತಾರೆ.

ಆದಾಗ್ಯೂ, ಮೋದಿ ಸರಕಾರದ ವರ್ತನೆಯನ್ನು ನೋಡಿದರೆ, ಮಂತ್ರಿಯನ್ನು ವಜಾಗೊಳಿಸುವ ಮೂಡಿನಲ್ಲಿ ಇದ್ದಾರೆ ಎಂದು ತೋರುವುದಿಲ್ಲ. ಆದರೆ, ರೈತರ ಸಂಘಟನೆಗಳು ಯುಪಿಯಲ್ಲಿ ಒತ್ತಡವನ್ನು ಹೆಚ್ಚಿಸುವ ತಂತ್ರವನ್ನು ಇನ್ನಷ್ಟು ಗಟ್ಟಿಯಾಗಿ ಮುಂದುವರೆಸುವ ಗುರಿಯನ್ನು ಹೊಂದಿದ್ದಾರೆ ಹಾಗೂ ಇದರ ಬಗ್ಗೆ ಘೋಷಣೆಗಳನ್ನೂ ಮಾಡಲಾಗಿದೆ.

ಯುಪಿಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ಜರುಗಲಿದೆ. ಇಲ್ಲಿ ಈಗ ಬಿಜೆಪಿಯ ಬಹುಮತದ ಸರಕಾವಿದೆ ಹಾಗೂ ರೈತರ ಆಂದೋಲನದಿಂದ ಹೆಚ್ಚುತ್ತಿರುವ ಒತ್ತಡದಿಂದ ತಲೆಬಾಗಿಸಬೇಕಾಗಿ ಬರಬಹುದು. ಯೋಗಿ ಸರಕಾರದ ವರ್ತನೆಯನ್ನು ನೋಡಿದರೆ ಹಾಗೆಯೇ ಆಗುವ ಸಂಕೇತಗಳು ಸ್ಪಷ್ಟವಾಗಿ ಕಾಣುತ್ತಿ ವೆ. ಈ ಕಾರಣದಿಂದ ಬಿಜೆಪಿಯ ಆಂತರಿಕ ಸಂಘರ್ಷಗಳೂ ಕಾಣಿಸಿಕೊಳ್ಳಬಹುದು.

ಯುಪಿಯ ಮುಖ್ಯಮಂತ್ರಿ ಯೋಗಿ ಹಾಗೂ ಒಕ್ಕೂಟ ಸರಕಾರದ ಗೃಹರಾಜ್ಯ ಮಂತ್ರಿ ಅಜಯ್ ಮಿಶ್ರನ ನಡುವೆ ಒಳ್ಳೆಯ ಸಂಬಂಧ ಇಲ್ಲ ಹಾಗೂ ಯೋಗಿಗೆ ಒಂದು ಮಾತು ಕೇಳದೇ ಮಿಶ್ರನನ್ನು ಕೇಂದ್ರದಲ್ಲಿ ಸಚಿವನನ್ನಾಗಿಸಲಾಯಿತು ಎಂದು ಹೇಳಲಾಗುತ್ತಿದೆ. ಈ ಘಟನೆಯ ನಂತರ ಅಜಯ ಮಿಶ್ರ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಭೇಟಿಯಾದಾಗ, ಮಿಶ್ರ ಸಚಿವಾಯಲಯದ ಕೆಲಸವನ್ನು ಮುಂಚೆಯ ಹಾಗೆ ಮುಂದುವರೆಸಲು ಸೂಚಿಸಲಾಗಿದ್ದನ್ನು ಗಮನಿಸಬೇಕಿದೆ.

ಸಂದೀಪ್ ರೌಜಿ಼, ಸಂಸ್ಥಾಪಕ ಸಂಪಾದಕ, ವರ್ಕರ್ಸ್ ಯುನಿಟಿ
ಕನ್ನಡಕ್ಕೆ: ರಾಜಶೇಖರ್ ಅಕ್ಕಿ


ಇದನ್ನೂ ಓದಿ: ಲಖಿಂಪುರ್: ಆಶಿಶ್ ಮಿಶ್ರಾಗೆ ಜಾಮೀನು ನಿರಾಕರಣೆ; ಇನ್ನಿಬ್ಬರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...