ಆರ್‌ಎಸ್‌ಎಸ್ / ಬಿಜೆಪಿಯಲ್ಲಿನ ನನ್ನ ರಾಜಕೀಯ ವಿರೋಧಿಗಳು, ನನಗೆ ಕಿರುಕುಳ ಮತ್ತು ಬೆದರಿಕೆ ಒಡ್ಡಲು ನನ್ನ ವಿರುದ್ಧ ಸಲ್ಲಿಸಿದ ಮತ್ತೊಂದು ಪ್ರಕರಣವನ್ನು ಎದುರಿಸಲು ಇಂದು ಮಧ್ಯಾಹ್ನ 2 ಗಂಟೆಗೆ ಪಾಟ್ನಾದ ಸಿವಿಲ್ ಕೋರ್ಟ್ ಗೆ ಖುದ್ದಾಗಿ ಹಾಜರಾಗುತ್ತೇನೆ. ಸತ್ಯಮೇವ ಜಯತೆ, ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರು ರಾಹುಲ್ ಗಾಂಧಿಯವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಪಾಟ್ನಾದ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿಯವರು “ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮವಿದೆ (ಸರ್ ನೇಮ್)” ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು, ಬ್ಯಾಂಕ್ ವಂಚನೆ ಆರೋಪಿ ನೀರವ್ ಮೋದಿ ಮತ್ತು ಭಾರತೀಯ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಆಯುಕ್ತ ಲಲಿತ್ ಮೋದಿ ಅವರನ್ನು ಉಲ್ಲೇಖಿಸಿ ವ್ಯಂಗ್ಯವಾಡಿದ್ದರು.
ಈ ಹೇಳಿಕೆಯನ್ನು ಉಲ್ಲೇಖಿನಿ ಮೋದಿ ಎಂಬ ಸರ್ ನೇಮ್ ಇರುವ ತಮಗೂ ಮಾನ ಹಾನಿಯಾಗಿದೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಮುಖಂಡರು, ಬಿಹಾರದ ಉಪಮುಖ್ಯಮಂತ್ರಿಯಾದ ಸುಶೀಲ್ ಕುಮಾರ್ ಮೋದಿಯವರು ಏಪ್ರಿಲ್‌ನಲ್ಲಿ ಪಾಟ್ನಾದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆಗೆ ಇಂದು ರಾಹುಲ್ ಗಾಂಧಿ ಹಾಜರಾಗಲಿದ್ದಾರೆ.
ತಮ್ಮ ಪಕ್ಷದ ಲೋಕಸಭಾ ಚುನಾವಣಾ ಸೋಲಿನ ನೈತಿಕ ಹೊಣೆಗಾರಿಕೆಯನ್ನು ವಹಿಸಿಕೊಂಡು ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ರಾಹುಲ್ ಗಾಂಧಿ ಅವರು ಮೇ ತಿಂಗಳಲ್ಲಿ ಕೊನೆಯದಾಗಿ ಬಿಹಾರದ ರಾಜಧಾನಿಗೆ ಭೇಟಿ ನೀಡಿದ್ದರು. ಮಾಧ್ಯಮ ವರದಿಯ ಪ್ರಕಾರ, ರಾಜ್ಯವ್ಯಾಪಿ ಮಿದುಳಿನ ಜ್ವರದಿಂದ ತೀವ್ರ ಬಾಧಿತವಾಗಿ 150 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಮುಜಾಫರ್ ಪುರಕ್ಕೆ ರಾಹುಲ್ ಗಾಂಧಿಯವರು ಭೇಟಿ ನೀಡಬಹುದು ಎನ್ನಲಾಗಿದೆ. ಇದು ಪಾಟ್ನಾದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ.
ಆದರೆ, ಬಿಹಾರ ಪ್ರದೇಶದ ಕಾಂಗ್ರೆಸ್ ಸಮಿತಿ (ಬಿಪಿಸಿಸಿ) ಕಾರ್ಯಕಾರಿ ಅಧ್ಯಕ್ಷ ಕೌಕಾಬ್ ಖಾದ್ರಿ ಪಿಟಿಐಗೆ ನೀಡಿದ ಮಾಹಿತಿಯಲ್ಲಿ, “ಮಾಜಿ ಪಕ್ಷದ ಮುಖ್ಯಸ್ಥರ ಭೇಟಿಯ ಸಂಪೂರ್ಣ ವಿವರ ಇನ್ನೂ ಲಭ್ಯವಾಗಿಲ್ಲ” ಎಂದು ಹೇಳಿದ್ದಾರೆ.
ನಿನ್ನೆ ತಾನೇ ಗೌರಿ ಲಂಕೇಶ್ ಹತ್ಯೆಯಲ್ಲಿ ಆರ್.ಎಸ್.ಎಸ್ ಪಾತ್ರವಿದೆ ಎಂಬ ಹೇಳಿಕೆ ನೀಡಿದ್ದಕ್ಕಾಗಿ ಮುಂಬೈ ಕೋರ್ಟಿಗೆ ರಾಹುಲ್ ಗಾಂಧಿ ಹಾಜರಾಗಿದ್ದರು. ನಂತರ “ಅನ್ಯಾಯ, ದ್ವೇಷ ಮತ್ತು ಹಿಂಸಾಚಾರದ ಶಕ್ತಿಗಳ ವಿರುದ್ಧದ ನನ್ನ ಹೋರಾಟದಲ್ಲಿ, ನನ್ನನ್ನು ಬೆಂಬಲಿಸಲು ಮುಂಬೈನಲ್ಲಿ ಇಂದು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಹೊರಬಂದ ಎಲ್ಲರಿಗೂ ಧನ್ಯವಾದಗಳು, ನಿಮ್ಮ ಪ್ರೀತಿ ಮತ್ತು ಬೆಂಬಲ ನನ್ನ ದೊಡ್ಡ ಶಕ್ತಿ, ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದರು.


