ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪೌಷ್ಠಿಕತೆ ಮತ್ತು ರಕ್ತಹೀನತೆ ಹೋಗಲಾಡಿಸಬೇಕು. ದೇವದಾಸಿಯರ ಮರು ಸಮೀಕ್ಷೆ ನಡೆಸಬೇಕು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಗತಿಪರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಮಹಿಳೆಯರು ಶನಿವಾರ (ಜ.25) ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ರಾಯಚೂರು, ಕಲಬುರಗಿ, ಯಾದಗಿರಿ, ಧಾರವಾಡ, ವಿಜಯನಗರ, ಬಳ್ಳಾರಿ, ಬಾಗಲಕೋಟೆ, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಮಹಿಳೆಯರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ, ಸಮುದಾಯ ಆರೋಗ್ಯ ಹಾಗೂ ಗ್ರಾಮೀಣ ಮೂಲ ಸೌಕರ್ಯ ಕಡೆಗಣಿಸಿದೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಜಿಲ್ಲಾ ಕ್ರೀಡಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರ ಕನಿಷ್ಠ ಮೂಲಸೌಕರ್ಯ ಒದಗಿಸಲು ಬಜೆಟ್‌ನಲ್ಲಿ 3 ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ನಿತಿಶ್ ಕೆ. ಹಾಗೂ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ತುಕಾರಾಂ ಪಾಂಡ್ವೆಗೆ ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಮಗೆ ಕೇವಲ ಗ್ಯಾರಂಟಿ ನೀಡಿದರೆ ಸಾಲದು, ನಮ್ಮ ಮಕ್ಕಳ ಭವಿಷ್ಯ ಹಾಗೂ ಮುಂದಿನ ಪೀಳಿಗೆಯ ಮಕ್ಕಳು ಇದಕ್ಕೆ ಗುರಿಯಾಗದಂತೆ ಶಾಶ್ವತ ಪರಿಹಾರ ಬೇಕು ಎಂದು ಪ್ರತಿಭಟನಾ ನಿರತ ಮಹಿಳೆಯರು ಸರ್ಕಾರವನ್ನು ಒತ್ತಾಯಿಸಿದರು.

ಸುಮಾರು 1/3 ಭಾಗದಷ್ಟು ಮಕ್ಕಳು, ಮುಖ್ಯವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಿನ್ನೆಲೆಯುಳ್ಳವರು ತಮ್ಮ ತರಗತಿಯ ಸರಳ ಕನ್ನಡ, ಗಣಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ತರಗತಿವಾರು, ವಿಷಯವಾರು ಶಿಕ್ಷಕರನ್ನು ಕೂಡಲೇ ನೇಮಿಸಬೇಕು ಹಾಗೂ ಪ್ರತಿ ಶಾಲೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಗೃಹ ಪಾಠ ಮಾಡುವವರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ಪಿಂಚಣಿ ಮತ್ತು ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನಿಯಮಿತವಾಗಿ ನೀಡಬೇಕು. ರಾಜ್ಯ ಸರ್ಕಾರ ಈಗಾಗಲೇ ಬಜೆಟ್‌ನಲ್ಲಿ ಇದಕ್ಕಾಗಿ ಹಣ ಮೀಸಲಿಟ್ಟಿದೆ. ಆದರೆ, ಕೆಎಸ್‌ಡಬ್ಲ್ಯುಡಿಸಿ ಮತ್ತು ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಕಳೆದ 9 ತಿಂಗಳಿಂದ ಈ ಕೆಲಸವನ್ನು ಕೈಗೆತ್ತಿಕೊಂಡಿಲ್ಲ. ಒಂಟಿ ಮಹಿಳೆಯರ ಪಿಂಚಣಿ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸಬೇಕು. ಇದರಿಂದ ಗಂಡನಿಂದ ಪರಿತ್ಯಕ್ತರಾಗಿರುವ ಎಲ್ಲಾ ಮಹಿಳೆಯರು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಮತ್ತು ತಮ್ಮ ಚಿಕ್ಕ ಮಕ್ಕಳನ್ನು ಬೆಳೆಸಲು ಸರ್ಕಾರ ಬೆಂಬಲಿಸಿದಂತಾಗುತ್ತದೆ ಎಂದರು.

ಜನರು ರಾಯಚೂರಿನಲ್ಲಿ ಸುಮಾರು 1000 ದಿನಗಳಿಂದ ಏಮ್ಸ್ ಬೇಕೆಂದು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಕೇಂದ್ರ ಸರ್ಕಾರದ ಮೇಲೆ ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗಾಗಿ ಕ್ರಮ ಜರುಗಿಸಲು ಒತ್ತಾಯಿಸಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿರುವ ಪ್ರತಿಯೊಂದು ಜನ ಪ್ರತಿನಿಧಿಗಳು ತಕ್ಷಣ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಭೇಟಿ ಮಾಡಿ ಈ ಮೇಲಿನ ಬೇಡಿಕೆಗಳ ಮೇಲೆ ಕ್ರಮ ಜರುಗಿಸಲು ಒತ್ತಡ ಹಾಕಬೇಕು. ಕೇವಲ ಆಶ್ವಾಸನೆ ಕೊಡದೆ ಕನಿಷ್ಠ 3,000 ಕೋಟಿ ರೂ. ಪ್ರತಿ ವರ್ಷ ಬಜೆಟ್‌ನಲ್ಲಿ ಕೊಡುವಂತೆ ಮಾಡಿದರೆ ಕಲ್ಯಾಣ ಕರ್ನಾಟಕ ಜಿಲ್ಲೆಗಳನ್ನು ಕರ್ನಾಟಕದ ಇತರ ಜಿಲ್ಲೆಗಳ ಮಟ್ಟಕ್ಕೆ ತರುವಂತೆ ಸಾಧ್ಯವಾಗುತ್ತದೆ ಎಂದು ಹೋರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಲ ಪಡೆದವರ ರಕ್ಷಣೆಗಾಗಿ ಸುಗ್ರೀವಾಜ್ಞೆ ಮೂಲಕ ಶೀಘ್ರದಲ್ಲಿ ಹೊಸ ಕಾನೂನು ಜಾರಿ : ಸಿಎಂ ಸಿದ್ದರಾಮಯ್ಯ


