Homeಮುಖಪುಟಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

ಪಂಚಾಯತ್ ರಾಜ್ ಅಧಿನಿಯಮ 1993 ರ 268/2 ರ ಅನ್ವಯ ಯಾವುದೇ ಪಂಚಾಯ್ತಿ ಸತತವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾದಲ್ಲಿ ಅಂತಹ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ ಮರುಚುನಾವಣೆ ನಡೆಸಬೇಕು ಎಂಬ ನಿಯಮವಿದೆ ಎನ್ನುತ್ತಾರೆ ರಾಯಚೂರಿನ ಹೋರಾಟಗಾರ ರಝಾಕ್ ಉಸ್ತಾದ್.

- Advertisement -
- Advertisement -

ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ರಾಯಚೂರು ಸಹ ಒಂದು. ಡಿ.ಎಂ ನಂಜುಂಡಪ್ಪ ವರದಿಯ ಪ್ರಕಾರ ಅತಿಹೆಚ್ಚು ಹಿಂದುಳಿದ ತಾಲ್ಲೂಕು ರಾಯಚೂರಿನ ದೇವದುರ್ಗ. ಇಂತಹ ಸಮಯದಲ್ಲಿ ಜನರ ಸತತ ಹೋರಾಟದ ಫಲವಾಗಿ ದಕ್ಕಿದ 371ಜೆ ವಿಶೇಷ ಸ್ಥಾನಮಾನ, ಹಲವು ನೀರಾವರಿ ಯೋಜನೆಗಳು ಸೇರಿದಂತೆ ಇತ್ಯಾದಿ ಕಾರ್‍ಯಕ್ರಮಗಳು ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಿತ್ತು. ಆದರೆ ಅದು ಆಗಲೇ ಇಲ್ಲ. ಸರ್ಕಾರದ ಇಚ್ಛಾಶಕ್ತಿಯ ಕೊರತೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ. ಆದರೆ ಅಷ್ಟೇ ಮತ್ತೊಂದು ಪ್ರಮುಖ ಕಾರಣವೆಂದರೆ ಇಲ್ಲಿನ ಸ್ಥಳೀಯ ಆಡಳಿತದ ವೈಫಲ್ಯ. ಅಂದರೆ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿಗಳು ತಮಗಿರುವ ಅಧಿಕಾರವನ್ನು ಬಳಸಿ ಸಮರ್ಪಕವಾಗಿ ಕೆಲಸ ನಿರ್ವಹಿಸದೇ ಹೋದುದಾಗಿದೆ.

ಪಂಚಾಯತ್ ರಾಜ್ ವ್ಯವಸ್ಥೆಗೆ ತನ್ನದೇ ಆದ ಮಹತ್ವವಿದೆ. ಗಾಂಧೀಜಿಯವರ ಗ್ರಾಮಸ್ವರಾಜ್ಯವನ್ನು ಸಾಕಾರಗೊಳಿಸುವ ಉತ್ತಮ ಆಯುಧವಾದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಅನೇಕರು ಶ್ರಮಿಸಿದ್ದಾರೆ. ಅಧಿಕಾರ ವಿಕೇಂದ್ರಿಕರಣದ ಪ್ರಧಾನ ಸಂಸ್ಥೆಗಳಾಗಿ ಇವುಗಳು ಉನ್ನತ ಅಧಿಕಾರಗಳನ್ನು ಹೊಂದಿವೆ. ಪಂಚಾಯ್ತಿಗಳು ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೇಲುಸ್ತುವಾರಿ ಸಮಿತಿಗಳಾಗಿವೆ. ಆದರೆ ಅದರ ಮಹತ್ವ ಅಲ್ಲಿರುವ ಸ್ಥಳೀಯ ಜನಪ್ರತಿನಿಧಿಗಳಿಗೆ ಅರಿವಾಗದಿರುವುದು ದೊಡ್ಡ ದುರಂತ.

ಇಷ್ಟೆಲ್ಲಾ ಏಕೆ ಹೇಳಬೇಕಾಗಿದೆಯೆಂದರೆ ರಾಯಚೂರು ಜಿಲ್ಲಾ ಪಂಚಾಯ್ತಿಯು ವಿಸರ್ಜನೆಯಾಗುವ ಹಂತಕ್ಕೆ ಬಂದು ನಿಂತಿದೆ. ಸರ್ಕಾರ ಕಾನೂನುಪ್ರಕಾರ ನಡೆದುಕೊಂಡಿದ್ದಲ್ಲಿ ಅದು ಈಗಾಗಲೇ ವಿಸರ್ಜನೆಯಾಗಬೇಕಾದಷ್ಟು ಕರ್ತವ್ಯ ಲೋಪ ಮತ್ತು ಅಸಡ್ಡೆ ತೋರಿದೆ. ಅದು ಎಸಗಿರುವ ಗುರುತರ ಪ್ರಮಾದವೆಂದರೆ ತನ್ನ ಪ್ರಾಥಮಿಕ ಕರ್ತವ್ಯವಾದ ಸಭೆ ಸೇರುವುದನ್ನೇ ಸತತವಾಗಿ ಉಲ್ಲಂಘಿಸುತ್ತಾ ಬಂದಿರುವುದಾಗಿದೆ. ಪಂಚಾಯತ್ ಕಾಯ್ದೆ ಪ್ರಕಾರ ಪ್ರತಿ ಎರಡು ತಿಂಗಳಿಗೊಮ್ಮೆ ಪಂಚಾಯ್ತಿಯ ಸಾಮಾನ್ಯ ಸಭೆ ಸೇರುವುದು, ಪ್ರತಿ ತಿಂಗಳು ಕೆಡಿಪಿ (ಕರ್ನಾಟಕ ಡೆವಲಪ್‌ಮೆಂಟ್ಸ್ ಪ್ರೋಗ್ರಾಮ್ಸ್) ಸಭೆ ನಡೆಸುವುದು, ಈ ಸಭೆಗಳಿಗೆ ಮುಂಚಿತವಾಗಿ ಸ್ಥಾಯಿ ಸಮಿತಿಗಳು ಸಭೆ ಸೇರುವುದು ಕಡ್ಡಾಯ. ಆದರೆ ಪಂಚಾಯ್ತಿಯೊಂದು ಸಭೆಯೇ ಸೇರದಿದ್ದರೆ ಅಲ್ಲಿನ ಪ್ರಗತಿ ಹೇಗೆ ಸಾಧ್ಯ? ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಅಧ್ಯಕ್ಷರು ಸಭೆ ಕರೆಯದಿದ್ದರೆ ಉಪಾಧ್ಯಕ್ಷರು ಕರೆಯಬಹುದು. ಅವರೂ ಕರೆಯದಿದ್ದರೆ ಮೂರನೇ ಒಂದು ಭಾಗದ ಸದಸ್ಯರು ಸೇರಿ ಸಿಇಓಗೆ ಪತ್ರ ನೀಡಿ ಸಭೆ ಕರೆಯಬೇಕು. ಅದೂ ಆಗದಿದ್ದರೆ ಸಿಇಓ ಸರ್ಕಾರಕ್ಕೆ ಪತ್ರ ಬರೆದು ಕ್ರಮ ಕೈಗೊಳ್ಳುವುದಾಗಿದೆ. ದುರಾದೃಷ್ಟವೆಂದರೆ ಇವರಲ್ಲಿ ಯಾರೂ ಸಹ ಸಭೆ ಕರೆಯದೇ ಕಾಲ ದೂಡಿದ್ದಾರೆ.

ರಾಯಚೂರು ಜಿ.ಪಂ ಸಾಮಾನ್ಯ ಸಭೆಯ ಚಿತ್ರ

ಕೊರೊನಾ ಕಾಲದಲ್ಲಿ ಸಭೆ ಸೇರುವುದು ಕಷ್ಟವಲ್ಲವೇ ಎಂದು ನಿಮಗೆ ಅನಿಸಬಹುದು. ಆದರೆ ನಾವೀಗ ಮಾತನಾಡುತ್ತಿರುವುದು ಕೊರೊನಾ ಕಾಲದಲ್ಲಿ ಅಲ್ಲ. ರಾಯಚೂರು ಹಾಲಿ ಜಿಲ್ಲಾ ಪಂಚಾಯ್ತಿಯು 52 ತಿಂಗಳುಗಳನ್ನು ಪೂರೈಸಿದೆ. ಅಂದರೆ ಅದು ಇಷ್ಟರಲ್ಲಿ 26 ಸಾಮಾನ್ಯ ಸಭೆಗಳನ್ನು ನಡೆಸಬೇಕಿತ್ತು. ಆದರೆ ಅದು ಕೇವಲ 9 ಸಭೆಗಳನ್ನು ಮಾತ್ರ ನಡೆಸಿದೆ. 20 ತಿಂಗಳ ಹಿಂದೆಯೇ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಹಿರಿಯ ಮುಖಂಡರಾದ ಡಾ. ರಝಾಕ್ ಉಸ್ತಾದ್‌ರವರು ಈ ಕುರಿತು ದೂರು ನೀಡಿದ್ದರು. ಮೇ ತಿಂಗಳಿನಲ್ಲಿ ಸಿಇಓ ಈ ಕುರಿತು ಸರ್ಕಾರಕ್ಕೆ ಮೂರು ಪುಟಗಳ ವರದಿ ನೀಡಿ ’ಸಭೆಗಳು ನಡೆಯುತ್ತಿಲ್ಲ ಎನ್ನುವುದು ನಿಜ, ಬಹಳಷ್ಟು ಸದಸ್ಯರು ಅಸಮರ್ಥರಿದ್ದಾರೆ, ಅವರಿಗೆ ತರಬೇತಿಯ ಅಗತ್ಯವಿದೆ’ ಎಂದು ಬರೆದಿದ್ದರು. ಅದರನ್ವಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಈ ವಿಚಾರವಾಗಿ ನೋಟಿಸ್ ಹೋಗಿದೆ. ನಿಮ್ಮನ್ನು ಮತ್ತು ಪಂಚಾಯ್ತಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿದೆ. ಆದರೂ ಅಲ್ಲಿಯ ಜಿಲ್ಲಾ ಪಂಚಾಯ್ತಿಯು ಕೇವಲ ಒಮ್ಮೆ ಮಾತ್ರ ಸಭೆ ಸೇರಿದೆಯೆಂದರೆ ಅದರ ದರ್ಪ ಎಷ್ಟಿರಬೇಡ?

ಕಾನೂನು ಏನು ಹೇಳುತ್ತದೆ?
ಪಂಚಾಯತ್ ರಾಜ್ ಅಧಿನಿಯಮ 1993 ರ 268/2 ರ ಅನ್ವಯ ಯಾವುದೇ ಪಂಚಾಯ್ತಿ ಸತತವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾದಲ್ಲಿ ಅಂತಹ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ ಮರುಚುನಾವಣೆ ನಡೆಸಬೇಕು ಎಂಬ ನಿಯಮವಿದೆ. ಇದರನ್ವಯ 2019ರ ಜನವರಿಯಲ್ಲಿ ಡಾ. ರಝಾಕ್ ಉಸ್ತಾದ್‌ರವರು ಸರ್ಕಾರಕ್ಕೆ ದೂರು ನೀಡಿ ಪಂಚಾಯ್ತಿ ವಿಸರ್ಜಿಸಲು ಆಗ್ರಹಿಸಿದ್ದರು. ಆಗಿನ ಪಂಚಾಯತ್ ರಾಜ್ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೃಷ್ಣಭೈರೇಗೌಡರು ಅದನ್ನು ಪರಿಶೀಲಿಸಿ ವಿಸರ್ಜನೆಗೆ ಶಿಫಾರಸ್ಸು ಸಹ ಮಾಡಿದ್ದರು. ಆದರೆ ಅಷ್ಟರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಬಿದ್ದುಹೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅಲ್ಲಿಗೆ ಆ ಶಿಫಾರಸ್ಸು ಮೂಲೆ ಸೇರಿತು. ಏಕೆಂದರೆ ರಾಯಚೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಬಿಜೆಪಿಯವರಾಗಿರುವುದು.

ತಮ್ಮ ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಯುತ್ತಿಲ್ಲ, ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂಬುದು ಎಲ್ಲರಿಗಿಂತ ಅಲ್ಲಿನ ಸಿಇಓಗೆ ಗೊತ್ತಿರುತ್ತದೆ. ಅದನ್ನು ಸರ್ಕಾರಕ್ಕೆ ವರದಿ ಮಾಡಿ ಕೆಲಸ ಮಾಡಿಸುವಂತೆ ಮಾಡುವುದು ಅವರ ಕರ್ತವ್ಯ ಸಹ. ಆದರೆ ಸಿಇಓ ಮಾತ್ರ ಈ ವಿಚಾರವಾಗಿ ಕೈಚೆಲ್ಲಿ ಕೂತಿದ್ದಾರೆ.

ಆದರೆ ರಝಾಕ್ ಉಸ್ತಾದ್‌ರವರು ತಮ್ಮ ಪಟ್ಟುಬಿಡದೆ ಸರ್ಕಾರದ ಮೇಲೆ ಒತ್ತಡ ತಂದಿದ್ದರಿಂದ, 2020ರ ಜೂನ್‌ನಲ್ಲಿ ಸರ್ಕಾರ ಪ್ರಾದೇಶಿಕ ಆಯಕ್ತರ ಕಚೇರಿಗೆ (ಕಲಬುರಗಿ) ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಆದೇಶಿಸಿತ್ತು. ಅಂತೆಯೆ ಅದು ಜುಲೈ 3ರಂದು ತನ್ನ ವರದಿ ಸಲ್ಲಿಸಿದ್ದು, ರಾಯಚೂರು ಜಿಲ್ಲಾ ಪಂಚಾಯ್ತಿ ಸತತವಾಗಿ ಕೆಲಸ ಮಾಡಿಲ್ಲದಿರುವುದು ಕಂಡುಬಂದಿದ್ದು, ನಿಯಮ 268/2ರ ಪ್ರಕಾರ ಜಿಲ್ಲಾ ಪಂಚಾಯ್ತಿಯನ್ನು ವಿಸರ್ಜನೆಗೊಳಿಸಿ, ಇದರ ವಿರುದ್ಧ ಕ್ರಮ ಜರುಗಿಸಬಹುದು ಎಂದು ಹೇಳಿದೆ. ಆದರೂ ಈಗಿನ ಸಚಿವರಾದ ಕೆ.ಎಸ್ ಈಶ್ವರಪ್ಪನವರು ಮೌನಕ್ಕೆ ಶರಣಾಗಿದ್ದಾರೆ.

ನಿಲ್ಲದ ಹೋರಾಟ
ಇನ್ನು ರಿಟ್ ಆಫ್ ಮ್ಯಾಂಡಮಸ್ ಮೂಲಕ ಕೋರ್ಟಿಗೆ ಹೋಗಿ ನಿರ್ದೇಶನ ತೆಗೆದುಕೊಳ್ಳಬೇಕೆಂದು ಉಸ್ತಾದ್‌ರವರು ನಿರ್ಧರಿಸಿದ್ದಾರೆ. ಜಿಲ್ಲಾ ಪಂಚಾಯ್ತಿಯ ಅಧಿಕಾರಾವಧಿ ಇನ್ನು ಕೇವಲ 7 ತಿಂಗಳು ಉಳಿದಿದೆ. ಆದರೂ ಅವರು ಹೋರಾಟ ಬಿಟ್ಟಿಲ್ಲ. ಕೇವಲ ಒಂದು ತಿಂಗಳ ಮೊದಲು ವಿಸರ್ಜನೆಯಾದರೂ ಪರವಾಗಿಲ್ಲ, ಜಿಪಂ ವಿಸರ್ಜನೆ ಆಗಲೇಬೇಕು. ಏಕೆಂದರೆ ಇದು ಉಳಿದ ಜಿಲ್ಲೆಗಳಿಗೂ, ಮುಂದೆ ಅಧಿಕಾರಕ್ಕೆ ಬರುವ ಸದಸ್ಯರಿಗೂ ಪಾಠವಾಗಬೇಕಿದೆ. 2020-21ನೇ ಸಾಲಿನ ಕ್ರಿಯಾಯೋಜನೆಯ ಅನುಮೋದನೆಗಾಗಿ ಇಲ್ಲಿಯವರೆಗೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆದಿಲ್ಲ, ಕ್ರಿಯಾಯೋಜನೆ ಅನುಮೋದನೆಯಾಗಿಲ್ಲ ಅಂದರೆ ಕೆಲಸ ಯಾವಾಗ ಮಾಡುತ್ತಾರೆ? ಎಂದು ಉಸ್ತಾದ್‌ರವರು ಪ್ರಶ್ನಿಸಿದ್ದಾರೆ.

ಡಾ.ರಝಾಕ್ ಉಸ್ತಾದ್ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ

2018ರಿಂದ ಇಲ್ಲಿಯವರೆಗೂ ಕೇವಲ 3 ಸಾಮಾನ್ಯಸಭೆಗಳು ಮಾತ್ರ ನಡೆದಿವೆ. ಅದು ಸಹ ಕ್ರಿಯಾಯೋಜನೆಗೆ ಅನುಮೋದನೆ ಪಡೆಯುವ ಕಾರಣಕ್ಕಾಗಿ ಮಾತ್ರ ಮಾಡಿದ್ದಾರೆ ಅಷ್ಟೇ. ಇದು ಕೇವಲ ರಾಯಚೂರು ಜಿಲ್ಲಾ ಪಂಚಾಯ್ತಿಯ ವಿಷಯ ಮಾತ್ರವಲ್ಲ. ರಾಜ್ಯದ ಅರ್ಧಕ್ಕರ್ಧ ಜಿಲ್ಲಾ ಪಂಚಾಯ್ತಿಗಳು, ತಾಲ್ಲೂಕು, ಗ್ರಾಮಪಂಚಾಯ್ತಿಗಳು ಹೀಗೆಯೇ ಕೆಲಸ ಮಾಡುತ್ತಿವೆ. ಹಾಗಾಗಿ ರಾಯಚೂರು ಜಿಲ್ಲಾ ಪಂಚಾಯ್ತಿಯನ್ನು ವಿಸರ್ಜನೆ ಮಾಡಿದರೆ ಅದು ಇಡೀ ರಾಜ್ಯಕ್ಕೆ ಪಾಠವಾಗುತ್ತದೆ. ಸರ್ಕಾರ ಜಿಲ್ಲಾ ಪಂಚಾಯತ್ ಸದಸ್ಯರ ಮೇಲೆ ಕ್ರಮ ಜರುಗಿಸಬಹುದು ಎಂಬುದಾದರೂ ಜನರ ಅರಿವಿಗೆ ಬರಲಿ ಎಂಬುದು ಅವರ ಆಶಯ.

ಪ್ರತಿಪಕ್ಷ ಕಾಂಗ್ರೆಸ್ ಏನು ಮಾಡುತ್ತಿದೆ?
ರಾಯಚೂರಿನಲ್ಲಿ 3 ಕಾಂಗ್ರೆಸ್ ಶಾಸಕರು, ಇಬ್ಬರು ಎಂಎಲ್‌ಸಿಗಳು ಇದ್ದಾರೆ. ಆದರೆ ಜಿ.ಪಂನ ವಿರೋಧಪಕ್ಷವಾಗಿ ಅವರ್‍ಯಾರು ಸಹ ಜಿಲ್ಲಾ ಪಂಚಾಯತ್‌ನ ಈ ನಿರ್ಲಕ್ಷ್ಯದ ಕುರಿತು ಮಾತನಾಡಿಲ್ಲ. ಏಕೆಂದರೆ ಜಿಲ್ಲೆಯ ಅಭಿವೃದ್ಧಿ ಕುರಿತು ಅವರಿಗೂ ಕಾಳಜಿಯಿಲ್ಲ. ಬಹುತೇಕ ಜಿಲ್ಲಾ ಪಂಚಾಯ್ತಿಗಳು ಈ ರೀತಿ ಕೆಲಸ ಮಾಡುತ್ತಿಲ್ಲ. ಜಿ.ಪಂ ಸದಸ್ಯರು ಅವರ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನು ಹಲವು ಶಾಸಕರಿಗೆ ಜಿಲ್ಲಾ ಪಂಚಾಯ್ತಿಗಳು ಇರುವುದು ಬೇಕಿಲ್ಲ. ಏಕೆಂದರೆ ಜಿ.ಪಂ ಸದಸ್ಯರು ತಮಗೆ ಸರಿಸಮಾನವಾಗಿ ಕೂಡುತ್ತಾರೆ ಎಂಬ ಅಹಂ ಕೆಲಸ ಮಾಡುತ್ತದೆ.

ಜಿ.ಪಂ ಸದಸ್ಯರ ವಾದ
ನಮಗೆ ಪ್ರತ್ಯೇಕ ಅನುದಾನ ಇಲ್ಲ ಅಂದಮೇಲೆ ನಾವು ಸಭೆ ಸೇರಿ ಏನು ಪ್ರಯೋಜನ? ಶಾಸಕರಿಗೆ ವಾರ್ಷಿಕ 2 ಕೋಟಿ ವಿಶೇಷ ಅನುದಾನವಿರುತ್ತದೆ. ಇನ್ನು ಸಂಸತ್ ಸದಸ್ಯರಿಗೆ 5 ಕೋಟಿ ರೂ ಇರುತ್ತದೆ. ಈ ರೀತಿಯಾಗಿ ನಮಗೆ ಹೆಚ್ಚಿನ ಅನುದಾನ ಇಲ್ಲ ಎನ್ನುವುದು ಜಿ.ಪಂ ಸದಸ್ಯರ ತಕರಾರು. ಕೇವಲ 5 ಲಕ್ಷ ಹಣ ಬಂದರೆ ನಮ್ಮ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಹಳ್ಳಿಗಳಿರುತ್ತವೆ. ಅದರಿಂದ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಆದರೆ ಕ್ರಿಯಾಯೋಜನೆ ತಯಾರು ಮಾಡುವಾಗ ನಮ್ಮ ರಾಯಚೂರು ಜಿ.ಪಂ.ಗೆ 300ಕೋಟಿ ರೂ ಅನುದಾನವಿದೆ. ಇದು ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿರುತ್ತದೆ. ಆದರೆ ಈ ಅನುದಾನ ಜಿ.ಪಂ ಸದಸ್ಯರಿಗೆ ಬೇಕಿಲ್ಲ. ಏಕೆಂದರೆ ಅವರ ಕೈಗೆ ಹಣ ಬರುವಂತಹ ಅನುದಾನಗಳು ಅವರಿಗೆ ಬೇಕು, ಆಗ ಮಾತ್ರ ದುಡ್ಡು ನುಂಗಲು ಸಾಧ್ಯ ಎನ್ನುವ ದುರಾಲೋಚನೆ ಅವರದು. ಈ ಮೇಲಿನ ಅನುದಾನ ಬಳಸಿ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು, ಜನರ ಹಿತ ಕಾಯಲು ಅವರಿಗೆ ಮನಸ್ಸಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎನ್ನುತ್ತಾರೆ ಡಾ. ರಝಾಕ್ ಉಸ್ತಾದ್‌ರವರು.

ಈ ಮೊದಲೇ ಹೇಳಿದಂತೆ ಇದು ಕೇವಲ ರಾಯಚೂರು ಜಿ.ಪಂನ ಲೋಪವಲ್ಲ. ಇದು ಇಡೀ ರಾಜ್ಯದ ಹಲವು ಜಿಲ್ಲೆಗಳ ಶೋಚನೀಯ ಪರಿಸ್ಥಿತಿಯಾಗಿದೆ. ಜಿ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಎಲ್ಲಾ ಸದಸ್ಯರು ಹಾಜರಿರುತ್ತಾರೆ. ಅದೇನೂ ಉತ್ಸಾಹ ತೋರಿಸುತ್ತಾರೆ. ಆದರೆ ಒಮ್ಮೆ ಆಯ್ಕೆಯಾದಮೇಲೆ ಮುಗೀತು, ಇತ್ತ ತಲೆಹಾಕುವುದಿಲ್ಲ. ಜಿ.ಪಂ ಅಧ್ಯಕ್ಷರಿಗೆ ಕ್ಯಾಬಿನೆಟ್ ಸಚಿವ ಸ್ಥಾನಮಾನವಿದೆ. ಸಾಕಷ್ಟು ಅಧಿಕಾರವಿದೆ. ಆದರೂ ಅವರು ಕೆಲಸ ಮಾಡುತ್ತಿಲ್ಲ ಎಂದರೆ ಅವರು ಆ ಸ್ಥಾನದಲ್ಲಿ ಏಕಿರಬೇಕು ಅಲ್ಲವೇ? ಇದು ರಾಯಚೂರಿನ ವರದಿ. ನೀವು ನಿಮ್ಮ ಜಿ.ಪಂ.ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುತ್ತೀರಿ ಅಲ್ಲವೇ?

– ಮುತ್ತುರಾಜು


ಇದನ್ನೂ ಓದಿ: ಗಾಂಧಿ ಪ್ರತಿಮೆ ಇರುವ ಪ್ರದೇಶ ಧಾರ್ಮಿಕ ಸ್ಥಳವಲ್ಲ: ಕರ್ನಾಟಕ ಹೈಕೋರ್ಟ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...