ಕೊರೊನಾ ಸಂಕಷ್ಟ ನಿಭಾಯಿಸಲು ಹೆಣಗಾಡುತ್ತಿರುವ ಸರ್ಕಾರ ಪ್ರಜ್ಞಾಪೂರ್ವಕವಾಗಿ ಈ ದೇಶದ ಸಾಮಾನ್ಯ ಜನರನ್ನು ಮರೆತು ಉಳ್ಳವರ ಹಿತ ಕಾಯಲು ಟೊಂಕ ಕಟ್ಟಿನಿಂತಿರುವುದು ಜಗಜ್ಜಾಹೀರಾಗಿದೆ. ಈ ದೇಶದ ಕಾನೂನು -ಕಟ್ಟುಪಾಡುಗಳು ಎಂತಹುದ್ದದೇ ಸಂಕಷ್ಟದ ಕಾಲದಲ್ಲೂ ಬಡವರ, ಕೂಲಿ ಕಾರ್ಮಿಕರ, ದುಡಿಯುವ ವರ್ಗಗಳ ವಿರುದ್ಧವೇ ಚಲಾವಣೆಯಾಗುತ್ತಿರುವುದಕ್ಕೆ ಪ್ರತಿದಿನವೂ ಉದಾಹರಣೆಗಳು ಕಾಣ ಸಿಗುತ್ತಿವೆ.
ವಿದೇಶಿದಲ್ಲಿನ ಸುಮಾರು ನಾಲ್ಕು ಲಕ್ಷ ಭಾರತೀಯರನ್ನು ಭಾರತಕ್ಕೆ ಕರೆತರಲು ರೆಡ್ ಕಾರ್ಪೇಟ್ ಹಾಸಿರುವ ಕೇಂದ್ರ ಸರ್ಕಾರ ದೇಶದೊಳಗೆ ತಮ್ಮ ತಮ್ಮ ಊರುಗಳಿಗೆ ತಲುಪಲಾಗದೆ ಅನ್ನ, ನೀರು, ನೆಲೆ ಕಳೆದುಕೊಂಡು ಪರಿತಪಿಸುತ್ತಿರುವ ಲಕ್ಷಾಂತರ ಜನರ ಗೋಳಿಗೆ ಕಿವುಡಾಗಿ ವರ್ತಿಸುತ್ತಿದೆ. ವಿದೇಶದಲ್ಲಿನ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ‘ಐತಿಹಾಸಿಕ ಏರ್ ಲಿಪ್ಟ್,’ ‘ಆಪರೇಶನ್ ಏರ್ ಲಿಪ್ಟ್,’, ವಿದೇಶಿದಲ್ಲಿನ ಭಾರತೀಯರಿಗೆ ಮೋದಿ ಆಪತ್ಭಾಂಧವ ಎಂದು ಬಣ್ಣಿಸುತ್ತಿರುವ ಮಾಧ್ಯಮಗಳು ಭಾರತದಲ್ಲಿಯೇ ಹೊಟ್ಟೆ ಪಾಡಿಗಾಗಿ ಬೇರೆ ಬೇರೆ ಜಿಲ್ಲೆಗಳಿಗೆ, ರಾಜ್ಯಗಳಿಗೆ ಹೋಗಿ ಸಿಲುಕಿರುವ ದುಡಿಯವು ವರ್ಗಗಳನ್ನು ಕನಿಷ್ಟ ‘ರೋಡ್ ಲಿಪ್ಟ್ ‘ ಮೂಲಕ ತಮ್ಮ ತಮ್ಮ ಊರು, ಹಳ್ಳಿ, ಪಟ್ಟಣಗಳಿಗೆ ತಲುಪಿಸಲಾಗದ ಸರ್ಕಾರದ ಹೊಣೆಗೇಡಿತನವನ್ನು ಮರೆಮಾಚುತ್ತಿವೆ.
ಇನ್ನೂ ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ಹೊರಟ ಶ್ರಮಿಕರಿಂದ ಬಸ್‌ಚಾರ್ಜ್ ವಸೂಲಿಗಿಳಿದ ರಾಜ್ಯ ಸರ್ಕಾರ ತನ್ನ ವಿಕೃತ ನಿರ್ಧಾರವನ್ನು ಪ್ರತಿಪಕ್ಷಗಳ ಹೋರಾಟ, ಸಾಮಾಜಿಕ ಜಾಲತಾಣಗಳಲ್ಲಿನ ತೀವ್ರ ಟೀಕೆಗಳ ಕಾರಣ ಹಿಂಪಡೆಯುತ್ತದೆ. ಹಲವಾರು ದಿನಗಳಿಂದ ಅನ್ನ, ನೀರು, ನಿದ್ದೆಗಳಿಲ್ಲದೆ ಬಳಲಿದ್ದ ದುಡಿಯುವ ವರ್ಗಗಳಿಂದಲೂ ಟಿಕೆಟ್ ದರ ವಸೂಲಿಗಿಳಿದ ಸರ್ಕಾರದ ನಿರ್ಲಜ್ಜಗೇಡಿಗತನವನ್ನು ಖಂಡಿಸದ ಮಾಧ್ಯಮಗಳು ನಾಗರೀಕರ, ವಿಪಕ್ಷಗಳು ಮಾಡಿದ ಮಂಗಳಾರತಿಯಿಂದ ಸರ್ಕಾರ ಟಿಕೆಟ್ ದರ ವಸೂಲಿಯ ನಿರ್ಧಾರ ಹಿಂಪಡೆದದ್ದನ್ನು ‘ಕಷ್ಟಕ್ಕೆ ಕರಗಿದ ಸರ್ಕಾರ’ ಎಂದು ತುತ್ತೂರಿ ಊದುತ್ತವೆ ಎಂದರೆ ಇಂತಹ ಮಾಧ್ಯಮಗಳ ಸಂವೇದನೆ ಸತ್ತು ಹೋಗಿರುವುದು ನಿಚ್ಚಳವಾಗಿ ಗೋಚರಿಸುತ್ತದೆ.
ಇಂದಿಗೂ ವಲಸೆಯ ಪರ್ವ ಮುಗಿಯುತ್ತಿಲ್ಲ. ಕೂಲಿ, ನಾಲಿಗೆ ವಲಸೆ ಹೋಗಿರುವ ದುಡಿಯುವ ವರ್ಗಗಳು ತಮ್ಮ ತಮ್ಮ ಊರುಗಳಿಗೆ ತಲುಪಲಾಗದೆ ಪರಿತಪಿಸುತ್ತಿವೆ. ರಾಜ್ಯದಲ್ಲಿ ಕಳೆದರೆಡು ದಿನಗಳಿಂದ ಪಾಸ್ ವ್ಯವಸ್ಥೆ ಮೂಲಕ ಮತ್ತು ಬೆಂಗಳೂರಿನಿಂದ ತಮ್ಮ ತಮ್ಮ ಊರುಗಳಿಗೆ ತಲುಪಲು ಅವಕಾಶ ಕೊಡಲಾಗಿದೆ ಸರಿಯಷ್ಟೆ. ಆದರೆ ಪಾಸ್ ಪಡೆದುಕೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಬೆಂಗಳೂರು ಸೇರಿದಂತೆ ಅನೇಕ ಇತರೆ ಜಿಲ್ಲೆಗಳಲ್ಲಿನ ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ತಮ್ಮ ಊರು ಮನೆ ಸೇರಿಕೊಳ್ಳಲು ನಡೆದುಕೊಂಡು ಅಥವಾ ದ್ವಿಚಕ್ರವಾಹನಗಳಲ್ಲಿ ಹಳ್ಳಿ, ಹಳ್ಳ, ಕೊಳ್ಳ, ಕಾಡು ಮೇಡುಗಳ ಬಳಸು ದಾರಿಯಲ್ಲಿ ಬಂದರೂ ಅವರು ತಮ್ಮ ತಮ್ಮ ಜಿಲ್ಲೆಗಳ ಒಳ ಪ್ರವೇಶಿಸಲು ಚೆಕ್ ಪೋಸ್ಟ್ ಗಳಲ್ಲಿ ಪಾಸ್ ಇಲ್ಲದ ನೆಪದಿಂದ ಅವರನ್ನು ಒಳಬಿಟ್ಟುಕೊಳ್ಳಲಾಗುತ್ತಿಲ್ಲ. ಹಾಗೊಮ್ಮೆ ಒಳಬಂದರೂ ಅವರನ್ನು ನುಸುಳುಕೋರರಂತೆ ಬಂಧಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಪೊಲೀಸರು ಇಂತಹ ವಲಸಿಗ ರೊಂದಿಗೆ ಅತ್ಯಂತ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ. ನೆಲೆ. ಅನ್ನ, ನೀರು ಇಲ್ಲದೆ ಮೊದಲೇ ಬಳಲಿ ಬೆಂಡಾಗಿರುವ ಈ ವಲಸಿಗ ಕುಟುಂಬಗಳು ಈಗ ತಮ್ಮದೇ ನೆಲದಲ್ಲಿ ಪರಕೀಯರಾಗಿ ತಿರಸ್ಕರಿಸಲ್ಪಡುತ್ತಿವೆ. ಅತ್ತ ಬಂದ ಜಿಲ್ಲೆಗೂ ಹೋಗಲಾರದೆ. ಇತ್ತ ತಮ್ಮ ಊರಿಗೂ ಪ್ರವೇಶ ಸಿಗದೆ ಸಾವಿರಾರು ದುಡಿಯುವ ಜನಸಮುದಾಯ ಮಕ್ಕಳು,ಮರಿಗಳನ್ನು ಕಟ್ಟಿಕೊಂಡು ಅಲೆದಾಡುವತ್ತಾ ನಿಷ್ಕಾರುಣ್ಯವಾಗಿ ವರ್ತಿಸುತ್ತಿರುವ ಆಡಳಿತ ವ್ಯವಸ್ಥೆಯ ಕಾಲು ಕಟ್ಟಿಕೊಟ್ಟು ರೋಧಿಸುತ್ತಿವೆ. ಹಳ್ಳಿಗಳಲ್ಲೂ ಕೂಡ ಅಪರಿಚಿತರನ್ನು ಒಳ ಬಿಟ್ಟುಕೊಳ್ಳದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ವಲಸಿಗರ ಪಾಡು ಹೇಳತೀರದಾಗಿದೆ.
ಕೇವಲ ಪಾಸ್ ಮುಖ್ಯವಾಗಿಟ್ಟುಕೊಂಡು ವಲಸಿಗರನ್ನು ಅವರ ಊರುಗಳ ಒಳಬಿಟ್ಟುಕೊಳ್ಳದ ಕೆಲಸವನ್ನು ಜಿಲ್ಲಾಡಳಿತಗಳೇ ಮಾಡುತ್ತಿದ್ದು, ಬಹಳಷ್ಟು ಕಡೆ ಇಂತಹ ವಲಸಿಗರ ಮೇಲೆ ಪೊಲೀಸರು ಹಲ್ಲೆ ನಡೆಸಿ ಹೊರ ತಳ್ಳುವ ಘಟನೆಗಳು ನಡೆದಿವೆ. ಹೀಗೆ ವಲಸೆ ಬರುವವರನ್ನು ಆರೋಗ್ಯ ತಪಾಸಣೆ ಮಾಡಿ ಅಗತ್ಯ ಬಿದ್ದಲ್ಲಿ ಕ್ವಾರಂಟೈನ್ ಗೆ ಒಳಪಡಿಸುವ ಮೂಲಕ ಅಂತಹ ಈ ವಲಸಿಗ ಕುಟುಂಬಗಳಿಗೆ ಕನಿಷ್ಟ ಅನ್ನ, ಆಹಾರ, ನೆಲೆಯನ್ನು ಒದಗಿಸಬಹುದಾಗಿದ್ದರೂ ಆಡಳಿತ ವ್ಯವಸ್ಥೆಗಳು ಇದಾವುದನ್ನು ಮಾಡದೆ ವಲಸಿಗರನ್ನು ನಗರದ ಒಳಬಿಟ್ಟುಕೊಳ್ಳದೆ ಓಡಿಸುತ್ತಿವೆ. ಕೂಲಿ ಕುಟುಂಬಗಳ ಬದುಕು ಈಗ ‘ಅತ್ತ ದರಿ ಇತ್ತ ಪುಲಿ’ ಎಂಬಂತಾಗಿದೆ. ಕಾಯ್ದೆ-ಕಾನೂನುಗಳ ಉದ್ದೇಶ ಅಂತಿಮವಾಗಿ ಆ ನೆಲದ ಜನರ ಕಲ್ಯಾಣವೇ ಆಗಿರುತ್ತದೆ. ಆದರೆ ಜನರ ಹಿತ ಕಾಯದ ಕಾನೂನು ಕಟ್ಟಳೆಗಳು ಇರುವುದಾದರೂ ಏತಕ್ಕೆ ?, ಅನೇಕ ಸಂದರ್ಭಗಳಲ್ಲಿ ಕಾಯ್ದೆ-ಕಾನೂನುಗಳು ಜನರಿಗೆ ಮಾರಕವಾದಾಗಲೇ ದಂಗೆ, ಕ್ರಾಂತಿಗಳು ಭುಗಿಲೇಳುತ್ತವೆ. ಅಂತಹ ಕಾನೂನುಗಳನ್ನು ಮುರಿದು ಮುನ್ನುಗ್ಗುವ ಸಂದರ್ಭಗಳು ಸೃಷ್ಟಿಯಾಗುತ್ತವೆ. ಇದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು.
ಮೊನ್ನೆ ಬೆಂಗಳೂರಿನಲ್ಲಿ ಬಿಹಾರಿ ಕಾರ್ಮಿಕರ ಸಿಟ್ಟು ಸ್ಪೋಟಗೊಂಡು ಪೊಲೀಸ್ ಅಧಿಕಾರಿಯೊಬ್ಬನ ತಲೆ ಒಡೆಯುವಂತಾಗಿದೆ. ದುಡಿಯುವ ವರ್ಗದ ಸಿಟ್ಟು ರಟ್ಟೆಗೆ ಬಂದಾಗ ಇಂತಹ ಘಟನೆಗಳು ನಡೆಯುತ್ತವೆ. ಇದು ಕಾನೂನು ಭಂಗವಲ್ಲ. ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ತೋರಿದ ಪ್ರತಿರೋಧವಾಗುತ್ತದೆ. ಗುಜರಾತ್ ನ ಸೂರತ್ ನಲ್ಲಿ ವಲಸೆ ಕಾರ್ಮಿಕರ ಗುಂಪಿನ ದಂಗೆ ಕೂಡ ಇದೆ ಆಗಿದೆ. ಇದನ್ನು ಆಳುವವರು ಅರ್ಥಮಾಡಿಕೊಳ್ಳಬೇಕು. ವಿದೇಶದಲ್ಲಿನ ಭಾರತೀಯರನ್ನು ಕರೆತರಲು ಹಾತೊರೆವ ಕೇಂದ್ರ ಸರ್ಕಾರ ಭಾರತದೊಳಗೆ ಇರುವ ವಲಸೆ ಕಾರ್ಮಿಕರನ್ನು ಅವರವರ ನೆಲೆಗೆ ತಲುಪಿಸಲು ಅಕ್ಷಮ್ಯ ನಿರ್ಲಕ್ಷ್ಯವನ್ನು ತೋರುತ್ತಿದೆ.
ಕೊರೊನಾ ಸೋಂಕು ವಿದೇಶದಿಂದಲೆ ಭಾರತಕ್ಕೆ ನುಸುಳಿದ್ದು, ಶ್ರೀಮಂತರು ತಂದ ಕಾಯಿಲೆಗೆ ಭಾರತದ ಬಡಜನಸಮುದಾಯ ಬರ್ಬರವಾಗಿ ನರಳುತ್ತಿದೆ. ಲಾಕ್ ಡೌನ್ ಘೋಷಣೆಯಾದ ಬೆನ್ನಲ್ಲೇ ರಸ್ತೆ ಹಿಡಿದು ಹೊರಟ ಈ ದೇಶದ ಆರ್ಥಿಕ ಅಭಿವೃದ್ದಿಗೆ ಬೆನ್ನೆಲುಬಾದ ದುಡಿಯುವ ವರ್ಗಗಳ ಧಾರುಣವಾದ ಮಹಾವಲಸೆ ಸರ್ಕಾರಕ್ಕಾಗಲಿ , ಮಾಧ್ಯಮಗಳಿಗಾಗಲಿ ಅದೊಂದು ಈ ದೇಶದ, ಈ ನಾಡಿನ ಜನಸಮುದಾಯದ ಗೋಳು ಎಂದು ಅನಿಸಲೇ ಇಲ್ಲ. ಇಂತಹ ಹೊತ್ತಿನಲ್ಲಿ ಈ ಬಡಸಮುದಾಯವನ್ನು , ದುಡಿಯವ ವರ್ಗದ ಹಿತ ಕಾಯಬೇಕಾದ ಸರ್ಕಾರ ಭಾರತದ ಬಡಜನರ ನಿರ್ನಾಮಕ್ಕೆ ವಿದೇಶದಿಂದ ಸೋಂಕು ಆಮದು ಮಾಡಿಕೊಳ್ಳಲು ಸಡಗರದಲ್ಲಿದೆ.
ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಬೆಂಗಳೂರು ವಿಮಾನನಿಲ್ದಾಣದಲ್ಲಿ ವಿದೇಶಿಗಳಿಂದ ಬರುವ ಭಾರತೀಯರನ್ನು ಸ್ವಾಗತಿಸಿ ಐಷಾರಾಮಿ ಹೊಟೇಲ್ , ಬಂಗ್ಲೆಗಳಿಗೆ ಬೀಳ್ಕೊಡುವ ಮುಂಚೆ ಪಾಸ್, ಪರ‍್ಮಿಷನ್, ಲೊಟ್ಟೆ-ಲೊಸಗು ಎಂಬ ನಿರ್ಬಂಧಗಳನ್ನು ತೆಗೆದು ತಮ್ಮದೇ ನೆಲದ ವಲಸೆ ಕಾರ್ಮಿಕ ಸಮುದಾಯವನ್ನು ಅವರವರ ಊರುಮನೆಗಳಿಗೆ ತಲುಪಿಸಿ ಅನ್ನ,ನೀರು ಕೊಡಬೇಕಾಗಿದೆ. ಇದು ಒಂದು ನಾಗರೀಕ ಸರ್ಕಾರವೆನಿಸಿಕೊಳ್ಳಲು ಘನತೆಯ ಮಾರ್ಗವಾಗಿರುತ್ತದೆ.
(ಲೇಖಕರು ಪತ್ರಕರ್ತರು ಮತ್ತು ಬರಹಗಾರರು. ಅಭಿಪ್ರಾಯಗಳು ವಯಕ್ತಿಕವಾದವು)
ಇದನ್ನೂ ಓದಿ: ಬಿಲ್ಡರ್ ಲಾಬಿಗೆ ಮಣಿದು ರೈಲುಸೇವೆ ರದ್ದುಗೊಳಿಸಿದ ರಾಜ್ಯಸರ್ಕಾರ: ಸಂಕಷ್ಟದಲ್ಲಿ ಕಾರ್ಮಿಕರು


