ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಎಂಎಲ್ಎ ಗಳ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಆರೋಪಗಳ ನಡುವೆ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಈಗ ಮತ್ತೆ ಅಂತರ ರಾಜ್ಯ ಗಡಿಗಳನ್ನು ಮುಚ್ಚುವುದಾಗಿ ಸರ್ಕಾರ ಘೋಷಿಸಿದೆ.
ಒಂದು ವಾರದವರೆಗೂ ಗಡಿಯಲ್ಲಿ ಚಲನವಲನ ನಿಷೇಧ ಜಾರಿಯಿರಲಿದ್ದು ಪಾಸ್ ಹೊಂದಿರುವವರು ಮಾತ್ರ ರಾಜ್ಯಕ್ಕೆ ಬರಬಹುದಾಗಿದೆ ಅಥವಾ ರಾಜ್ಯದಿಂದ ಹೊರಹೋಗಬಹುದಾಗಿದೆ. ಎಲ್ಲ ಚಲನವಲನಗಳ ಮೇಲೆ ಗಮನ ಇಡಲಾಗುವುದು. ಎನ್ ಒ ಸಿ ಇಲ್ಲದೆ ಯಾರೂ ರಾಜಸ್ಥಾನಕ್ಕೆ ಪ್ರವೇಶಿಸುವಂತಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕ ಎಮ್ ಎಲ್ ಲಾಥೆರ್ ಆದೇಶ ಹೊರಡಿಸಿದ್ದಾರೆ.
ರಾಜಸ್ಥಾನದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 11,600 ಕ್ಕೆ ಏರಿದ್ದು, ಇಲ್ಲಿಯವರೆಗೂ 259 ಜನ ಮೃತಪಟ್ಟಿರುವುದು ವರದಿಯಾಗಿದೆ.
ಈಗ ಬಹುತೇಕ ರಾಜ್ಯಗಳು ನಿಷೇಧಗಳನ್ನು ಸಡಿಲಿಸಿದ್ದು ಅಂತರರಾಜ್ಯ ಓಡಾಟ ಸಾಮಾನ್ಯಕ್ಕೆ ಬರುತ್ತಿದೆ. ಆದರೆ ರಾಜಸ್ಥಾನದಲ್ಲಿ ಮಾತ್ರ ಎಲ್ಲ ಗಡಿಗಳಲ್ಲಿ, ರೈಲ್ವೇ ಮತ್ತು ವಿಮಾನ ನಿಲ್ದಾಣಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ, ಚಲನವಲನವನ್ನು ನಿರ್ಬಂಧಿಸಲು ತೀರ್ಮಾನಿಸಲಾಗಿದೆ. ರಾಜಸ್ಥಾನ ರಾಜ್ಯ ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಹರ್ಯಾಣ ರಾಜ್ಯಗಳ ಜೊತೆಗೆ ಗಡಿ ಹಂಚಿಕೊಂಡಿದೆ.
ರಾಜಸ್ಥಾನದಿಂದ ಹೊರಗೆ ಹೋಗಲೂ ಕೂಡ ತುರ್ತು ಕಾರಣಗಳಿಗೆ ಮಾತ್ರ ಜಿಲ್ಲಾಧಿಕಾರಿಗಳು, ಮತ್ತು ಪೊಲೀಸ್ ಸೂಪರಿಂಡೆಂಟ್‌ಗಳಿಂದ ಪಾಸ್ ಪಡೆಯಬೇಕಿದೆ.
ಓದಿ: ಆಪರೇಷನ್ ಕಮಲಕ್ಕೆ ಮುಖಭಂಗ: ಮಣಿಪುರದ ಏಳು ಶಾಸಕರನ್ನು ವಿಧಾನ ಸಭೆ ಪ್ರವೇಶಿಸದಂತೆ ಹೈಕೋರ್ಟ್ ತೀರ್ಪು


