ಪಶ್ಚಿಮ ಬಂಗಾಳದಲ್ಲಿ 2010ರ ನಂತರ ನೀಡಲಾದ ಎಲ್ಲಾಒಬಿಸಿ ಪ್ರಮಾಣ ಪತ್ರಗಳನ್ನು ರದ್ದುಪಡಿಸಿರುವ ಕಲ್ಕತ್ತಾ ಹೈಕೋರ್ಟ್, ಸುಮಾರು 77 ವರ್ಗಗಳನ್ನು ಒಬಿಸಿ ಪಟ್ಟಿಯಿಂದ ಹೊರಗಿಟ್ಟು ಇತ್ತೀಚೆಗೆ ಆದೇಶಿಸಿದೆ. ಈ ಬೆನ್ನಲ್ಲೇ 14 ಮುಸ್ಲಿಂ ಗುಂಪುಗಳನ್ನು ಒಬಿಸಿ ಪಟ್ಟಿಯಿಂದ ಹೊರಗಿಡಲು ರಾಜಸ್ಥಾನದ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಮಾತನಾಡಿರುವ ರಾಜಸ್ಥಾನ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಅವಿನಾಶ್ ಗೆಹ್ಲೋಟ್, “1997 ರಿಂದ 2013 ರವರೆಗೆ ಈ (ಮುಸ್ಲಿಂ) ಸಮುದಾಯಗಳನ್ನು ಒಬಿಸಿ ಪಟ್ಟಿಗೆ ಸೇರಿಸಿರುವುದು ಕಾನೂನಾತ್ಮಕವೇ ಅಥವಾ ಕಾನೂನುಬಾಹಿರವೇ? ಎಂದು ನಾವು ಜೂನ್ 4 ರ ನಂತರ (ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ) ಪರಿಶೀಲಿಸುತ್ತೇವೆ” ಎಂದು ತಿಳಿಸಿದ್ದಾರೆ.
ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿರುವ ಅವಿನಾಶ್ ಗೆಹ್ಲೋಟ್, ಧರ್ಮಾಧಾರಿತ ಮೀಸಲಾತಿ ತಪ್ಪು ಎಂದಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗವು 1993ರ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ ಆಯೋಗದ ಕಾಯಿದೆಯ ಆಧಾರದ ಮೇಲೆ ಒಬಿಸಿಗಳ ಹೊಸ ಪಟ್ಟಿಯನ್ನು ತಯಾರಿಸಬೇಕೆಂದು ಕಲ್ಕತ್ತಾ ಹೈಕೋರ್ಟ್ ನಿರ್ದೇಶಿಸಿದೆ.
ನ್ಯಾಯಾಲಯದ ಆದೇಶದಿಂದ 2011ರಲ್ಲಿ ಅಧಿಕಾರಕ್ಕೆ ಬಂದ ಆಡಳಿತರೂಡ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಒಂದು ರೀತಿಯಲ್ಲಿ ಹಿನ್ನಡೆಯಾಗಿದೆ. ಏಕೆಂದರೆ, ಟಿಎಂಸಿಯ ಅಧಿಕಾರವಧಿಯ ಎಲ್ಲಾ ಒಬಿಸಿ ಪ್ರಮಾಣಪತ್ರಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಒಬಿಸಿ ವರ್ಗದವರಿಗೆ ಸಾರ್ವಜನಿಕ ಸೇವೆಗಳಲ್ಲಿ ಮೀಸಲಾತಿ ನೀಡುವ ಪಶ್ಚಿಮ ಬಂಗಾಳದ ಹಿಂದುಳಿದ ವರ್ಗಗಳ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಹೊರತಾಗಿ) ಸೇವೆಗಳು ಮತ್ತು ಹುದ್ದೆಗಳ ಮೀಸಲಾತಿ ಕಾಯಿದೆ- 2012ರ ಕೆಲ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ 2010ರ ನಂತರ ನೀಡಲಾದ ಎಲ್ಲಾ ಒಬಿಸಿ ಪ್ರಮಾಣಪತ್ರಗಳು ರದ್ದು: ಹೈಕೋರ್ಟ್ ಆದೇಶ


