ರಸ್ತೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಿದವರನ್ನು ಸಾಕ್ಷಿಗಳಾಗಿ ಪರಿಗಣಿಸಿ ಅವರನ್ನು ಪದೇ ಪದೇ ನ್ಯಾಯಾಲಯಕ್ಕೆ ಅಲೆಸಲಾಗುತ್ತದೆ ಎಂಬ ದೂರು ಆಗಾಗ್ಗೆ ಕೇಳಿಬರುತ್ತಿತ್ತು. ಹಾಗಾಗಿ ತಮ್ಮ ಕಣ್ಣಾರೆ ಅಪಘಾತದಲ್ಲಿ ಜನ ಸಾಯುತ್ತಿದ್ದರೂ ಬಹಳಷ್ಟು ಜನ ತಮ್ಮ ಪಾಡಿಗೆ ತಾವು ಹೋಗಿಬಿಡುತ್ತಿದ್ದರು. ಈ ಮನಸ್ಥಿತಿ ಬದಲಿಸಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಂದಾಗಿದ್ದು ಅಪಘಾತದಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವವರಿಗೆ ಈಗ 5,000 ರೂ ಬಹುಮಾನ ಘೋಷಿಸಿದ್ದಾರೆ.
ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅನೇಕ ಜನ ಸಾವನ್ನಪ್ಪುತ್ತಿದ್ದಾರೆ. ಈಗ ಅಂತಹ ಜನರ ಜೀವ ಉಳಿಸಲು ರಾಜಸ್ಥಾನ ಸರ್ಕಾರ ಹೊಸ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಡಿ, ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ಜನರಿಗೆ ಸರ್ಕಾರದಿಂದ 5000 ರೂಪಾಯಿ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ಗೆಹ್ಲೋಟ್ ಸರ್ಕಾರ ಘೋಷಿಸಿದೆ.
ಈ ಯೋಜನೆಗೆ ಚಿರಂಜೀವಿ ಜೀವನ್ ರಕ್ಷಾ ಯೋಜನೆ ಎಂದು ಹೆಸರಿಡಲಾಗಿದೆ. ಈ ಯೋಜನೆಯಡಿ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವವರ ಪೋಲಿಸ್ ವಿಚಾರಣೆ ಇರುವುದಿಲ್ಲ. ಅಲ್ಲದೆ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಿದರೆ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹಣವನ್ನೂ ಪಾವತಿ ಮಾಡುವಂತಿಲ್ಲ ಎಂದು ಯೋಜನೆಯಲ್ಲಿ ತಿಳಿಸಲಾಗಿದೆ.
ಈ ಯೋಜನೆಯಡಿ ಗಾಯಗೊಂಡ ವ್ಯಕ್ತಿಯನ್ನು ಸಾಧ್ಯವಾದಷ್ಟು ಬೇಗ ಸಹಾಯಕ್ಕಾಗಿ ಆಸ್ಪತ್ರೆಗೆ ಕರೆದೊಯ್ಯುವ ವ್ಯಕ್ತಿಯು ಬಹುಮಾನದ ಮೊತ್ತವನ್ನು ಶೀಘ್ರವಾಗಿಯೇ ಪಡೆಯುತ್ತಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದ ಮೇಲೆ ಪ್ರಮಾಣಪತ್ರವನ್ನು ಮಾತ್ರ ನೀಡಲಾಗುತ್ತದೆ. ಸರ್ಕಾರಿ ಆಂಬ್ಯುಲೆನ್ಸ್, ಖಾಸಗಿ ಆಂಬ್ಯುಲೆನ್ಸ್, ಪಿಸಿಆರ್ ವ್ಯಾನ್ ಮತ್ತು ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಈ ಯೋಜನೆಯ ಲಾಭವನ್ನು ಪಡೆಯುವುದಿಲ್ಲ. ಏಕೆಂದರೆ ಇದು ಅವರ ಕರ್ತವ್ಯ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ; #NationalUnemploymentDay | ಪ್ರಧಾನಿ ಜನ್ಮದಿನದಂದೆ ಉದ್ಯೋಗ ಕೇಳಿದ ದೇಶದ ಜನತೆ


