1991ರಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಮತ್ತು ಆರು ಅಪರಾಧಿಗಳನ್ನು ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.
ಈ ಹಿಂದೆ ತಮಿಳುನಾಡು ಸರ್ಕಾರ ಅವರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು ಎಂದು ಸುಪ್ರೀಂ ಕೋರ್ಟ್ ತನ್ನ ಬಿಡುಗಡೆ ಆದೇಶದಲ್ಲಿ ಉಲ್ಲೇಖಿಸಿದೆ. ಮೇ ತಿಂಗಳಲ್ಲಿ ಮತ್ತೊಬ್ಬ ಅಪರಾಧಿ ಪೆರಾರಿವಾಲನ್‌ನನ್ನು ಸುಪ್ರೀಂ ಕೋರ್ಟ್ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
1991ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ ಶ್ರೀಹರನ್ ಅವರಲ್ಲದೆ, ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ರವಿಚಂದ್ರನ್ ಅವರು ಜೈಲು ಪಾಲಾಗಿದ್ದರು.
ಮೇ 21, 1991 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ನಡೆಯುತ್ತಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂನ (ಎಲ್‌ಟಿಟಿಇ) ಸದಸ್ಯೆ ಧನು ಎಂಬ ಮಹಿಳಾ ಆತ್ಮಾಹುತಿ ಬಾಂಬರ್ ರಾಜೀವ್ ಗಾಂಧಿಯವರನ್ನು ಹತ್ಯೆಗೈದಿದ್ದರು. ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಧನು ಸೇರಿದಂತೆ ಹದಿನಾಲ್ಕು ಮಂದಿ ಸಾವನ್ನಪ್ಪಿದ್ದರು. ಗಾಂಧಿಯವರ ಹತ್ಯೆಯು ಭಾರತದ ಮೊದಲ ಆತ್ಮಹತ್ಯಾ ಬಾಂಬ್ ದಾಳಿ ಪ್ರಕರಣವಾಗಿದೆ.
ಪ್ರಕರಣದಲ್ಲಿ ಪೆರಾರಿವಾಲನ್, ಮುರುಗನ್, ಸಂತಮ್ ಮತ್ತು ನಳಿನಿ ಎಂಬ ನಾಲ್ವರು ಅಪರಾಧಿಗಳು ಶಿಕ್ಷೆ ಒಳಪಟ್ಟಿದ್ದರು. ಏಪ್ರಿಲ್ 2000 ರಲ್ಲಿ, ತಮಿಳುನಾಡು ರಾಜ್ಯಪಾಲರು ರಾಜ್ಯ ಸರ್ಕಾರದ ಶಿಫಾರಸು ಮತ್ತು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಮತ್ತು ರಾಜೀವ್ ಗಾಂಧಿಯವರ ಪತ್ನಿ ಸೋನಿಯಾ ಗಾಂಧಿಯವರ ಮನವಿಯ ಆಧಾರದ ಮೇಲೆ ಅಪರಾಧಿ ನಳಿನಿಯ ಶಿಕ್ಷೆಯನ್ನು ಕಡಿಮೆಗೊಳಿಸಿದ್ದರು. ಫೆಬ್ರವರಿ 18, 2014 ರಂದು, ಸುಪ್ರೀಂ ಕೋರ್ಟ್ ಪೆರಾರಿವಾಲನ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.
ರಾಜೀವ್ ಗಾಂಧಿ ಕುಟುಂಬ ಅಪರಾಧಿಗಳನ್ನು ಕ್ಷಮಿಸಿದ್ದೇವೆ ಎಂದು ಹೇಳಿಕೆ ನೀಡಿತ್ತು. ಹಾಗಾಗಿ ತಮಿಳುನಾಡು ಸರ್ಕಾರ ಅವರ ಶಿಕ್ಷೆಯನ್ನು ಕಡಿತಗೊಳಿಸಲು ಮುಂದಾಗಿತ್ತು.
ಇದನ್ನೂ ಓದಿ; ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ…


