Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ...

ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ…

- Advertisement -
- Advertisement -

 ಗೌರಿ ಲಂಕೇಶ್

30 ಏಪ್ರಿಲ್, 2008 (`ಕಂಡಹಾಗೆ’ ಸಂಪಾದಕೀಯದಿಂದ)

ಮೊನ್ನೆ ಪ್ರಿಯಾಂಕ ಗಾಂಧಿ, ತನ್ನ ತಂದೆ ರಾಜೀವ್ ಗಾಂಧಿಯನ್ನು ಕೊಂದವರ ತಂಡದಲ್ಲಿದ್ದ, ಈಗ ಆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಳಿನಿ ಎಂಬಾಕೆಯನ್ನು ವೆಲ್ಲೂರ್ ಜೈಲಿನಲ್ಲಿ ಭೇಟಿಯಾಗಿದ್ದರ ಸುದ್ದಿ ಹೊರಬೀಳುತ್ತಿದ್ದಂತೆ ಹಲವಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಅವುಗಳಲ್ಲಿ ಬಿಜೆಪಿ ಪಕ್ಷದವರ ಪ್ರತಿಕ್ರಿಯೆಯಂತೂ ತಮಾಷೆಯಾಗಿತ್ತು. ಮೊದಮೊದಲು ಆಕೆ ಹೀಗೇಕೆ ಮಾಡಿದಳು ಎಂದು ನಮಗೆ ಅರ್ಥವೇ ಆಗುತ್ತಿಲ್ಲ ಎಂದ ಬಿಜೆಪಿಯ ವಕ್ತಾರ. ಆದರೂ ಈ ಬಗ್ಗೆ ನಿಮಗೊಂದು ಅಭಿಪ್ರಾಯ ಇರಲೇಬೇಕಲ್ಲಾ ಎಂದು ಒತ್ತಾಯಿಸಿದಾಗ “ವೈಯಕ್ತಿಕ ವಿಷಯಗಳ ಬಗ್ಗೆ ನಾವು ಮಾತಾಡುವುದಿಲ್ಲ” ಎಂದ. ಹೇಳಿಕೇಳಿ, ಅವಕಾಶ ಸಿಕ್ಕಾಗಲೆಲ್ಲ ಸೋನಿಯಾ ಗಾಂಧಿ ಮತ್ತವರ ಮಕ್ಕಳ ಮೇಲೆ ಕಾರಿಕೊಂಡು ಬೀಳುವುದು ಆವರ ಜಾಯಮಾನ, ಆದರೆ ಪ್ರಿಯಾಂಕ-ನಳಿನಿ ಭೇಟಿಯ ಹಿಂದೆ ಯಾವ ರಾಜಕೀಯವೂ ಇರಲಿಲ್ಲ ಎಂದು ಗೊತ್ತಾಗಿ ಬಿಜೆಪಿಗಳು ಸುಮ್ಮನಾದರು.

ಪ್ರಿಯಾಂಕ ವಿಷಯಕ್ಕೆ ಬರುವುದಾದರೆ ಆಕೆ ತನ್ನ ಚಿಕ್ಕವಯಸ್ಸಿನಲ್ಲೇ ಹಿಂಸಾಕೃತ್ಯಗಳನ್ನು ಹತ್ತಿರದಿಂದ ನೋಡಿದವಳು. ಮೊದಲು ಆಕೆಯ ಅಜ್ಜಿ ಇಂದಿರಾಗಾಂಧಿಯನ್ನು ಆಕೆಯ ರಕ್ಷಣಾ ದಳದವರೇ ಕೊಂದು ಹಾಕಿದರು. ಅನಂತರ ಆಕೆಯ ತಂದೆಯನ್ನು ಆತ್ಮಹತ್ಯಾ ದಾಳಿಯಲ್ಲಿ ಕೊಂದು ಹಾಕಲಾಯಿತು. ಈಗ ಪ್ರತಿಕ್ಷಣ ರಕ್ಷಣಾದಳದವರಿಂದ ಸುತ್ತುವರೆದಿರುವ, ಗಾಜಿನ ಅರಮನೆಯಲ್ಲಿ ಬದುಕನ್ನು ಸಾಗಿಸುತ್ತಿರುವ, ಹೆಚ್ಚಾಗಿ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧ್ಯವಿರದ ಸ್ಥಿತಿಯಲ್ಲಿರುವ ಯುವತಿ ಪ್ರಿಯಾಂಕ. ಅಂತಹ ಪರಿಸ್ಥಿತಿಯಲ್ಲೂ ಆಕೆ ತನ್ನ ಮಾನವೀಯತೆಯನ್ನು ಉಳಿಸಿಕೊಂಡು ಸಹಜವಾಗಿ ಬದುಕಲು ಯತ್ನಿಸುತ್ತಿದ್ದಾಳೆ ಎಂಬುದಕ್ಕೆ ನಳಿನಿ ಭೇಟಿ ಪ್ರಕರಣವೇ ಸಾಕ್ಷಿ.

ಯಾವುದೇ ಪ್ರಚಾರವಿಲ್ಲದೆ, ಯಾರ ಗಮನಕ್ಕೂ ಬಾರದ ಪ್ರಿಯಾಂಕ ತನ್ನ ತಂದೆಯ ಸಾವಿಗೆ ಕಾರಣವಾಗಿದ್ದ ನಳಿನಿಯನ್ನು ಭೇಟಿಯಾಗಿದ್ದ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಪ್ರಿಯಾಂಕ ಯಾಕೆ ಆಕೆಯನ್ನು ಭೇಟಿಯಾದಳು? ಅವರಿಬ್ಬರ ನಡುವೆ ಯಾವ ಮಾತುಕತೆ ನಡೆಯಿತು? ಎಲ್ಲಕ್ಕಿಂತ ಮುಖ್ಯವಾಗಿ ಆಕೆಯನ್ನು ಭೇಟಿ ಆಗುವ ಬಯಕೆ ಪ್ರಿಯಾಂಕಳಲ್ಲಿ ಮೂಡಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದವು.

ಅವುಗಳಿಗೆಲ್ಲಾ ಪ್ರಿಯಾಂಕ ಉತ್ತರಿಸಿದ್ದು ಹೀಗೆ “ಅದು ವೈಯಕ್ತಿಕ ವಿಷಯ. ನಾನು ಸ್ವಇಚ್ಛೆಯಿಂದಲೇ ಆಕೆಯನ್ನು ಭೇಟಿಯಾದೆ. ನನ್ನ ಬದುಕಿನಲ್ಲಿ ಸಂಭವಿಸಿರುವ ಹಿಂಸೆ ಮತ್ತು ಸಾಮರಸ್ಯವನ್ನು ಪಡೆಯಲು ನಾವು ಆಯ್ಕೆ ಮಾಡಿಕೊಂಡ ಮಾರ್ಗ ಅದು. ನನಗೆ ಕೋಪ, ದ್ವೇಷ ಮತ್ತು ಹಿಂಸೆಯಲ್ಲಿ ನಂಬಿಕೆ ಇಲ್ಲ. ಮತ್ತು ಅಂತಹ ಭಾವನೆಗಳು ನನ್ನ ಬದುಕನ್ನೇ ಸ್ವಾಧೀನಪಡಿಸಿಕೊಳ್ಳಲು ನಾನು ಎಂದೂ ಬಿಡುವುದಿಲ್ಲ.”

ಇಂಗ್ಲಿಷ್‍ನಲ್ಲಿ ಒಂದು ಹೇಳಿಕೆ ಇದೆ: “ಟು ಎರ್ ಈಸ್ ಹ್ಯೂಮನ್, ಟು ಫರ್‍ಗೀವ್ ಈಸ್ ಡಿವೈನ್” ಅಂತ. ಹಾಗೆ ಪ್ರಿಯಾಂಕ ಕೂಡ ಸಾಮಾನ್ಯ ಮನುಷ್ಯಳಂತಿದ್ದು ನಳಿನಿ ಬಗ್ಗೆ ಮರೆಯಬಹುದಿತ್ತು. ಅಥವಾ ನಳಿನಿ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ಸುಮ್ಮನಿರಬಹುದಿತ್ತು. ಆದರೆ ಪ್ರಿಯಾಂಕ ಮರೆಯಲಿಲ್ಲ, ಸುಮ್ಮನಿರಲಿಲ್ಲ. ಬದಲಾಗಿ ನಳಿನಿಯನ್ನು ಭೇಟಿಯಾಗಿ, ಅವಳೊಂದಿಗೆ ಸಾಮಾನ್ಯ ಯುವತಿಯರಂತೆ ಬಾಣಂತನ, ಮಕ್ಕಳ ಬಗ್ಗೆ ಚರ್ಚಿಸಿ, ಒಂದು ಉಡುಗೊರೆಯನ್ನು ನೀಡುವ ಮೂಲಕ ಪ್ರಿಯಾಂಕ ತನ್ನ ಎಲ್ಲಾ ದುಃಖ ಮತ್ತು ನೋವುಗಳೊಂದಿಗೆ ಮುಖಾಮುಖಿಯಾಗಿ ತನ್ನ ಮನಸ್ಸಿನಲ್ಲೇ ಅವುಗಳಿಗೆ ಒಂದು ಅಂತ್ಯ ಕಂಡುಕೊಂಡಿದ್ದಾಳಲ್ಲದೆ ತನ್ನ ಮಾನವೀಯತೆಯನ್ನು ಮೆರೆದಿದ್ದಾಳೆ. ಅಂದಹಾಗೆ ರಾಜೀವ್‍ಗಾಂಧಿಯ ಹತ್ಯೆಗೆ ಸಂಬಂಧಪಟ್ಟಂತೆ ನ್ಯಾಯಾಲಯ ನಳನಿಗೆ ಮತ್ತಾಕೆಯ ಗಂಡ ಮುರುಗನ್, ಇಬ್ಬರಿಗೂ ಮರಣದಂಡನೆ ವಿಧಿಸಿತ್ತು. ಆದರೆ ತೀರ್ಪು ಬರುವ ಮುನ್ನವೇ ನಳಿನಿಗೆ ಜೈಲಿನಲ್ಲೇ ಒಂದು ಹೆಣ್ಣುಮಗು ಹುಟ್ಟಿತ್ತು. ಆಗ ನಳಿನಿ ಮತ್ತು ಮುರುಗನ್ ಇಬ್ಬರೂ ಗಲ್ಲಿಗೇರಿಸಲ್ಪಟ್ಟರೆ ಅವರ ಮಗಳು ಅನಾಥೆಯಾಗುತ್ತಾಳೆಂಬ ಕಾರಣಕ್ಕೆ ನಳನಿಗೆ ಮರಣದಂಡನೆ ವಿಧಿಸಬಾರದೆಂದು ರಾಷ್ಟ್ರಪತಿಯವರಿಗೆ ಅಹವಾಲು ಸಲ್ಲಿಸಿದ್ದು ಬೇರಾರು ಅಲ್ಲ. ಮುರುಗನ್ ಮತ್ತು ನಳಿನಿಯ ಕೃತ್ಯದಿಂದ ತನ್ನ ಪ್ರೀತಿಯ ಗಂಡನನ್ನೇ ಕಳೆದುಕೊಂಡಿದ್ದ ಸೋನಿಯಾಗಾಂಧಿ!

ಸೋನಿಯಾ ಗಾಂಧಿಯ ಈ ಕಾಳಜಿಯಿಂದಲೇ ತನ್ನ ಪ್ರಾಣ ಉಳಿಸಿಕೊಂಡ ನಳಿನಿ ಅಂದಿನಿಂದ ಸೋನಿಯಾರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ. ಆಕೆ ಬರೆದ ಪತ್ರಗಳಲ್ಲಿ ಸೋನಿಯಾರನ್ನು ‘ಪ್ರೀತಿಯ ತಾಯಿ’ ಎಂದೇ ಸಂಬೋಧಿಸಿದ್ದಾಳೆ.

ಆದರೆ ವಿಪರ್ಯಾಸ ನೋಡಿ.

ಮಾತೆಯರ ಹೆಸರಲ್ಲಿ ‘ಸೌಂದರ್ಯ ಲಹರಿ’ ಎಂಬ ಅಶ್ಲೀಲ ಶ್ಲೋಕಗಳನ್ನು ಸಾಮೂಹಿಕವಾಗಿ ಮಹಿಳೆಯರಿಂದ ಪಠಿಸುವ ಚೆಡ್ಡಿಗಳಿಗೆ ಇಟಲಿಯಲ್ಲಿ ಜನಿಸಿದ್ದರೂ ಈಗ ಭಾರತೀಯರಾಗಿರುವ ಸೋನಿಯಾರ ಮಾತೃತ್ವ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲ, ಸೋನಿಯಾ ಗಾಂಧಿ ಭಾರತದ ಪ್ರಧಾನಿಯಾದರೆ ತನ್ನ ಗಂಡ ಬದುಕಿರುವಾಗಲೇ ತಾನು ವಿಧವೆಯಂತೆ ಜೀವಿಸುತ್ತೇನೆ ಎಂದು ಸುಷ್ಮಾ ಸ್ವರಾಜ್‍ನಂತಹ ತಲೆ ಕೆಟ್ಟ ಹೆಂಗಸರು ಪ್ರತಿಭಟಿಸುತ್ತಾರೆ.

ಒಂದೆಡೆ, ತನ್ನ ಗಂಡನನ್ನು ಕಳೆದುಕೊಂಡಿದ್ದರೂ, ಆತನನ್ನು ಕೊಂದವರ ಮಗಳ ಬಗ್ಗೆ ತಾಯಿ ವಾತ್ಸಲ್ಯ ತೋರುವ ಸೋನಿಯಾ. ಇನ್ನೊಂದೆಡೆ, ಗರ್ಭವತಿಯರ ಹೊಟ್ಟೆಯನ್ನೇ ತ್ರಿಶೂಲಗಳಿಂದ ಬಗೆದು ಅದರಲ್ಲಿನ ಭ್ರೂಣವನ್ನು ಹಿಡಿದು ಸಂಭ್ರಮಿಸುವ ಬಿಜೆಪಿಗಳು.

ಇವರ ನಡುವೆ ಯಾರು ಈ ದೇಶಕ್ಕೆ ಹಿತವರು?

ಬರೀ ಟೊಳ್ಳುತನ, ಢೋಂಗಿತನ ತುಂಬಿರುವ ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಪ್ರಿಯಾಂಕಳ ಗಟ್ಟಿತನ ಆಶಾದಾಯಕವಾಗಿದೆ ಎಂಬುದನ್ನು ಬಿಜೆಪಿಗಳ ಹೊರತಾಗಿ ಎಲ್ಲರೂ ನಂಬುತ್ತಾರೆ. ಹ್ಯಾಟ್ಸ್ ಆಫ್ ಟು ಪ್ರಿಯಾಂಕ!

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...