Homeಮುಖಪುಟಗುಜರಾತ್ ಚುನಾವಣೆ: ನಗರಗಳಲ್ಲಿ ಪ್ರಬಲವಾಗಿರುವ ಬಿಜೆಪಿ ಮತ ಕಬಳಿಸಲಿದೆಯೇ ಆಪ್?

ಗುಜರಾತ್ ಚುನಾವಣೆ: ನಗರಗಳಲ್ಲಿ ಪ್ರಬಲವಾಗಿರುವ ಬಿಜೆಪಿ ಮತ ಕಬಳಿಸಲಿದೆಯೇ ಆಪ್?

2017ರ ಚುನಾವಣೆಯಲ್ಲಿ ನಗರಗಳಲ್ಲಿನ 84 ಕ್ಷೇತ್ರಗಳಲ್ಲಿ ಬಿಜೆಪಿ 63 ಅನ್ನು ಗೆದ್ದುಕೊಂಡಿತ್ತು.

- Advertisement -
- Advertisement -

ಗುಜರಾತ್ ಚುನಾವಣೆಯು ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 8ರಂದು ಫಲಿತಾಂಶ ಘೋಷಣೆಯಾಗಲಿದೆ. ನರೇಂದ್ರ ಮೋದಿ, ಅಮಿತ್ ಶಾ, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿಯವರ ತವರು ರಾಜ್ಯವಾದ ಕಾರಣಕ್ಕೂ ಈ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.

1995ರವರೆಗೆ ಗುಜರಾತ್ ರಾಜ್ಯವನ್ನು ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್ ಮತ್ತು ಜನತಾದಳ ಪಕ್ಷಗಳು ಆಳಿದ್ದರೆ 1995ರಿಂದೀಚೆಗೆ ನಡೆದ 6 ಚುನಾವಣೆಗಳಲ್ಲಿ ಬಿಜೆಪಿ ಸತತವಾಗಿ ಗೆದ್ದು ಅಧಿಕಾರದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೆ ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತಿತ್ತು. ಆದರೆ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಆಪ್ ಕೂಡ ಬಿರುಸಿನ ಪೈಪೋಟಿ ನೀಡಲು ಮುಂದಾಗಿದೆ. ಅದಕ್ಕೆ ಇಂಬು ಕೊಡುವಂತೆ ಕೆಲ ಸಮೀಕ್ಷೆಗಳು ಈ ಬಾರಿಯೂ ಬಿಜೆಪಿ ಬಹುಮತ ಸಾಧಿಸಲಿದ್ದು, ಆಪ್ ಎರಡನೇ ಸ್ಥಾನ ಪಡೆಯುತ್ತದೆ ಮತ್ತು ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎಂದು ಭವಿಷ್ಯ ನುಡಿದಿವೆ. ಹಾಗಾಗಿ ಗುಜರಾತ್ ಚುನಾವಣೆ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

2017ರ ಚುನಾವಣಾ ಮೆಲುಕು

182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್‌ನಲ್ಲಿ ಸರಳ ಬಹುಮತಕ್ಕೆ 93 ಸ್ಥಾನಗಳ ಅಗತ್ಯವಿದೆ. 2017ರ ಕೊನೆಯ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಕಾಳಗ ನಡೆದು ಕೊನೆಗೆ 99 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಅಧಿಕಾರ ಉಳಿಸಿಕೊಂಡಿತು. ಅದು 2012ರ ಚುನಾವಣೆಗೆ ಹೋಲಿಸಿಕೊಂಡರೆ 16 ಸೀಟುಗಳನ್ನು ಕಳೆದುಕೊಂಡರೂ ಆಡಳಿತ ವಿರೋಧಿ ಅಲೆಯ ನಡುವೆಯೂ ಸತತ ಆರನೇ ಬಾರಿಗೆ ಅಧಿಕಾರ ದಕ್ಕಿಸಿಕೊಂಡಿದ್ದು ದಾಖಲೆಯೇ ಸರಿ. ಕಾಂಗ್ರೆಸ್ ಅಧಿಕಾರದ ಹತ್ತಿರಕ್ಕೆ ಬಂದು (77 ಸ್ಥಾನಗಳು) ಎಡವಿತು. ಅದು 16 ಹೆಚ್ಚುವರಿ ಸೀಟುಗಳನ್ನು ಗೆದ್ದುಕೊಂಡರೂ ಸಹ ಸರಳ ಬಹುಮತ ತಲುಪಲು ಸಾಧ್ಯವಾಗಲಿಲ್ಲ.

2017ರ ಚುನಾವಣೆಯ ಸಮಯದಲ್ಲಿ ಊನಾ ದಲಿತ ಚಳವಳಿಯ ನಾಯಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದರೆ, ಪಾಟೀದಾರ್ ಮೀಸಲಾತಿಗಾಗಿನ ಹೋರಾಟಗಾರ ಹಾರ್ದಿಕ್ ಪಟೇಲ್ ಮತ್ತು ಹಿಂದುಳಿದ ವರ್ಗದ ಯುವ ನಾಯಕ ಅಲ್ಪೇಶ್ ಠಾಕೂರ್ ಕಾಂಗ್ರೆಸ್ ಸೇರಿದ್ದರು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ವಿರುದ್ಧ ಸೂರತ್‌ನ ವ್ಯಾಪಾರಿ ಸಮುದಾಯದಲ್ಲಿ ಆಕ್ರೋಶವಿತ್ತು. ಆದರೂ ಕಾಂಗ್ರೆಸ್ ಗೆಲ್ಲಲಾಗಲಿಲ್ಲ. ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ನರೇಂದ್ರ ಮೋದಿಯವರನ್ನು ನೀಚ ಮನುಷ್ಯ ಎಂದು ಕರೆದಿದ್ದುದು ಕಾಂಗ್ರೆಸ್‌ಗೆ ಮುಳುವಾಯಿತು ಎಂಬ ವಿಶ್ಲೇಷಣೆಗಳು ಕೇಳಿಬಂದಿದ್ದವು.

2022ರ ಸಮೀಕ್ಷೆಗಳು

ಲೋಕನೀತಿ ಸಿಎಸ್‌ಡಿಎಸ್ ಸಮೀಕ್ಷೆಯ ಪ್ರಕಾರ ಗುಜರಾತ್‌ನ ಮೂರನೇ ಒಂದರಷ್ಟು ಜನಕ್ಕೆ ಮಾತ್ರ ಸರ್ಕಾರದ ವಿರುದ್ಧ ಅಸಮಾಧಾನವಿದ್ದು, ಮೂರನೇ ಎರಡರಷ್ಟು ಜನರು (31%) ಬಿಜೆಪಿ ಆಡಳಿತದಿಂದ ತೃಪ್ತರಾಗಿದ್ದೇವೆ ಎಂದಿದ್ದಾರೆ. 2017ರ ಸಮೀಕ್ಷೆಯಲ್ಲಿ ಕೇವಲ ಶೇ.8ರಷ್ಟು ಜನರಿಗೆ ಮಾತ್ರ ಬಿಜೆಪಿ ಆಡಳಿತದ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿತ್ತು. ಮೇಲ್ವರ್ಗ ಮತ್ತು ಮಧ್ಯಮ ವರ್ಗ ಬಿಜೆಪಿ ಜೊತೆಗಿದ್ದರೆ, ಕೆಳ ಮತ್ತು ಬಡತನ ರೇಖೆಯಿಂದ ಕೆಳಗಿನ ಬಡಜನರು ಕಾಂಗ್ರೆಸ್ ಕಡೆಗಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಇನ್ನು ಗುಜರಾತ್‌ಗೆ ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿ ಮೂರನೇ ಪರ್ಯಾಯ ಪಕ್ಷದ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಶೇ.62ರಷ್ಟು ಜನರು ಸಮ್ಮತಿ ಸೂಚಿಸಿದ್ದಾರೆ. 24% ಜನರು ಬೇಡ ಎಂದರೆ 15% ಜನರು ಉತ್ತರಿಸಿಲ್ಲ. ಇದು ಚುನಾವಣೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.

ಗುಜರಾತ್ ನಗರಗಳಲ್ಲಿ ಬಿಜೆಪಿ ಪ್ರಾಬಲ್ಯ- ಗ್ರಾಮೀಣದಲ್ಲಿ ಕಾಂಗ್ರೆಸ್ ಹಿಡಿತ

ಗುಜರಾತ್ ಹೆಚ್ಚು ನಗರೀಕೃತ ರಾಜ್ಯವಾಗಿದೆ. ರಾಜ್ಯದಲ್ಲಿ ಶೇ.43ರಷ್ಟು ನಗರನಿವಾಸಿಗಳು ಎಂದು 2011ರ ಜನಗಣತಿ ಹೇಳುತ್ತದೆ. ಗುಜರಾತ್‌ನ 182 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 84 ಕ್ಷೇತ್ರಗಳು ನಗರ, ಪಟ್ಟಣ ಪ್ರದೇಶಗಳಲ್ಲಿದ್ದರೆ, ಉಳಿದ 98 ಕ್ಷೇತ್ರಗಳು ಗ್ರಾಮೀಣ ಭಾಗದಲ್ಲಿವೆ. ಇತ್ತೀಚಿನ ಚುನಾವಣೆಗಳಲ್ಲಿ ನಗರ ಭಾಗದಲ್ಲಿ ಬಿಜೆಪಿ ಹಿಡಿತವಿದ್ದರೆ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ.

2017ರ ಚುನಾವಣೆಯನ್ನು ನೋಡುವುದಾದರೆ ನಗರಗಳಲ್ಲಿನ 84 ಕ್ಷೇತ್ರಗಳಲ್ಲಿ ಬಿಜೆಪಿ 63 ಅನ್ನು ಗೆದ್ದುಕೊಂಡಿತ್ತು. ಆದರೆ ಗ್ರಾಮೀಣ ಭಾಗದಲ್ಲಿನ 98 ಕ್ಷೇತ್ರಗಳಲ್ಲಿ 36 ಸ್ಥಾನಗಳಿಗೆ ಸೀಮಿತಗೊಂಡಿತ್ತು. ಅದೇ ರೀತಿ ಕಾಂಗ್ರೆಸ್ ಪಕ್ಷವು ನಗರ ಭಾಗದಲ್ಲಿ ಕೇವಲ 20 ಸ್ಥಾನಗಳಲ್ಲಿ ಗೆಲುವು ಕಂಡರೆ, ಗ್ರಾಮೀಣ ಭಾಗದಲ್ಲಿ 57 ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರೆದಿತ್ತು.

ಆಪ್ ಪ್ರವೇಶದಿಂದ ಯಾರಿಗೆ ಲಾಭ?

2017ರ ಚುನಾವಣೆಯಲ್ಲಿ ಆಪ್ ಗುಜರಾತ್‌ನಲ್ಲಿ ಗಮನ ಸೆಳೆಯಲು ವಿಫಲವಾಗಿತ್ತು. ಆದರೆ ದೆಹಲಿ ನಂತರ ಪಂಜಾಬ್‌ನಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಆಮ್ ಆದ್ಮಿ ಪಕ್ಷ ಸದ್ಯ ಗುಜರಾತ್ ಮೇಲೆ ಹೆಚ್ಚು ಗಮನ ಹರಿಸಿದೆ. ದೊಡ್ಡದೊಡ್ಡ ರ‍್ಯಾಲಿಗಳನ್ನು ನಡೆಸುತ್ತಿದ್ದು ಈಗಾಗಲೇ 118 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಾಧ್ಯಮಗಳು ಸಹ ಆಪ್ ಪಕ್ಷಕ್ಕೆ ಸಾಕಷ್ಟು ಪ್ರಚಾರ ನೀಡಿವೆ. ಕೆಲ ಸರ್ವೆಗಳು ಆಪ್ 22% ಮತಗಳೊಂದಿಗೆ ಕಾಂಗ್ರೆಸ್ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದು ಮುಖ್ಯ ವಿರೋಧ ಪಕ್ಷವಾಗಲಿದೆ ಎಂದಿವೆ. ಹಾಗಾಗಿ ಆಪ್ ಮೇಲೆ ಎಲ್ಲರ ಕಣ್ಣಿದೆ.

ಮಧ್ಯಮ ವರ್ಗ ಮತ್ತು ನಗರ ಕೇಂದ್ರಿತವಾದ ಆಮ್ ಆದ್ಮಿ ಪಕ್ಷವು ಬಿಜೆಪಿ ಮತಬ್ಯಾಂಕ್‌ಗೆ ಕೈಹಾಕಲಿದೆ ಎಂದು ಗುಜರಾತ್ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. “ಆಪ್‌ಗೆ ಗ್ರಾಮೀಣ ಭಾಗದಲ್ಲಿ ಯಾವುದೇ ನೆಲೆಯಿಲ್ಲ. ಅದು ಏನಿದ್ದರೂ ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಗೆಲ್ಲಲಾಗದ ನಗರ ಮತ್ತು ಅರೆ ನಗರದ 66 ಕ್ಷೇತ್ರಗಳಲ್ಲಿ ಬಿಜೆಪಿಗೆ ತಲೆನೋವಾಗಲಿದೆ. ಆಡಳಿತ ವಿರೋಧಿ ಅಲೆ ಗಗನಕ್ಕೇರಿದ್ದು ಜನರು ಬಿಜೆಪಿಯ ದುರಾಡಳಿತದಿಂದ ಬಸವಳಿದಿದ್ದಾರೆ” ಎಂದು ಕಾಂಗ್ರೆಸ್ ಮುಖಂಡ ಪರೇಶ್ ಧಾನನಿ ಹೇಳಿದ್ದಾರೆ. ಆಪ್ ನಗರ ಪ್ರದೇಶಗಳಲ್ಲಿ ಒಂದಷ್ಟು ಮತ ಗಳಿಸುತ್ತದೆಯೇ ಹೊರತು ಅದು ಅಸೆಂಬ್ಲಿ ಸೀಟುಗಳನ್ನು ಗೆಲ್ಲುವುದಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಅಭಿಪ್ರಾಯ ಪಡುತ್ತಾರೆ.

2017ರ ಚುನಾವಣೆಯಲ್ಲಿ ಬಿಜೆಪಿ 49.1% ಮತ ಗಳಿಸಿದರೆ ಕಾಂಗ್ರೆಸ್ 41.4% ಮತ ಗಳಿಸಿತ್ತು. ಆಪ್ ಕೇವಲ 0.10% ಮತಗಳನ್ನಷ್ಟೆ ಗಳಿಸಿತ್ತು. ಅದು ಈ ಬಾರಿ ತನ್ನ ಮತ ಪ್ರಮಾಣವನ್ನು ಎಷ್ಟು ಹೆಚ್ಚಿಸಿಕೊಳ್ಳುತ್ತದೆ ಎನ್ನುವುದರ ಮೇಲೆ ಗುಜರಾತ್‌ನಲ್ಲಿ ಯಾರು ಬಹುಮತ ಗಳಿಸುತ್ತಾರೆ ಎನ್ನುವುದು ನಿರ್ಧಾರವಾಗಲಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿ ವಿರುದ್ಧ ಸಿಡಿಮಿಡಿಗೊಂಡಿರುವ ಸೇಬು ಬೆಳೆಗಾರರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...