Homeಕರ್ನಾಟಕತಿ.ನರಸೀಪುರ ವೇಣುಗೋಪಾಲ್ ಕೊಲೆಗೆ ಸಂಘ ಪರಿವಾರ ಕೋಮು ತಿರುವು ನೀಡಲೆತ್ನಿಸಿ ವಿಫಲವಾದದ್ದು..

ತಿ.ನರಸೀಪುರ ವೇಣುಗೋಪಾಲ್ ಕೊಲೆಗೆ ಸಂಘ ಪರಿವಾರ ಕೋಮು ತಿರುವು ನೀಡಲೆತ್ನಿಸಿ ವಿಫಲವಾದದ್ದು..

- Advertisement -
- Advertisement -

ತಿರಮಕೂಡಲು ನರಸೀಪುರದ ಪ್ರಮುಖ ಬೀದಿಗಳಲ್ಲಿ ಈಗ ಭಗವಾಧ್ವಜಗಳು ಹಾರಾಡುತ್ತಿವೆ. ಶನಿವಾರ (ಜುಲೈ 8) ನಡೆದ ಹನುಮ ಜಯಂತಿಗಾಗಿ ಕಟ್ಟಿದ ಕೇಸರಿ ಪಟಗಳು ಗಾಳಿ-ಮಳೆಗೆ ಅಲ್ಲಲ್ಲಿ ಕಿತ್ತು ಬಿದ್ದಿದ್ದು, ಅದ್ದೂರಿ ಆಚರಣೆಯ ಕುರುಹುಗಳು ಗೋಚರಿಸುತ್ತವೆ. ಇದರ ಜೊತೆಗೆ ’ಹಿಂದೂ ಹುಲಿ ವೇಣುಗೋಪಾಲ್ ಅವರಿಗೆ ಶ್ರದ್ಧಾಂಜಲಿ’ ಎಂಬ ಪೋಸ್ಟರ್‌ಗಳು ಪಟ್ಟಣದ ವಿವಿಧೆಡೆ ರಾರಾಜಿಸುತ್ತಿವೆ. ಮತ್ತೊಂದೆಡೆ ನಾಯಕ ಸಮುದಾಯ ಹೆಚ್ಚಾಗಿ ವಾಸಿಸುವ ಬೀದಿಯಲ್ಲಿನ ವೇಣು ಅವರ ಪುಟ್ಟ ಮನೆಯ ಮೇಲೆ ’ಕೇಸರಿ ಭಾವುಟ’ ಎದ್ದುನಿಂತಿದೆ.

ಹಿಂದುತ್ವವಾದ ಪ್ರತಿಪಾದನೆ-ಪ್ರಚಾರ ಮತ್ತು ರಾಜಕೀಯ ಸುಳ್ಳುಗಳ ಭಾಷಣಗಳಿಗೆ ಪ್ರಸಿದ್ಧರಾದ ಚಕ್ರವರ್ತಿ ಸೂಲಿಬೆಲೆ ಸಕ್ರಿಯರಾಗಿರುವ ’ಯುವ ಬ್ರಿಗೇಡ್’ನಲ್ಲಿ ಗುರುತಿಸಿಕೊಂಡು ತಿ.ನರಸೀಪುರದಲ್ಲಿ ಅದರ ಸಂಚಾಲಕರಾಗಿದ್ದ ವೇಣುಗೋಪಾಲ್ ಅವರ ಕೊಲೆಯ ನಂತರದಲ್ಲಿ ಬ್ರಿಗೇಡ್ ಹಾಗೂ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ. ವೇಣು ಮನೆಯ ಬಳಿ ಬೀಡುಬಿಟ್ಟು, ಬರುವವರು ಹೋಗುವವರನ್ನೆಲ್ಲಾ ಕಾಯುತ್ತಾ, ’ಹಿಂದೂ ವರ್ಸಸ್ ಮುಸ್ಲಿಂ’ ಎಂಬ ಥಿಯರಿಯನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆಯೇ ಎಂಬ ಗುಮಾನಿ ಮೂಡುತ್ತದೆ. ’ಘಟನೆಯ ಪ್ರತ್ಯಕ್ಷದರ್ಶಿಗಳು’ ಎಂಬುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿರುವ ಯುವಕರೂ ವೇಣು ಮನೆಯ ಬಳಿ ಆಗಾಗ್ಗೆ ಬಂದುಹೋಗುವುದು ಸಾಮಾನ್ಯವಾಗಿದೆ.

’ನ್ಯಾಯಪಥ-ನಾನುಗೌರಿ.ಕಾಂ’ ವರದಿಗಾಗಿ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡ ದೃಶ್ಯಗಳು, ಎದ್ದ ಪ್ರಶ್ನೆಗಳನ್ನು ಅವಲೋಕಿಸುವ ಮುನ್ನ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿರುವ ಘಟನೆಯ ವಿವರಗಳತ್ತ ಒಮ್ಮೆ ನೋಡುವುದು ಸೂಕ್ತ.

ಚಕ್ರವರ್ತಿ ಸೂಲಿಬೆಲೆ

ಘಟನೆಯ ಪ್ರತ್ಯಕ್ಷದರ್ಶಿ ಎನ್ನಲಾದ ಬ್ರಾಹ್ಮಣ ಸಮುದಾಯದ ರಾಮಾನುಜಂ ಎಂಬವರು ನೀಡಿದ ದೂರಿನ ಅನ್ವಯ ಆರು ಮಂದಿ ಮತ್ತು ಇನ್ನಿತರರ ವಿರುದ್ಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮಾನುಜಂ ನೀಡಿರುವ ದೂರಿನಲ್ಲಿ ಏನಿದೆ?

ನಂಜನಗೂಡಿನ ಕೂಟ್ಟಿಕಲ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿರುವ ರಾಮಾನುಜಂ ದಿನಾಂಕ 8.7.2023 ಮತ್ತು 9.7.2023ರಂದು ನಡೆದಿರುವ ಘಟನೆಗಳನ್ನು ಹೀಗೆ ವಿವರಿಸಿದ್ದಾರೆ:

“8ನೇ ತಾರೀಖಿನಂದು ವೀರಾಂಜನೇಯ ಧರ್ಮ ಜಾಗೃತಿ ಬಳಗದಿಂದ ತಿ.ನರಸೀಪುರದಲ್ಲಿ ಹನುಮ ಜಯಂತಿ ಹಮ್ಮಿಕೊಳ್ಳಲಾಗಿತ್ತು. ನಾನು ಕೂಡ ಸಮಿತಿಯ ಸದಸ್ಯ. 8 ರಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಉತ್ಸವ ಹೊರಡುವ ಗುಂಜ ನರಸಿಂಹಸ್ವಾಮಿ ಮುಖ್ಯದ್ವಾರದ ಬಳಿ ಉತ್ಸವ ಮೂರ್ತಿಗಳನ್ನು ಮೆರವಣಿಗೆಗೆ ಸಿದ್ಧಪಡಿಸಲಾಗುತ್ತಿತ್ತು. ಸಾರ್ವಜನಿಕರು ಮತ್ತು ಹನುಮ ಭಕ್ತರು ಇದ್ದುದ್ದರಿಂದ ಯಾವುದೇ ವಾಹನವನ್ನು ದೇವಾಲಯದ ಆವರಣಕ್ಕೆ ಬಿಡದಂತೆ ತಡೆದು ಹೊರಗೆ ನಿಲ್ಲಿಸಲಾಗುತ್ತಿತ್ತು. ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಶ್ರೀರಾಮಪುರದ ಮಣಿಕಂಠ (ನಾಯಕ ಜನಾಂಗ), ತಿರಮಕೂಡಲಿನ ಸಂದೇಶ್ (ಒಕ್ಕಲಿಗ ಸಮುದಾಯ) ಬೈಕ್‌ನಲ್ಲಿ ದೇವಾಲಯದ ಮುಖ್ಯದ್ವಾರದ ಮೂಲಕ ಒಳಗೆ ಬರುತ್ತಿದ್ದರು. ನಾನು, ಗೋಪಾಲ ಮತ್ತು ಉಳಿದ ಕಾರ್ಯಕರ್ತರು, “ಉತ್ಸವ ಮೂರ್ತಿ ಹೊರಗೆ ಹೋಗುವವರೆಗೂ ಯಾವುದೇ ವಾಹನಗಳು ಒಳಗೆ ಹೋಗುವುದು ಬೇಡ, ಬೈಕ್‌ಗಳನ್ನು ದೇವಾಲಯದ ಹೊರಗೆ ನಿಲ್ಲಿಸಿ” ಎಂದು ಹೇಳಿದೆವು. ಆ ಸಮಯದಲ್ಲಿ ಅದೇ ಕಾರಣಕ್ಕೆ ಕೋಪಗೊಂಡ ಮಣಿಕಂಠ ಮತ್ತು ಸಂದೇಶ, ’ನಮ್ಮ ಬೈಕ್‌ಗಳನ್ನು ಒಳಗೆ ಬಿಡುವುದಿಲ್ಲ, ನೀವು ಹೇಗೆ ಹನುಮ ಜಯಂತಿ ಮಾಡುತ್ತೀರಾ? ನಮಗೂ ಉತ್ಸವ ಹೇಗೆ ನಿಲ್ಲಿಸಬೇಕು ಅಂತ ಗೊತ್ತು’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನಾನು ಮತ್ತು ವೇಣುಗೋಪಾಲ್, ’ಇದು ದೇವರ ಕೆಲಸ. ನಮ್ಮಲ್ಲೇ ಗಲಾಟೆ ಬೇಡ’ ಎಂದು ಹೇಳಿದೆವು. ಜನರು ಸೇರುತ್ತಿದ್ದಂತೆ, ’ನೀನು ತಪ್ಪಿಸಿಕೊಂಡಿದ್ದೀಯಾ. ಹನುಮ ಜಯಂತಿ ಉತ್ಸವ ಮುಗಿಯಲಿ. ನಾಳೆ ನಿನ್ನನ್ನು ಮುಗಿಸುತ್ತೇವೆ’ ಎಂದು ಸಂದೇಶ ಮತ್ತು ಮಣಿಕಂಠ ಉತ್ಸವದಲ್ಲಿ ಸೇರಿಕೊಂಡರು. ಉತ್ಸವ ರಾತ್ರಿ 9.30 ಗಂಟೆಗೆ ಪುರ ಪ್ರದಕ್ಷಿಣೆ ಮಾಡಿ ಗುಂಜ ನರಸಿಂಹಸ್ವಾಮಿ ದೇವಾಲಯದ ಬಳಿ ಮುಕ್ತಾಯವಾಯಿತು. 9 ರಂದು (ಮಾರನೇ ದಿನ) ಸಂಜೆ 4 ಗಂಟೆಯ ಸಮಯ. ಉತ್ಸವಕ್ಕೆ ಬಾಡಿಗೆಗೆ ತಂದಿದ್ದ ವಸ್ತುಗಳನ್ನು ನಾನು ಮತ್ತು ವೇಣು ಶಾಮಿಯಾನದ ಅಂಗಡಿಗೆ ಹಿಂತಿರುಗಿಸುತ್ತಿದ್ದೆವು. ಆಗ ಅಲ್ಲಿಗೆ ಬಂದ ಮಣಿಕಂಠ (ಕೂಳೆ ಮಣಿ), ಅನಿಲ (ನಾಯಕ ಸಮುದಾಯ), ಶಂಕರ ಅಲಿಯಾಸ್ ತುಪ್ಪ (ಒಕ್ಕಲಿಗ ಸಮುದಾಯ, ಎಫ್‌ಐಆರ್‌ನಲ್ಲಿ ಕುರುಬ ಎಂದು ಉಲ್ಲೇಖಗೊಂಡಿದೆ!), ಸಂದೇಶ ಬಂದರು. ಹಿಂದಿನ ದಿನ ನಡೆದ ವಿಚಾರವನ್ನು ಪ್ರಸ್ತಾಪಿಸಿದರು. ’ನಿನ್ನೆ ಹನುಮ ಜಯಂತಿಯಲ್ಲಿ ನಮ್ಮ ಬೈಕ್‌ಗಳನ್ನು ಒಳಗೆ ಬಿಡದೆ ತಡೆದು ಅವಮಾನ ಮಾಡಿದ್ದೀರಿ. ಪುನೀತ್ ರಾಜ್‌ಕುಮಾರ್ ಫೋಟೋವನ್ನು ಹನುಮಂತನ ವಾಹನಕ್ಕೆ ಕಟ್ಟಬೇಡಿ ಎಂದಿರಿ’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಗಲಾಟೆ ಮಾಡಿ ವೇಣುಗೋಪಾಲ್‌ನ ಬಟ್ಟೆ ಹರಿದು ಹಾಕಿದರು. ವೇಣು ತುಟಿಯಲ್ಲಿ ರಕ್ತ ಬರುವಂತೆ ಶಂಕರ್, ಅನಿಲ್ (ನಾಯಕ ಸಮುದಾಯ), ಸಂದೇಶ್, ಮಣಿಕಂಠ ಹೊಡೆದರು. ತಕ್ಷಣ ನಾನು ಮತ್ತು ಚೇತನ್ ಜಗಳ ಬಿಡಿಸುತ್ತಿದ್ದೆವು. ಅಷ್ಟರಲ್ಲಿ ಪೊಲೀಸ್ ವಾಹನ ಅದೇ ರಸ್ತೆಯಲ್ಲಿ ಬರುತ್ತಿದ್ದಂತೆ ಎಲ್ಲರೂ ಹೊರಟುಹೋದರು. ನಂತರ ರಾತ್ರಿ 8.15 ಗಂಟೆ ಸಮಯದಲ್ಲಿ ನಾನು, ವೇಣುಗೋಪಾಲ್, ಚೇತನ್, ಸಂಜಯ್ ನಮ್ಮ ಮನೆಯ ಬಳಿ ಇರುವಾಗ ಮಣಿಕಂಠ ಕರೆ ಮಾಡಿದನು. ’ನಿನ್ನೊಂದಿಗೆ ಮಾತಾಡಬೇಕು, ಸರ್ವೀಸ್ ಸ್ಟೇಷನ್ ಬಳಿ ಬಾ’ ಎಂದನು. ’ಅಲ್ಲಿಗೆ ಬರುವುದಿಲ್ಲ’ ಎಂದೆ. ’ಫೈರ್ ಆಫೀಸ್ ಮುಂದೆಯಾದರೂ ಬಾ’ ಎಂದು ಕರೆದ. ಆಗ ವೇಣುಗೋಪಾಲ್, ಚೇತನ್‌ನನ್ನು ಕರೆದುಕೊಂಡು ಫೈರ್ ಆಫೀಸ್ ಕಡೆ ಹೋಗಲು ಸಿದ್ಧವಾದ. ಆಗ ನಾನು, ’ನೀನು ಅಲ್ಲಿಗೆ ಹೋಗಬೇಡ, ಮಧ್ಯಾಹ್ನ ನಿನ್ನನ್ನು ಟಾರ್ಗೆಟ್ ಮಾಡಿ ಮಣಿಕಂಠ, ಶಂಕರ, ಅನಿಲ್, ಸಂದೇಶ ಗಲಾಟೆ ಮಾಡಿದ್ದಾರೆ’ ಎಂದು ತಡೆದೆ. ಆದರೂ ವೇಣುಗೋಪಾಲ್, ’ಹೋಗಿ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳೋಣ’ ಎಂದು ಹೊರಟನು. ನಾನು, ಸಂಜಯ್ ಕೂಡ ಹಿಂದೆಯೇ ಮೋಟರ್ ಸೈಕಲ್‌ನಲ್ಲಿ ಹೊರಟೆವು. ತಿ.ನರಸೀಪುರ-ತಲಕಾಡು ರಸ್ತೆಯಲ್ಲಿರುವ ಫೈರ್ ಸ್ಟೇಷನ್ ಸರ್ವೀಸ್ ಸ್ಟೇಷನ್ ಎದುರು ಅನಿಲ್, ಮಣಿಕಂಠ, ಮಂಜು (ಕುರುಬ ಜನಾಂಗ), ಶಂಕರ, ಹ್ಯಾರೀಸ್, ಸಂದೇಶ್ ಮತ್ತು ಮೂರು ನಾಲ್ಕು ಜನ ಒಟ್ಟಾಗಿ ಗುಂಪುಕಟ್ಟಿಕೊಂಡು ಕೈಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಕೊಲೆ ಮಾಡಲು ಸಜ್ಜಾಗಿದ್ದರು. ವೇಣುಗೋಪಾಲ್, ಚೇತನ್‌ರವರು ಮೋಟರ್ ಸೈಕಲ್‌ನಿಂದ ಕೆಳಗೆ ಇಳಿಯುತ್ತಿದ್ದಂತೆ, ವೇಣುಗೋಪಾಲನಿಗೆ ಮಣಿಕಂಠ ಹಿಡಿದು ಹೊಡೆಯಲಾರಂಭಿಸಿದ. ಹಿಂದಿನಿಂದ ಅನಿಲ್ ಎಂಬವರು ಒಡೆದ ಗಾಜಿನ ಬಾಟಲಿಯಿಂದ ಮುಖ ಮತ್ತು ತಲೆಗೆ ಹೊಡೆದ. ನಂತರ ಬಾಟಲಿಯಿಂದ ಚುಚ್ಚಿದ. ಚಾಕುವಿನಿಂದ ಶಂಕರ ಹೊಟ್ಟೆ ಮತ್ತು ಪಕ್ಕೆ ಭಾಗಗಳಿಗೆ ಚುಚ್ಚಿದ. ಹ್ಯಾರೀಸ್ ಎಂಬವನು ಹೊಡೆದ ಗಾಜಿನ ಬಾಟಲಿಯಿಂದ ದೇಹದ ಎಲ್ಲ ಭಾಗಗಳಿಗೂ ಚುಚ್ಚುತ್ತಿದ್ದ. ಮಂಜ ಎಂಬವವನು ಹೊಡೆದ ಗಾಜಿನ ಬಾಟಲಿಯಿಂದ ಪಕ್ಕೆ ಭಾಗಕ್ಕೆ ಮತ್ತು ಕುತ್ತಿಗೆಗೆ ಚುಚ್ಚಿ ಕೊಲೆಮಾಡಲು ಯತ್ನಿಸಿದ. ನಾವುಗಳು ಬಿಡಿಸಿಕೊಳ್ಳಲು ಹೋಗುತ್ತಿದ್ದಂತೆ ನನಗೆ ಶಂಕರ ಕೈಯಿಂದ ಹೊಡೆಯಲು ಮತ್ತು ಬಾಟಲಿಯನ್ನು ಚುಚ್ಚಲು ಬಂದಾಗ ನಾನು ತಪ್ಪಿಸಿಕೊಂಡೆನು. ಜಗಳವನ್ನು ಬಿಡಿಸಲು ಪ್ರಯತ್ನಿಸಿದೆವು. ರಕ್ತಸ್ರಾವದಿಂದ ಬಿದ್ದಿದ್ದ ವೇಣುಗೋಪಾಲ್‌ನನ್ನು ನಾವು ಮೂರು ಜನರು ಉಪಚರಿಸುತ್ತಿದ್ದೆವು. ಆರೋಪಿಗಳು ಆಯುಧಗಳ ಸಮೇತ ತಪ್ಪಿಸಿಕೊಂಡು ಹೋದರು. ಆಸ್ಪತ್ರೆಗೆ ಕರೆದೊಯ್ದಾಗ, ’ವೇಣುಗೋಪಾಲ್ ಸಾವನ್ನಪ್ಪಿದ್ದಾನೆ’” ಎಂದು ವೈದ್ಯರು ದೃಢಪಡಿಸಿದರು.

ಇಷ್ಟು ದೂರಿನಲ್ಲಿರುವ ವಿವರ. ಈ ಘಟನೆಗೆ ಇತರ ಕಾರಣಗಳೇನಾದರೂ ಇದೆಯೇ ಎಂಬುದು ಬಹಿರಂಗವಾಗಿಲ್ಲ. ಆದರೆ ಕೊಲೆ ನಡೆದ ಬಳಿಕ ಘಟನೆ ರಾಜಕೀಯ ತಿರುವು ಪಡೆದುಕೊಂಡಿತು. ವೈಯಕ್ತಿಕ ದ್ವೇಷವೇ ಈ ಕೊಲೆಗೆ ಕಾರಣವೆಂದು ಪೊಲೀಸರು ಹೇಳುತ್ತಿದ್ದಾರೆ. ಬಿಜೆಪಿಯ ನಾಯಕರು ಇದನ್ನು ಅಲ್ಲಗಳೆದು, “ಇದು ಹಿಂದೂ ಕಾರ್ಯಕರ್ತನ ಕೊಲೆ, ಧರ್ಮಾಧಾರಿತ ಕೊಲೆ. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆರೋಪಿಗಳಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ (ಹ್ಯಾರೀಸ್) ಇದ್ದಾನೆ ಎಂಬುದರ ಸುತ್ತಲೇ ಕೇಂದ್ರೀಕರಿಸಿ ಈ ಕೊಲೆಯನ್ನು ಹಿಂದೂ-ಮುಸ್ಲಿಂ ಕಲಹವಾಗಿ ಚಿತ್ರಿಸಲು ಯತ್ನಿಸಲಾಗುತ್ತಿದೆ. ಆರೋಪಿಗಳು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು ಎಂಬುದಾಗಿ ಕೂಡ ಬಿಜೆಪಿ ಮತ್ತು ಸಂಘಪರಿವಾರ ಆರೋಪಿಸುತ್ತಿದೆ.

ಮೃತರಾದ ವೇಣು ಅವರ ಮನೆಗೆ ಭೇಟಿ ನೀಡಿದ ಸಿ.ಟಿ.ರವಿ, ಅಶ್ವತ್ಥ ನಾರಾಯಣ ಮೊದಲಾದ ಬಿಜೆಪಿ ಮುಖಂಡರು ಐದು ಲಕ್ಷ ರೂ. ಪರಿಹಾರ ವಿತರಿಸಿದ್ದಾರೆ. ನಂತರದಲ್ಲಿ ವಾಲ್ಮೀಕಿ ಸಮುದಾಯದ ಬಿಜೆಪಿ ಲೀಡರ್ ಬಿ.ಶ್ರೀರಾಮುಲು, ಶೋಭಾ ಕರಂದ್ಲಾಜೆ, ಸುರೇಶ್‌ಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅವರ ಪುತ್ರ ಸುನೀಲ್ ಬೋಸ್ ಕೂಡ ವೇಣು ಮನೆಗೆ ಭೇಟಿ ನೀಡಿ ಪರಿಹಾರ ವಿತರಿಸಿದ್ದಾರೆ. ಮಹದೇವಪ್ಪನವರು ಸರ್ಕಾರದ ವತಿಯಿಂದ 4 ಲಕ್ಷ ರೂ. ದೊರಕಿಸಿದ್ದಾರೆ.

ಧರ್ಮ ದ್ವೇಷದ ಕೊಲೆಯಲ್ಲ

ಧರ್ಮದ ಹಿನ್ನೆಲೆಯಲ್ಲಿ ಕೊಲೆಯಾಗಿದೆ ಎನ್ನಲು ಈವರೆಗೆ ತಿ.ನರಸೀಪುರ ಇಂತಹ ಯಾವುದೇ ಬೆಳವಣಿಗೆಗೆ ಸಾಕ್ಷಿಯಾದ ಉದಾಹರಣೆಗಳಿಲ್ಲ ಎನ್ನುತ್ತಾರೆ ಸ್ಥಳೀಯರು.

ನಾಯಕರು, ಒಕ್ಕಲಿಗರು, ಕುರುಬರು ಹೆಚ್ಚಿರುವ ತಿ.ನರಸೀಪುರದಲ್ಲಿ ಮುಸ್ಲಿಮರ ಬಾಹುಳ್ಯವೇನೂ ಇಲ್ಲ. ಸ್ಥಳೀಯರೇ ಹೇಳುವಂತೆ ಎರಡು ಸಮುದಾಯಗಳ ನಡುವೆ ಒಳ್ಳೆಯ ಬಾಂಧವ್ಯವಂತೂ ಇದೆ. ಇಂತಹ ವಾತಾವರಣದಲ್ಲಿ ಕೊಲೆಯಾದ ವೇಣುಗೋಪಾಲ್- ಸಾವಿನ ನಂತರದಲ್ಲಿ ’ಹಿಂದೂ ಹುಲಿ’ಯಾಗಿ ಬಿಂಬಿಸಲ್ಪಟ್ಟಿದ್ದಾರೆ. ವೇಣು ಅವರ ಪತ್ನಿ “ನನ್ನ ಗಂಡ ಧರ್ಮಕ್ಕಾಗಿ ಹೋರಾಡುತ್ತಿದ್ದರು. ಧರ್ಮದ ಕಾರಣಕ್ಕೆ ಕೊಲೆಯಾದರು” ಎಂದು ಪದೇಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಘಟನೆಯ ಸುತ್ತ ಕೋಮು ಆಯಾಮ ಕಟ್ಟಲಾಗುತ್ತಿದೆಯೇ ಎಂಬುದನ್ನು ತಿಳಿಯಲು ’ನಾನುಗೌರಿ.ಕಾಂ’ ಸ್ಥಳಕ್ಕೆ ಭೇಟಿ ನೀಡಿತು. ಅಲ್ಲಿನ ಸ್ಥಳೀಯರನ್ನು ಮತ್ತು ವೇಣು ಮನೆಯ ಬಳಿ ಬೀಡು ಬಿಟ್ಟಿರುವ ಯುವಕರನ್ನು ಮಾತನಾಡಿಸಿದಾಗ ಕೆಲವೊಂದು ವೈರುಧ್ಯಗಳು ಕಣ್ಣಿಗೆ ರಾಚಿದವು. ಅದನ್ನು ನಿಮ್ಮ ಮುಂದೆ ಯಥಾವತ್ತು ತಿಳಿಸುವ ಪ್ರಯತ್ನ ಇಲ್ಲಿದೆ.

ಗುರುವಾರ ಮಧ್ಯಾಹ್ನ ಒಂದೂವರೆಯ ಹೊತ್ತಿಗೆ ನಾಯಕರ ಕೇರಿಯಲ್ಲಿನ ವೇಣು ಮನೆಗೆ ಭೇಟಿ ನೀಡಲಾಯಿತು. ಅಲ್ಲಿ ಕೆಲವು ಯುವಕರು ಮನೆಯ ಪಕ್ಕದ ಖಾಲಿ ಜಾಗದಲ್ಲಿ ಕುರ್ಚಿಯಲ್ಲಿ ಕುಳಿತಿದ್ದರು. ಪುಟ್ಟ ಸೀಟಿನ ಮನೆಯ ಛಾವಣಿಯಲ್ಲಿ ಕೇಸರಿ ಬಾವುಟ ಹಾರಾಡುತ್ತಿತ್ತು. ಕೆಲವು ಹೆಂಗಸರು ಮತ್ತು ಮಕ್ಕಳು ಮನೆಯೊಳಗೆ ವೇಣುಗೋಪಾಲ್ ಫೋಟೋದ ಮುಂದೆ ಕೂತು ಮಾತಾಡಿಕೊಳ್ಳುತ್ತಿದ್ದರು. ಅಲ್ಲಿದ್ದ ಯುವಕರೊಂದಿಗೆ ಮಾತನಾಡುತ್ತಾ, “’ನಾನುಗೌರಿ.ಕಾಂ’ ಇಂದ ವರದಿಗಾಗಿ ಬಂದಿದ್ದೇವೆ” ಎಂದ ತಕ್ಷಣ ಚಂದ್ರಶೇಖರ್ ಎಂಬಾತ ಪೂರ್ವಗ್ರಹಪೀಡಿತನಾದಂತೆ ಮಾತು ಶುರುಮಾಡಿದರು; “ಮಾಧ್ಯಮಗಳು ತಿರುಚಿ ವರದಿ ಮಾಡುತ್ತಿವೆ” ಎಂದು ಆಕ್ಷೇಪ ವ್ಯಕ್ತಪಡಿಸಿದರು. “ಆರೋಪ-ಪ್ರತ್ಯಾರೋಪ ಎರಡನ್ನೂ ಪರಿಗಣಿಸಿ ವರದಿ ಬರೆಯಬೇಕಾದದ್ದು ನಮ್ಮ ಕರ್ತವ್ಯ. ನಿಮ್ಮ ವರ್ಷನ್ ಏನಿದೆ ತಿಳಿಸಿ” ಎಂದಾಗ, “ನಾವು ಹೇಳಿದ್ದನ್ನೆಲ್ಲ ಸರಿಯಾಗಿ ಬರೆಯಿರಿ. ಯಾವುದನ್ನೂ ಬಿಡಬೇಡಿ” ಎಂದು ಆಜ್ಞಾಪಿಸಿದರು. “ನೀವು ಹೇಳಿದ್ದರಲ್ಲಿ ಸತ್ಯ ಎಷ್ಟಿದೆ? ಎಂಬುದನ್ನು ತಾಳೆ ಹಾಕಿ ನೋಡಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಲಾಯಿತು.

“ನೀವು ಇಲ್ಲಿಯವರಾ? ನಿಮಗೂ ವೇಣುಗೂ ಏನಾಗಬೇಕು?” ಎಂದು ಕೇಳಿದಾಗ, “ನಾನು ವೇಣೂ ಸ್ನೇಹಿತ. ನಂಜನಗೂಡಿನವನು. ವೇಣು ಹಿಂದುತ್ವಕ್ಕಾಗಿ ಹೋರಾಡುತ್ತಿದ್ದರಿಂದ ಅವನ ಕೊಲೆಯಾಗಿದೆ. ಕೊಲೆಗಾರರಲ್ಲಿ ಒಬ್ಬಾತ ಮುಸ್ಲಿಂ ಇದ್ದಾನೆ. ಇದನ್ನು ಮುಚ್ಚಿ ಹಾಕಲಾಗುತ್ತಿದೆ” ಎಂದು ಚಂದ್ರಶೇಖರ್ ಆರೋಪಿಸುತ್ತಾರೆ.

“ಒಬ್ಬನನ್ನು ಬಿಟ್ಟು, ಉಳಿದವರೆಲ್ಲ ಹಿಂದೂಗಳೇ ಇದ್ದಾರಲ್ಲ. ಆರೋಪಿಗಳ ಜಾತಿಗಳು ಯಾವುವು? ವೇಣುಗೋಪಾಲ್‌ಗೂ ಈ ಆರೋಪಿಗಳಿಗೂ ಏನು ಸಂಬಂಧ?” ಎಂದು ಪ್ರಶ್ನಿಸಲಾಯಿತು. ಆತನಿಗೂ ಆರೋಪಿಗಳ ಜಾತಿಗಳು ಸರಿಯಾಗಿ ಗೊತ್ತಿರಲಿಲ್ಲ. “ಹಿಂದೂ ನಾವೆಲ್ಲ ಒಂದು. ಜಾತಿ ಮುಖ್ಯವಲ್ಲ ಅಲ್ಲ. ವೇಣುಗೋಪಾಲ್‌ಗೂ ಇವರಿಗೂ ಯಾವುದೇ ಸಂಬಂಧವಿಲ್ಲ. ಸಂಘಟನೆಯ ಮೂಲಕ ಆತ ಬೆಳೆದುಬಿಡುತ್ತಾನೆಂದು ಕೊಲೆ ಮಾಡಿದ್ದಾರೆ. ಹಿಂದುತ್ವ ಇಲ್ಲಿ ಬೆಳೆಯಬಾರದೆಂದು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದವರು ಕೊಲೆ ಮಾಡಿದ್ದಾರೆ. ಇದೇ ಕೇರಿಯಲ್ಲಿನ ಪ್ರಮುಖ ಆರೋಪಿ ಮಣಿಕಂಠ ಕಾಂಗ್ರೆಸ್ ಮುಖಂಡ. ಆತನೂ ನಾಯಕ ಸಮುದಾಯದವನು. ಸಚಿವ ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಜೊತೆಯಲ್ಲಿ ಮಣಿಕಂಠ ಮತ್ತು ಇತರರು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ” ಎಂದು ದೂರಿದರು.

ಇದನ್ನೂ ಓದಿ: ಮತೀಯ ಗೂಂಡಾಗಿರಿ: ಮೂವರು ಬಜರಂಗದಳ ಕಾರ್ಯಕರ್ತರಿಗೆ ಗಡಿಪಾರು ನೋಟಿಸ್

“ಸುನೀಲ್ ಬೋಸ್ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಕಾಂಗ್ರೆಸ್‌ನವರೇ ಈ ಕೊಲೆಗೆ ಕಾರಣ ಎನ್ನಲಾಗುತ್ತದೆಯೇ? ಪ್ರಧಾನಿ ಮೋದಿಯವರು ರೌಡಿ ಶೀಟರ್ ಒಬ್ಬನಿಗೆ ಕೈಮುಗಿದಿರುವ ಫೋಟೋವಿದೆ. ಹಾಗೆಂದು ಆ ರೌಡಿ ಶೀಟರ್ ಕೃತ್ಯಗಳಿಗೆ ಪ್ರಧಾನಿ ಮೋದಿಯವರನ್ನೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಬಹುದೇ?” ಎಂಬ ಪಾಟಿ ಸವಾಲಿಗೆ, “ಹಾಗಲ್ಲ. ಒಂದೆರಡು ಫೋಟೋಗಳಿಲ್ಲ. ಹತ್ತಾರು ಫೋಟೋಗಳಿವೆ. ಆರೋಪಿ ಮಣಿಕಂಠ ನರಸೀಪುರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ. ವಿಧಾನಸಭಾ ಚುನಾವಣೆ ವೇಳೆಯಲ್ಲೂ ಕಾಂಗ್ರೆಸ್ ಪರ ಕೆಲಸ ಮಾಡಿದ್ದ” ಎಂದರು.

“ಅದು ಸರಿ, ಈ ಆರೋಪಿಗಳಲ್ಲಿ ಒಬ್ಬಾತ (ಶಂಕರ), ಮೈಸೂರು ನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ಸಹೋದರನಂತಲ್ಲ” ಎಂದರೆ, “ಶಂಕರ ಸಹೋದರಿ ಬಿಜೆಪಿ ಸದಸ್ಯರಾಗಿದ್ದರೆ ಏನಂತೆ? ಆತನ ತಂದೆ ಮಹದೇವಪ್ಪ (ಮಾದೇಗೌಡ) ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಂದು ಉತ್ತರಿಸಿದ. ಚಂದ್ರಶೇಖರ್ ಜೊತೆಗೆ ಘಟನೆಯ ಪ್ರತ್ಯಕ್ಷದರ್ಶಿ ಎನ್ನಲಾದ ಸಂಜಯ, ಯಶವಂತ ಎನ್ನುವವರೂ ಅಲ್ಲಿದ್ದರು.

ಮಾತು ರಾಜಕಾರಣದ ಸುತ್ತ ಹೊರಳುತ್ತಿದ್ದಂತೆ, “ಆರೋಪಿಗಳು ಯಾರೇ ಆಗಿರಲಿ. ಸಾವಿಗೆ ನ್ಯಾಯ ದೊರಕಬೇಕಷ್ಟೇ. ವೇಣುಗೋಪಾಲ್ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡವನಲ್ಲ” ಎಂದು ಸ್ಪಷ್ಟನೆ ನೀಡಿದ.

“ನೀವೇನಾದರೂ ಹೇಳ್ತೀರಾ ಸಂಜಯ್” ಎಂದು ಕೇಳಿದಾಗ ಚಂದ್ರು ಮಾತಿಗೆ ಅಡ್ಡಬಂದು, “ಈತ ಹೇಳಿಕೆ ಕೊಡದಂತೆ ಪೊಲೀಸರು ತಡೆದಿದ್ದಾರೆ. ಪ್ರಮುಖ ವಿಟ್ನೆಸ್ ಈತನೇ ಆಗಿರುವುದರಿಂದ ಏನನ್ನೂ ಮಾಧ್ಯಮಗಳಿಗೆ ಹೇಳದಂತೆ ಸೂಚಿಸಿದ್ದಾರೆ” ಎಂದು ಸಮಜಾಯಿಷಿ ನೀಡಿದರು. ಮುಂದುವರಿದು, “ಪುನೀತ್ ರಾಜಕುಮಾರ್ ವಿಚಾರವನ್ನು ಘಟನೆಗೆ ಥಳುಕು ಹಾಕಿದ್ದಾರೆ. ಆದರೆ ಒಬ್ಬ ನಟನ ಫೋಟೋ ಇಟ್ಟರೆ ಸುದೀಪ್, ದರ್ಶನ್ ಫೋಟೋವನ್ನು ಹಾಕಿ ಎನ್ನುವವರಿದ್ದಾರೆ. ಹೀಗಾಗಿ ಗಲಾಟೆಯಾಗಬಾರದೆಂದ ಕಾರಣಕ್ಕೆ ಪುನೀತ್ ಫೋಟೋ ಬೇಡ ಎಂದಿದ್ದ ವೇಣು. ಅಪ್ಪು ಜನ್ಮದಿನವನ್ನೂ ಈ ಹಿಂದೆ ವೇಣೂ ಆಚರಿಸಿದ್ದ” ಎಂದು ಕೆಲವು ಫೋಟೋಗಳನ್ನು ತೋರಿಸಿದ.

ಸ್ಥಳದಲ್ಲಿ ಬಂದು ಕುಳಿತಿದ್ದ ಇತರರು, “ನಾವು ವೇಣುಗೋಪಾಲ್ ಸ್ನೇಹಿತರು, ಸ್ಥಳೀಯರು, ಘಟನೆಯ ಪ್ರತ್ಯಕ್ಷದರ್ಶಿಗಳು, ವೇಣು ಸಂಬಂಧಿಕರು” ಎಂದೆಲ್ಲ ಪ್ರತಿಕ್ರಿಯೆ ನೀಡಿದರು. ನಂಜನಗೂಡು, ಮೈಸೂರು, ನರಸೀಪುರ- ಹೀಗೆ ತರಹೇವಾರಿ ಮೂಲಗಳನ್ನು ಹೇಳುವ ಈ ಯುವಕರು ಹೇಳುತ್ತಿರುವುದರಲ್ಲಿ ಎಷ್ಟು ನಿಜವಿದೆ? ಸುಳ್ಳೆಷ್ಟು? ಹಿಂದೂ ಮುಸ್ಲಿಂ ಆಯಾಮವನ್ನು ಘಟನೆಗೆ ಥಳುಕು ಹಾಕುತ್ತಿರುವುದು ಏತಕ್ಕೆ? ಇತ್ಯಾದಿ ಪ್ರಶ್ನೆಗಳು ಸುಳಿದುಹೋದವು.

ವೇಣುಗೋಪಾಲ್ ಅವರ ಪತ್ನಿ ಪೂರ್ಣಿಮಾ ಅವರನ್ನು ಮಾತನಾಡಿಸಲು, ಮನೆಯ ಒಳಗೆ ಕಾಲಿಟ್ಟಾಗ, ಟಿ.ವಿ.ಯಲ್ಲಿ ’ಸುವರ್ಣ ನ್ಯೂಸ್’ ಚಾಲೂ ಆಗುತ್ತಿತ್ತು. ಎರಡು ಪುಟ್ಟ ಮಕ್ಕಳು ಆಟವಾಡುತ್ತಿದ್ದರು. ಹೊಸಲಿನ ಮುಂದೆ ನಿಂತ ತಕ್ಷಣವೇ ವೇಣುಗೋಪಾಲನ ಫೋಟೋ ದರ್ಶನವಾಗಿತ್ತು. ಫೋಟೋ ಮುಂದೆ ಇರಿಸಿದ ಬೆಂಚಿನ ಮುಂದೆ ಕುಳಿತು ಮಾತಿಗಿಳಿದಾಗ ಮತ್ತೊಬ್ಬ ಯುವಕ ಅಲ್ಲಿದ್ದ. ಆತನ ಎಡಗೈನಲ್ಲಿ ಸಾವರ್ಕರ್ ಟ್ಯಾಟೂ ರಾರಾಜಿಸುತ್ತಿತ್ತು.

“ನೀವು ಯಾರು?”

“ನಾನು ಪೂರ್ಣಿಮಾ ಅವರ ಸಹೋದರ.”

“ಘಟನೆಯ ಕುರಿತು ನೀವು ಮಾತನಾಡುತ್ತೀರಾ?”

“ಇಲ್ಲ, ಅಕ್ಕ ಮಾತನಾಡುತ್ತಾರೆ, ಸಾಕು.”

“ಇರಲಿ, ಫೋಟೋ ಮುಂದೆ ನಿಂತುಕೊಳ್ಳಿ. ಅಕ್ಕ- ತಮ್ಮನ ಫೋಟೋವನ್ನು ಒಟ್ಟಿಗೆ ತೆಗೆದುಕೊಳ್ಳುವೆ” ಎಂದಾಗ, ಸಾವರ್ಕರ್ ಟ್ಯಾಟೂ ಕಾಣದಂತೆ ಆ ಹುಡುಗ ಕೈಯನ್ನು ಮಡಿಸಿಕೊಂಡ. ಪೂರ್ಣಿಮಾ ಅವರೊಂದಿಗೆ ಮಾತು ಆರಂಭಿಸುವ ಹೊತ್ತಿಗೆ, ಈಗಾಗಲೇ ನಮ್ಮೊಂದಿಗೆ ಮನೆಯ ಹೊರಗೆ ಮಾತನಾಡಿದ್ದ ಚಂದ್ರಶೇಖರ ಮನೆಯ ಒಳಗೂ ಬಂದು ನಿಂತಿದ್ದ.

“ವೇಣು ಅವರಿಗೂ ಕೊಲೆ ಮಾಡಿದವರಿಗೂ ಮೊದಲಿನಿಂದಲೂ ವೈಷಮ್ಯವಿತ್ತಾ?”

ಪೂರ್ಣಿಮಾ: “ಆ ಥರ ಏನೂ ಗೊತ್ತಿಲ್ಲ. ನಾವು ಹನುಮ ಜಯಂತಿ ಸ್ಟಾರ್ಟ್ ಮಾಡಿದೆವಲ್ಲ, ನಾವು ಬೆಳೆಯುತ್ತಿದ್ದೇವೆ ಅಂತ ತುಂಬಾ ಜನರಿಗೆ ಕಣ್ಣುಕುಕ್ಕಿತ್ತು. ನಮ್ಮಲ್ಲಿ ಹಣ ಆಸ್ತಿ ಏನಿಲ್ಲ. ಇರೋದು ಇದೊಂದೇ ಮನೆ. ಧರ್ಮಕ್ಕಾಗಿ ನಮ್ಮ ಮನೆಯವರು ಹೋರಾಡಿದರು. ಹನುಮ ಜಯಂತಿ ಮಾಡಿದ್ದರಿಂದ ಕಿರಿಕ್ ಮಾಡುತ್ತಿದ್ದಾರೆಂದು ನನ್ನ ಗಂಡ ಹೇಳುತ್ತಿದ್ದರು.”

“ಎಷ್ಟು ವರ್ಷದಿಂದ ವೇಣು ಯುವ ಬ್ರಿಗೇಡ್‌ನಲ್ಲಿ ಇದ್ದರು? ಹೊಟ್ಟೆಪಾಡಿಗಾಗಿ ಏನು ಕೆಲಸ ಮಾಡುತ್ತಿದ್ದರು? ನಿಮ್ಮದು ಲವ್ ಮ್ಯಾರೇಜ್ ಅಂತೆ?”

ಪೂರ್ಣಿಮಾ: “ನಾಲ್ಕೈದು ವರ್ಷಗಳಿಂದ ಬ್ರಿಗೇಡ್‌ನಲ್ಲಿ ಇದ್ದರು. ಬಾಳೆಕಾಯಿ ಮಂಡಿಯಲ್ಲಿ ಕೂಲಿ ಮಾಡಿ ಕುಟುಂಬ ನೋಡಿಕೊಳ್ಳುತ್ತಿದ್ದರು. ನಾವು ಪ್ರೀತಿಸಿ ಮದುವೆಯಾಗಿದ್ದೆವು. ನಾನು ಕುರುಬ ಜಾತಿಯವಳು. ನನ್ನ ಗಂಡ ಎಸ್.ಟಿ.; ಮದುವೆ ವಿಚಾರದಲ್ಲಿ ಮನೆಯವರ ಒಪ್ಪಿಗೆ ಇತ್ತು. ನನ್ನದು ಕೂಡ ಇದೇ ಊರು. ಮದುವೆಯಾಗಿ ಏಳು ವರ್ಷವಾಯಿತು. ಆರು ವರ್ಷದ ಮಗಳಿದ್ದಾಳೆ.”

“ರಾಜಕಾರಣಿಗಳೆಲ್ಲ ಬರುತ್ತಿದ್ದಾರೆ. ಯಾರ್‍ಯಾರು ಎಷ್ಟು ಪರಿಹಾರ ಧನ ನೀಡಿದ್ದಾರೆ?”

ಪೂರ್ಣಿಮಾ: “ಸಿ.ಟಿ.ರವಿ ಸರ್ ಬಂದಿದ್ದರು. ಅವರು ಎಷ್ಟು ಕೊಟ್ಟಿದ್ದಾರೆಂದು ನೋಡಿಲ್ಲ. ಪರಿಹಾರಕ್ಕಿಂತ ಧರ್ಮಕ್ಕಾಗಿ ಹೋರಾಡಿದ ನನ್ನ ಗಂಡನನ್ನು ಕೊಂದವರಿಗೆ ಗಲ್ಲು ಶಿಕ್ಷೆಯಾಗಬೇಕು.”

ಮಾತುಮಾತಿಗೂ ಧರ್ಮವನ್ನು ಪೂರ್ಣಿಮಾ ಪ್ರಸ್ತಾಪಿಸುತ್ತಿದ್ದರು. ಮನೆಯ ಬಳಿ ಇರುವವರು ಸಂಘಪರಿವಾರದವರ ಹಿನ್ನೆಲೆಯವರು ಎಂಬುದು ಖಾತ್ರಿಯಾಗುತ್ತಿತ್ತು. ಸ್ಥಳೀಯ ಜನರ ಅಭಿಪ್ರಾಯ ಕೇಳಲು ಓಣಿಯತ್ತ ಹೊರಟೆವು. ಮನೆಯೊಂದರ ಜಗಲಿ ಮೇಲೆ ಕೂತಿದ್ದ ಇಬ್ಬರು ತಾಯಂದಿರು ಮಾತಿಗೆ ಸಿಕ್ಕರು. “ಸತ್ತು ಹೋದ ಹುಡುಗ ಒಳ್ಳೆಯವನು. ಮೂರು ವರ್ಷದ ಹಿಂದೆ ಈ ಕೇರಿಗೆ ಗಂಡಹೆಂಡತಿ ಬಂದು ನೆಲೆಸಿದರು. ಅದಕ್ಕಿಂತ ಮೊದಲು ಇದೇ ಪಟ್ಟಣದಲ್ಲಿ ಬೇರೆ ಕೇರಿಯಲ್ಲಿ ಇದ್ದರು. ಆತ ರಾಜಕೀಯ ಮಾಡಿಕೊಂಡಿದ್ದಂತೆ ಕಾಣುತ್ತಿರಲಿಲ್ಲ. ಪಕ್ಕದ ಓಣಿಯಲ್ಲಿನ (ಆರೋಪಿ) ಮಣಿಕಂಠ ಕೂಡ ನಮ್ಮ ಜನಾನೇ. ಒಳ್ಳೆಯ ದುಡ್ಡಿನ ಕುಳ. ಕಾಂಗ್ರೆಸ್ ಅಂತ ಓಡಾಡುತ್ತಿದ್ದ. ಅವ ಯಾಕ್ ಕೊಲೆ ಮಾಡ್ದ ಅಂತ ಗೊತ್ತಿಲ್ಲ” ಎಂದ ಹೆಂಗಸರು, “ನಮ್ ಹೆಸರು ಬರೀಬೇಡಿ, ನಮ್ಮ ಮನೆಯ ಗಂಡಸ್ರು ಸರಿಯಿಲ್ಲ” ಎಂದು ನಕ್ಕರು.

ಐವತ್ತರ ವಯಸ್ಸಿನ ಗಂಡಸೊಬ್ಬರು ಆ ಮನೆಯ ಬಳಿ ಬಂದರು. ಆಗಲೇ ಒಂದಿಷ್ಟು ಮದ್ಯ ಸೇವನೆ ಮಾಡಿರುವ ವಾಸನೆ ಬರುತ್ತಿತ್ತು. “ಕೊಲೆಯಾದ ಹುಡುಗ ಒಳಗೊಳಗೆ ಬೆಳೆದಿದ್ದ. ನಮಗ್ಯಾರಿಗೂ ಕಾಣ್ತಾ ಇರಲಿಲ್ಲ ಅಷ್ಟೇ. ಇಲ್ಲದಿದ್ದರೆ ನಮ್ಮ ಜಾತಿಯ ಶ್ರೀರಾಮುಲು ಇಲ್ಲಿಗೆ ಬರ್ತಾ ಇದ್ನಾ ಅನ್ನಿ?” ಎಂದು ಸೋಜಿಗ ವ್ಯಕ್ತಪಡಿಸಿದರು. ಮುನ್ಸಿಪಲ್‌ನಲ್ಲಿ ಕಾರ್ಮಿಕರಾಗಿರುವ ಅವರು “ನನ್ನ ಹೆಸರು ಬರೀಬೇಡಿ” ಎಂದರು. ಕೊಲೆಯಾಚೆಗೆ ನಡೆಯುವ ರಾಜಕಾರಣ ಈ ಮುಗ್ಧ ಜನರಿಗೆ ಗೊತ್ತಾದಂತೆ ಕಾಣುತ್ತಿರಲಿಲ್ಲ. ’ಊರ ಉಸಾಬರಿ ನಮಗ್ಯಾಗೆ ಬೇಕು’ ಎಂಬಂತೆ ಇದ್ದರು.

ವೇಣು ಮನೆಗೆ ಸ್ಪಲ್ಪ ದೂರದಲ್ಲಿನ ಅರಳಿಮರದ ಬಳಿ ಪೊಲೀಸರು ಕಾವಲು ಕೂತಿದ್ದರು. ಅಲ್ಲಿ ಬಾಲು ಎಂಬ ಸ್ಥಳೀಯ ನಿವಾಸಿ ಸಿಕ್ಕರು. ವಯಸ್ಸಾಗಿದ್ದ ಅವರು ಹಾರ್ಟ್ ಫೇಶೆಂಟ್ ಎಂಬುದು ಅವರ ಮಾತಿನ ಮಧ್ಯೆ ತಿಳಿಯಿತು. “ನರಸೀಪುರದಲ್ಲೇ ಹುಟ್ಟಿ ಬೆಳೆದಿದ್ದೀನಿ ಸ್ವಾಮಿ. ಹಿಂದೂ ಮುಸ್ಲಿಂ ಎಲ್ಲಾ ಏನೂ ಇಲ್ಲ. ಕೊಲೆ ಯಾಕಾಯ್ತು ಅಂತ ಗೊತ್ತಿಲ್ಲ. ಹೆಚ್ಚು ಮುಸ್ಲಿಮರೇನೂ ನರಸೀಪುರದಲ್ಲಿಲ್ಲ ಸ್ವಾಮಿ. ಇಬ್ರ ನಡುವೆಯೂ ಒಳ್ಳೆಯ ಬಾಂಧವ್ಯವಿದೆ.” ಎಂದು ಹೇಳಿ ಮುನ್ನಡೆದರು.

ಆರೋಪಿ ಮಣಿಕಂಠನ ಮನೆ ಪಕ್ಕದ ಓಣಿಯದ್ದು. ಆತನ ಮನೆಯ ಸಮೀಪವೂ ಪೊಲೀಸರು ಕಾವಲಿನಲ್ಲಿದ್ದರು. “ಇದೇ ನೋಡಿ, ಮಣಿಕಂಠ ಮನೆ. ಆದರೆ ಮನೆಲೀ ಯಾರೂ ಇಲ್ಲ” ಎಂದು ಪೇದೆಯೊಬ್ಬರು ಹೇಳಿದ್ದು ನಿಜವಾಗಿತ್ತು. ಮನೆ ನೋಡಿದರೆ ಮಣಿಕಂಠನ ಫ್ಯಾಮಿಲಿ ಭಾರೀ ಕುಳ ಎಂಬುದು ಸ್ಪಷ್ಟವಾಗುತ್ತಿತ್ತು.

ಮಣಿಕಂಠನ ಮನೆಯನ್ನು ಹಾದು, ಖಾಸಗಿ ಬಸ್ ನಿಲ್ದಾಣದತ್ತ ಬಂದಾಗ ಹಳೆಯದೊಂದು ಕ್ಷೌರದಂಗಡಿಯಲ್ಲಿ ಗಿರಾಕಿ ಇಲ್ಲದೆ ಸವಿತಾ ಸಮಾಜದ ವ್ಯಕ್ತಿಯೊಬ್ಬರು ಖಾಲಿ ಕುಳಿತಿದ್ದರು. ವಿಜಯ್ ಎಂದು ತಮ್ಮ ಹೆಸರು ಹೇಳಿಕೊಂಡ ಅವರ ಬಳಿ ಘಟನೆಯ ಬಗ್ಗೆ, ಹಿಂದೂ ಮುಸ್ಲಿಂ ಆಯಾಮದ ಬಗ್ಗೆ ಕೇಳಿದಾಗ, “ನರಸೀಪುರ ಪಕ್ಕದ ಊರಾದ ಗರ್ಗೇಶ್ವರಿಯಲ್ಲಿ ಮುಸ್ಲಿಮರಿದ್ದಾರೆ. ಅವರು ಪಾಡಿಗೆ ಅವರು ವ್ಯವಹಾರ ಮಾಡಿಕೊಂಡು ಅಭಿವೃದ್ಧಿ ಹೊಂದಿದ್ದಾರೆ. ಇಂಥವಕ್ಕೆಲ್ಲ ಹೋಗಲ್ಲ. ಈ ಹ್ಯಾರೀಸ್ ಇದ್ದಾನಲ್ಲ, ಧರ್ಮಾಂಧನಂತೆ ಕಾಣಿಸಲ್ಲ. ಇಲ್ಲೇ ಓಡಾಡಿಕೊಂಡು ಇರುತ್ತಿದ್ದ ಸಂಪ್ರದಾಯಸ್ಥ ಮುಸ್ಲಿಮನಂತೆ ಟೋಪಿ ಹಾಕಿಕೊಂಡವನೂ ಅಲ್ಲ. ಶೋಕಿವಾಲನಂತೆ ಊರು ಸುತ್ತುತ್ತ, ಜವಾಬ್ದಾರಿ ಇಲ್ಲದವನಂತೆ ತಿರುಗ್ತಾ ಇದ್ದ. ಹ್ಯಾರೀಸ್‌ನ ಮುಂದಿಟ್ಟುಕೊಂಡು ಇಡೀ ಮುಸ್ಲಿಮರನ್ನು ದೂಷಿಸುವುದು ಸರಿಯಲ್ಲ. ಈ ಕಾಲದ ಹುಡುಗ್ರು ಡ್ರಕ್ಸು ಗಿಗ್ಸು ತಗೊಂಡು ಹಾಳ್ತಾಗಿವೆ. ಏನೇ ದ್ವೇಷ ಇದ್ದರೂ ಕೊಲೆ ಮಾಡೋ ಮಟ್ಟಕ್ಕೆ ಹೋಗಿರುವವರಿಗೆ ಶಿಕ್ಷೆ ಆಗ್ಬೇಕು. ವೇಣುಗೋಪಾಲ ಒಳ್ಳೆಯ ಹುಡುಗ. ಎಲ್ಲರನ್ನೂ ಚೆನ್ನಾಗಿ ಮಾತಾಡಿಸ್ತಾ ಇದ್ದ. ಇಲ್ಲೇ ತಿರುಗಾಡೋನು. ಹನುಮ ಜಯಂತಿಗಾಗಿ ಓಡಾಡಿಕೊಂಡು ಇದ್ದ” ಎಂದು ಮಾತುಮುಗಿಸಿದರು.

ಸಂಘಪರಿವಾರ ಕಟ್ಟುತ್ತಿರುವ ಹಿಂದೂ ಮುಸ್ಲಿಂ, ಕಾಂಗ್ರೆಸ್-ಕಾಂಗ್ರೆಸ್ಸೇತರ ಆಯಾಮಕ್ಕೂ ಇಲ್ಲಿನ ಜನರ ಮನಸ್ಥಿತಿಗೂ ಮೇಲುನೋಟಕ್ಕೆ ಹೋಲಿಕೆ ಕಂಡುಬರುವುದಿಲ್ಲ. ಎಸ್ಸಿ ಮೀಸಲು ಕ್ಷೇತ್ರವಾದ ನರಸೀಪುರದಲ್ಲಿ ಜಾತಿ ಕಲಹಗಳು ಆಗಾಗ್ಗೆ ನಡೆದಿವೆಯೇ ಹೊರತು, ಧಾರ್ಮಿಕ ಗಲಾಟೆಗಳು ವರದಿಯಾಗಿಲ್ಲ. ವೇಣುಗೋಪಾಲ್ ಹನುಮ ಜಯಂತಿಯಲ್ಲಿ ಮುಂಚೂಣಿಯಲ್ಲಿದ್ದರಿಂದ ಅನೇಕರಿಗೆ ಹೆಮ್ಮೆ ಇದೆ. ಆದರೆ ಈ ಆಚರಣೆಯನ್ನು ಧರ್ಮದ್ವೇಷದ ಭಾಗವಾಗಿ ನರಸೀಪುರದ ಜನತೆ ನೋಡುವುದೂ ಇಲ್ಲ.

ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆಯಿತೇ? ಬಡಪಾಯಿ ವೇಣುಗೋಪಾಲ್ ಸ್ಥಳೀಯವಾಗಿ ಬೆಳೆದುಬಿಡುತ್ತಾನೆಂದು, ಹಣಬಲವಿದ್ದ ಆರೋಪಿಗಳು ಭಾವಿಸಿದ್ದರೆಂದು ಸಂಘಪರಿವಾರದವರು ಹೇಳುತ್ತಿರುವುದರಲ್ಲಿ ಮತ್ತು ಮುಸ್ಲಿಂ ಆರೋಪಿಯನ್ನು ಮುಂದಿಟ್ಟುಕೊಂಡು ಮಾಡುತ್ತಿರುವ ರಾಜಕೀಯದಲ್ಲಿ ಹುರುಳಿದೆಯೇ?- ಈ ಎಲ್ಲವೂ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ.

“ಆರೋಪಿ ಮಣಿಕಂಠನ ಹುಟ್ಟಿದ ದಿನ 8ನೇ ತಾರೀಕು. ಹನುಮ ಜಯಂತಿಯ ಗಲಾಟೆ ಗಡಿಬಿಡಿಯಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿರಲಿಲ್ಲ. ಮಾರನೇ ದಿನ ಬರ್ತ್ ಡೇ ಪಾರ್ಟಿ ಇಟ್ಟುಕೊಂಡು ಮಾದಕ ದ್ರವ್ಯಗಳನ್ನು ಸೇವಿಸಿದ್ದರು ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ” ಎಂದು ಸ್ಥಳೀಯ ಪತ್ರಕರ್ತರೊಬ್ಬರು ವಿಷಾದಿಸಿದರು.

ತನಿಖೆ ಹಳ್ಳಹಿಡಿಯುತ್ತಿದ್ದರೆ ಅಥವಾ ಪೊಲೀಸರು ವಿಳಂಬ ಮಾಡುತ್ತಿದ್ದರೆ ಆಗ ಸರ್ಕಾರವನ್ನು ಎಚ್ಚರಿಸುವುದು ವಿರೋಧ ಪಕ್ಷಗಳ ಕರ್ತವ್ಯ. ಆದರೆ ಪ್ರಾಥಮಿಕ ತನಿಖೆಗೂ ಮುಂಚಿತವಾಗಿ ಈ ಕೊಲೆಗೆ ಕೋಮುಬಣ್ಣವನ್ನು ಬಳಿಯಲು ಸಜ್ಜಾಗಿ ನಿಂತವರಂತೆ ಕಂಡ ವಿರೋಧ ಪಕ್ಷ ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರ ನಡೆಯನ್ನು ಎಲ್ಲರೂ ಅನುಮಾನದಿಂದ ನೋಡುವಂತಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...