ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಭಾರತದ ಮಾಜಿ ಸಿಜೆಐ, ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್ ಅವರ ನೀಡಿದ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ. ಸಂಸತ್ತಿನಲ್ಲಿ ವಿಶೇಷ ಹಕ್ಕು ನೋಟಿಸ್‌ಗೆ ಕಾರಣವಾಗಿವೆ.
“ನನಗೆ ಅನಿಸಿದಾಗಲೆಲ್ಲಾ ನಾನು ರಾಜ್ಯಸಭೆಗೆ ಹೋಗುತ್ತೇನೆ” ಎಂದು ನ್ಯಾಯಮೂರ್ತಿ ಗೊಗೊಯ್ ಎನ್‌ಡಿಟಿವಿಗೆ ಸಂದರ್ಶನದಲ್ಲಿ ಹೇಳುತ್ತಾ ತಮ್ಮ ಆತ್ಮಚರಿತ್ರೆಯಾದ “ಜಸ್ಟೀಸ್ ಫಾರ್ ದಿ ಜಡ್ಜ್” ಕುರಿತು ಮಾತನಾಡಿದ್ದರು.
“ನ್ಯಾಯಮೂರ್ತಿ ಗೊಗೊಯ್ ಅವರ ಹೇಳಿಕೆಗಳು ರಾಜ್ಯಸಭೆಯನ್ನು ಅವಹೇಳನ ಮಾಡಿವೆ. ಸದನದ ಘನತೆಗೆ ಧಕ್ಕೆ ತರುತ್ತದೆ ಮತ್ತು ವಿಶೇಷ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ತೃಣಮೂಲ ಕಾಂಗ್ರೆಸ್ ನೋಟೀಸ್ ಸಲ್ಲಿಸಿದೆ. ರಂಜನ್ ಗೊಗೊಯ್ ನೀಡಿದ ವಿವಾದಾತ್ಮಕ ಹೇಳಿಕೆಗಳನ್ನು ಈ ನೋಟಿಸ್ ಪ್ರಸ್ತಾಪಿಸಿದೆ.
“ಒಂದು ಅಥವಾ ಎರಡು ಸೆಷನ್‌ಗಳಿಗೆ ಕೋವಿಡ್ ಕಾರಣದಿಂದಾಗಿ (ವೈದ್ಯಕೀಯ ಸಲಹೆಯ ಆಧಾರದ ಮೇಲೆ) ನಾನು ಅಧಿವೇಶನಕ್ಕೆ ಹಾಜರಾಗಿಲ್ಲ. ಇವತ್ತಿಗೂ ನಾನು ಈ ವಿಚಾರವಾಗಿ ಆರಾಮವಾಗಿ ಇಲ್ಲ ಎನ್ನುತ್ತೇನೆ. ಸಾರ್ವಜನಿಕ ಅಂತರದ ನಿಯಮಗಳನ್ನು ಜಾರಿಗೊಳಿಸಲಾಗಿದೆ, ಆದರೆ ಅವುಗಳನ್ನು ಪಾಲಿಸಲಾಗುತ್ತಿಲ್ಲ. ಕುಳಿತುಕೊಳ್ಳಲು ಮಾಡಲಾಗಿರುವ ವ್ಯವಸ್ಥೆ ನನಗೆ ಆರಾಮದಾಯಕವೆನಿಸುತ್ತಿಲ್ಲ. ಇದನ್ನು ಒತ್ತು ಹೇಳುವುದಾದರೆ ನಾನು ರಾಜ್ಯಸಭಾಕ್ಕೆ ನನಗೆ ಅನಿಸಿದಾಗ ಹೋಗುತ್ತೇನೆ” ಎಂದಿದ್ದರು ಗೊಗೊಯ್.
ಮುಂದುವರಿದು, “ಅತ್ಯಂತ ಮಹತ್ವದ ವಿಷಯಗಳ ಬಗ್ಗೆ ಮಾತನಾಡಬೇಕು ಎಂದು ನಾನು ಭಾವಿಸಿದಾಗ ಹೋಗುತ್ತೇನೆ. ನಾನು ನಾಮನಿರ್ದೇಶಿತ ಸದಸ್ಯ, ಯಾವುದೇ ಪಕ್ಷದ ವಿಪ್‌ಗೆ ನಾನು ಒಳಪಡುವುದಿಲ್ಲ. ಪಕ್ಷದ ಸದಸ್ಯರಿಗೆ ಬರಲು ಸೂಚಿಸಿದಾಗ ಅದು ನನಗೆ ಅನ್ವಯವಾಗುವುದಿಲ್ಲ. ನಾನು ನನ್ನ ಆಯ್ಕೆಯ ಮೇರೆಗೆ ಅಲ್ಲಿಗೆ ಹೋಗುತ್ತೇನೆ ಮತ್ತು ನನ್ನ ಆಯ್ಕೆಯ ಮೇಲೆ ಹೊರಬರುತ್ತೇನೆ” ಎಂದು ನ್ಯಾಯಮೂರ್ತಿ ಗೊಗೊಯ್ ಸಂದರ್ಶನದಲ್ಲಿ ಹೇಳಿದ್ದರು.
ನ್ಯಾಯಮೂರ್ತಿ ಗೊಗೊಯ್ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಾಗಿನಿಂದ ಅವರು ಅತ್ಯಂತ ಕಡಿಮೆ ಹಾಜರಾತಿ ಹೊಂದಿದ್ದಾರೆ ಎಂದು ಸಂದರ್ಶನದಲ್ಲಿ ಪ್ರಶ್ನಿಸಲಾಗಿತ್ತು. ಮಾರ್ಚ್ 2020ರಿಂದ ಈವರೆಗೆ ನಡೆದ ಎಲ್ಲಾ ಸಭೆಗಳಲ್ಲಿ ಶೇಕಡಾ 10ಕ್ಕಿಂತ ಕಡಿಮೆ ಹಾಜರಾತಿ ಹೊಂದಿದ್ದಾರೆ ಎಂದು ಸಂಸತ್ತಿನ ದಾಖಲೆಗಳು ತೋರಿಸುತ್ತವೆ.
ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದ ನಾಲ್ಕು ತಿಂಗಳ ನಂತರ ರಾಜ್ಯಸಭೆಗೆ ಸೇರುವ ತಮ್ಮ ನಿರ್ಧಾರವನ್ನು ನ್ಯಾಯಮೂರ್ತಿ ಗೊಗೊಯ್ ತೆಗೆದುಕೊಂಡರು. ಇತ್ತೀಚೆಗೆ ಪ್ರಕಟಿಸಲಾಗಿರುವ ಅವರ ಆತ್ಮಚರಿತ್ರೆಯಲ್ಲೂ ಅದನ್ನು ಸಮರ್ಥಿಸಿಕೊಂಡಿದ್ದಾರೆ. ತಾನು ಸೇರಿರುವ ನ್ಯಾಯಾಂಗ ಮತ್ತು ಈಶಾನ್ಯ ಪ್ರದೇಶದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಬಯಸಿದ್ದರಿಂದ ಹಿಂಜರಿಕೆಯಿಲ್ಲದೆ ಈ ಸ್ಥಾನವನ್ನು ಒಪ್ಪಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.


