ರಾಜ್ಯದಲ್ಲಿ ಕಳೆದ ಮಾರ್ಚ್ ಮತ್ತು ಏಪ್ರೀಲ್ ತಿಂಗಳಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪರೀಕ್ಷೆಯ ಫಲಿತಾಂಶಗಳು ಇತ್ತೀಚೆಗಷ್ಟೆ ಹೊರಬಿದ್ದಿವೆ. ಈ ನಡುವೆ ಪ್ರಶ್ನಾ ಪತ್ರಿಕೆಗಳು ಸೋರಿಕೆಯಾಗಿದ್ದು, ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ರಾಮನಗರ ಜಿಲ್ಲೆಯಲ್ಲಿ ಒಟ್ಟು 11 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರದ ಮಾಗಡಿ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಮತ್ತು ಪತ್ರಕರ್ತರು ಸೇರಿದಂತೆ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪಿಎಸ್‌ಐ ಮತ್ತು ಸಹಾಯಕ ಪ್ರಾಧ್ಯಾಪಕರ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ ಎಂದು ಈದಿನ.ಕಾಂ ವರದಿ ಮಾಡಿದೆ.
ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಐಐಟಿ, ಸಿಇಟಿ ಪ್ರೊಫೆಸರ್: ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಹತ್ತನೇ ತರಗತಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಎಂಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರಿಗೆ ವಿಚಾರಣೆ ವೇಳೆ ರಂಗೇಗೌಡ ನೀಡಿದ ಮಾಹಿತಿ ಆಧಾರದಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗನ್ನು ಪೊಲೀಸರ ವಶಕ್ಕೆ ನೀಡುವಂತೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ.
ಬಂಧಿತರಲ್ಲಿ ಕೆಂಪೇಗೌಡ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್, ಹಿಂದಿ ಶಿಕ್ಷಯ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಶಾಲೆಗಳ ಅಧ್ಯಾಪಕರು ಹಾಗೂ ಸ್ಥಳೀಯ ಪತ್ರಕರ್ತ ವಿಜಯ್ ಕುಮಾರ್ ಎಂಬುವವರು ಸೇರಿದ್ದಾರೆ. ಬಂಧಿತರಿಂದ ಪೊಲೀಸರು ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆ, ಬ್ಲಾಕ್‌ಮೇಲ್ ಮಾಡಿದ ಪತ್ರಕರ್ತ ಸೆರೆ
ಕೆಂಪೇಗೌಡ ಶಾಲೆಯ ಹಿಂದಿ ಶಿಕ್ಷಕ ಕೃಷ್ಣಮೂರ್ತಿ, ಮಾಗಡಿಯ ರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೇಲ್ವಿಚಾರಕರಾಗಿದ್ದರು. ಪರೀಕ್ಷಾ ಆರಂಭಕ್ಕೆ 15 ನಿಮಿಷಗಳಿದ್ದಾಗ ಪ್ರಶ್ನೆಪತ್ರಿಕೆ ಪೋಟೋ ತೆಗೆದು ವಾಟ್ಸಪ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ವಿಜ್ಞಾನ ವಿಷಯ ಪರೀಕ್ಷೆ ನಡೆದ ದಿನ ಗುಮಾಸ್ತ ರಂಗೇಗೌಡ, ಪ್ರಶ್ನೆಪತ್ರಿಕೆಯ ಪೋಟೋವನ್ನು ಶಿಕ್ಷಕ ಕೃಷ್ಣಮೂರ್ತಿಗೆ ಕಳುಹಿಸುವ ಬದಲಾಗಿ ಶಿಕ್ಷಕರ ವಾಟ್ಸಪ್ ಗುಂಪೊಂದಕ್ಕೆ ಹಾಕಿದ್ದಾನೆ. ಆ ನಂತರ ಅಚಾತುರ್ಯವನ್ನು ಅರಿತು ಡಿಲೀಟ್ ಮಾಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಶಿಕ್ಷಕರ ಗುಂಪಿನಲ್ಲಿದ್ದ ಲೋಕೇಶ್ ಎಂಬ ಶಿಕ್ಷಕ ಗುಂಪಿನಲ್ಲಿ ಬಂದ ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು ಗುಮಾಸ್ತ ರಂಗೇಗೌಡನನ್ನು ಹೆದರಿಸಿ ಹತ್ತು ಸಾವಿರ ಪಡೆದಿದ್ದರು. ಈ ವಿಷಯ ತಿಳಿದ ಪತ್ರಕರ್ತ ವಿಜಯ್ ಕುಮಾರ್ ಕೂಡ ರಂಗೇಗೌಡನಿಗೆ ಬ್ಲಾಕ್‌ಮೇಲ್ ಮಾಡಿ ಹಣ ಕಿತ್ತಿದ್ದರು ಎಂದು ಈದಿನ.ಕಾಂ ವರದಿ ಹೇಳಿದೆ.
ಇದನ್ನೂ ಓದಿ: ಪಠ್ಯ ವಿವಾದ: ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ 4 ಸುಳ್ಳುಗಳು
ಅಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಹೆಚ್ಚಿನ ಹಣ ನೀಡುವಂತೆ ಪೀಡಿಸಿದ್ದು, ಹಣ ನೀಡದಿದ್ದಾಗ ಬೇರೆ ಹೆಸರಿನಲ್ಲಿ ಪೊಲೀಸರಿಗೆ ಪತ್ರ ಬರೆದ ಲೋಕೇಶ್, ಪರೀಕ್ಷಾ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಯತಿಕುಮಾರ್ ಪರೀಕ್ಷಾ ಅಕ್ರಮದ ಬಗ್ಗೆ ಮಾಹಿತಿಯಿದ್ದರೂ ನಿರ್ಲಕ್ಷ್ಯವಹಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ವಾಟ್ಸಪ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಬಗ್ಗೆ ಮಾಹಿತಿ ಇದ್ದರೂ ಕ್ರಮಕೈಗೊಂಡಿಲ್ಲ ಎಂದು ದೂರಿದ್ದು, ಅವರ ಬಂಧನವಾಗುವ ಸಾಧ್ಯತೆಯಿದೆ.


